ಹಳೆ ಮೈಸೂರಿನಲ್ಲಿ ಮತಕ್ಕೂ ಪೈಪೋಟಿ!
Competition for votes in old Mysore!
Team Udayavani, May 12, 2023, 7:39 AM IST
ಕರ್ನಾಟಕದಲ್ಲಿ ಈ ಬಾರಿ ಶೇ.73.19ರಷ್ಟು ಮತದಾನವಾಗಿದೆ. ಇದು ಕರ್ನಾಟಕದ ಪಾಲಿಗೆ ಸಾರ್ವಕಾಲಿಕ ದಾಖಲೆ. ವಿಶೇಷವೆಂದರೆ ಹಳೆ ಮೈಸೂರಿನಲ್ಲಿ ಮತದಾನ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಕಡಿಮೆ. ಇನ್ನೂ ವಿಶೇಷವೆಂದರೆ, ಉತ್ತರ ಕರ್ನಾಟಕದ ಯಾದಗಿರಿ, ಕಲಬುರಗಿಯಲ್ಲಿ ಕಡಿಮೆಯಾಗಿದೆ. ಹಾಗಾದರೆ ಹಳೆ ಮೈಸೂರಿನಲ್ಲೇ ಮತದಾನ ಹೆಚ್ಚಾಗಲು ಕಾರಣವೇನಿರಬಹುದು? ಇಲ್ಲಿದೆ ಒಂದು ನೋಟ…
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ.73.19ರಷ್ಟು ಇದು ಈವರೆಗಿನ ಚುನಾವಣ ಇತಿಹಾಸದ ಸಾರ್ವಕಾಲಿಕ ದಾಖಲೆ ಯಾಗಿದೆ. ರಾಜ್ಯದ ಒಟ್ಟು 5.30 ಕೋಟಿ ಮತದಾರರ ಪೈಕಿ ಬುಧವಾರ ನಡೆದ ಮತದಾನದಲ್ಲಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. 2.66 ಕೋಟಿ ಪುರುಷರ ಪೈಕಿ 1.96 ಕೋಟಿ ಹಾಗೂ 2.63 ಕೋಟಿ ಮಹಿಳೆಯರ ಪೈಕಿ 1.91 ಕೋಟಿ ಹೆಣ್ಣು ಮಕ್ಕಳು ಹಕ್ಕು ಚಲಾಯಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಪುರುಷರ ಮತದಾನ ಪ್ರಮಾಣ ಶೇ.72.68 ಆಗಿದ್ದರೆ, ಈ ಬಾರಿ ಶೇ.73.68 ಆಗಿದೆ. ಅದೇ ರೀತಿ ಕಳೆದ ಬಾರಿ ಶೇ.71.53ರಷ್ಟು ಮಹಿಳೆಯರು ಮತ ಹಾಕಿದ್ದರೆ ಈ ಬಾರಿ ಶೇ.72.70 ಮಹಿಳೆಯರು ಮತ ಚಲಾಯಿಸಿದ್ದಾರೆ.
ಈ ಬಾರಿ ಅತೀ ಹೆಚ್ಚು ಮತದಾನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶೇ.85.56 ಆಗಿದ್ದು, ಅತೀ ಕಡಿಮೆ ಮತದಾನ ಬೆಂಗಳೂರು ನಗರ ಶೇ.57 ಬಿಟ್ಟರೆ, ಕಲಬುರಗಿ ಜಿಲ್ಲೆಯಲ್ಲಿ ಶೇ.66.43 ಮತ್ತು ಯಾದ ಗಿರಿ ಜಿಲ್ಲೆಯಲ್ಲಿ ಶೇ.68.77 ಮತದಾನ ದಾಖ ಲಾಗಿದೆ. ಎಂದಿನಂತೆ ರಾಜಧಾನಿ ಬೆಂಗಳೂರಿನ “ನೀರಸ ಮತದಾನ’ದ ಇತಿಹಾಸ ಮುಂದುವರಿದಿದೆ. ಬೆಂಗಳೂರು ನಗರ ಜಿಲ್ಲೆ ಸೇರಿದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಕೇಂದ್ರ, ಉತ್ತರ ಮತ್ತು ದಕ್ಷಿಣ ಈ ಮೂರು ಚುನಾವಣ ಜಿಲ್ಲೆಗಳಲ್ಲಿ ಸರಾಸರಿ 53-52 ಮತದಾನವಾಗಿದೆ.
ಹಳೆ ಮೈಸೂರಿನಲ್ಲಿ ಹೆಚ್ಚು: ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾಗಿರುವ ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ ಮತದಾನದ ಪ್ರಮಾಣ ಹೆಚ್ಚಾಗಿದೆ. ಇದಕ್ಕೆ ವಿಶೇಷ ಕಾರಣಗಳೂ ಉಂಟು. ರಾಜಕಾರಣಿಗಳ ರೀತಿಯಲ್ಲೇ ಜನರೂ ರಾಜಕೀಯ ಜಿದ್ದಾಜಿದ್ದಿಯಲ್ಲಿ ತೊಡಗುವುದರಿಂದ ಸ್ವಯಂ ಪ್ರೇರಿತವಾಗಿ ಬಂದು ಮತಹಾಕುತ್ತಾರೆ ಎಂಬ ಮಾತುಗಳಿವೆ.
10 ಜಿಲ್ಲೆಗಳಲ್ಲಿ ಶೇ.80ಕ್ಕೂ ಹೆಚ್ಚು: ವಿಶೇಷವೆಂದರೆ ಈ ಬಾರಿ 10 ಜಿಲ್ಲೆಗಳಲ್ಲಿ ಮತದಾನ ಪ್ರಮಾಣ ಶೇ.80 ದಾಟಿದೆ. ಕಳೆದ ಬಾರಿ ಯಾವ ಜಿಲ್ಲೆಯಲ್ಲೂ ಶೇ.80ರಷ್ಟು ಮತದಾನ ಆಗಿರಲಿಲ್ಲ. ಅದೇ ರೀತಿ 17 ಜಿಲ್ಲೆಗಳಲ್ಲಿ ಶೇ.70ರಿಂದ 80ರಷ್ಟು ಮತ ದಾನವಾಗಿದೆ. 2018ರಲ್ಲಿ ಈ ಸಂಖ್ಯೆ 18 ಆಗಿತ್ತು. ಈ ಬಾರಿ ಶೇ.60 ದಾಟಿದ ಜಿಲ್ಲೆಗಳು ಕೇವಲ ಎರಡು ಇದ್ದು, 2018ರಲ್ಲಿ 9 ಜಿಲ್ಲೆಗಳಲ್ಲಿ ಶೇ.50ರಿಂದ 60ಷ್ಟು ಮತದಾನವಾಗಿತ್ತು. ಕಳೆದ ಬಾರಿಯಂತೆ ಬೆಂಗ ಳೂರು ನಗರ ಜಿಲ್ಲೆ ಸೇರಿದಂತೆ ಬಿಬಿಎಂಪಿ- (ಕೇಂದ್ರ), ಬಿಬಿಎಂಪಿ (ಉತ್ತರ), ಬಿಬಿಎಂಪಿ (ದಕ್ಷಿಣ) ಚುನಾವಣ ಜಿಲ್ಲೆಗಳಲ್ಲಿ ಈ ಬಾರಿಯೂ ಮತದಾನ ಶೇ.50ರ ಗಡಿಯಷ್ಟೇ ದಾಟಿತ್ತು. ಕಳಪೆ ಸಾಧನೆ ಮುಂದುವರಿದಿದೆ.
ಜಿದ್ದಾಜಿದ್ದಿಯೇ ಕಾರಣ!
ಚಿಕ್ಕಬಳ್ಳಾಪುರ: ಈ ಬಾರಿ ಚಿಕ್ಕಬಳ್ಳಾಪುರ ಮತದಾರ ತಾನೇ ಎಲ್ಲರಿಗಿಂತ ಮುಂದೆ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಇಲ್ಲಿ ಶೇ.85.56ರಷ್ಟು ಮತದಾನವಾಗಿದ್ದು, ರಾಜ್ಯಕ್ಕೇ ಮೊದಲ ಸ್ಥಾನ ಗಳಿಸಿಕೊಂಡಿದೆ. 2018 ರ ಸಾರ್ವತ್ರಿಕ ಚುನಾವಣೆಯಲ್ಲಿ ದಾಖಲಾಗಿದ್ದ ಶೇ.84.80 ರಷ್ಟು ಮತದಾನ ಮೀರಿ ಈ ಬಾರಿ ಶೇ.85.38 ರಷ್ಟು ಮತ ದಾನ ದಾಖಲುಗೊಂಡಿದೆ. ಕಳೆದ 2018ರ ಚುನಾವಣೆಗೆ ಹೋಲಿಸಿದರೆ ಈ ಬಾರಿ ಒಟ್ಟು 1.19 ರಷ್ಟು ಮತದಾನ ಹೆಚ್ಚಾಗಿದೆ. ಈ ಇದಕ್ಕೆ ಕಾರಣ ಹುಡುಕಿ ಹೊರಟರೆ ಸಿಗುವುದು ಜಿಲ್ಲೆಯಲ್ಲಿ ಅಳವಾಗಿ ಬೇರೂರಿರುವ ಜಿದ್ದಾಜಿದ್ದಿನ ರಾಜಕಾರಣ ಜತೆಗೆ ಪಕ್ಷಕ್ಕಿಂತ ಜಿಲ್ಲೆಯಲ್ಲಿ ವ್ಯಕ್ತಿಗತವಾಗಿ ರಾಜಕಾರಣದ ಪ್ರತೀ ಚುನಾ ವಣೆಯಲ್ಲೂ ವ್ಯಾಪಕವಾಗಿ ಸದ್ದು ಮಾಡುತ್ತದೆ. ಪಕ್ಷದ ನಾಯಕರೇ ಅಷ್ಟೇ ಅಲ್ಲ. ತಳ ಮಟ್ಟದ ಕಾರ್ಯ ಕರ್ತರಲ್ಲೂ ಕೂಡ ಪಕ್ಷ, ವ್ಯಕ್ತಿ ಮೇಲೆ ತೋರುವ ನಿಷ್ಠೆಯೆ ಮತದಾನ ಹೆಚ್ಚಳಕ್ಕೆ ಪ್ರಮುಖ ಕಾರಣ. ಆಂಧ್ರದ ಗಡಿಗೆ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಮೇಲೆ ರಾಯಲ ಸೀಮೆಯ ಸಂಸ್ಕೃತಿ, ಸ್ವಭಾವ ಸಾಕಷ್ಟು ಪ್ರಭಾವ ಮೊದಲ ನಿಂದಲೂ ಬೀರಿದೆ. ನೇರ ನೇರ ರಾಜ ಕಾರಣ ಜಿಲ್ಲೆಯ ಜನರಲ್ಲಿ ಕರಗತವಾಗಿ ಬಂದಿದೆ. ಇದರ ಜತೆಗೆ ಜಿಲ್ಲಾಡಳಿತ ಕೈಗೊಳ್ಳುವ ಸ್ವೀಪ್ ಕಾರ್ಯ ಕ್ರಮಗಳು ಮತದಾರರ ಮನ ಸೆಳೆಯುತ್ತವೆ. ಈ ಬಾರಿ ಘೋಷಣೆಗೂ ಮೊದಲೇ ಮತದಾರರ ಜಾಗೃತಿಗೆ ವಿಶೇಷ ಕಾರ್ಯಕ್ರಮಗಳ ಅರಿವು ಮೂಡಿಸಿತ್ತು.
ಅಭ್ಯರ್ಥಿಗಳ ಆಸಕ್ತಿಯಿಂದ ಹೆಚ್ಚಳ
ತುಮಕೂರು: ಈ ಬಾರಿ ಜಿಲ್ಲೆಯ 11 ಕ್ಷೇತ್ರಗಳ ಪೈಕಿ 10ರಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ ನಡೆದಿದೆ. ಇದಕ್ಕೆ ಜಿಲ್ಲಾಡಳಿತ ಕೈಗೊಂಡ ಹಲವು ಕ್ರಮಗಳ ಜತೆಗೆ ಅಭ್ಯರ್ಥಿಗಳ ಆಸಕ್ತಿ, ಜನರಲ್ಲಿನ ರಾಜಕೀಯ ಆಸಕ್ತಿಯೂ ಅಡಗಿದೆ. ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಮತದಾನವಾಗಿರುವುದು ಕಂಡು ಬಂದಿದೆ ಜಿಲ್ಲೆಯ ಮೂರು ರಾಜಕೀಯ ಪಕ್ಷಗಳಿಗೂ ಈ ಚುನಾವಣೆ ಬಹಳ ಸವಾಲಾಗಿತ್ತು. ನಾವು ಗೆಲ್ಲಲೇಬೇಕು ಎಂದು ಮೂರು ರಾಜಕೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮತದಾರರ ಮನಸ್ಸು ಗೆಲ್ಲಲು ಹಲವು ತಂತ್ರಗಳನ್ನು ರೂಪಿಸಿದ್ದವು. ಇದರ ಜತೆಗೆ ಜಿಲ್ಲಾಡಳಿತವೂ ಮತದಾರರಲ್ಲಿ ಮತದಾನ ಮಾಡುವ ಬಗ್ಗೆ ಜಾಗೃತಿ ಉಂಟು ಮಾಡುವ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಜನರು ಮತದಾನ ಮಾಡಲು ಪ್ರೇರೇಪಣೆ ಮಾಡಿದರು. ಈ ಎಲ್ಲದರ ಪರಿಣಾಮ ತುಮಕೂರು ನಗರ ಬಿಟ್ಟು ಉಳಿದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಉತ್ತಮ ಮತದಾನವಾಗಿದೆ. ಈ ಹಿಂದಿನ ಮತದಾನಕ್ಕಿಂತ ಈ ಬಾರಿ ಉತ್ತಮ ಮತದಾನವಾಗಿದೆ.
ಮತ ಪ್ರಮಾಣ ಹೆಚ್ಚಳಕ್ಕೆ ಕಾರಣ
ಸಾಮಾನ್ಯವಾಗಿ ಆಡಳಿತ ವಿರೋಧಿ ಅಲೆ ಇದ್ದಾಗ ಮತದಾನ ಪ್ರಮಾಣ ಹೆಚ್ಚಾಗುತ್ತದೆ ಎಂದು ಮತದಾನ ವಿಶ್ಲೇಷಕರು ಹೇಳುತ್ತಾರೆ. ಇದರ ಜತೆಗೆ ಮತದಾರರಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿರುವುದು, ರಾಜಕೀಯ ಪ್ರಜ್ಞೆ ಬೆಳೆದಿರುವುದು, ಸ್ಥಳೀಯ ರಾಜಕಾರಣ ಮತ್ತು ನಾಯಕರ ವರ್ಚಸ್ಸು, ಸ್ಥಳೀಯ ಸಮಸ್ಯೆಗಳು, ಜಾತಿ ಪ್ರಾಬಲ್ಯ ಸಹ ಮತದಾನದ ಮೇಲೆ ಪ್ರಭಾವ ಬೀರುತ್ತದೆ. ಸಾಮಾಜಿಕ ಮಾಧ್ಯಮಗಳ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ. ಇದೆಲ್ಲವನ್ನು ಮೀರಿಸುವಂತೆ “ಹಣದ ಪ್ರಭಾವ’ ಸಹ ಮತದಾನದ ಲೆಕ್ಕಾಚಾರಗಳನ್ನು ಅದಲು-ಬದಲು ಮಾಡುತ್ತದೆ ಎಂದು ಹೇಳಲಾಗುತ್ತದೆ. ಮತದಾನದ ಕುರಿತು ಜಾಗೃತಿ ಮೂಡಿಸಲು ಚುನಾವಣ ಆಯೋಗ ಹತ್ತಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಗಮನಿಸಬಹುದಾಗಿದೆ.
ಜನರ ಆಸಕ್ತಿಯಿಂದಾಗಿ ಹೆಚ್ಚಳ
ಹಾಸನ: ಜಿದ್ದಾಜಿದ್ದಿ ರಾಜಕಾರಣಕ್ಕೆ ಕಾರಣವಾಗಿರುವ ಹಾಸನದಲ್ಲಿಯೂ ಈ ಬಾರಿ ಮತದಾನ ಹೆಚ್ಚಳವಾಗಿದೆ. ಈ ಬಾರಿ ಶೇ. 82.07ರಷ್ಟು ಮತದಾನವಾಗಿದ್ದರೆ, ಕಳೆದ ಬಾರಿ ಶೇ. 81.07ರಷ್ಟು ಮತದಾನವಾಗಿತ್ತು. 2013ರಲ್ಲಿ ಶೇ. 79.21ರಷ್ಟು ಮತದಾನವಾಗಿತ್ತು.
ಮತದಾನ ಪ್ರಮಾಣ ವೃದ್ಧಿಯಾಗಲು ಜಿಲ್ಲಾಡಳಿತಗಳು ಸ್ವೀಪ್ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮ ನಡೆಸಿದ್ದವು. ಹಾಗೆಯೇ ಹಾಸನ ಜಿಲ್ಲೆಯ ಜನರಲ್ಲಿ ರಾಜಕೀಯ ಆಸಕ್ತಿ ಹೆಚ್ಚಾಗಿದ್ದು, ಇದರಿಂದಾಗಿಯೇ ಜನ ಹೆಚ್ಚು ಹೆಚ್ಚಾಗಿ ಮತ ಹಾಕಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಾದ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಗಳು ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಡೇರಿ ಸಂಘ ಸಹಿತ ಸಹಕಾರ ಸಂಸ್ಥೆಗಳ ಚುನಾವಣೆಗಳು ಭಾರೀ ಪ್ರಭಾವ ಬೀರಲಿದ್ದು ಈ ಸಂಸ್ಥೆಗಳ ನಾಯಕತ್ವದ ಪ್ರಭಾವ ವಿಧಾನಸಭೆ ಚುನಾವಣೆ ಮೇಲೂ ಫಲಿತಾಂಶ ಬೀರಲಿದೆ.
ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿನ ರಾಜಕೀಯ ಬೆಳವಣಿಗೆ ಹಾಗೂ ರಾಜಕೀಯ ಪಕ್ಷಗಳ ಕಾರ್ಯಕರ್ತರ ಉತ್ತೇಜನದಿಂದ ಮತದಾನದ ಪ್ರಮಾಣ ಹೆಚ್ಚುತ್ತಿದೆ. ವಿಶೇಷವಾಗಿ ಶ್ರವಣಬೆಳಗೊಳ, ಹೊಳೆನರಸೀಪುರ, ಅರಕಲಗೂಡು ವಿಧಾನಸಭಾ ಕ್ಷೇತ್ರಗಳ ಜನರಲ್ಲಿ ರಾಜಕೀಯ ಆಸಕ್ತಿ ಹೆಚ್ಚು. ಹಾಗಾಗಿ ಈ ಕ್ಷೇತ್ರಗಳಲ್ಲಿ ಮತದಾನದ ಪ್ರಮಾಣ ಶೇ.80ರಿಂದ 85ರಷ್ಟಿರುತ್ತದೆ.
ಫಲಕೊಟ್ಟ ಸ್ವೀಪ್ ಜಾಗೃತಿ
ಮಂಡ್ಯ: ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ, ಈ ಬಾರಿ ಶೇ.2ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಸ್ವೀಪ್ ಸಮಿತಿ ವತಿಯಿಂದ ಜಿಲ್ಲೆಯಲ್ಲಿ ಕೈಗೊಂಡ ಮತದಾನ ಜಾಗೃತಿ ಫಲಪ್ರದವಾಗಿದೆ. ಕಳೆದ 2018ರಲ್ಲಿ ಶೇ.83.25ರಷ್ಟು ಮತದಾನ ನಡೆದಿತ್ತು. ಈ ಬಾರಿ ಶೇ.84.45ರಷ್ಟು ಮತದಾನ ನಡೆಯುವ ಮೂಲಕ ಶೇ.2ರಷ್ಟು ಮತದಾನ ನಡೆದಿದೆ. ಸ್ವೀಪ್ ಸಮಿತಿ ವತಿಯಿಂದ ಕಳೆದ ಬಾರಿ ಕಡಿಮೆ ಮತದಾನವಾದ ಬೂತ್‌ಗಳಲ್ಲಿ ಪ್ರತ್ಯೇಕವಾಗಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲದೆ, ನಗರ ಪ್ರದೇಶಗಳಲ್ಲಿಯೇ ಅತೀ ಕಡಿಮೆ ಮತದಾನವಾಗಿದ್ದರಿಂದ ಮಂಡ್ಯ ನಗರ ಸೇರಿದಂತೆ ತಾಲೂಕಿನ ಪಟ್ಟಣಗಳಲ್ಲೂ ಅರಿವು ಮೂಡಿಸಲಾಗಿತ್ತು. ಹಾಗೆಯೇ ಮತದಾನ ಹೆಚ್ಚಳಕ್ಕೆ ರಾಜಕೀಯ ಜಿದ್ದಾಜಿದ್ದಿಯೂ ಕಾರಣವಾಗಿದೆ. ಜಿಲ್ಲೆಯಲ್ಲಿ ಅಭ್ಯರ್ಥಿಗಳ ನಡುವೆ ಪ್ರಬಲ ಪೈಪೋಟಿ ನಡೆದಿದ್ದು, ಜೀವನಕ್ಕಾಗಿ ಹೊರ ಹೋಗಿರುವ ಮತದಾರರು ಜಿಲ್ಲೆಗೆ ಆಗಮಿಸಿ, ಮತದಾನ ಮಾಡಿರುವುದು ಶ್ಲಾಘನೀಯವಾಗಿದೆ.
ಕಳೆದ ಬಾರಿಯ ದಾಖಲೆ ಮೀರಿ ಮತದಾನ
ಈ ಬಾರಿ ರಾಜ್ಯಾದ್ಯಂತ ಶೇ.73.19ರಷ್ಟು ಮತದಾನವಾಗಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಕಳೆದ ಬಾರಿಯ ದಾಖಲೆಯನ್ನು ಮತದಾರರು ಹಿಂದಿಕ್ಕಿದ್ದಾರೆ. 2018ರಲ್ಲಿ ಶೇ.72.44ರಷ್ಟು ಮತದಾನವಾಗಿತ್ತು. ಈವರೆಗೆ ನಡೆದಿರುವ 16 ವಿಧಾನಸಭೆ ಚುನಾವಣೆಗಳಲ್ಲಿ ಮತದಾನ ಪ್ರಮಾಣ ಶೇ.70 ದಾಟಿದ್ದು ನಾಲ್ಕು ಬಾರಿ ಮಾತ್ರ. 1978ರಲ್ಲಿ ಶೇ.71.90ರಷ್ಟು ಮತದಾನವಾಗಿತ್ತು. 2018ರವರೆಗೆ ಅದೇ ದಾಖಲೆಯಾಗಿತ್ತು. ಬಳಿಕ 2013ರಲ್ಲಿ ಶೇ.71.83 ಆಗಿತ್ತು. ಈಗ ಶೇ.73.19 ಆಗಿದೆ. 1957 ಮತ್ತು 1962ರಲ್ಲಿ ನಡೆದ ಮೊದಲ ಎರಡು ಚುನಾವಣೆಗಳಲ್ಲಿ ಮತದಾನ ಪ್ರಮಾಣ ಶೇ.60ರ ಕೆಳಗಿತ್ತು. 9 ಚುನಾವಣೆಗಳಲ್ಲಿ ಮತದಾನ ಪ್ರಮಾಣ ಶೇ.60ರಿಂದ 70ರಷ್ಟಿತ್ತು. 1978ರ ಅನಂತರ ಸುಮಾರು 35 ವರ್ಷಗಳ ಬಳಿಕ ಮತದಾನ ಪ್ರಮಾಣ ಶೇ.70 ದಾಟಿತ್ತು. ಕಳೆದ ಮೂರು ಮತ್ತು ಈ ಬಾರಿಯ ಚುನಾವಣೆಯಲ್ಲಿ ಶೇ.70ಕ್ಕಿಂತ ಅಧಿಕ ಮತದಾನವಾಗಿದೆ.
ನಗರಗಳ ಉದಾಸೀನತೆ ದೂರ
ರಾಜ್ಯದಲ್ಲಿ ಈ ಬಾರಿ ದಾಖಲೆ ಪ್ರಮಾಣದ ಮತದಾನವಾಗಿದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ಎಲ್ಲ ಮತದಾರರಿಗೆ ಧನ್ಯವಾದಗಳು. ಅಲ್ಲದೇ ನಗರ ಮತದಾರರ ಉದಾಸೀನತೆ ದೂರು ಮಾಡುವಲ್ಲಿ ಈ ಬಾರಿ ಆಯೋಗ ಯಶಸ್ವಿಯಾಗಿದೆ. ರಾಜ್ಯದ 11 ಪಾಲಿಕೆಗಳ ಪೈಕಿ ಬೆಳಗಾವಿ, ಬೆಂಗಳೂರು ಹೊರತುಪಡಿಸಿ ಉಳಿದ ಕಡೆ ಯುವ ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವದ ದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ.
ಮನೋಜ್ ಕುಮಾರ್ ಮೀನಾ, ರಾಜ್ಯ ಮುಖ್ಯ ಚುನಾವಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.