8 ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ: ಸಚಿವ ಡಾ.ಸುಧಾಕರ್
32 ಲಕ್ಷ ಮಂದಿ 2ನೇ ಡೋಸ್ ಪಡೆಯಲು ಬಾಕಿ, ಈ ಸಮಯದಲ್ಲಿ ನಿರ್ಲಕ್ಷ್ಯ ಬೇಡ
Team Udayavani, Apr 11, 2022, 6:32 PM IST
ಬೆಂಗಳೂರು: ಚೀನಾ, ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್ ಸೇರಿದಂತೆ ಎಂಟು ದೇಶಗಳಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿದ್ದು, ಈ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇರಿಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಆರೋಗ್ಯ ಸೌಧದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಎಂಟು ದೇಶಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಕಂಡುಬಂದಿದೆ. ದಕ್ಷಿಣ ಕೊರಿಯಾ, ಹಾಂಗ್‍ಕಾಂಗ್, ಚೀನಾ ದೇಶಗಳಲ್ಲಿ ಸಾಂಕ್ರಾಮಿಕದ ತೀವ್ರತೆ ಹೆಚ್ಚಿದೆ. ಜರ್ಮನಿ, ಯುಕೆಯಲ್ಲೂ ಸೋಂಕು ಹೆಚ್ಚಾಗಿದೆ. ಇಲ್ಲಿ ಎಕ್ಸ್ಇ ಹಾಗೂ ಎಂಇ ಎಂಬ ಹೊಸ ವೈರಾಣು ಪ್ರಭೇದಗಳು ಕಂಡುಬಂದಿವೆ. ದೇಶದಲ್ಲಿ ನವದೆಹಲಿ ಹಾಗೂ ಹರಿಯಾಣ ರಾಜ್ಯಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಇದಕ್ಕಾಗಿ ತುರ್ತು ಸಮಾಲೋಚನೆ ಸಭೆ ನಡೆಸಲಾಗಿದೆ. ಈ 8 ದೇಶಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ರಾಜ್ಯಕ್ಕೆ ಬರುವವರ ಮೇಲೆ ವಿಶೇಷ ನಿಗಾ ಇರಿಸಬೇಕಿದೆ. ಆ ಪ್ರಯಾಣಿಕರಿಗೆ ಥರ್ಮಲ್ ತಪಾಸಣೆ ಮಾಡುವುದು, ಅವರು ಮನೆಗೆ ತೆರಳಿದ ಬಳಿಕ ಒಂದು ವಾರ ಅಥವಾ ಹತ್ತು ದಿನ ಟೆಲಿ ಮಾನಿಟರಿಂಗ್ ಮಾಡುವುದು, ಲಸಿಕೆ ಪಡೆಯದ ಮಕ್ಕಳ ಮೇಲೆ ವಿಶೇಷ ನಿಗಾ ಇರಿಸುವುದು, ಸುಮಾರು 5 ಸಾವಿರ ಮಕ್ಕಳಿಗೆ ಪರೀಕ್ಷೆ ಮಾಡುವುದು ಮೊದಲಾದ ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸಿದರು.
ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ
ಅನೇಕರು ಮಾಸ್ಕ್ ಬಳಸುತ್ತಿಲ್ಲ. ಜೂನ್-ಜುಲೈ ತಿಂಗಳಲ್ಲಿ ನಾಲ್ಕನೇ ಅಲೆ ಬರಬಹುದು ಎಂದು ಕಾನ್ಪುರ ಐಐಟಿ ತಿಳಿಸಿದೆ. ಆದ್ದರಿಂದ ಮಾಸ್ಕ್ ಧರಿಸುವುದು ಸೂಕ್ತವಾಗಿದೆ. ಇದಲ್ಲದೆ, 60 ವರ್ಷ ಮೇಲ್ಪಟ್ಟವರು ಮೂರನೇ ಡೋಸ್ ಪಡೆಯಬೇಕಿದೆ. ಜೊತೆಗೆ ಇನ್ನೂ ಶೇ.2 ರಷ್ಟು ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಮೊದಲ ಡೋಸ್ ನಲ್ಲಿ 102% (4.97 ಕೋಟಿ ), ಎರಡನೇ ಡೋಸ್ ನಲ್ಲಿ 98% (4.77 ಕೋಟಿ) ಪ್ರಗತಿಯಾಗಿದೆ. ಇನ್ನೂ 32 ಲಕ್ಷ ಮಂದಿ ಎರಡನೇ ಡೋಸ್ ಪಡೆಯಬೇಕಿದೆ. ಇದು ಬಹಳ ನಿರ್ಲಕ್ಷ್ಯದ ಸಂಗತಿಯಾಗಿದ್ದು, ಯಾರೂ ಉದಾಸೀನ ತೋರಬಾರದು ಎಂದರು.
15-17 ವಯೋಮಾನದವರ ಲಸಿಕಾರಣದಲ್ಲಿ ಮೊದಲ ಡೋಸ್ ನಲ್ಲಿ 79% (25.11 ಲಕ್ಷ) ಪ್ರಗತಿಯಾಗಿದೆ. ಇದರ ಗುರಿ 31 ಲಕ್ಷದ ಗುರಿ ಇದೆ. ಎರಡನೇ ಡೋಸ್ ಲಸಿಕಾರಣದಲ್ಲಿ 65% ಪ್ರಗತಿಯಾಗಿದ್ದು, ಇನ್ನೂ 35% ಮಂದಿ ಲಸಿಕೆ ಪಡೆಯಬೇಕಿದೆ. 60 ವರ್ಷ ಮೇಲ್ಪಟ್ಟವರಲ್ಲಿ 49% ಮಂದಿ ಮಾತ್ರ ಮೂರನೇ ಡೋಸ್ ಪಡೆದಿದ್ದಾರೆ. ಇನ್ನೂ 51% ಮಂದಿ ಮೂರನೇ ಡೋಸ್ ಲಸಿಕೆ ಪಡೆದೇ ಇಲ್ಲ. ಈ ವಯೋಮಾನದವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಬೇಗ ಲಸಿಕೆ ಪಡೆಯುವುದು ಸೂಕ್ತ. ಜನಸಾಮಾನ್ಯರು ಸರ್ಕಾರದಂತೆಯೇ ಜವಾಬ್ದಾರಿ ಹೊಂದಿರಬೇಕು. ಆಗ ಮಾತ್ರ ಆರೋಗ್ಯ ತುರ್ತು ಪರಿಸ್ಥಿತಿ ನಿಭಾಯಿಸಲು ಸಾಧ್ಯ ಎಂದು ಮನವಿ ಮಾಡಿದರು.
12-14 ವಯೋಮಾನದ 20 ಲಕ್ಷ ಮಕ್ಕಳು ರಾಜ್ಯದಲ್ಲಿದ್ದಾರೆ. ಈ ಪೈಕಿ 13.96 ಲಕ್ಷ ಮಕ್ಕಳು (69%) ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ. ಉಳಿದ ಮಕ್ಕಳು ಬೇಗನೆ ಲಸಿಕೆ ಪಡೆಯಬೇಕಿದೆ ಎಂದು ತಿಳಿಸಿದರು.
ದುಬಾರಿ ಶುಲ್ಕ ವಸೂಲಿಗೆ ಕಡಿವಾಣ
ಕೆಲ ಆಸ್ಪತ್ರೆಗಳಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡಿರುವುದರ ಬಗ್ಗೆ ದೂರುಗಳು ಬಂದಿತ್ತು. ಇದಕ್ಕೆ ಕಡಿವಾಣ ಹಾಕಬೇಕೆಂಬುದು ಸರ್ಕಾರದ ಉದ್ದೇಶ. ಈ ಬಗ್ಗೆ ಉನ್ನತ ಮಟ್ಟದಲ್ಲಿ ಚರ್ಚೆಯಾಗಿದ್ದು, ಸಮಿತಿ ರಚಿಸಲಾಗುವುದು. ಸಿಟಿ ಸ್ಕ್ಯಾನ್, ಎಂಆರ್ ಐ, ಸ್ಕ್ಯಾನಿಂಗ್ ಮೊದಲಾದವುಗಳ ದರ ಪರಿಷ್ಕರಣೆಯನ್ನು ಮಾಡಲಾಗಿದ್ದು, ಇದನ್ನು ಕೋವಿಡ್ ಸಂದರ್ಭದಲ್ಲಿ ಮಾತ್ರ ಎಂದು ಪರಿಗಣಿಸದೆ ಹೊಸ ದರವೆಂದು ಪರಿಗಣಿಸಬೇಕೆಂದು ಆಯುಕ್ತರಿಗೆ ಸೂಚಿಸಲಾಗಿದೆ. ಇದಕ್ಕಿಂತ ಹೆಚ್ಚು ದರ ವಸೂಲಿ ಮಾಡುವಂತಿಲ್ಲ. ನಿಯಮ ಉಲ್ಲಂಘಿಸಿದರೆ ಆಸ್ಪತ್ರೆಯ ಪರವಾನಗಿ ಕೂಡ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿದೆ ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.