Jesus Christ:ಯೇಸು ಕ್ರಿಸ್ತನ ಅಪೂರ್ವ ತ್ಯಾಗ, ಬಲಿದಾನದ ಸ್ಮರಣೆ
Team Udayavani, Apr 7, 2023, 8:24 AM IST
ಇಂದು ಎಪ್ರಿಲ್ 7ರಂದು ವಿಶ್ವಾದ್ಯಂತ ಕ್ರೈಸ್ತ ಬಾಂಧವರು ಗುಡ್‌ಫ್ರೈಡೇ ಯನ್ನು ಆಚರಿಸುತ್ತಾರೆ. ಕ್ರೈಸ್ತರ ಗುರುವಾದ ಯೇಸುಕ್ರಿಸ್ತನು ಶಿಲುಬೆಯ ಮೇಲೆ ಪ್ರಾಣತ್ಯಾಗ ಮಾಡಿದ ಬಲಿದಾನದ ದಿವಸವೇ ಈ ಶುಭ ಶುಕ್ರವಾರ ಅಥವಾ ಗುಡ್ ಫ್ರೈಡೇ (ಮೋಕ್ಷ ಸಾಮ್ರಾಜ್ಯ ದೊರಕಿದ ಶುಭದಿನ). ವಿಶ್ವದಾದ್ಯಂತ ಎಲ್ಲ ಕ್ರೈಸ್ತರು ಯೇಸು ಕ್ರಿಸ್ತನ ಶಿಲುಬೆಯ ಮರಣದಲ್ಲಿ ಅಡಗಿರುವ ಅಪೂರ್ವ ತ್ಯಾಗ, ಬಲಿದಾನವನ್ನು ಭಕ್ತಿಯಿಂದ ಸ್ಮರಣೆ ಮಾಡುತ್ತಾ ದೇವರನ್ನು ಕೊಂಡಾಡುವುದೇ ಈ ಆಚರಣೆಯ ಮಹತ್ವವಾಗಿದೆ.
ಇದರ ಪೂರ್ವಭಾವಿಯಾಗಿ ಬೂದಿ ಬುಧವಾರದಿಂದ ಶುಭ ಶುಕ್ರವಾರದವರೆಗಿನ ನಲ್ವತ್ತು ದಿನಗಳು ಉಪವಾಸ ಮಾಡುವುದು. ಧ್ಯಾನದಲ್ಲಿ ತೊಡಗುವುದು, ದಾನಧರ್ಮ ಮತ್ತು ತ್ಯಾಗದಿಂದ ಕೂಡಿದ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಕ್ರೈಸ್ತರಲ್ಲಿ ಬೆಳೆದುಬಂದಿರುವ ಒಂದು ಧಾರ್ಮಿಕ ಸಂಪ್ರದಾಯವಾಗಿದೆ. ಗುಡ್ ಫ್ರೈಡೇ ಕ್ರೈಸ್ತರ ಹಬ್ಬ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಬೇರೆ ಹಬ್ಬಗಳಲ್ಲಿ ಮಾಡಿದಂತೆ ಹೊಸ ಬಟ್ಟೆ ತೊಟ್ಟು ಭರ್ಜರಿಯಾದ ಔತಣ ಮಾಡಿ ಸಂತೋಷ, ಸಂಭ್ರಮಗಳಿಂದ ಆಚರಿಸುವ ಹರ್ಷದಾಯಕ ಹಬ್ಬವೇನಲ್ಲ. ಇದು ಕ್ರೈಸ್ತರಿಗೆ ಶೋಕದ ದಿನ. ಕ್ರಿಸ್ತನು ಆ ದಿನ ಶಿಲುಬೆಯ ಮೇಲೆ ಸಾಯುವಾಗ ಅನುಭವಿಸಿದ ಭಯಂಕರ ಹಿಂಸೆಯನ್ನು ನೆನಪು ಮಾಡಿಕೊಂಡು ಆ ಬಗ್ಗೆ ಅನುತಾಪ ತೋರಿ, ಆತನ ಕ್ಷಮೆಯನ್ನು ಧ್ಯಾನಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ.
ತನ್ನನ್ನು ಶಿಲುಬೆಗೇರಿಸಿದವರನ್ನೇ “ಹೇ ಪ್ರಭು ತಾವೇನು ಮಾಡುತ್ತಿದ್ದೇವೆ ಎಂದು ಇವರಿಗೆ ತಿಳಿಯದು. ಇವರನ್ನು ಕ್ಷಮಿಸು” ಎಂದು ಹೇಳಿದ ದಯಾಸಾಗರ ಯೇಸು ಕ್ರಿಸ್ತ ಲೋಕಕಲ್ಯಾಣಕ್ಕಾಗಿ ತನ್ನನ್ನೇ ಬಲಿಗೊಟ್ಟ ಪುಣ್ಯದಿನ ಶುಭ ಶುಕ್ರವಾರ. ವಿಶ್ವಾದ್ಯಂತ ಕ್ರೈಸ್ತರು ಶ್ರದ್ಧೆ, ಭಕ್ತಿಯಿಂದ ಆಚರಿಸುವ “ಗುಡ್ ಫ್ರೈಡೇ’.
ಕ್ರಿ.ಪೂ. 4ರ ಡಿಸೆಂಬರ್ 25ರಂದು ನಜರೆತ್ ಗ್ರಾಮದಲ್ಲಿ ಮೇರಿ ಎಂಬಾಕೆಯ ಗರ್ಭದಲ್ಲಿ ಜನಿಸಿದ ಶಿಶು ಮುಂದೆ ಯೇಸು ಕ್ರಿಸ್ತನೆಂದು ಗುರುತಿಸಿಕೊಂಡು ಈ ಜಗತ್ತಿನಲ್ಲಿ ಬಾಳಿ ಬದುಕಿದ್ದು 33 ವರುಷವಾದರೂ ಆತನು ಬಿಟ್ಟು ಹೋದ ಉಪದೇಶದ ಬಳುವಳಿ ಇಂದಿಗೂ ಪ್ರಸ್ತುತ. ಆತ ಅಂದು ಪ್ರತಿಪಾದಿಸಿದ ವಿಚಾರಧಾರೆ, ಮಾನವ ಪ್ರೇಮದಿಂದಾಗಿ ಆತ ಬೋಧಿಸಿದ ತಣ್ತೀಗಳು ವಿಶ್ವಮಾನ್ಯವಾಗಿವೆ.
ರೋಮ್‌ನ ಚರಿತ್ರಕಾರ ಚೇಸಿಟನ್ (ಕ್ರಿ.ಶ. 55-120) ಮತ್ತು ಯಹೂದ್ಯ ಚರಿತ್ರೆಕಾರ ಪೇವಿಯನ್ ಜೋಸೆಫಸ್ (ಕ್ರಿ.ಶ. 37-100) ಯೇಸುಕ್ರಿಸ್ತನ ಬಗ್ಗೆ ಬರೆದಿದ್ದಾರೆ. ಜೋಸೆಫಸ್ ತನ್ನ ಜೂಯಿಷ್ ಎಂಟಿಕ್ವಿಬೇಸ್‌ನಲ್ಲಿ ಯೇಸು ಒಬ್ಬ ಬುದ್ಧಿವಂತ ವ್ಯಕ್ತಿ. ಅದ್ಭುತ ಕಾರ್ಯಗಳನ್ನು ಮಾಡಬಲ್ಲವನು, ಸತ್ಯವನ್ನು ಅರಸುವವರ ಗುರು. ಯೆಹೂದ್ಯ ಮತ್ತು ಯಹೂದ್ಯರಲ್ಲದ ಜನಸ್ತೋಮವನ್ನು ತನ್ನಲ್ಲಿಗೆ ಆಕರ್ಷಿಸಿದ ಮಹಾತ್ಮ. ಆದರೂ ರೋಮ್‌ನ ರಾಜ್ಯಪಾಲ ಪಿಲಾತನು ಯಹೂದ್ಯ ಧಾರ್ಮಿಕ ಮುಖಂಡರ ಶಿಫಾರಸಿನಂತೆ ಅವರನ್ನು ಶಿಲುಬೆಗೇರಿಸಿದನು ಎಂದು ಬರೆದಿದ್ದಾರೆ.
ಶುಭ ಸಂದೇಶಕಾರರಾದ ಮಾರ್ಕ್ (ಕ್ರಿ.ಶ. 70), ಲೂಕ (ಕ್ರಿ.ಶ. 80-90), ಮತ್ತಾಯ (ಕ್ರಿ.ಶ. 80-90) ಮತ್ತು ಯೊವಾನ್ನ (ಕ್ರಿ.ಶ. 90) ಯೇಸುವಿನ ಮರಣದ ವೃತ್ತಾಂತವನ್ನು ಮನಮುಟ್ಟುವಂತೆ ಬರೆದಿದ್ದಾರೆ. ಶಿಲುಬೆಯ ಹಾದಿಯನ್ನು ಸಂಪೂರ್ಣವಾಗಿ ಪರಿಚಯಿಸುವ ಹೊಸ ಒಡಂಬಡಿಕೆಯ ಪವಿತ್ರ ವಾಕ್ಯವನ್ನು ಈ ದಿನದಂದು ಓದಲಾಗುತ್ತದೆ.
ಯೇಸುವನ್ನು ಶಿಲುಬೆಗೇರಿಸಿದ ಘಟನೆಯನ್ನು ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳು ತಮ್ಮ ಖಂಡಕಾವ್ಯ ಗೊಲ್ಗೊಥಾದಲ್ಲಿ ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಯೇಸು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ಕಪಾಳ ಸ್ಥಳ (ಗೊಲ್ಗೊಥಾ)ಕ್ಕೆ ಹೋದರು. ಈ ಸನ್ನಿವೇಶವನ್ನು ಡಿ.ವಿ.ಜಿ. ತಮ್ಮ ಮಂಕುತಿಮ್ಮನ ಕಗ್ಗದಲ್ಲಿ ಹೀಗೆ ಬರೆದಿದ್ದಾರೆ. ತನ್ನ ಶಿಲುಬೆಯ ತಾನೇ ಹೊತ್ತನಲ ಗುರು ಯೇಸು, ನಿನ್ನ ಕರ್ಮದ ಹೊರೆಯ ಬಿಡದೆ ನೀನೆ ಹೊರು, ಖನ್ನನಾಗದೆ ತುಟಿಯ ಬಿಗಿದು ಶವಭಾರವನು, ಬೆನ್ನಿನಲ್ಲಿ ಹೊತ್ತು ನಡೆ-ಮಂಕುತಿಮ್ಮ. ಶಿಲುಬೆ; ಯೇಸುವಿನ ಪ್ರೀತಿಯ ಸಂಕೇತ, ತ್ಯಾಗದ ಗುರುತು, ಮುಕ್ತಿಯ ದ್ಯೋತಕ. ಲೋಕದ ಪಾಪಗಳನ್ನು ಸ್ವೀಕರಿಸಿ ಪರಿಹರಿಸಿ, ಸಮಸ್ತ ಜಗಕ್ಕೆ ಮುಕ್ತಿ ನೀಡಿದ ಮಹಾನುಭಾವ ಯೇಸು. ಹೀಗಾಗಿಯೇ ಅವರ ಬದುಕು ಶಿಲುಬೆಯ ಮೇಲೆ ಅಂತ್ಯಗೊಳ್ಳಲಿಲ್ಲ. ಶಿಲುಬೆಗೇರಿದ ಮೂರನೆಯ ದಿನ ಪುನರುತ್ಥಾನಗೊಂಡರು. ವಿಶ್ವರೂಪವಾದರು, ಲೋಕಕ್ಕೆ ಬೆಳಕಾದರು, ಚಿರಂಜೀವಿಯಾದರು.
ಹೀಗೆ ಪುನರುತ್ಥಾನ ಹಬ್ಬಕ್ಕೆ ಆಧ್ಯಾತ್ಮಿಕ ಹಾಗೂ ದೈವಿಕ ಹಿನ್ನೆಲೆ ಉಂಟೆಂಬುದು ಕ್ರೈಸ್ತ ಧರ್ಮದ ನಂಬಿಕೆ. ಪ್ರಭು ಕ್ರಿಸ್ತರು ಸತ್ತವರೊಳಗಿಂದ ಜೀವಂತರಾಗಿ ಎದ್ದು ಹೊಸ ರೀತಿಯಲ್ಲಿ ನಮ್ಮೊಡನೆ ಎಂದೆಂದಿಗೂ ವಾಸಿಸುತ್ತಿದ್ದಾರೆ ಎಂಬುದನ್ನು ಪ್ರತಿಪಾದಿಸುವ ಅಂಶಗಳು ಇವೆ. ಯೇಸು ಕ್ರಿಸ್ತನ ಪುನರುತ್ಥಾನದ ಈಸ್ಟರ್ ಹಬ್ಬವು ಕ್ರೈಸ್ತ ವಿಶ್ವಾಸಕ್ಕೆ ಪ್ರಬಲವಾದ ಕೀಲಿ ಹಾಗೂ ಧರ್ಮಸಭೆ ಆಚರಿಸಿದ ಮೊದಲ ಹಬ್ಬವಾಗಿದೆ.ಈ ಹಬ್ಬದಿಂದಲೇ ಪ್ರಭು ಕ್ರಿಸ್ತರು ದೇವರ ಏಕೈಕ ಕುಮಾರ ಎಂದು ತಿಳಿಯಿತು. ದೇವರು ಅವರನ್ನು ಅತ್ಯುನ್ನತ ಸ್ಥಾನಕ್ಕೆ ಏರಿಸಿ ಎಲ್ಲ ಹೆಸರುಗಳಿಗಿಂತ ಶ್ರೇಷ್ಠವಾದ ಹೆಸರನ್ನು ದಯಪಾಲಿಸಿರುತ್ತಾರೆ.
ಮರಣದ ಅನಂತರ ದೊರೆಯುವ ನಿತ್ಯ ಜೀವನಕ್ಕಾಗಿ ಮಾತ್ರ ಯೇಸುಕ್ರಿಸ್ತರ ಪುನರುತ್ಥಾನವಲ್ಲ. ನಾವು ಅದನ್ನು ಜ್ಞಾನಸ್ನಾನದಿಂದಲೇ ಸ್ವೀಕರಿಸಿ ಪಾಲ್ಗೊಂಡಿದ್ದೇವೆ. ಹೀಗೆ ಸೇವೆ, ಪ್ರೀತಿ ಮತ್ತು ಕ್ಷಮೆಯನ್ನು ಕ್ರಿಸ್ತರು ಶಿಲುಬೆಯನ್ನು ಹೊತ್ತುಕೊಂಡೇ ನಮಗೆ ಕಲಿಸಿದರು. ಈ ಮೂರು ಗುಣಗಳನ್ನು ನಮ್ಮ ಜೀವನದಲ್ಲಿಯೂ ಆಳವಡಿಸಿಕೊಳ್ಳೋಣ. ಮನುಷ್ಯತ್ವದಿಂದ ದೈವತ್ವದ ಕಡೆಗೆ ಸಾಗೋಣ. ಮೃತ್ಯುಂಜಯರಾದ ಯೇಸುವಿನಲ್ಲಿ ನಾವು ಐಕ್ಯರಾಗೋಣ.
-ದೋನಾತ್ ಡಿ”ಆಲ್ಮೇಡಾ, ತೊಟ್ಟಂ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya :ಗಂಡ ಗದ್ಯ, ಹೆಂಡತಿ ಪದ್ಯ, ಮಕ್ಕಳು ರಗಳೆ!: ಹಾಸ್ಯ ಸಾಹಿತಿ ವೈ.ವಿ.ಗುಂಡೂರಾವ್
Mandya Sahitya Sammelana: ಅಕ್ಷರ ಜಾತ್ರೆಯಲ್ಲಿ “ಹವಾ’ ಎಬ್ಬಿಸಿದ ತೊಟ್ಟಿ ಮನೆ..!
Mandya: ನುಡಿ ಹಬ್ಬದ ಔತಣ ಸವಿಯಲು ಜನವೋ ಜನ- ವೃದ್ಧರಿಗೆ ವಿಶೇಷ ಕೌಂಟರ್
World Meditation Day; ಶರೀರಕ್ಕೆ ಊಟ, ಆತ್ಮಕ್ಕೆ ಧ್ಯಾನ
Meditation; ಮಾನಸಿಕ ಆರೋಗ್ಯಕ್ಕೆ ದಿವ್ಯೌಷಧ: ಡಿ.21ರಂದೇ ಏಕೆ ಧ್ಯಾನ ದಿನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.