ಬರಗಾಲ ಘೋಷಣೆ ಮಾರ್ಗಸೂಚಿ ಬದಲಾವಣೆ ಅತ್ಯಗತ್ಯ
Team Udayavani, Jul 22, 2023, 5:26 AM IST
ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂಗಾರು ಕೈಕೊಟ್ಟಿದ್ದು, ಇನ್ನೂ ಸರಿಯಾಗಿ ಮಳೆ ಬಂದಿಲ್ಲ. ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ಮಳೆಯಾಗುತ್ತಿರುವುದರಿಂದ ಬೆಳಗಾವಿ ಸಹಿತ ಸುತ್ತಮುತ್ತಲ ಜಿಲ್ಲೆಗಳಲ್ಲಿ ಒಂದಷ್ಟು ಮಳೆ ಮತ್ತು ಪ್ರವಾಹ ಕಾಣಿಸಿಕೊಂಡಿದೆ. ಒಂದಷ್ಟು ದಿನಗಳ ಹಿಂದೆ ಕರಾವಳಿಯಲ್ಲಿ ಭರ್ಜರಿಯಾಗಿಯೇ ಸುರಿದಿದ್ದ ಮಳೆ ಮತ್ತೆ ಕಾಣಿಸಿಕೊಳ್ಳುತ್ತಿಲ್ಲ. ಈಗ ಅಲ್ಲಿಯೂ ಕಣ್ಣಾಮುಚ್ಚಾಲೆಯಾಡುತ್ತಿದೆ.
ಮುಂಗಾರು ಮಳೆಯ ಈ ಕಣ್ಣಾಮುಚ್ಚಾಲೆಯಿಂದಾಗಿ ರಾಜ್ಯದ ರೈತಾಪಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಅಲ್ಲದೆ ಇದು ಜುಲೈ ತಿಂಗಳ ಅಂತ್ಯದ ಸಮೀಪಕ್ಕೆ ಬಂದಿದ್ದು ಇನ್ನೂ ಬಹಳಷ್ಟು ಪ್ರದೇಶದಲ್ಲಿ ಸರಿಯಾಗಿ ಬಿತ್ತನೆಯೂ ಆಗಿಲ್ಲ. ಈ ವಾರದ ಆರಂಭದಲ್ಲಿನ ವರದಿ ಪ್ರಕಾರ ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ, ಬಳ್ಳಾರಿ, ಗದಗ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ, ವಿಜಯನಗರ, ಮಂಡ್ಯ, ಚಿಕ್ಕಬಳ್ಳಾಪುರ ಸಹಿತ ಹಲವಾರು ಜಿಲ್ಲೆಗಳಲ್ಲಿ ಮಳೆ ಕೊರತೆ ಸಮಸ್ಯೆ ಇದೆ. ಕೆಲವೆಡೆ ಈಗಾಗಲೇ ಬಿತ್ತನೆಯಾಗಿ ಮಳೆಗಾಗಿ ರೈತ ಕಾಯುತ್ತಿದ್ದಾನೆ. ಇನ್ನೂ ಕೆಲವು ದಿನ ಮಳೆ ಬಾರದೇ ಹೋದರೆ, ಬೆಳೆ ಒಣಗುವ ಆತಂಕ ಎದುರಾಗಿದೆ.
ಅಂದರೆ ಬೆಳಗಾವಿಯಲ್ಲಿ ಶೇ.50 ಕೊರತೆ, ಚಿತ್ರದುರ್ಗದಲ್ಲಿ ಶೇ.13, ಶಿವಮೊಗ್ಗದಲ್ಲಿ ಶೇ.48, ಗದಗ ಶೇ.36, ಹಾವೇರಿ ಶೇ.59ರಷ್ಟು ಮಳೆ ಕೊರತೆಯಾಗಿದೆ. ಆದರೆ ಮಳೆ ಕೊರತೆ ಕಾಡುತ್ತಿರುವ ಜಿಲ್ಲೆಗಳ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಂಬಂಧ ಕೆಲವೊಂದು ನಿಯಮಗಳು ಅಡ್ಡಿಯಾಗಿವೆ. ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಅಧಿವೇಶನದಲ್ಲಿಯೇ ಈ ಸಂಬಂಧ ಕೃಷ್ಣ ಬೈರೇಗೌಡರು ಪ್ರಸ್ತಾವಿಸಿದ್ದು, ಕೇಂದ್ರದ ನಿಯಮಗಳಿಂದಾಗಿರುವ ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ಅಂದರೆ ಕೇಂದ್ರ ಸರಕಾರದ ಬರ ಕೈಪಿಡಿ 2016ರ ಅನ್ವಯ ಬರ ಪೀಡಿತ ಘೋಷಣೆಗೆ ಕೇವಲ ಮಳೆ ಕೊರತೆಯಷ್ಟೆ ಮಾನದಂಡವಾಗು ವುದಿಲ್ಲ. ಹಾಗೆಯೇ ರಾಜ್ಯ ಸರಕಾರಕ್ಕೆ ಬರಪೀಡಿತ ತಾಲೂಕುಗಳಿಗೆ ಹೆಚ್ಚಿನ ಪರಿಹಾರ ಒದಗಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
2016ರಲ್ಲಿ ಕೇಂದ್ರ ಸರಕಾರ ಒಂದು ಮಾರ್ಗಸೂಚಿ ತಂದಿದ್ದು, ಇದು ಕಠಿನವಾಗಿದೆ. ಇದಕ್ಕಿಂತ ಹಿಂದೆ ಇದ್ದ ಮಾರ್ಗಸೂಚಿಗಳಲ್ಲಿ ರಾಜ್ಯ ಸರಕಾರವೇ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡು ಬರಪೀಡಿತ ಎಂದು ಘೋಷಿಸಬಹುದಾಗಿತ್ತು. ಆದರೆ ಈಗಿನ ನಿಯಮದಂತೆ ಶೇ.60ರಷ್ಟು ಮಳೆ ಕೊರತೆಯಾಗಿರಬೇಕು ಮತ್ತು ಹಿಂದಿನ ಮೂರು ವಾರಗಳ ಕಾಲ ಮಳೆ ಬಂದಿರಲೇಬಾರದು.
ಈ ನಿಯಮಗಳಿಂದಾಗಿ ನಾವು ಯಾವುದೇ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಆಗುವುದಿಲ್ಲ ಎಂದಿರುವ ಕೃಷ್ಣ ಬೈರೇಗೌಡರು ಈ ಸಂಬಂಧ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಬದಲಾವಣೆ ಮಾಡುವಂತೆ ಕೋರಿಕೊಳ್ಳುವುದಾಗಿ ತಿಳಿಸಿದ್ದಾರೆ. ರೈತರ ಹಿತದೃಷ್ಟಿಯಿಂದ ಹೇಳುವುದಾದರೆ ಇದು ರಾಜ್ಯ ಸರಕಾರದ ಉತ್ತಮ ನಡೆಯಾಗಿದೆ.
ಅತೀ ಶೀಘ್ರದಲ್ಲಿ ಕೇಂದ್ರಕ್ಕೆ ಈ ಸಂಬಂಧ ಪತ್ರ ಬರೆಯಲಿ. ಅಲ್ಲದೆ ರಾಜ್ಯದ ಸಂಸದರು ಮತ್ತು ರಾಜ್ಯದಿಂದ ಆಯ್ಕೆಯಾಗಿ ಕೇಂದ್ರದಲ್ಲಿ ಸಚಿವರಾಗಿರುವವರು ಈ ಸಂಬಂಧ ಗಮನ ಹರಿಸಬೇಕು. ಈಗಾಗಲೇ ಮಳೆ ಕೊರತೆ ಕಾರಣದಿಂದಾಗಿ ಸಮಸ್ಯೆಗೆ ಸಿಲುಕಿರುವ ರೈತಾಪಿ ವರ್ಗಕ್ಕೆ ಇದರಿಂದ ಕಿಂಚಿತ್ತಾದರೂ ಅನುಕೂಲವಾಗುತ್ತದೆ. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಗಮನಹರಿಸಲಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Manipal: ಹಿರಿಯ ವೈದ್ಯೆ ಡಾ. ಆಶಾ ಭಟ್ ನಿಧನ
Banahatti: ತಾಂತ್ರಿಕ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಬದ್ಧಳಾಗಿದ್ದೇನೆ: ಉಮಾಶ್ರೀ
Road Mishap; ದ್ವಿಚಕ್ರ ವಾಹನ-ಲಾರಿ ನಡುವೆ ಅಪಘಾತ: ದಂಪತಿ ಸಾವು
ಕಾಲ್ತುಳಿತ ಪ್ರಕರಣ: ಅಲ್ಲು, ʼಪುಷ್ಪ-2ʼ ತಂಡದಿಂದ ರೇವತಿ ಕುಟುಂಬಕ್ಕೆ 2 ಕೋಟಿ ರೂ. ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.