ಲಸಿಕೆ ಸ್ವೀಕಾರದಲ್ಲಿ ಕರಾವಳಿಯೇ ನಂ.1: ಉಡುಪಿ, ದ.ಕ., ಉ.ಕ. ಮೇಲುಗೈ
Team Udayavani, Feb 1, 2021, 7:10 AM IST
ಬೆಂಗಳೂರು: ಕೊರೊನಾ ಲಸಿಕೆ ವಿತರಣೆ ಪ್ರಕ್ರಿಯೆ ಆರಂಭವಾದಾಗ ಮೊದಲಿಗೆ ಹಿಂದೇಟು ಹಾಕಿದ್ದ ಕರಾವಳಿ ಭಾಗದ ಆರೋಗ್ಯ ಕಾರ್ಯಕರ್ತರು ಸದ್ಯ ರಾಜ್ಯದಲ್ಲಿಯೇ ಲಸಿಕೆ ಸ್ವೀಕಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಹ್ವಾನಿತರ ಪೈಕಿ ಶೇ. 60 ರಷ್ಟು ಮಂದಿ ಲಸಿಕೆ ಪಡೆದಿದ್ದಾರೆ.
ಉತ್ತರ ಕರ್ನಾಟಕದ 14, ದಕ್ಷಿಣ ಕರ್ನಾಟಕದ 10, ಮಲೆನಾಡಿನ 3 ಜಿಲ್ಲೆಗಳಲ್ಲಿ ಆಹ್ವಾನಿತ ಇಬ್ಬರಲ್ಲಿ ಒಬ್ಬರಂತೆ ಲಸಿಕೆ ಪಡೆದಿದ್ದಾರೆ. ಇಲ್ಲಿ ಶೇ. 51ರಷ್ಟು ಗುರಿಸಾಧನೆಯಾಗಿದೆ.
ರಾಜಧಾನಿ ಬೆಂಗಳೂರಿನಲ್ಲಿ ಶೇ. 46ರಷ್ಟು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಶೇ. 39ರಷ್ಟು ಲಸಿಕೆ ಪ್ರಕ್ರಿಯೆ ಗುರಿ ಸಾಧನೆಯಾಗಿದೆ.
ಮತ್ತೂಮ್ಮೆ ಅವಕಾಶ
ಮೊದಲ ಹಂತದ ಲಸಿಕೆ ವಿತರಣೆ ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯದಲ್ಲೇ ಎರಡನೇ ಹಂತ ಆರಂಭವಾಗುವ ಸಾಧ್ಯತೆಗಳಿವೆ. ನಾನಾ ಕಾರಣಗಳಿಂದ ಲಸಿಕೆ ಪಡೆಯದೆ ಇದ್ದ ಆರೋಗ್ಯ ಕಾರ್ಯಕರ್ತರಿಗೆ ಮತ್ತೂಮ್ಮೆ ಅವಕಾಶ ಮಾಡಿಕೊಡುವ ಮೂಲಕ ಮುಂಚೂಣಿ ಹೋರಾಟಗಾರರನ್ನು ಬಲಪಡಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ದೇಶಾದ್ಯಂತ ಲಸಿಕೆ ಅಭಿಯಾನ ಆರಂಭವಾಗಿ 15 ದಿನಗಳು ಕಳೆದಿವೆ. 6,11,907 ಕಾರ್ಯಕರ್ತರನ್ನು ಲಸಿಕೆ ಅಭಿಯಾನಕ್ಕೆ ಆಹ್ವಾನಿಸಿದ್ದು, ಈ ಪೈಕಿ 3,13,639 ಕಾರ್ಯಕರ್ತರು ಮಾತ್ರ ಆಗಮಿಸಿ ಲಸಿಕೆ ಪಡೆದಿದ್ದಾರೆ. ಶೇ. 51ರಷ್ಟು ಮಾತ್ರ ಗುರಿಸಾಧನೆಯಾಗಿದೆ.
ಒಂದೆಡೆ ರಾಜ್ಯವು ಲಸಿಕೆ ಪಡೆದವರ ಸಂಖ್ಯೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮತ್ತೂದೆಡೆ ಲಸಿಕೆ ಪ್ರಕ್ರಿಯೆ ಗುರಿ ಸಾಧನೆಯಲ್ಲಿ ಸಮಾಧಾನಕರ ಸ್ಥಿತಿಯಲ್ಲಿದೆ.
ಲಸಿಕೆ ಪಡೆದವರ ಕಿವಿಮಾತು
ಈಗಾಗಲೇ ಲಸಿಕೆ ಪಡೆದಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ, ನಿರ್ದೇಶಕ ಓಂಪ್ರಕಾಶ್ ಪಾಟೀಲ್, ಉಪ ನಿರ್ದೇಶಕ ಡಾ| ಪಿ. ರಜನಿ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ಡಾ| ಅರುಂಧತಿ ಚಂದ್ರಶೇಖರ್ ಲಸಿಕೆಯಿಂದ ದೂರ ಉಳಿದವರಿಗೆ ಈ ಕಿವಿಮಾತುಗಳನ್ನು ಹೇಳಿದ್ದಾರೆ.
– ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸರಕಾರ ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಿದೆ. ಈ ಗೌರವ, ಲಭಿಸಿದ ಅವಕಾಶವನ್ನು ತಿರಸ್ಕರಿಸದಿರೋಣ.
– ಲಸಿಕೆಯಿಂದ ಅನಾಹುತ ಸಂಭವಿಸಿಲ್ಲ. ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಪಡೆದಾಗ ತುಸು ಜ್ವರ, ಮೈಕೈ ನೋವು ಸಾಮಾನ್ಯ ಎಂಬ ವೈಜ್ಞಾನಿಕ ಅರಿವು ನಿಮಗಿರಬೇಕು.
– ಮುಂದಿನ ಹಂತದಲ್ಲಿ ಸಾರ್ವಜನಿಕರಿಗೆ ಲಸಿಕೆ ನೀಡಲಾಗುತ್ತದೆ. ಈ ಕಾರ್ಯಕ್ಕೂ ಮುನ್ನ ನಾವೆಲ್ಲ ಲಸಿಕೆ ಪಡೆದು ಸಿದ್ಧರಾಗೋಣ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.