ಕೋವಿಡ್ ಸಾವಿನ ಆಡಿಟಿಂಗ್ ನಡೆಯಲಿ
Team Udayavani, Apr 24, 2021, 6:30 AM IST
ರಾಜ್ಯಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಇದಕ್ಕೆ ಪೂರಕವಾಗಿ ಶುಕ್ರವಾರವೂ 26 ಸಾವಿರಕ್ಕೂ ಹೆಚ್ಚು ಪ್ರಕರಣ, 190 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲೂ ಬೆಂಗಳೂರು ಒಂದರಲ್ಲೇ 124 ಮಂದಿ ಸಾವನ್ನಪ್ಪಿದ್ದು, 16 ಸಾವಿರಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಂತೂ ಪರಿಸ್ಥಿತಿ ಕೈಮೀರಿ ಹೋಗಿರುವ ಬಗ್ಗೆ ಅಸಹಾಯಕತೆ ತೋಡಿಕೊಂಡಿದ್ದು, ಮನೆಯಿಂದ ಆಚೆ ಬರಬೇಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಇದರ ನಡುವೆಯೇ ಸುಪ್ರೀಂಕೋರ್ಟ್ ಆದಿಯಾಗಿ, ಕೆಲವು ರಾಜ್ಯಗಳ ಹೈಕೋರ್ಟ್‌ಗಳೂ ಕೊರೊನಾ ನಿರ್ವಹಣೆಯಲ್ಲಿ ಆಗುತ್ತಿರುವ ಅವ್ಯವಸ್ಥೆ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ತರಾಟೆಗೆ ತೆಗೆದುಕೊಂಡಿವೆ.
ಕೊರೊನಾ ಜತೆಜತೆಗೇ ಇದರಿಂದ ಸಾವನ್ನಪ್ಪುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರ. ಅದರಲ್ಲೂ ಆಮ್ಲಜನಕದ ಕೊರತೆಯಿಂದಾಗಿ ರೋಗಿಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಿಲ್ಲಿಯೂ ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ ಅಂತ್ಯ ಸಂಸ್ಕಾರವೇ ಕಷ್ಟಕರವಾಗಿರುವ ಸನ್ನಿವೇಶ ಎದುರಾಗಿದೆ. ದಿಲ್ಲಿಯಲ್ಲಿ ಎರಡು ದಿನಗಳಾದರೂ ಅಂತ್ಯಕ್ರಿಯೆಯಾಗುತ್ತಿಲ್ಲವೆಂದರೆ, ಪರಿಸ್ಥಿತಿಯ ಗಂಭೀರತೆ ಅರ್ಥವಾದೀತು.
ಕರ್ನಾಟಕದಲ್ಲಿ, ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಂತೂ ಕೊರೊನಾ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ ಎಂದರೆ ತಪ್ಪಾಗಲಾರದು. ಸಾವಿನ ಸಂಖ್ಯೆಯಂತೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಸಾವಿನ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ, ಇಲ್ಲೂ ಅಂತ್ಯ ಸಂಸ್ಕಾರ ದುರ್ಲಭವಾಗುತ್ತಿದೆ. ಬೆಳಗ್ಗೆಯಿಂದ ಮರುದಿನ ಬೆಳಗ್ಗೆವ ರೆಗೆ ಕಾದು ಅಂತ್ಯಕ್ರಿಯೆ ಮಾಡಬೇಕಾದ ಅನಿವಾರ್ಯ ಎದುರಾಗಿದೆ. ಶುಕ್ರವಾರವೂ 124 ಮಂದಿ ಕೋವಿಡ್ ಕಾರಣಕ್ಕಾಗಿಯೇ ಸಾವನ್ನಪ್ಪಿದ್ದು, ಅಂತ್ಯ ಸಂಸ್ಕಾರ ಇನ್ನಷ್ಟು ಕಷ್ಟಕರವಾಗಿರುವುದಂತೂ ಖಚಿತ.
ಇವೆಲ್ಲದರ ಮಧ್ಯೆ, ರಾಜ್ಯ ಸರಕಾರ ನಿಜಕ್ಕೂ ಸಾವಿನ ಸಂಖ್ಯೆ ನಿಖರವಾಗಿ ಹೇಳುತ್ತಿದೆಯೇ ಎಂಬ ಪ್ರಶ್ನೆಗಳೂ ಎದುರಾಗಿವೆ. ಬೆಂಗಳೂರಿನಲ್ಲಿ ಒಟ್ಟು 13 ಶ್ಮಶಾನಗಳಿವೆ. ದಿನಕ್ಕೆ ಒಂದೊಂದು ಶ್ಮಶಾನದಲ್ಲೂ ಸುಮಾರು 25ರಿಂದ 30 ಮೃತ ದೇಹಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತಿದೆ. ಒಂದು ವೇಳೆ ರಾಜ್ಯ ಸರಕಾರ ಹೇಳುತ್ತಿರುವ ಸಂಖ್ಯೆಗಳೇ ಆದರೆ ಅಂತ್ಯ ಸಂಸ್ಕಾರವಾಗುತ್ತಿರುವ ಮೃತದೇಹಗಳ ಸಂಖ್ಯೆ ಕಡಿಮೆ ಇರಬೇಕಾಗಿತ್ತು. ಆದರೆ ಸರಕಾರ ಹೇಳುತ್ತಿರುವುದೇ ಒಂದು, ಶ್ಮಶಾನಗಳಲ್ಲಿ ನಡೆಸಲಾಗುತ್ತಿರುವ ಅಂತ್ಯ ಸಂಸ್ಕಾರದ ಲೆಕ್ಕವೇ ಬೇರೆ ಎಂಬಂತಾಗಿದೆ ಸ್ಥಿತಿ.
ಇವೆಲ್ಲದಕ್ಕಿಂತ ಮುಖ್ಯವಾಗಿ ಸಾವಿನ ಲೆಕ್ಕ ಪರಿಶೋಧನೆ ನಡೆಯಬೇಕು. ಮೊದಲ ಅಲೆಯ ಸಂದರ್ಭದಲ್ಲಿ ಆರೋಗ್ಯ ಸಚಿವ ಸುಧಾಕರ್ ಅವರು ಈ ಬಗ್ಗೆ ಹಲವು ಬಾರಿ ಪ್ರಸ್ತಾವಿಸಿದ್ದರೂ ಅದು ಕೈಗೂಡಲಿಲ್ಲ. ಪ್ರತೀ ಸಾವಿನ ಹಿಂದಿನ ಕಾರಣ ಏನು ಎನ್ನುವುದನ್ನು ಆಡಿಟ್ ಮಾಡಿದರೆ ಕೊರೊನಾ ಸಾವೆಷ್ಟು, ಇತರ ಕಾರಣಗಳಿಂದಾದ ಸಾವೆಷ್ಟು ಎಂಬಿತ್ಯಾದಿ ಮಾಹಿತಿ ಲಭ್ಯವಾಗುತ್ತದೆ. ಇಲ್ಲದಿದ್ದರೆ ಈಗಾಗಲೇ ಕೊರೊನಾದಿಂದ ಆತಂಕಿತರಾಗಿರುವ ಜನತೆ, ಮತ್ತಷ್ಟು ಹೆದರಬೇಕಾದ ಸ್ಥಿತಿ ಎದುರಾಗಬಹುದು ಎಚ್ಚರ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.