ಸೇವಾ ಮನೋಭಾವ ಉದ್ದೀಪಿಸುವ ಕ್ರಿಸ್ಮಸ್
Team Udayavani, Dec 25, 2020, 7:15 AM IST
ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸುವ ಕ್ರೈಸ್ತ ಧರ್ಮೀಯರಿಗೆ ಯೇಸುವು ಪ್ರಾತಃಸ್ಮರಣೀಯರು. ಲವಲೇಶವೂ ಸ್ವಾರ್ಥಲೇಪವಿಲ್ಲದ ಹೃದಯಂಗಮ ಲವಲವಿಕೆಯ ಯೇಸುವು ಬೋಧಿಸಿದ ಕರು ಣೆಯ, ಪರಸೇವೆಯ ಬಗ್ಗೆ ಕೇಳಿದಾಗ ಕಿವಿ ನಿಮಿ ರುತ್ತದೆ, ಕೌತುಕದ ಹುಬ್ಬು ಮೇಲೇರುತ್ತದೆ, ಹೃದ ಯವು ಚುಮುಚುಮು ಸ್ಪಂದಿಸುತ್ತದೆ. ಯೇಸುವು ಕುಗ್ರಾಮದ ಹಟ್ಟಿಯೊಂದರಲ್ಲಿ ಜನಿಸಿ, ಹತಭಾ ಗ್ಯರು, ದೀನದಲಿತರು, ಹಿಂದಕ್ಕೆ ತಳ್ಳಲ್ಪಟ್ಟವರೊಂದಿಗೆ ತನ್ನನ್ನೇ ಸಮೀಕರಿಸಿ, ಅಂಥವರೊಂದಿಗೆ ಗುರುತಿಸಿ ಕೊಂಡನು. ಯೇಸುದೇವನು ಹುಲುಮಾನವನಾಗಿ ಈ ಜಗಕ್ಕೆ ಆಗಮಿಸಿದ ಈ ವಿಸ್ಮಿತ ಘಟನೆಯನ್ನು ಚಕಿತಚಿತ್ತರಾಗಿ ಆಚರಿಸುವುದೇ ಕ್ರಿಸ್ಮಸ್ ಹಬ್ಬದ ಸಂಕೇತ ಹಾಗೂ ಸಂದೇಶ.
ಇಪ್ಪತ್ತು ಶತಮಾನಗಳು ಕಳೆದು ನಾವಿಂದು ಇಪ್ಪತ್ತೂಂದನೇ ಶತಮಾನದಲ್ಲಿದ್ದೇವೆ. ಇಷ್ಟೊಂದು ಸುದೀರ್ಘಾವಧಿಯಲ್ಲಿ ಹಲವು ವೈರಸ್‌ಗಳು ಕಾಣಿಸಿಕೊಂಡು ಮಾನವ ಬದುಕನ್ನು ಸತತವಾಗಿ ಗೋಳುಹೊಯ್ದುಕೊಳ್ಳುತ್ತಿವೆ. ಯುದ್ಧಗಳು, ಚಿತ್ರ ಹಿಂಸೆ, ಬಡವರನ್ನು ಒಕ್ಕಲೆಬ್ಬಿಸಿ ಬೀದಿಪಾಲಾಗಿಸಿ ನಿತ್ಯವಲಸಿಗರನ್ನಾಗಿ ಮಾಡುವ ಹುನ್ನಾರಗಳು, ಭಯೋತ್ಪಾದನೆ, ಹಸಿವು, ಉಗ್ರವಾದ ಮುಂತಾದ ಕಣ್ಣಿಗೆ ಹೊಡೆಯುವ ಹಿಂಸಾರತಿಗಳೊಂದಿಗೆ ಹೆಗಲನ್ನು ಹೊಸೆಯುತ್ತ ಸಮಾಜವು ತನ್ನ ಬಗಲಿಗೆ ಕಟ್ಟಿಕೊಂಡಿರುವ ಕೆಲವೊಂದು ಕಂದಾಚಾರಗಳಿಂದಾಗಿ ಮುಖ್ಯವಾಹಿನಿಯಿಂದ ಬದಿಗೆ ತಳ್ಳಲ್ಪಟ್ಟಿರುವ ಜನರ ಬದುಕು-ಬವಣೆಗಳು ಮಾನವ ಸಮಾಜಕ್ಕೆ ಸೋಂಕುರೋಗಗಳಂತೆ ಅಂಟಿಕೊಂಡು ಬಂದಿರುವ ಇನ್ನಿತರ ಹಲವು ವೈರಸ್‌ಗಳಾಗಿವೆ.
ಕಳೆದ ಇಪ್ಪತ್ತು ಶತಮಾನಗಳತ್ತ ದೃಷ್ಟಿ ಹಾಯಿಸಿ ದಾಗ, ಮಧ್ಯಪ್ರಾಚ್ಯದ ಕುಗ್ರಾಮವೊಂದರಲ್ಲಿ ಹುಟ್ಟಿದ ಯೇಸುವು, ತನ್ನ ಬೋಧನೆಯ ಪ್ರಣಾಳಿಕೆ ಯಲ್ಲಿ ಆಡಿದ ಮೊತ್ತಮೊದಲ ಮಾತು- “ಬಡವರು ಭಾಗ್ಯಶಾಲಿಗಳು’. ಬಡವರು ಭಾಗ್ಯಶಾಲಿಗಳು? ಹೀಗೂ ಉಂಟೇ? ಯೇಸುವಿನ ಬೋಧನೆಯ ಸರ್ವಸಾರವನ್ನು ನಿರೂಪಿಸುವ “ಬಡವರು ಭಾಗ್ಯವಂತರು’- ಬಡವರು, ಹಸಿದವರು, ಶೋಷಿ ತರು, ಚಿತ್ರಹಿಂಸೆಗೆ ಒಳಗಾದವರು, ನೋವುಗಳಿಗೆ ಬಲಿಯಾದವರು ಸಂತಸದಲ್ಲಿರುತ್ತಾರೆ ಎಂದಲ್ಲ, ಬದಲಾಗಿ ಅಂಥವರಿಗೆ ದೇವರ ಅನುಗ್ರಹವು ಸದಾ ಇದ್ದೇ ಇರುತ್ತದೆ ಎಂದರ್ಥ. ಬಡವರು ಭಾಗ್ಯವಂತರು ಯಾಕೆಂದರೆ ದೇವರು ಅವರ ಪರವಾಗಿದ್ದಾನೆ. ದೇವರು ಬಡವರ ತಂಗುದಾಣ ದಲ್ಲಿ ಹುಟ್ಟಲು ಇಚ್ಛಿಸಿದನು. ಬಡವರಿಗೆ ಹಾಗೂ ಶೋಷಿತರಿಗೆ ದೇವಕೃಪೆಯಲ್ಲಿ ಮೊದಲ ಸ್ಥಾನ, ಎತ್ತರದ ಮಣೆ. ಬಲ್ಲಿದರು, ಬಲಿತವರು ಇರುವ ತಾಣದಲ್ಲಿ ಹುಟ್ಟದೆ, ಯೇಸು ಬಡವರ ಕೇರಿಯನ್ನು ತನ್ನ ಜನ್ಮಭೂಮಿಯನ್ನಾಗಿ ಆರಿಸಿದನು. ಪ್ರತಿಷ್ಠಿತ ಸಮಾಜವು ಬಡವರನ್ನು, ಕುಷ್ಠರೋಗಿಗಳನ್ನು, ಶೋಷಿತರನ್ನು ಆಚೆ ತಳ್ಳಿದ ಕೇರಿಯೇ ಯೇಸು ಧರ್ಮದ ಕೇಂದ್ರವಾಯಿತು.
ರೋಗಿಗಳೆಂದರೆ ಸ್ವಸ್ಥ ಸಮಾಜದಿಂದ ಬದಿಗಿರಿಸಿದ ಮಂದಿ. ಯೇಸುವಿನ ಸಮ ಕಾಲೀನ ಸಮಾಜದಲ್ಲಿ ತಮ್ಮದಲ್ಲದ ತಪ್ಪಿಗಾಗಿ ಯಾವುದಾದರೊಂದು ಅಂಗವೈಕಲ್ಯ, ಅನಾರೋಗ್ಯ ಗಳಿಗೆ ತುತ್ತಾದವರನ್ನು ಸಮಾಜದಿಂದ ದೂರವಿಡಲಾ ಗುತ್ತಿತ್ತು. ಕುರುಡರು, ಹೆಳವರು, ಕಿವುಡರು, ಪಾರ್ಶ್ವ ವಾಯುಪೀಡಿತರು, ಕುಷ್ಠರೋಗಿಗಳು- ಆ ಕಾಲ ದಲ್ಲಿ ಇವರನ್ನೆಲ್ಲ ಹಬ್ಬಿದ ರೋಗ ಕಾರಣವಾದ ವೈರಸ್‌ಗಳು ಎಂದು ಪರಿಗಣಿಸಲಾಗುತ್ತಿತ್ತು. ರೋಗಿಗಳಿಗೆ, ತಿರಸ್ಕೃತರಿಗೆ, ಹೇವರಿಕೆಗೆ ಗುರಿಯಾದವರಿಗೆ ಯೇಸು ಬೋಧನೆಯಲ್ಲಿ ಪ್ರಮುಖ ಗಮನ. ಯೇಸುವು ಕೇಂದ್ರಸ್ಥಾನದಿಂದ ಬದಿಗೆ ಸರಿದು, ಬದಿಗೆ ಸರಿಸಲಾದ ಜನರೊಂದಿಗೆ ಮುಕ್ತವಾಗಿ ಬೆರೆತನು. ಇಂತಹ ರೋಗಗಳನ್ನು ಸಮಾಜವು ಮೈಲಿಗೆ ಎಂದು ವರ್ಗೀಕರಿಸಿತ್ತು. ಆದರೆ ಯೇಸು ಅವರಿಂದ ಮುಟ್ಟಿಸಿಕೊಳ್ಳುತ್ತಿದ್ದರು.
ಯೇಸು ವಿಗೆ ಆ ಮೈಲಿಗೆಯು ಲೆಕ್ಕಕ್ಕಿರಲಿಲ್ಲ. ಕುಷ್ಠ ರೋಗಿ ಗಳನ್ನೂ ಅನುಕಂಪದ ಮೂಲಕ ಅವರ ವ್ರಣಗಳನ್ನು ತೊಳೆಯಲು ಮುಂದಾಗುವ ಜನರನ್ನು ಹುರಿ ದುಂಬಿಸುವ, ಮಲ್ಲಿಗೆ ಹೂವಿನ ಮೃದುಮಧುರ ರೇಶಿಮೆಯ ಹೃದಯವಿರುವ, ದೀನರ ಹೊಟ್ಟೆ ತಣ್ಣಗಿರಿಸುವ ಮನಕೆ ತಂಪನ್ನೆರೆವ ಕರುಣಾ ಚೇತನ ವೊಂದರ ಹುಟ್ಟನ್ನು ಆಚರಿಸುವ ಹಬ್ಬವೇ ಕ್ರಿಸ್ಮಸ್.
ತೃಣದಲ್ಲಾಗಲಿ ಕಣದಲ್ಲಾಗಲಿ, ಭ್ರೂಣದಲ್ಲಾಗಲಿ ತ್ರಾಣದಲ್ಲಾಗಲಿ ಇರುವ ಜೀವ, ನಡೆಯುವ, ಹರಿದಾಡುವ, ಹಾರುವ, ಜಿಗಿಯುವ, ವಿಲವಿಲ ಒದ್ದಾಡುವ ಜೀವವೆಲ್ಲ ಒಂದೇ ಮೂಲದಿಂದ ಬಂದಿವೆ. ವರ್ಣ, ಜಾತಿ ಕಟ್ಟುಪಾಡುಗಳನ್ನೆಲ್ಲ ಮೀರಿ ಕಲುಷಿತ ಮನಗಳ ವ್ಯವಸ್ಥೆಯನ್ನು ಹಿಸುಕಿ ಹಾಕಿ, “ಇವ ನಮ್ಮವ’ ಎಂಬ ಭಾವನೆಯನ್ನು ಸಮಾಜದಲ್ಲಿ ಸಾಕಾರಗೊಳಿಸುವ ದೈವಿಕ ದಿವ್ಯ ಏರ್ಪಾಡು ಕ್ರಿಸ್ಮಸ್ ಹಬ್ಬದ ಧ್ವನಿತಾರ್ಥ ಎನ್ನಬಹುದು. ದೇವಮಾನವ ಯೇಸುವಿನ ಜನ್ಮದಿನ ವನ್ನು ಸ್ಮರಿಸುವ, ಸೇವಾ ಮನೋಭಾವವನ್ನು ಉದ್ದೀಪಿಸುವ ಹಬ್ಬವೇ ಕ್ರಿಸ್ಮಸ್.
ಚರಿತ್ರೆಯ ಮೇಲೆ ಅತ್ಯಂತ ದಟ್ಟ ಪ್ರಭಾವ ಬೀರಿದ ಚೇತನದ ಜನನ ದನದ ಹಟ್ಟಿಯಲ್ಲಾಯಿತು ಎಂಬುದೇ ಮಾನವ ಚರಿತ್ರೆಯ ಒಂದು ರೋಚಕ ಘಟನೆ. ಇಂತಹ ಸರಳ ಘಟನೆಯನ್ನು ಮೆಲು ಕಾಡುವ ರೋಮಾಂಚಕ ನೆನಪೇ ಕ್ರಿಸ್ಮಸ್. ಅದೊಂದು ಮಗು ಹುಟ್ಟಿದ ಕಥೆ, ಪುಣ್ಯ ಕಥೆ. ಆದುದರಿಂದಲೇ ಅತ್ಯಂತ ಆಪ್ತ, ನಿಸ್ವಾರ್ಥ, ಗಾಢ, ಮಮತಾಪೂರ್ಣ ಸಂಬಂಧವನ್ನು ಸೂಚಿಸಲು ತಾಯಿ-ಮಗುವಿನ ರೂಪಕವನ್ನೇ ಕ್ರಿಸ್ಮಸ್ ಹಬ್ಬದಲ್ಲಿ ಬಳಸುವುದು ವಾಡಿಕೆ. ಇಂತಹ ಹೆಂಗರುಳಿನ ಸಂಬಂಧವನ್ನು ಸೂಚಿಸುವ ಹಬ್ಬವೇ ಕ್ರಿಸ್ಮಸ್. ಪ್ರತಿಯೊಬ್ಬನೂ ತನ್ನಲ್ಲಿ ಒಂದು ಹೆಂಗರುಳನ್ನು ಮೂಡಿಸಿ, ತನ್ನವರಲ್ಲ ದವರನ್ನು, ಹತಭಾಗ್ಯರನ್ನು ಕೂಡ ತನ್ನ ಸ್ವಂತ ಕರುಳಿನಲ್ಲಿಟ್ಟು ಅವರ ನೋವು, ಸಂಕಷ್ಟಗಳಿಗೆ ಮಮತಾಪೂರ್ಣವಾಗಿ ಸ್ಪಂದಿಸಬೇಕು. ಇನ್ನೊಬ್ಬನು ತನಗೆ ಪ್ರತಿಸ್ಪರ್ಧಿಯಲ್ಲ, ಶತ್ರುವಲ್ಲ, ತನಗಿಂತ ಕೀಳಲ್ಲ, ಇತರರು ತನ್ನ ಲಾಲನೆಪಾಲನೆಗೊಳಗಾಗುವ ಮಗುವಾಗಬೇಕು ಎಂಬ ಆಶಯವನ್ನು ಹೊಂದಿ ರುವ ಹಬ್ಬವೇ ಕ್ರಿಸ್ಮಸ್.
ಯೇಸುವಿನ ಕೊಡುಗೆ ಅನನ್ಯ
ಯೇಸು ಬೋಧನೆಯಂತೆಯೇ, ಅವನ ಬದುಕು ಸಹಾ ನಿತ್ಯ ಪ್ರಸ್ತುತವೆನ್ನಬಹುದು. ಚರಿತ್ರೆ ಯನ್ನು ನಿರ್ಮಿಸುವುದು ಗಡಿಯಾರವಲ್ಲ, ಮಾನವ. ಚರಿತ್ರೆಯು ಯಾಂತ್ರಿಕಗತಿಯಲ್ಲ. ಮಾನವನು ಅರಳುವುದು, ಬೆಳೆಯುವುದು ಮಾನವೀಯ ಕ್ಷಣಗಳಲ್ಲಿ. ಸೊಬಗನ್ನೂ ಪ್ರೇಮವನ್ನೂ ಅನು ಭವಿಸುವ ವ್ಯಕ್ತಿಗೆ ಒಂದು ತಾಸು ಒಂದು ಕ್ಷಣವೆ ನಿಸುತ್ತದೆ. ಅದೇ ಮಾನವೀಯ ಕಾಲ. ಯಾಂತ್ರಿಕ ಕಾಲಕ್ಕೆ ಸುಂದರ ಕ್ಷಣಗಳು ಮಾನವೀಯ ಆಯಾ ಮವನ್ನು ಒದಗಿಸುತ್ತವೆೆ. ಚರಿತ್ರೆಯು ಮಾನ ವೀಯ ಕಾಲವಾಗಬೇಕು. ಸ್ನೇಹ, ಬಂಧುತ್ವ, ಪ್ರೇಮ, ನ್ಯಾಯದ ಕ್ಷಣಗಳೇ ಚರಿತ್ರೆಯಾದಾಗ, ಅದೇ ಯೇಸು ಬೋಧಿಸಿದ ದೇವರಾಜ್ಯ. ಮನುಷ್ಯ ರೆಲ್ಲ ಒಡಗೂಡಿ ಕಾಲವನ್ನು ಮಾನವೀಯ ಚರಿತ್ರೆ ಯನ್ನಾಗಿ ಮಾಡಲು ಹವಣಿಸುತ್ತಾರೋ ಅಂದೇ ಮುಕ್ತಿ. ಎಲ್ಲರ ಹೊಟ್ಟೆಯು ತಣ್ಣಗಿರಬೇಕು ಎಂಬ ಮಾನವೀಯ ಆಶಯವೇ ಯೇಸು ಬೋಧನೆಯ ಸಾರಸರ್ವಸ್ವ. ಮಾನವನ ಅರಳುವಿಕೆಯಲ್ಲಿ ಯೇಸುವಿನ ಕೊಡುಗೆಯು ಅನನ್ಯ. ಚರಿತ್ರೆಯ ಪುಟಗಳಲ್ಲಿ ಸಾಲುಗಟ್ಟಿ ಹೋದ ಸೈನ್ಯಗಳು, ರಾಜರು, ಸಂಸತ್ತುಗಳಲ್ಲಿ ಸಭೆ ಸೇರಿದ ಕಾನೂನು ರೂಪಕರು, ಇವರೆಲ್ಲ ಸೇರಿಯೂ ಯಾವನು ಕೂಡ ಲೋಕದ ಜನರನ್ನು ಈ ಓರ್ವ ವ್ಯಕ್ತಿಯಷ್ಟು ಬದಲಾಯಿಸಲಿಲ್ಲ. ಕರುಣಾಳು ಬಾ ಬೆಳಕೇ!
ಫಾ| ಪ್ರಶಾಂತ್ ಮಾಡ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.