ನನ್ನ ವಿರುದ್ಧ ಹೇಳಿಕೆ ಕೊಡಿಸುವ ಷಡ್ಯಂತ್ರ: ಶೆಟ್ಟರ್
ಬಿಜೆಪಿಯಲ್ಲಿ ತತ್ವ-ಸಿದ್ಧಾಂತ ಉಳಿದಿದೆಯೇ? ರೌಡಿಶೀಟರ್, ಸಿ.ಡಿ. ನಾಯಕರಿಗೆ ಟಿಕೆಟ್ ಕೊಟ್ಟ ಬಿಜೆಪಿ
Team Udayavani, Apr 27, 2023, 7:21 AM IST
ಹುಬ್ಬಳ್ಳಿ: ನಾನು ಕಾಂಗ್ರೆಸ್ ಸೇರಿರುವುದು ಸೈದ್ಧಾಂತಿಕ ವಿರೋಧಿ ಎನ್ನುವುದಾದರೆ ಆಪರೇಷನ್ ಕಮಲ ಮೂಲಕ ಸರಕಾರ ರಚಿಸಿ, ಸಿ.ಡಿ. ಆರೋಪ ಹೊತ್ತವರಿಗೆ ಹಾಗೂ ರೌಡಿಶೀಟರ್‌ಗಳಿಗೆ ಟಿಕೆಟ್ ನೀಡಿರುವುದು ಬಿಜೆಪಿಯ ಯಾವ ಸಿದ್ಧಾಂತ ಎಂಬುದನ್ನು ಆ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ಧಾಂತ ವಿರೋಧಿಗಳಿಗೆ ಬಿಜೆಪಿಯಲ್ಲಿ ಭೇಷರತ್ ಆಗಿ ಟಿಕೆಟ್ ನೀಡಿಲ್ಲವೇ? ಸಿದ್ಧಾಂತದ ಬಗ್ಗೆ ದೊಡ್ಡ ದೊಡ್ಡ ಮಾತನಾಡುವ ಬಿಜೆಪಿ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದರು.
ಒಬ್ಬ ಶೆಟ್ಟರನ್ನು ಸೋಲಿಸಲು ಇಷ್ಟೊಂದು ನಾಯಕರಾ?
ಜಗದೀಶ ಶೆಟ್ಟರ್ ಪಕ್ಷ ತೊರೆಯುವುದರಿಂದ ಪಕ್ಷ ಹಾಗೂ ಲಿಂಗಾಯತ ಮತ ಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಬೀರದು, ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಭದ್ರವಾಗಿರುವ ಕಾರಣ ಶೆಟ್ಟರ್ ಸೋಲು ಖಚಿತ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ, ಸ್ಮೃತಿ ಇರಾನಿ, ನಳಿನಕುಮಾರ್ ಕಟೀಲು ಹೀಗೆ ಸಾಲು ಸಾಲು ನಾಯಕರು ಇಲ್ಲಿಗೆ ಬರುತ್ತಿದ್ದಾರೆ. ಇಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸ ಇದ್ದರೆ ನನ್ನನ್ನು ಸೋಲಿಸುವ ಒಂದಂಶದ ತಂತ್ರಗಾರಿಕೆಯನ್ನೇ ರೂಪಿಸಿ ಇಷ್ಟು ನಾಯಕರು ಯಾಕೆ ಬೆವರು ಸುರಿಸುತ್ತಿದ್ದಾರೆ ಎಂದು ಶೆಟ್ಟರ್ ಪ್ರಶ್ನಿಸಿದರು.
ಬಿಜೆಪಿಯಲ್ಲಿ ಕೆಲವರು ನೇರವಾಗಿ ಬಂದು ನನ್ನ ವಿರುದ್ಧ ಹೇಳಿಕೆ ನೀಡದೆ ಲಿಂಗಾಯತ ನಾಯಕರ ಮೂಲಕ ಲಿಂಗಾಯತ ನಾಯಕನಾದ ನನ್ನ ವಿರುದ್ಧ ಹೇಳಿಕೆ ಕೊಡಿಸುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಒಡೆದು ಆಳುವ ಕುತಂತ್ರ, ನನ್ನನ್ನು ಮೂಲೆಗುಂಪು ಮಾಡುವ ಯತ್ನ, ಅನ್ಯಾಯ ಮಾಡಿ ನಾನು ಪಕ್ಷದಿಂದ ಹೊರ ಬರುವಂತೆ ಮಾಡಿದ್ದಲ್ಲದೆ, ರಾಷ್ಟ್ರಮಟ್ಟದಲ್ಲಿ ಹುಬ್ಬಳ್ಳಿ – ಧಾರವಾಡ ಕ್ಷೇತ್ರ ಸದ್ದು ಮಾಡಿ, ನನ್ನ ವಿರುದ್ಧ ಮುಗಿ ಬೀಳುತ್ತಿರುವುದನ್ನು ಜನರು ನೋಡಿದ್ದಾರೆ ಎಂದರು.
ಜೋಷಿ ವಿರುದ್ಧ ಆಕ್ರೋಶ
ಶೆಟ್ಟರ್‌ಗೆ ಏನೆಲ್ಲ ಅವಕಾಶಗಳನ್ನು ನೀಡಿದ್ದೆವು ಎನ್ನುವ ಪ್ರಹ್ಲಾದ ಜೋಷಿ ಸಹಿತ ಇತರ ನಾಯಕರಿಗೆ ನಾಚಿಕೆಯಾಗಬೇಕು. ಇಂತಹ ಕುತಂತ್ರ ರಾಜಕಾರಣ ಬಹಳ ದಿನ ನಡೆಯುವುದಿಲ್ಲ. ಲೋಕಸಭಾ ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಿದ್ದೆ ಎಂಬುದನ್ನು ಜೋಷಿ ನೆನಪಿಸಿಕೊಳ್ಳಲಿ. ಸಂಘರ್ಷ ಏರ್ಪಡುವ ಮುನ್ನ ಗೌರವಯುತವಾಗಿ ಕುಳಿತು ಮಾತನಾಡಿದ್ದರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಿದ್ದೆ. 30 ವರ್ಷಗಳ ಕಾಲ ಪಕ್ಷಕ್ಕೆ ದುಡಿದ ಹಿರಿಯರನ್ನು ಇಷ್ಟೊಂದು ನಿಕೃಷ್ಟವಾಗಿ ನಡೆಸಿಕೊಂಡಿರುವುದು ನಮಗೆ ಮಾಡಿರುವ ದ್ರೋಹ. ಇಂತಹ ನಡೆಯಿಂದಾಗಿಯೇ ಲಕ್ಷ್ಮಣ ಸವದಿ, ವಿ.ಎಸ್.ಪಾಟೀಲ್, ಬಿಎಸ್‌ವೈ ಆಪ್ತ ಎನ್.ಆರ್. ಸಂತೋಷ್, ಯು.ಬಿ.ಬಣಕಾರ, ಆಯನೂರು ಮಂಜುನಾಥ ಮುಂತಾದ ಹಲವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೆ ಅನ್ವಯಿಸದ ಪಕ್ಷ ಸಿದ್ಧಾಂತವನ್ನು ನನ್ನ ಮೇಲೆ ಹೇರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಎಸ್‌ವೈ ಟೀಕೆ ನನಗೆ ಆಶೀರ್ವಾದ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನನ್ನ ಟಿಕೆಟ್‌ಗಾಗಿ ಕೊನೆ ಕ್ಷಣದವರೆಗೂ ಪ್ರಯತ್ನಪಟ್ಟರು. ಅವರ ಟೀಕೆಗಳಿಗೆ ಪ್ರತಿ ಟೀಕೆ ಮಾಡದೆ ಅದನ್ನು ಆಶೀರ್ವಾದವಾಗಿ ಸ್ವೀಕರಿಸುವೆ. ಲಿಂಗಾಯತ ಸಮಾಜದ ನಾಯಕರ ಮೂಲಕವೇ ಲಿಂಗಾಯತ ನಾಯಕನ ಮೇಲೆ ಛೂ ಬಿಟ್ಟಿರುವುದು ಬಿಜೆಪಿಯ ಒಡೆದು ಆಳುವ ನೀತಿಯಾಗಿದೆ. ಯಡಿಯೂರಪ್ಪ ಪಕ್ಷದಲ್ಲಿ ಅಸಹಾಯಕರಾಗಿದ್ದಾರೆ. ಅವರ ಮೂಲಕ ನನ್ನ ವಿರುದ್ಧ ಮಾತನಾಡುವಂತೆ ಮಾಡುತ್ತಿದ್ದಾರೆ. ಪಕ್ಷದ ಈಗಿನ ಪರಿಸ್ಥಿತಿಗೆ ಬಿ.ಎಲ್.ಸಂತೋಷ ಕಾರಣ ಎಂದು ನೇರವಾಗಿ ಟೀಕಿಸಿದ್ದೆ. ಅವರು ನನ್ನ ವಿರುದ್ಧ ಮಾತನಾಡದೆ ನಮ್ಮ ಸಮಾಜದ ನಾಯಕರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದಕ್ಕೆ ಪಕ್ಷ ತೊರೆದಿದ್ದೇನೆ ಎಂದು ಶೆಟ್ಟರ್ ಹೇಳಿದರು.
ಎಲ್ಲ ಕ್ಷೇತ್ರಗಳಿಗೂ ಸಮಾನ ಆದ್ಯತೆ: ನಳಿನ್
ಹುಬ್ಬಳ್ಳಿ: ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪ್ರಧಾನಿ ಮೋದಿ ಸಹಿತ ಹಲವು ನಾಯಕರು ರಾಜ್ಯಕ್ಕೆ ಬರುತ್ತಿದ್ದಾರೆಯೇ ಹೊರತು ಪಕ್ಷ ದುರ್ಬಲವಾಗಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಈ ಭಾಗದ ಪ್ರಮುಖ ಕೇಂದ್ರ ಸ್ಥಾನವಾಗಿದೆ. ಹೀಗಾಗಿ ಹಲವು ನಾಯಕರು ಈ ಭಾಗಕ್ಕೆ ಬರುತ್ತಿದ್ದಾರೆಯೇ ಹೊರತು ಆ ಕ್ಷೇತ್ರದ ಬಗ್ಗೆ ಅಷ್ಟೊಂದು ಒತ್ತು ನೀಡಿಲ್ಲ. ಈ ಕ್ಷೇತ್ರಕ್ಕೆ ನೀಡಿದ ಮಹತ್ವವನ್ನೇ ರಾಜ್ಯದ ಇತರ ಕ್ಷೇತ್ರಗಳಿಗೂ ನೀಡಿದ್ದೇವೆ ಎಂದರು.
ಬಿಜೆಪಿಯಿಂದ ಬಂಡಾಯ ಎದ್ದವರು ಯಾರೂ ಗೆದ್ದಿಲ್ಲ. ಜಗದೀಶ ಶೆಟ್ಟರ್ ಭವಿಷ್ಯ ಮೇ 13ರ ಬಳಿಕ ಸ್ಪಷ್ಟವಾಗಲಿದೆ. ಶೆಟ್ಟರ್‌ಗೆ ಪಕ್ಷ ಹಲವು ಸ್ಥಾನಗಳನ್ನು ನೀಡಿದ್ದರೂ ಪಕ್ಷ ತೊರೆದಿದ್ದಾರೆ. ಈಗಲೂ ಉನ್ನತ ಸ್ಥಾನ ನೀಡುವ ಭರವಸೆ ನೀಡಿದರೂ ತಿರಸ್ಕರಿಸಿದ್ದಾರೆ. ಅವರಿಗೆ ಟಿಕೆಟ್ ನಿರಾಕರಿಸಿದ್ದು ಕೇಂದ್ರ ಸಂಸದೀಯ ಮಂಡಳಿ. ಅವರು ಹಿಂದೆ ಕಾರ್ಯಕಾರಣಿ ಸಮಿತಿಯಲ್ಲಿದ್ದಾಗ ಎಲ್ಲರಿಗೂ ಟಿಕೆಟ್ ನೀಡಿದ್ದಾರೆಯೇ? ಕುಂದಗೋಳದ ಚಿಕ್ಕನಗೌಡರಿಗೆ ಯಾಕೆ ಟಿಕೆಟ್ ತಪ್ಪಿಸಿದರು ಎಂದು ನಳಿನ್ ಪ್ರಶ್ನಿಸಿದರು.
ಆಡಿಯೋ ಮಾತನಾಡಬೇಡಿ
ಈಶ್ವರಪ್ಪ ಹಾಗೂ ಕೆಲವು ನಾಯಕರಿಗೆ ಟಿಕೆಟ್ ತಪ್ಪಲಿದೆ ಎನ್ನುವ ತಮ್ಮ ಆಡಿಯೋ ವೈರಲ್ ಆಗಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನಳಿನ್, ಅದು ನ್ಯಾಯಾಲಯದಲ್ಲಿದೆ. ಈ ಬಗ್ಗೆ ಮಾತನಾಡುವುದಿಲ್ಲ ಎಂದರು.
ಹಳೆ ಮೈಸೂರು ಭಾಗದ ಜೆಡಿಎಸ್ ಕೋಟೆಗೆ ಬಿಜೆಪಿ ಲಗ್ಗೆ ಇಟ್ಟಿದೆ. ಆ ಪಕ್ಷ ಒಂದು ಜಿಲ್ಲೆಗೆ ಸೀಮಿತವಾಗಲಿದೆ. ಕಾಂಗ್ರೆಸ್ 80 ಸೀಟುಗಳಲ್ಲಿ ಮಾತ್ರ ಗೆಲುವು ಸಾಧಿ ಸಲಿದೆ. ಹೊಸಬರಿಗೆ ಅವಕಾಶ, ಹಿರಿಯರನ್ನು ಕೈ ಬಿಡುವ ಹೊಸ ಪ್ರಯೋಗ ಲೋಕಸಭಾ ಚುನಾವಣೆಗೆ ಅನ್ವಯವಾಗುತ್ತಾ ಎನ್ನುವ ಪ್ರಶ್ನೆಗೆ ಮುಂದೆ ಕಾದು ನೋಡಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!
CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್
ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!
ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ
ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್ ಕಾರಣವೇ?
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.