![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Apr 14, 2023, 7:55 AM IST
ಬೆಂಗಳೂರು : ಎರಡನೇ ಪಟ್ಟಿ ಬಿಡುಗಡೆಯಾದ ಬಳಿಕವೂ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟಿಸಿದ್ದು, ರಾಜೀನಾಮೆ ಪರ್ವ ಮುಂದುವರಿದಿದೆ. ಕೆಲ ಕ್ಷೇತ್ರಗಳಲ್ಲಿ ಬಂಡಾಯದ ಬಿಸಿ ಇನ್ನೂ ಆರಿಲ್ಲ. ಮತ್ತೆ ಕೆಲವು ಕಡೆ ಹೊಸದಾಗಿ ಅತೃಪ್ತಿ ಕಾಣಿಸಿಕೊಂಡಿದೆ. ಟಿಕೆಟ್ ವಂಚಿತರು ಮತ್ತು ಅತೃಪ್ತರು ಬಿಜೆಪಿ ಹಾಗೂ ಸಿಎಂ ಬೊಮ್ಮಾಯಿ ವಿರುದ್ಧ ಹರಿಹಾಯ್ದಿದ್ಧಾರೆ. ಇನ್ನೊಂದೆಡೆ ಬಿಜೆಪಿಯ ಅತೃಪ್ತರಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಗಾಳ ಹಾಕುತ್ತಿದ್ದು, ಮಾಜಿ ಸಿಎಂ ಯಡಿಯೂರಪ್ಪಗೆ ಬಂಡಾಯ ಶಮನದ ಹೊಸ ಜವಾಬ್ದಾರಿಯನ್ನು ವರಿಷ್ಠರು ನೀಡಿದ್ದಾರೆ.
ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿಯವರ ಆಕ್ರೋಶ ಗುರುವಾರವೂ ಮುಂದುವರಿದಿದೆ. ಅವರ ಮನವೊಲಿಸಲು ಬಂದ ಬಿಜೆಪಿ ಜಿಲ್ಲಾಧ್ಯಕ್ಷರ ಕಾರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಪೂರಕವಾಗಿ ಸವದಿ ಬಿಜೆಪಿ ತೊರೆಯಲು ನಿರ್ಧರಿಸಿದ್ದು, ಶುಕ್ರವಾರ ನಿರ್ಧಾರ ಪ್ರಕಟಿಸಲಿ ದ್ದಾರೆ. ಇನ್ನೊಂದೆಡೆ ಹಾವೇರಿ ಶಾಸಕ ನೆಹರು ಓಲೇಕಾರ್ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೇ ಗುಡುಗಿ ಪಕ್ಷ ತ್ಯಾಗಕ್ಕೆ ನಿರ್ಧರಿಸಿದ್ದಾರೆ. ಬೊಮ್ಮಾಯಿ ವಿರುದ್ಧ ಅವರು 1500 ಕೋಟಿ ರೂ. ಹಗರಣದ ಆರೋಪ ಮಾಡಿದ್ದಾರೆ. ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, “ನನಗೆ ಟಿಕೆಟ್ ತಪ್ಪುವುದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾರಣ” ಎಂದು ನೇರವಾಗಿ ಆರೋಪಿಸಿದ್ದಾರೆ.
ಈ ಮಧ್ಯೆ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರೂ ಸ್ಪೀಕರ್ ಕಾಗೇರಿಯವರನ್ನು ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರು ಜನಾರ್ಧನ ರೆಡ್ಡಿ ಪಕ್ಷ ಸೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಜೆಡಿಎಸ್‌ನಿಂದಲೂ ಆಹ್ವಾನವಿದೆ ಎಂದು ಗೂಳಿಹಟ್ಟಿ ಹೇಳಿದ್ದಾರೆ.
ಚನ್ನಗಿರಿಯಲ್ಲಿ ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ಟಿಕೆಟ್ ನೀಡದಿರುವುದಕ್ಕೂ ಅಲ್ಲೂ ಪ್ರತಿಭಟನೆ ನಡೆದಿದೆ. ವಿರೂಪಾಕ್ಷಪ್ಪ ಪುತ್ರ ಮಲ್ಲಿಕಾರ್ಜುನಗೆ ಟಿಕೆಟ್ ನೀಡಬೇಕಿತ್ತೆಂದು ಅವರ ಬೆಂಬಲಿಗರು ಬಿಜೆಪಿ ಧ್ವಜ ಸುಟ್ಟು ಹಾಕಿದ್ದಾರೆ. ಮಾಡಾಳು ಮಲ್ಲಿಕಾರ್ಜುನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ತುಮಕೂರು ವ್ಯಾಪ್ತಿಯಲ್ಲಿ ಮಾಜಿ ಸಚಿವ ಸೊಗಡು ಶಿವಣ್ಣ ಬಿಜೆಪಿಗೆ ವಿದಾಯ ಹೇಳಿದ್ದಾರೆ.
ಕೃಷ್ಣರಾಜ ಕ್ಷೇತ್ರದಲ್ಲಿ ರಾಮದಾಸ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಮಹಾದೇವಪುರ ಕ್ಷೇತ್ರದ ಹಾಲಿ ಶಾಸಕ ಅರವಿಂದ ಲಿಂಬಾವಳಿ ನವದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಅರಸೀಕೆರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಎನ್.ಆರ್.ಸಂತೋಷ್ ಬಿಜೆಪಿ ಟಿಕೆಟ್ ತಪ್ಪಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ. ಸಂತೋಷ್ ಬೆಂಬಲಿಗರು ಬಿಜೆಪಿ ಬಾವುಟಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ 25ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತಾಗಿದೆ.
ಬಿಎಸ್‌ವೈ-ಶೆಟ್ಟರ್ ಭೇಟಿ:
ನವದೆಹಲಿ ಪ್ರವಾಸದ ಬಳಿಕ ಬೆಂಗಳೂರಿಗೆ ಆಗಮಿಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ. ನವದೆಹಲಿ ಮೀಟಿಂಗ್ ಬಗ್ಗೆ ಯಡಿಯೂರಪ್ಪ ಅವರಿಗೆ ತಿಳಿಸಬೇಕಿತ್ತು ಹಾಗಾಗಿ ಬಂದಿದ್ದೇನೆ. ಎಲ್ಲ ಒಳ್ಳೆಯದಾಗುತ್ತದೆ. ನನಗೆ ಟಿಕೆಟ್ ಸಿಗುತ್ತದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.
ಸಿಟಿ ರವಿಯೇ ಕಾರಣ :
ನನಗೆ ಟಿಕೆಟ್ ತಪ್ಪುವುದಕ್ಕೆ ಸಿ.ಟಿ.ರವಿಯೇ ಕಾರಣ ಎಂದು ಆರೋಪಿಸಿರುವ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ನಾನು ಏನಾದರೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಆಗಿದ್ದರೆ ಅವರಿಗೂ ಟಿಕೆಟ್ ತಪ್ಪಿಸುತ್ತಿದ್ದೆ. ಚಿಕ್ಕಮಗಳೂರಿನಲ್ಲಿ ಬಿಜೆಪಿ ನಿರ್ನಾಮವಾಗುವುದಕ್ಕೆ ಸಿ.ಟಿ.ರವಿಯೇ ಕಾರಣ. ನಾನು ಕೂಡಾ ರಾಜಕೀಯ ಮಾಡುವುದಕ್ಕೆ ಬಂದವನು. ಯಾವುದೇ ಕಾರಣಕ್ಕೂ ನಾನು ದೀಪಕ್ ದೊಡ್ಡಯ್ಯ ಪರ ಕೆಲಸ ಮಾಡುವುದಿಲ್ಲ. ಯಡಿಯೂರಪ್ಪನವರೇ ನೀವು ಒಂದು ವಾರ ಮೊಬೈಲ್ ಸ್ವಿಚ್ ಆಫ್ ಮಾಡಿ. ಆಗ ಬಿಜೆಪಿ 50 ಸ್ಥಾನಗಳಲ್ಲೂ ಗೆಲ್ಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಕಚೇರಿಗೆ ಮುತ್ತಿಗೆ
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲ್ ಬೆಂಬಲಿಗರು ಗುರುವಾರವೂ ಕೂಡಾ ಬಿಜೆಪಿ ಕಚೇರಿಗೆ ಬಂದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಜಗನ್ನಾಥ ಭವನಕ್ಕೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಟಿಕೆಟ್ ವಂಚಿತರು ಪಕ್ಷದ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದು ಮುಂದುವರಿದಿದೆ. ಬಿ ಫಾರ್‌ಂ ಪಡೆಯಲು ಬರುವ ಅಭ್ಯರ್ಥಿಗಳಿಗೆ ಮಾತ್ರ ಪಕ್ಷದ ಕಚೇರಿ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮಾತನಾಡುತ್ತೇವೆ :
ಬಂಡಾಯಕ್ಕೆ ಸಂಬಂಧಪಟ್ಟಂತೆ ಸುದ್ದಿಗಾರರ ಜತೆಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಎಂ.ಪಿ. ಕುಮಾರಸ್ವಾಮಿ, ನೆಹರು ಓಲೇಕಾರ ಜೊತೆ ಮಾತನಾಡುತ್ತೇನೆ. ಜಗದೀಶ್ ಶೆಟ್ಟರ್ ಜೊತೆ ವರಿಷ್ಠರು ಚರ್ಚೆ ನಡೆಸಿದ್ದಾರೆ. ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.
ಈ ನಡುವೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಪುತ್ರ ಕಾಂತೇಶ್, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಭೇಟಿ ಮಾಡಿ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿದ್ದಾರೆ. ನನಗೊಂದು ಅವಕಾಶ ಸಿಗುತ್ತದೆ ಎಂಬ ನಂಬಿಕೆಯಲ್ಲಿ ಇದ್ದೇನೆ. ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧ. ಬಿಜೆಪಿ, ಆರೆಸೆಸ್ ನನ್ನ ತಂದೆ ಮತ್ತು ಕುಟುಂಬವನ್ನು ಸಂಸ್ಕಾರದಿಂದ ಬೆಳೆಸಿದೆ.ಪಕ್ಷ ನಮ್ಮ ಕೈ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರ ಅಪ್ತನ ವಿರುದ್ಧ ದೂರು :
ವಿಜಯೇಂದ್ರ ಹಾಗೂ ಸೋಮಣ್ಣ ನಡುವಿನ ಫೈಟ್ ಮುಂದುವರಿದಿದ್ದು, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ಮಾಡಿರುವ ಸೋಮಣ್ಣ ಪುತ್ರ ಅರುಣ್ ಸೋಮಣ್ಣ ವಿಜಯೇಂದ್ರ ಆಪ್ತ ರುದ್ರೇಶ್ ವಿರುದ್ದ ದೂರು ನೀಡಿದ್ದಾರೆ. ತಂದೆಯ ಸೋಲಿಸಲು ಚಾಮರಾಜನಗರದಲ್ಲಿ ಕೆಲಸ ಮಾಡುತ್ತಾರೆ ಎಂದು ದೂರಿದ್ದಾರೆ.
ಬಿಎಸ್‌ವೈ ಬುಲಾವ್ :
ಈ ಮಧ್ಯೆ ಟಿಕೆಟ್ ವಂಚಿತ ಶಾಸಕರು ಹಾಗೂ ಅಸಮಾಧಾನಿತರಿಗೆ ಯಡಿಯೂರಪ್ಪ ಬುಲಾವ್ ನೀಡಿದ್ದು, ಬಂಡಾಯ ಶಮನ ಕಾರ್ಯ ಆರಂಭಿಸಿದ್ದಾರೆ. ವರಿಷ್ಠರ ಸೂಚನೆ ಮೇರೆಗೆ ಬಿಎಸ್‌ವೈರಿಂದಲೇ ಮನವೊಲಿಕೆ ಪ್ರಯತ್ನ ಆರಂಭಿಸಿದ್ದಾರೆ.
ಶಮನ ಮಾಡುತ್ತೇವೆ
ಎಲ್ಲ ಅಸಮಾಧಾನಿಕರ ಜತೆಯೂ ಮಾತನಾಡುತ್ತೇವೆ. ಈ ಬಾರಿಯೂ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ನಮಗೆ ಪ್ರಚಂಡ ಬಹುಮತ ನಮಗೆ ಸಿಗುತ್ತದೆ.
ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
Congress Siddu Team: ಸಿದ್ದರಾಮಯ್ಯ ಆಪ್ತರಿಂದ ಈಗ ʼಮಾಸ್ ಲೀಡರ್ʼ ಅಸ್ತ್ರ
You seem to have an Ad Blocker on.
To continue reading, please turn it off or whitelist Udayavani.