ಹೆದ್ದಾರಿಯ ಅಕ್ಕಪಕ್ಕ ಕಟ್ಟಡ ನಿರ್ಮಾಣ ನಿರ್ಬಂಧ : ಮುಖ್ಯ ಕಾರ್ಯದರ್ಶಿಗಳಿಗೆ ಚರ್ಚಿಸಲು ಸೂಚನೆ
Team Udayavani, Mar 22, 2021, 10:06 PM IST
ವಿಧಾನಸಭೆ: ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ಮಧ್ಯಭಾಗದಿಂದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧ, ನಿಯಮ ಉಲ್ಲಂಘನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗುವುದು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.
ಸೋಮವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹಾಲಾಡಿ ಶ್ರೀನಿವಾಸಶೆಟ್ಟಿ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತೀಯ ರಸ್ತೆ ಕಾಂಗ್ರೆಸ್ (ಐಆರ್‌ಸಿ) ನಿಯಮಾವಳಿ ಪ್ರಕಾರ ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀಟರ್ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಮಧ್ಯಭಾಗದಿಂದ 25 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ. ಆ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಿಸಿದರೆ ಭವಿಷ್ಯದಲ್ಲಿ ರಸ್ತೆ ವಿಸ್ತರಣೆ ಅಗತ್ಯವೆನಿಸಿದಾಗ ಕಟ್ಟಡ ತೆರವಿಗೆ ಪರಿಹಾರ ನೀಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ ಹಾಲಾಡಿ ಶ್ರೀನಿವಾಸಶೆಟ್ಟಿ, ರಾಷ್ಟ್ರೀಯ, ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ಮಧ್ಯಭಾಗದಿಂದ ನಿರ್ದಿಷ್ಟ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ನಿರ್ಬಂಧವಿದೆ. ಒಂದೊಮ್ಮೆ ಆ ವ್ಯಾಪ್ತಿಯೊಳಗೆ ಪಟ್ಟಾ ಭೂಮಿಯಿದ್ದು, ಭೂಮಾಲೀಕರು ಮನೆ ಕಟ್ಟಲು ಅವಕಾಶವಿಲ್ಲ ಎಂದರೆ ಏನರ್ಥ. ಅಲ್ಲದೇ ಈ ಭೂಮಿ ಪರಿವರ್ತನೆ ಕೂಡ ಆಗುವುದಿಲ್ಲ. ಸರ್ಕಾರವು ಭೂಸ್ವಾಧೀನಪಡಿಸಿಕೊಳ್ಳುವುದಿಲ್ಲ. ಇದರಿಂದ ಹೆದ್ದಾರಿಗೆ ಹೊಂದಿಕೊಂಡಂತೆ ಸಣ್ಣ, ಪುಟ್ಟ ಭೂಮಿ ಹೊಂದಿರುವವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಬಡವರಿಗೆ ಪಟ್ಟಾ ಜಮೀನು ಇದ್ದರೆ 30 ವರ್ಷದವರೆಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದರೆ ಪರಿಹಾರವೇನು ಎಂದು ಹೇಳಿದರು.
ಇದನ್ನೂ ಓದಿ :ಮಾ. 23-24ರಂದು ಕಾಪುವಿನ ಮೂರೂ ಮಾರಿಗುಡಿಗಳಲ್ಲಿ ಕಾಲಾವಧಿ ಸುಗ್ಗಿ ಮಾರಿಪೂಜೆ
ರಸ್ತೆ, ಜಿಲ್ಲೆಗೊಂದು ಕಾನೂನಿದೆಯೇ?
ಕೆಲ ಭೂಮಾಲೀಕರು ನ್ಯಾಯಾಲಯ ಮೊರೆ ಹೋಗಿ ಹೆದ್ದಾರಿ ಅಂಚಿನಿಂದ ಆರು ಮೀಟರ್ ಮೀರಿ ಮನೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದಾರೆ. ಆದರೆ ಇದನ್ನು ಕೆಲವೆಡೆ ಪಾಲಿಸುತ್ತಿದ್ದರೆ, ಇನ್ನೂ ಕೆಲವೆಡೆ ಪಾಲಿಸುತ್ತಿಲ್ಲ. ಒಂದೊಂದು ಜಿಲ್ಲೆ, ರಸ್ತೆಗೆ ಒಂದೊಂದು ಕಾನೂನು ಇದೆಯೇ? ಎಂದು ಪ್ರಶ್ನೆ ಮಾಡಿದರು.
ಬಿಜೆಪಿಯ ಗೂಳಿಹಟ್ಟಿ ಶೇಖರ್, ಗ್ರಾಮ ಪಂಚಾಯ್ತಿ, ಪುರಸಭೆ ವ್ಯಾಪ್ತಿಯಲ್ಲಿ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳಿಗೂ ನಿರ್ದಿಷ್ಟ ನಿರ್ಬಂಧ ವ್ಯಾಪ್ತಿಯಿದ್ದರೂ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿ ಖಾತಾ ಕೂಡ ನೀಡಲಾಗುತ್ತಿದ್ದು, ಅನಧಿಕೃತ ಕಟ್ಟಡಗಳು ತಲೆಯೆತ್ತುತ್ತಿವೆ ಎಂದು ಹೇಳಿದರು. ಬಿಜೆಪಿಯ ಬಿ.ಸಿ. ನಾಗೇಶ್, ನಂಜೇಗೌಡ ಇತರರು ದನಿಗೂಡಿಸಿದರು.
ಬಳಿಕ ಉತ್ತರಿಸಿದ ಗೋವಿಂದ ಕಾರಜೋಳ, ಒಂದೊಂದು ರಾಜ್ಯ, ಜಿಲ್ಲೆ, ರಸ್ತೆಗೊಂದು ಕಾನೂನು ಇರಲು ಸಾಧ್ಯವಿಲ್ಲ. ದೇಶ, ರಾಜ್ಯಕ್ಕೆ ಒಂದೇ ಕಾನೂನು. ನಿಯಮ ಮೀರಿ ಕಟ್ಟಡ ನಿರ್ಮಿಸಿದರೆ ಒತ್ತುವರಿಯಾಗುತ್ತದೆ. ಯಾವುದಾದರೂ ಪ್ರಕರಣದಲ್ಲಿ ನ್ಯಾಯಾಲಯ ತೀರ್ಪು ನೀಡಿದ ಮಾಹಿತಿ ನೀಡಿದರೆ ಪರಿಶೀಲಿಸಿ ಉತ್ತರ ನೀಡಲಾಗುವುದು. ಇಂದಿನ ಬೆಳವಣಿಗೆ, ವಾಹನಗಳ ಸಂಖ್ಯೆ ಗಮನಿಸಿದರೆ ಹೆದ್ದಾರಿ, ಮುಖ್ಯ ರಸ್ತೆಯ ವಿಸ್ತರಣೆ, ಅಭಿವೃದ್ಧಿ ಅಗತ್ಯವಿದೆ ಎಂದು ಹೇಳಿದರು.
ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಯ ನಿರ್ಬಂಧಿತ ಪ್ರದೇಶದಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ, ಖಾತಾ ನೀಡಿಕೆ ಇತರೆ ವಿಚಾರ ಕುರಿತಂತೆ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
ಎಎನ್‌ಎಫ್‌ಗೆ ಸಿಗದ ನಕ್ಸಲರು ಸಿಎಂಗೆ ಸಿಕ್ಕಿದ್ದು ಹೇಗೆ?: ಶಾಸಕ ಸುನೀಲ್ ಕುಮಾರ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Election Preperation: ಸ್ಥಳೀಯ ಸಂಸ್ಥೆ ಚುನಾವಣೆ: ಇಂದಿನಿಂದ ಬಿಜೆಪಿ ಸರಣಿ ಸಭೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
MUST WATCH
ಹೊಸ ಸೇರ್ಪಡೆ
Siddapura: ಟ್ರಾಯ್‌ನಿಂದ ಕರೆ ಮಾಡುವುದಾಗಿ 10.39 ಲಕ್ಷ ರೂ. ವಂಚನೆ
Padubidri: ಸಾಲಬಾಧೆ; ನೇಣು ಬಿಗಿದುಕೊಂಡು ವ್ಯಕ್ತಿ ಸಾವು
US-Canada Map: ಅಮೆರಿಕ ಭೂಪಟಕ್ಕೆ ಕೆನಡಾ ಸೇರಿಸಿದ ಟ್ರಂಪ್: ವಿವಾದ
Hemmadyಸೇವಂತಿಗೆ ತಳಿ ಸಂರಕ್ಷಣೆ: ತೋಟಗಾರಿಕೆ ಅಧಿಕಾರಿಗಳು,ಕೃಷಿ ವಿಜ್ಞಾನಿಗಳಿಂದ ಸ್ಥಳ ಭೇಟಿ
Congress Session: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಜ.21ಕ್ಕೆ ಮರುನಿಗದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.