ಕೋವಿಡ್ ಎರಡನೇ ಅಲೆ ಎಚ್ಚರಿಕೆ: ಒಂದು ವಾರ ಕಾದು ನೋಡಿ ಬಳಿಕ ಕಟ್ಟುನಿಟ್ಟಿನ ಕ್ರಮ : ಸಿಎಂ
Team Udayavani, Mar 15, 2021, 10:40 PM IST
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೆ ಅಲೆ ಹೆಚ್ಚುತ್ತಿರುವ ಬಗ್ಗೆ ತಜ್ಞರ ಸಮಿತಿ ಮುನ್ಸೂಚನೆ ನೀಡಿದ್ದು, ಒಂದು ವಾರ ಸೂಕ್ಷ್ಮವಾಗಿ ಗಮನಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ತಜ್ಞರ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಜ್ಞರು ಸಲಹೆ ನೀಡಿದ್ದಾರೆ.
ತಜ್ಞರ ಸಮಿತಿ ಸಭೆ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೊರೊನಾ ಪರಿಸ್ಥಿತಿ ಅವಲೋಕನ ಕುರಿತು ತಜ್ಞರ ಜೊತೆ ಸಮಾಲೋಚನೆ ಮಾಡಲಾಯಿತು. ಎಲ್ಲರ ಅಭಿಪ್ರಾಯದಂತೆ ಕಳೆದ 14 ದಿನಗಳಲ್ಲಿ ಕೊರೊನಾ ಪಾಸಿಟಿವ್ ದರ ಹೆಚ್ಚಾಗಿದೆ, ಮರಣ ದರ ಕಡಿಮೆ ಇದೆ. ಬೀದರ್, ಕಲಬುರಗಿ, ಬೆಂಗಳೂರು ಗ್ರಾಮಾಂತರ, ತುಮಕೂರು, ಉಡುಪಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಇದು ಕೊರೊನಾ ಎರಡನೇ ಅಲೆಯ ಮುನ್ಸೂಚನೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ. ಹೆಚ್ಚು ಸಕ್ರೀಯ ಪ್ರಕರಣಗಳು ಇರುವ ಜಿಲ್ಲೆಯಲ್ಲಿ ಲಸಿಕೆ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದರು.
ಮತದಾರರ ಪಟ್ಟಿ ಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕೆ ಹಾಕಿಸುವುದು ಸೇರಿದಂತೆ ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕೈಗೊಳ್ಳುವ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ ಎಂದರು.
ಇದನ್ನೂ ಓದಿ :2008ರ ಬಾಟ್ಲಾ ಎನ್‌ಕೌಂಟರ್ ಪ್ರಕರಣ : ಉಗ್ರ ಆರಿಝ್ಗೆ ಖಾನ್‌ಗೆ ಗಲ್ಲು
ಮಹಾರಾಷ್ಟ್ರ, ಕೇರಳದಿಂದ ಬರುವವರ ಮೇಲೆ ನಿಗಾ ಇಡಲು ಸಲಹೆ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 17 ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವೀಡಿಯೋ ಸಂವಾದ ನಡೆಸಲಿದ್ದಾರೆ , ಅವರ ಸಲಹೆ ಪಡೆದು ನಂತರ ಅನಿವಾರ್ಯವಾದಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ, ಮತ್ತೂಮ್ಮೆ ಲಾಕ್ ಡೌನ್ ಆಗಬಾರದು ಎನ್ನುವ ಅಪೇಕ್ಷೆ ಇದ್ದರೆ ಜನರೇ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಈಗ ಕೊರೊನಾ ಜಾಗೃತಿ ಹೋಗಿದೆ, ಜಾತ್ರೆ ಸಂತೆಯಲ್ಲಿ ಶೇ.80 ರಷ್ಟು ಜನ ಮಾಸ್ಕ್ ಧರಿಸುತ್ತಿಲ್ಲ, ಜನರು ಸಹಕಾರ ಕೊಡಬೇಕು, ಜನರ ಸಹಕಾರ ಇಲ್ಲದೆ ಯಶಸ್ವಿ ಆಗುವುದಿಲ್ಲ ಎಂದು ಹೇಳಿದರು.
ಕೊರೊನಾ ನಿಯಮ ಉಲ್ಲಂಘನೆಗೆ ದಂಡ ಹಾಕುವ ಮಟ್ಟಕ್ಕೆ ಜನರು ಹೋಗಬಾರದು, ಸದ್ಯದ ಪರಿಸ್ಥಿತಿಯಲ್ಲಿ ಒಂದು ವಾರ ಕಾದು ನೋಡುತ್ತೇವೆ ನಂತರ ದಂಡ ಹಾಕುವುದು ಅನಿವಾರ್ಯವಾಗಲಿದೆ. ಈಗಿನ ಪರಿಸ್ಥಿತಿಯಲ್ಲಿ ದೊಡ್ಡವರು, ಚಿಕ್ಕವರು ಎನ್ನುವ ಪ್ರಶ್ನೆ ಇಲ್ಲ, ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ, ಮದುವೆ ಸಮಾರಂಭಗಳಲ್ಲಿ 500 ಕ್ಕಿಂತ ಹೆಚ್ಚು ಜನಸೇರಬಾರದು, ಹೆಚ್ಚು ಜನ ಸೇರುವುದಾದರೆ ಬ್ಯಾಚ್‌ಗಳಲ್ಲಿ ಬರಲಿ ಎಂದು ಹೇಳಿದರು.
ನೈಟ್ ಕರ್ಫ್ಯೂ ಜಾರಿ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ಯಾವುದೇ ಚರ್ಚೆಯಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಸಭೆ ನಂತರ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾದ ಡಾ. ಸಿ.ಎನ್. ಮಂಜುನಾಥ್, ಡಾ. ಸುದರ್ಶನ್, ಡಾ. ರವಿ, ಪೊ›. ಗಿರಿಧರಬಾಬು, ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಮೊದಲಾದವರು ತಮ್ಮ ಅಭಿಪ್ರಾಯ ಮಂಡಿಸಿದರು.
ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ವ್ಯಕ್ತವಾದ ಸಲಹೆಗಳು :
– ಮಾಸ್ಕ್ ಕಡ್ಡಾಯ,
– ಸಾಮಾಜಿಕ ಅಂತರ ಕಡ್ಡಾಯ,
– ನಿಯಮ ಉಲ್ಲಂಘಿಸಿದರೆ ದಂಡ
– ಮದುವೆ, ಸಮಾಜಿಕ ಧಾರ್ಮಿಕ ಕಾರ್ಯಕ್ರಮದಲ್ಲಿ 500 ಮೀರಬಾರದು,
– ಕೊರೊನಾ ಪರೀಕ್ಷೆ ಹೆಚ್ಚಿಸಬೇಕು
– ರೋಗಲಕ್ಷಣ ಇರುವವರಿಗೆ ಪರೀಕ್ಷೆ ಹೆಚ್ಚಿಸಬೇಕು
– ಸಂಪರ್ಕಿತರ ಪತ್ತೆ ಚುರುಕುಗೊಳಿಸುವುದು
– ಕೋವಿಡ್ ಆಸ್ಪತ್ರೆಗಳಲ್ಲಿ, ಆಕ್ಸಿಜನ್, ಐಸಿಯು ಕೋವಿಡ್ ಕೇರ್‌ಗೆ ಸಿದ್ದತೆ ಮಾಡಿಕೊಳ್ಳುವುದು
– ಖಾಸಗಿ ಆಸ್ಪತ್ರೆಯಲ್ಲಿ ಹಿಂದಿನಂತೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವುದು
– ಪಂಚಾಯತಿ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಲಸಿಕೆಗೆ ಕ್ರಮ
– ರೋಟರಿ, ಲಯನ್ಸ್ ಕ್ಲಬ್ ಜೊತೆ ನೆರವು ಪಡೆದು ಲಸಿಕೆ
– ವಾಹನಗಳಲ್ಲಿ ನಿಗದಿ ಮೀರಿ ಪ್ರಯಾಣಿಕರ ಕರೆದೊಯ್ಯುವುದಕ್ಕೆ ಕಡಿವಾಣ
– ಜನರಿಗೆ ಅರಿವು ಮೂಡಿಸುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.