ಧೋಬಿಯ ಮಗನ ಬಾಳಲ್ಲಿ “ಅರುಣ’ರಾಗ


Team Udayavani, Aug 30, 2020, 6:45 AM IST

ಧೋಬಿಯ ಮಗನ ಬಾಳಲ್ಲಿ “ಅರುಣ’ರಾಗ

ಸೆಲೆಬ್ರಿಟಿ ಅನ್ನಿಸಿಕೊಂಡವರಿಗೆ, ಅಂಥದೇ ಹಿನ್ನೆಲೆಯ ಜನರೊಂದಿಗೇ ಫ್ರೆಂಡ್‌ಶಿಪ್‌ ಬೆಳೆಯುತ್ತೆ. ಅದರಲ್ಲೂ ಭಾರತ ತಂಡಕ್ಕೆ ಆಡಿದ ಕ್ರಿಕೆಟ್‌ ಆಟಗಾರರಿಗೆ, ಹೆಚ್ಚಾಗಿ ಸಿನೆಮಾ ನಟ-ನಟಿಯರು, ಉದ್ಯಮಿಗಳ ಜತೆಗೆ ಸ್ನೇಹವಿರುತ್ತದೆ. ವಾಸ್ತವ ಹೀಗಿರುವಾಗ ಒಬ್ಬ ಪ್ರಖ್ಯಾತ ಕ್ರಿಕೆಟ್‌ ಆಟಗಾರ, ತನ್ನ ಮನೆಯ ಬಟ್ಟೆಗಳನ್ನು ಒಗೆದುಕೊಡುತ್ತಿದ್ದ ಧೋಬಿಯೊಂದಿಗೆ ಸ್ನೇಹ ಬೆಳೆಸಿದ ಅಂದರೆ… ಆ ಧೋಬಿಯ ಮಗನನ್ನು ಸ್ವಂತ ಮಗನಿಗಿಂತ ಹೆಚ್ಚು ಅಕ್ಕರೆಯಿಂದ ನೋಡಿಕೊಂಡ ಅಂದರೆ…

ಭಾರತ ಕ್ರಿಕೆಟ್‌ ತಂಡ ಕಂಡ ಉತ್ತಮ ಆಟಗಾರರಲ್ಲಿ ಕೊಲ್ಕೊತ್ತಾದ ಅರುಣ್‌ ಲಾಲ್‌ ಕೂಡ ಒಬ್ಬರು. 90ರ ದಶಕದ ಆರಂಭದಲ್ಲಿ ಸುನಿಲ್‌ ಗವಾಸ್ಕರ್‌ ಜತೆ ಇನ್ನಿಂಗ್ಸ್ ಆರಂಭಿಸಲು ಹೋಗುತ್ತಿದ್ದುದು ಇದೇ ಅರುಣ್‌ ಲಾಲ್ ಆ ದಿನಗಳಲ್ಲಿ ವೆಸ್ಟ್ ಇಂಡೀಸ್‌, ಇಂಗ್ಲೆಂಡ್‌, ಪಾಕಿಸ್ಥಾನ, ಆಸ್ಟ್ರೇಲಿಯಾ ತಂಡಗಳಲ್ಲಿ ವಿಶ್ವಶ್ರೇಷ್ಠ ಬೌಲರ್‌ಗಳಿದ್ದರು. ಅವರ ಪ್ರಚಂಡ ವೇಗದ ದಾಳಿಯನ್ನು ಸಮರ್ಥವಾಗಿ ಎದುರಿಸಿ ಆಡುತ್ತಿದ್ದುದು ಅರುಣ್‌ ಲಾಲ್‌ ಅವರ ಹೆಚ್ಚುಗಾರಿಕೆ.

ಅರುಣ್‌ ಲಾಲ್‌ ಅವರ ಮನೆಗೆ ದಿನವೂ ಭೇಟಿಕೊಟ್ಟು, ಒಗೆಯ ಬೇಕಿರುವ, ಇಸ್ತ್ರಿ ಮಾಡಬೇಕಿರುವ ಬಟ್ಟೆಗಳನ್ನು ಒಯ್ಯಲು ಒಬ್ಬ ಧೋಬಿಯಿದ್ದ. ಕಡು ಬಡವರು ಮಾತ್ರ ವಾಸಿಸುತ್ತಿದ್ದ ಒಂದು ಏರಿಯಾದಲ್ಲಿ ಅವನ ಕುಟುಂಬದ ವಾಸ. ಆತನಿಗೆ ಮೂವರು ಮಕ್ಕಳು. ಎರಡು ಹೆಣ್ಣು, ಒಂದು ಗಂಡು. ಈ ಪೈಕಿ, ಹಿರಿಯವನಾದ ಗಂಡುಮಗ- ಬಿಕಾಸ್‌ ಚೌಧರಿ, ತಂದೆಯ ಜತೆಯಲ್ಲಿ ತಾನೂ ಅರುಣ್‌ ಲಾಲ್‌ ಅವರ ಮನೆಗೆ ಹೋಗುತ್ತಿದ್ದ. ಹೀಗಿರುವಾಗಲೇ ಒಂದು ದಿನ ಅರುಣ್‌ ಲಾಲ್‌ಗೆ ಅವರ ಪತ್ನಿ ದೇಬ್‌ ಜಾನಿ ಹೇಳಿದರಂತೆ: “”ನಮ್ಮ ಧೋಬಿಯ ಮಗ ಹೇಗೆ ಓದುತ್ತಾ ಇದ್ದಾನೋ ಏನೋ. ಪಾಪ, ಅವರು ಬಡವರು. ಜತೆಗೆ, ಆ ಪೋಷಕರಿಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸದಿದ್ದರೆ, ಮುಂದೆ ಅವರ ಭವಿಷ್ಯದ ಗತಿ ಏನು? ನಾನು ಆ ಹುಡುಗನಿಗೆ ನಾಳೆಯಿಂದ ಮನೆಪಾಠ ಹೇಳಿಕೊಡ್ತೇನೆ, ಆಗಬಹುದಾ?” ಬಡವರಿಗೆ, ಬಡವರ ಮಕ್ಕಳಿಗೆ ಸಹಾಯ ಮಾಡಬೇಕು ಎಂಬ ವಿಚಾರದಲ್ಲಿ ಹೆಂಡತಿಗಿಂತ ಒಂದು ಹೆಜ್ಜೆ ಮುಂದಿದ್ದ ಅರುಣ್‌ ಲಾಲ್‌ – “ಮೊದಲು ಆ ಕೆಲಸ ಮಾಡು’ ಅಂದರು. ಮರುದಿನದಿಂದಲೇ ಬಿಕಾಸ್‌ಗೆ ಇಂಗ್ಲಿಷ್‌ ಪಾಠದ ಟ್ಯೂಷನ್‌ ಆರಂಭವಾಯಿತು. ಪಾಠ ಮುಗಿಯುತ್ತಿದ್ದಂತೆಯೇ, ಬದುಕಿನಲ್ಲಿ ಹೇಗೆಲ್ಲ, ಏನೇನೆಲ್ಲ ಸಮಸ್ಯೆಗಳು ಎದುರಾಗುತ್ತವೆ, ಅವುಗಳನ್ನು ಹೇಗೆ ಎದುರಿಸಬೇಕು, ಹೇಗೆ ಬದುಕಬೇಕು… ಇಂಥವೇ ಸಂಗತಿಗಳ ಕುರಿತು ಅರುಣ್‌ ಲಾಲ್‌ ಈ ಹುಡುಗನಿಗೆ ಟಿಪ್ಸ್ ಕೊಡುತ್ತಿದ್ದರು.

ಹೇಳಲೇಬೇಕಾದ ಒಂದು ಮುಖ್ಯ ಸಂಗತಿ ಯೆಂದರೆ- ಅರುಣ್‌ ಲಾಲ್‌ ದಂಪತಿಗೆ ಮಕ್ಕಳಿರಲಿಲ್ಲ. ಅವರು, ಈ ಹುಡುಗನಲ್ಲಿಯೇ ಮಗನನ್ನು ಕಾಣುತ್ತಿದ್ದರು. “”ಪ್ರತಿ ಬಾರಿ ಅವರ ಮನೆಗೆ ಹೋದಾಗಲೂ ಒಂದು ದೊಡ್ಡ ಲೋಟದಲ್ಲಿ ಆರೆಂಜ್‌ ಜ್ಯೂಸ್‌ ಕೊಡ್ತಾ ಇದ್ದರು. ನನ್ನ ಗಮನವೆಲ್ಲ ಹೆಚ್ಚಾಗಿ ಜ್ಯೂಸ್‌ ಕಡೆಗೇ ಇರುತ್ತಿತ್ತು. ಹಾಗಂತ, ಅರುಣ್‌ ಲಾಲ್‌ ದಂಪತಿಯ ಒಂದು ಮಾತನ್ನೂ ನಾನು ತೆಗೆದುಹಾಕಲಿಲ್ಲ. ಅವರು ಹೇಳಿದ್ದನ್ನೆಲ್ಲ ಚಾಚೂ ತಪ್ಪದೆ ಪಾಲಿಸಿದೆ… ಅನ್ನುತ್ತಾನೆ ಬಿಕಾಸ್‌. ಅರುಣ್‌ ಲಾಲ್‌ ವೃತ್ತಿಪರ ಆಟಕ್ಕೆ ಗುಡ್‌ ಬೈ ಹೇಳಿ, ಕೋಚ್‌ ಆಗಿ ಕೆಲಸ ಆರಂಭಿಸಿದ್ದ ದಿನಗಳವು. ಅರುಣ್‌ ಕೋಚಿಂಗ್‌ ಕೊಡುತ್ತಿದ್ದ ಮೈದಾನದ ಪಕ್ಕದಲ್ಲಿಯೇ ಈ ಹುಡುಗ ಬಿಕಾಸ್‌ ಫ‌ುಟ್ಬಾಲ್‌ ಆಡಲು ಹೋಗುತ್ತಿದ್ದ. ಹೇಳಿಕೇಳಿ ಅದು ಕೊಲ್ಕತ್ತಾ. ಅಂದಮೇಲೆ ಕೇಳಬೇಕೆ? ಅಲ್ಲಿನ ಪ್ರತಿ ಮಕ್ಕಳಂತೆ, ಭವಿಷ್ಯದಲ್ಲಿ ತಾನೊಬ್ಬ ಫ‌ುಟ್ಬಾಲ್‌ ಆಟಗಾರ ಆಗಬೇಕು ಎಂಬುದೇ ಬಿಕಾಸ್‌ನ ಆಸೆ ಆಗಿತ್ತು. ಈ ಹುಡುಗ ಈಸ್ಟ್ ಬೆಂಗಾಲ್‌ ತಂಡದ ಪರವಾಗಿ ಕೆಲವು ಪಂದ್ಯಗಳನ್ನೂ ಆಡಿದ್ದ. ಇದನ್ನು ಅರುಣ್‌ ಸೂಕ್ಷ್ಮವಾಗಿ ಗಮನಿಸಿದರು. ಒಬ್ಬ ಆಟಗಾರನಾಗಿ ದೊಡ್ಡ ಯಶಸ್ಸು ಪಡೆಯಲು ಎಷ್ಟೊಂದು ಕಷ್ಟ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಅದರಲ್ಲೂ ಫ‌ುಟ್ಬಾಲ್‌ನಲ್ಲಿ ಯಶಸ್ಸು ಸಿಗಬೇಕೆಂದರೆ, ದಶಕಗಳ ಕಾಲ ಫಿಟೆ°ಸ್‌ ಕಾಪಾಡಿಕೊಳ್ಳಬೇಕು. ಅದಕ್ಕಿಂತ ಹೆಚ್ಚಾಗಿ ಅದೃಷ್ಟದ, ಗಾಡ್‌ ಫಾದರ್‌ಗಳ ಬೆಂಬಲ ಇರಬೇಕು.

ಅದೊಂದು ದಿನ ಮನೆಗೆ ಬಂದವರೇ, ಬಿಕಾಸ್‌ನನ್ನು ಹತ್ತಿರ ಕೂರಿಸಿಕೊಂಡು- “”ಕ್ರೀಡಾ ಪಟುಗಳ ಬದುಕು ಕಲ್ಲುಮುಳ್ಳಿನಿಂದ ಕೂಡಿರುತ್ತದೆ. ಅಲ್ಲಿ ಸಂತೋಷಕ್ಕಿಂತ ಸಂಕಟಗಳೇ ಹೆಚ್ಚಿರುತ್ತವೆ. ಹಾಗಾಗಿ, ಓದಿನ ಕಡೆಗೆ ಹೆಚ್ಚಿನ ಗಮನ ಕೊಡು. ನಿನ್ನ ವಿದ್ಯಾಭ್ಯಾಸದ ಎಲ್ಲ ಖರ್ಚನ್ನೂ ನಾನು ಭರಿಸುತ್ತೇನೆ. ಚೆನ್ನಾಗಿ ಓದಿ, ಒಂದೊಳ್ಳೆಯ ಕೆಲಸಕ್ಕೆ ಸೇರಿಕೋ” ಅಂದರು. ಈ ಹುಡುಗ ಬಿಕಾಸ್‌, ಮರು ಮಾತಾಡಲಿಲ್ಲ. ಆಟಕ್ಕೆ ಅವತ್ತೇ ಗುಡ್‌ ಬೈ ಹೇಳಿ ಶ್ರದ್ಧೆಯಿಂದ ಓದಲು ಕುಳಿತ. 10ನೇ ತರಗತಿಯಲ್ಲಿ ಶೇ. 92 ಪರ್ಸೆಂಟ್‌ ಫ‌ಲಿತಾಂಶ ಬಂತು. ಆನಂತರದಲ್ಲಿ ಬಿಕಾಸ್‌ ಹಿಂತಿರುಗಿ ನೋಡಲೇ ಇಲ್ಲ. ಕೊಲ್ಕೊತ್ತಾದ ಕ್ಸೇವಿಯರ್‌ ಕಾಲೇಜಿನಲ್ಲಿ ಬಿಕಾಂ ಪದವಿ ಪಡೆದ. “”ನೀನು ಎಷ್ಟು ಬೇಕಾದರೂ ಓದು, ನಿನ್ನ ವಿದ್ಯಾಭ್ಯಾಸದ ಅಷ್ಟೂ ಖರ್ಚು ನಮ್ಮದು” ಎಂದಿದ್ದ ಅರುಣ್‌ ಲಾಲ್, ಪ್ರತಿ ಹಂತದಲ್ಲೂ ಅವನ ಬೆನ್ನಿಗೆ ನಿಂತರು. ಪ್ರತಿಷ್ಠಿತ ಕಾರ್ಯಕ್ರಮಗಳಿಗೆ ಅವನನ್ನೂ ಜತೆಗೆ ಕರೆದೊಯ್ದು- ಇವನು ನಮ್ಮ ಮಗ ಎಂದೇ ಪರಿಚಯಿಸಿದರು. ಮುಂದೆ ಈ ಹುಡುಗ ಎಂಕಾಂ ಮುಗಿಸಿದ. ಈ ವೇಳೆಗೆ ಬಿಕಾಸ್‌ನ ಹೆತ್ತವರಿಗೆ ವಯಸ್ಸಾಗಿತ್ತು. ತಂಗಿಯರು ಮತ್ತು ಪೋಷಕರನ್ನು ಸಲಹುವ ಜವಾಬ್ದಾರಿ ಇವನ ಹೆಗಲೇರಿತು. ಈತ ಒಂದು ಟ್ರಾವೆಲ್‌ ಏಜೆನ್ಸಿಯಲ್ಲಿ ಕೆಲಸಕ್ಕೆ ಸೇರಿಕೊಂಡ. ಟ್ಯೂಷನ್‌ ಮಾಡಿ ನಾಲ್ಕು ಕಾಸು ಸಂಪಾದಿಸಿದ. ತಂಗಿಯರ ವಿದ್ಯಾಭ್ಯಾಸದ ಖರ್ಚನ್ನೂ ತಾವೇ ಕೊಡುವುದಾಗಿ ಅರುಣ್‌ ಲಾಲ್‌ ದಂಪತಿ ಮುಂದೆ ಬಂದರೂ ಅದಕ್ಕೆ ಈ ಹುಡುಗ ಒಪ್ಪಲಿಲ್ಲ. ಈವರೆಗೆ ನೀವು ಮಾಡಿ ರುವ ಉಪಕಾರವೇ ಎರಡು ಜನ್ಮಕ್ಕಾ ಗುವಷ್ಟಿದೆ. ನನಗೆ ಅಷ್ಟೇ ಸಾಕು ಅಂಕಲ್‌ ಅಂದ. ಮುಂದೆ ಕೊಲ್ಕೊತ್ತಾದ ಐಐಎಂನಲ್ಲಿ ಎಂಬಿಎ ಪದವಿ ಪಡೆದ ಬಿಕಾಸ್‌ಗೆ, ಎಚ್‌ಡಿಎಫ್ಸಿ ಬ್ಯಾಂಕ್‌ನಲ್ಲಿ ದೊಡ್ಡ ಸಂಬಳದ ಹುದ್ದೆ ಸಿಕ್ಕಿತು. ಅಲ್ಲಿ ಕೆಲವು ವರ್ಷ ಇದ್ದ ಬಿಕಾಸ್‌, ಈಗ ಜೆಎಸ್‌ಡಬ್ಲೂ ಸ್ಟೀಲ್‌ ಕಂಪೆನಿಯ ಉನ್ನತ ಹುದ್ದೆಯಲ್ಲಿದ್ದಾನೆ! ದೇವರು ನನಗೆ ಇಬ್ಬಿಬ್ಬರು ತಾಯಿ- ತಂದೆಯನ್ನು ಕೊಟ್ಟಿದ್ದಾನೆ. ಒಬ್ಬರು ಜೀವ ಕೊಟ್ಟವರು. ಇನ್ನೊಬ್ಬರು ಬದುಕು ಕೊಟ್ಟವರು. ಅದರಲ್ಲೂ ಅರುಣ್‌ ಲಾಲ್‌ ದಂಪತಿಯ ಕೊಡುಗೆಯನ್ನು ನಾನಾಗಲಿ, ನನ್ನ ಕುಟುಂಬವಾಗಲಿ ಮರೆಯಲು ಸಾಧ್ಯವೇ ಇಲ್ಲ. ಯಕಃಶ್ಚಿತ್‌ ಧೋಬಿಯ ಮಗ ನಾನು. ಅಂಥವನನ್ನು ಸ್ವಂತ ಮಗನಂತೆ ಸಾಕಬೇಕು ಅಂದರೆ ಆ ದಂಪತಿಯ ಪ್ರೀತಿ, ಕಾಳಜಿ, ಕರುಣೆಗೆ ಬೆಲೆ ಕಟ್ಟಲು ಸಾಧ್ಯವೇ? ಅನ್ನುತ್ತಾನೆ ಬಿಕಾಸ್‌.

“”ಛೆ ಛೆ, ಹಾಗೇನಿಲ್ಲ, ನಾವು ಅವನಿಗೆ ಏನೂ ಸಹಾಯ ಮಾಡಿಲ್ಲ. ಅವನು ತುಂಬಾ ಬುದ್ಧಿವಂತ, ಹೇಳಿದ್ದನ್ನು ತತ್‌ಕ್ಷಣ ಅರ್ಥ ಮಾಡಿಕೊಂಡ. ಚೆನ್ನಾಗಿ ಓದಿದ. ಅವನ ಪರಿಶ್ರಮ ಅವನನ್ನು ಕಾಪಾಡಿತು. ಮುಖ್ಯವಾಗಿ, ಮಕ್ಕಳಿಲ್ಲ ಎಂಬ ಕೊರತೆ ನಮ್ಮನ್ನು ಯಾವಾಗಲೂ ಕಾಡದಂತೆ ಅವನು ನೋಡಿಕೊಂಡ ಎನ್ನುತ್ತಾರೆ ಅರುಣ್‌ ಲಾಲ್‌ ದಂಪತಿ. ಈಗ ತನ್ನ ಪ್ರೀತಿಯ ಅಂಕಲ್‌-ಆಂಟಿಗೆ ಒಂದು ಬೆಂಜ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ ಬಿಕಾಸ್‌. ಅಷ್ಟೇ ಅಲ್ಲ, ತನ್ನ ಮಗಳಿಗೆ “”ಅರುಣಿಮಾ” ಎಂದು ಹೆಸರಿಟ್ಟು, ಅರುಣ್‌ ಲಾಲ್‌ ದಂಪತಿಯ ಮೇಲಿನ ಪ್ರೀತಿ- ಅಭಿಮಾನವನ್ನು ತೋರಿಸಿದ್ದಾನೆ. ನನ್ನ ಮಗಳನ್ನು ನೋಡಿದಾಗೆಲ್ಲ, ಅವಳ ಹೆಸರನ್ನು ಹೇಳಿದಾಗೆಲ್ಲ ನನ್ನ ಬಾಳಿಗೆ ದೇವರಂತೆ ಬಂದ ಅರುಣ್‌ ಲಾಲ್‌ ದಂಪತಿಯ ನೆನಪಾಗುತ್ತದೆ ಅನ್ನುತಾನೆ ಬಿಕಾಸ್‌ ಚೌಧರಿ.

–  ಎ.ಆರ್‌.ಮಣಿಕಾಂತ್‌

ಟಾಪ್ ನ್ಯೂಸ್

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

2-bng

Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್‌ ?

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹತ್ಯೆ

Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Air-Delhi

Pollution: ವಾಯುಮಾಲಿನ್ಯ ನಿಯಂತ್ರಣ ಸರಕಾರ‌ ಇಚ್ಛಾಶಕ್ತಿ ಪ್ರದರ್ಶಿಸಲಿ

PM-yojana

Education: ಪಿಎಂ ವಿದ್ಯಾಲಕ್ಷ್ಮೀ ಯೋಜನೆ ಬಡ ಪ್ರತಿಭಾನ್ವಿತರಿಗೆ ವರದಾನ

supreme-Court

Supreme Court: ಖಾಸಗಿ ಸಂಪನ್ಮೂಲ ಸ್ವಾಧೀನ ಸುಪ್ರೀಂ ತೀರ್ಪು ಸಮತೋಲಿತ

Canada

Canada Temple Attack: ಕೆನಡಾ ದೇಗುಲ ದಾಳಿ: ಜಾಗತಿಕ ವಿರೋಧ ಪ್ರತಿಧ್ವನಿಸಲಿ

Flight

Hoax Call: ಹುಸಿ ಬಾಂಬ್‌ ಬೆದರಿಕೆ ಮರುಕಳಿಸದಿರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

9–Niveus-Mangalore-Marathon

Niveus Mangalore Marathon 2024: ನ.10: ನೀವಿಯಸ್‌ ಮಂಗಳೂರು ಮ್ಯಾರಥಾನ್‌

Anushka shetty’s upcoming movie Ghaati first look

Ghaati: ಸ್ವೀಟಿ ಅಲ್ಲ ಘಾಟಿ; ಫ‌ಸ್ಟ್‌ಲುಕ್‌ನಲ್ಲಿ ಅನುಷ್ಕಾ ಸಿನಿಮಾ

8-brahmavar

Brahmavara ಬಂಟರ ಯಾನೆ ನಾಡವರ ಸಂಘ: ನಾಳೆ ನೂತನ ಪದಾಧಿಕಾರಿಗಳ ಪದಪ್ರದಾನ

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.