ಪರಿಸರ ಸಹ್ಯ ಯೋಜನೆಗಳಿಂದಷ್ಟೇ ತಾಪಮಾನಕ್ಕೆ ಕಡಿವಾಣ ಸಾಧ್ಯ
Team Udayavani, Apr 21, 2023, 6:39 AM IST
ಭಾರತ ಸಹಿತ ಏಷ್ಯಾ ಖಂಡದಲ್ಲಿ ಪ್ರಸಕ್ತ ವರ್ಷ ತಾಪಮಾನ ಒಂದೇ ಸಮನೆ ಹೆಚ್ಚುತ್ತಿದ್ದು ಆತಂಕಕಾರಿ ಸ್ಥಿತಿಯನ್ನು ತಲುಪಿದೆ. ಭಾರತವಂತೂ ಕಂಡರಿಯದಂಥ ಸುಡುಬಿಸಿಲಿನಿಂದ ಕಂಗೆಟ್ಟಿದೆ. ತಾಪಮಾನ ಹೆಚ್ಚಳದ ಜತೆಜತೆಯಲ್ಲಿ ಉಷ್ಣಹವೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದ್ದು ದೇಶದ ಸರಿಸುಮಾರು ಶೇ. 90ರಷ್ಟು ಪ್ರದೇಶ ಉಷ್ಣಹವೆಯ ಅಪಾಯದಲ್ಲಿದ್ದು ಇದನ್ನು ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ಈಗ ದೇಶದ ಬಹುತೇಕ ಭಾಗಗಳು ಬಿಸಿಲಿನ ಝಳದಿಂದ ತತ್ತರಿಸುತ್ತಿದ್ದು ಹಲವೆಡೆ ಬಿಸಿಲಿನ ತೀವ್ರತೆಯ ಕಾರಣದಿಂದ ಜನರು ಸಾವನ್ನಪ್ಪುತ್ತಿರುವ ಬಗೆಗೆ ವರದಿಯಾಗುತ್ತಿದೆ. ಇದೇ ವೇಳೆ ರಬಿ ಋತುವಿನ ಬೆಳೆಗಳ ಮೇಲೆ ಈ ವಿಪರೀತ ಬಿಸಿಲು ಮತ್ತು ಧಗೆ ವ್ಯತಿರಿಕ್ತ ಪರಿಣಾಮ ಬೀರಿದ್ದು ಇಳುವರಿ ಕುಂಠಿತವಾಗಿದೆ. ಅಕಾಲಿಕ ಮಳೆ ಮತ್ತು ತಾಪಮಾನ ಹೆಚ್ಚಳ ರೈತಾಪಿ ವರ್ಗ ಮತ್ತು ಜನಸಾಮಾನ್ಯರ ಮೇಲೆ ತೀವ್ರತೆರನಾದ ಪರಿಣಾಮವನ್ನು ಬೀರತೊಡಗಿದೆ.
ದಿನಗೂಲಿ ಕಾರ್ಮಿಕರ ಮೇಲಂತೂ ಬಿಸಿಲಿನ ಝಳ ನೇರ ಪರಿಣಾಮವನ್ನು ಬೀರಿದೆ. ಇದೇ ವೇಳೆ ನಿರ್ಮಾಣ ಕಾಮಗಾರಿಗಳಿಗೂ ಇದು ಹೊಡೆತ ನೀಡಿದ್ದು ನಿರೀಕ್ಷಿತ ವೇಗದಲ್ಲಿ ಕಾಮಗಾರಿಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಒಟ್ಟಾರೆಯಾಗಿ ಮಾನವ ಶ್ರಮದ ಮೇಲೆ ಈ ಪ್ರತಿಕೂಲ ಹವಾಮಾನ ಪರಿಣಾಮವನ್ನು ಬೀರಿದ್ದು ದೇಶದ ಆರ್ಥಿಕತೆಗೂ ಪೆಟ್ಟು ನೀಡುವ ಸಾಧ್ಯತೆ ಇದೆ.
ಕಳೆದ ಮೂರು ದಶಕಗಳ ಅವಧಿಯಲ್ಲಿ ಉಷ್ಣಹವೆಯ ಕಾರಣದಿಂದಾಗಿ ದೇಶದಲ್ಲಿ 24,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು ಸರಕಾರ ಇನ್ನಾದರೂ ತಾಪಮಾನ ಹೆಚ್ಚಳವನ್ನು ಗಂಭೀರ ಸಮಸ್ಯೆಯಾಗಿ ಪರಿಗಣಿಸಿ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ವರದಿಯಲ್ಲಿ ಸಲಹೆ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಸದ್ಯದ ಮಾನದಂಡಗಳು ಉಷ್ಣಹವೆಯ ಪರಿಣಾಮವನ್ನು ನಿಖರವಾಗಿ ಅಂದಾಜಿಸುವಷ್ಟು ಸಶಕ್ತವಾಗಿಲ್ಲ ಎಂದು ವರದಿಯಲ್ಲಿ ಬೆಟ್ಟು ಮಾಡಲಾಗಿದ್ದು ದೀರ್ಘಾವಧಿಯಲ್ಲಿ ಇದರ ಪರಿಣಾಮಗಳು ಇನ್ನಷ್ಟು ಆತಂಕಕಾರಿಯಾಗಿರಬಹುದು ಎಂದು ಸೂಚ್ಯವಾಗಿ ತಿಳಿಸಿದೆ.
ಇಂತಹುದೇ ಪರಿಸ್ಥಿತಿಯನ್ನು ಏಷ್ಯಾದ ಬಹುತೇಕ ದೇಶಗಳು ಎದುರಿಸುತ್ತಿದ್ದು ಮುಂದಿನ ದಿನಗಳಲ್ಲಿ ಇದರ ತೀವ್ರತೆ ಮತ್ತಷ್ಟು ಹೆಚ್ಚಲಿದೆ. ಸದ್ಯ ಹೆಚ್ಚುತ್ತಿರುವ ತಾಪಮಾನ ಮತ್ತು ಉಷ್ಣಹವೆಯ ಪರಿಣಾಮ ತಾತ್ಕಾಲಿಕ ಎಂದೆನಿಸಿದರೂ ಭವಿಷ್ಯದ ದಶಕಗಳಲ್ಲಿ ಇದು ಗಂಭೀರ ಸಮಸ್ಯೆಯಾಗಿ ನಮ್ಮನ್ನು ಕಾಡಲಿದೆ. ಜನರ ದುಡಿಮೆಯ ಶಕ್ತಿಯನ್ನು ಇದು ಕುಗ್ಗಿಸಲಿದ್ದು ತತ್ಪರಿಣಾಮವಾಗಿ ಕುಟುಂಬಗಳ ಆದಾಯದ ಮೇಲೆ ಹೊಡೆತ ಬೀಳಲಿದೆ. ಇದರಿಂದ ಸಹಜವಾಗಿಯೇ ಜನರ ಜೀವನಮಟ್ಟವನ್ನು ಮತ್ತಷ್ಟು ಕುಸಿಯುವಂತೆ ಮಾಡಲಿದೆ ಮತ್ತು ಆರ್ಥಿಕತೆಯ ಮೇಲೂ ನೇರ ಪರಿಣಾಮ ಬೀರಲಿದೆ.
ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ಬದಲಾವಣೆ ಕುರಿತಂತೆ ಜಾಗತಿಕವಾಗಿ ಕಳೆದೊಂದು ದಶಕದಿಂದ ಚರ್ಚೆಗಳು ನಡೆಯುತ್ತ ಬಂದಿವೆಯಾದರೂ ಭಾರತಕ್ಕೆ ಇದೇ ಮೊದಲ ಬಾರಿಗೆ ತಾಪಮಾನ ಹೆಚ್ಚಳದ ಬಿಸಿ ತೀವ್ರತೆರನಾಗಿ ತಟ್ಟಿದೆ. ಈ ಸಮಸ್ಯೆಯಿಂದ ಪಾರಾಗಲು ದೂರದೃಷ್ಟಿಯಿಂದ ಕೂಡಿದ ಯೋಚನೆ, ಯೋಜನೆಗಳನ್ನು ಜಾರಿಗೆ ತರಬೇಕಿದೆ. ಪರಿಸರದೊಂದಿಗೆ ಸಹಬಾಳ್ವೆ ನಡೆಸುವ ದೇಶದ ಸಾಂಪ್ರದಾಯಿಕ ಶೈಲಿಗೆ ಮರಳಲು ಕಾಲ ಪಕ್ವವಾಗಿದೆ. ಆಧುನಿಕ ಸೌಲಭ್ಯ, ಅಭಿವೃದ್ಧಿಯ ಹೆಸರಿನಲ್ಲಿ ಅನುಷ್ಠಾನಗೊಳಿಸಲಾಗುತ್ತಿರುವ ಯೋಜನೆಗಳು ದೇಶದ ಹವಾಮಾನ ಪರಿಸ್ಥಿತಿಗೆ ಪೂರಕವೋ ಎಂದು ಅಧ್ಯಯನ ನಡೆಸಿದ ಬಳಿಕ ಪರಿಸರಸಹ್ಯವಾಗಿದ್ದಲ್ಲಿ ಮಾತ್ರವೇ ಇಂಥ ಯೋಜನೆಗಳನ್ನು ಅನುಷ್ಠಾನಗೊಳಿಸುವುದೊಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.