ಧೋನಿಯಿಂದ ಧೋನಿಯ ಸಂದರ್ಶನ, ಅಲ್ಲ ಆತ್ಮಾವಲೋಕನ!
Team Udayavani, Apr 7, 2021, 6:45 AM IST
ಮೊನ್ನೆ ಎ.2ಕ್ಕೆ ಭಾರತ ತನ್ನ ಎರಡನೇ ಏಕದಿನ ವಿಶ್ವಕಪ್ ಗೆದ್ದು ಸರಿಯಾಗಿ 10 ವರ್ಷ. ಆಗ ಭಾರತ ತಂಡದ ನಾಯಕರಾಗಿದ್ದ ಎಂ.ಎಸ್.ಧೋನಿಯ ಪಾತ್ರ ಈ ಗೆಲುವಿನಲ್ಲಿ ಬಹಳ ದೊಡ್ಡದು. ಆದರೆ ಆಗಿನ ಧೋನಿಗೂ, ಈಗಿನ ಧೋನಿಗೂ ಬಹಳ ವ್ಯತ್ಯಾಸವೇನಿಲ್ಲ. ಅವತ್ತೂ ಮೈದಾನದಲ್ಲಿ ಶಾಂತವಾಗಿಯೇ ಇದ್ದ ಅವರು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ ಮೇಲೂ ಶಾಂತರಾಗಿಯೇ ಉಳಿದಿದ್ದಾರೆ. ಹಳೆಯ ಸುಂದರ ನೆನಪುಗಳು ಈಗ ಗರಿಗೆದರಿವೆ. ಈ ಹೊತ್ತಿನಲ್ಲಿ 2004ರ ಕೊನೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ “ಆಗಿನ’ ಧೋನಿಯನ್ನು; “ಈಗಿನ’ ಧೋನಿ ಸಂದರ್ಶನ ಮಾಡಿದ್ದಾರೆ. ಇಲ್ಲಿ ಕೇವಲ ಸಂದರ್ಶನವನ್ನು ಓದುವುದಲ್ಲ, ಇಬ್ಬರೂ ಧೋನಿಯ ವರ್ತನೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಈಗಿನ ಧೋನಿ, ಆಗಿನ ಧೋನಿಯನ್ನು ಆಗಿನ ಕಾಲದಲ್ಲಿ ನಿಂತು ಮಾತನಾಡಿಸುತ್ತಾರೆ. ಮೊದಲು ಈಗಿನ ಧೋನಿ ಸಂದರ್ಶಕರಾಗಿರುತ್ತಾರೆ, ಹೋಗುತ್ತಾ ಹೋಗುತ್ತಾ ಆಗಿನ ಧೋನಿ ಸಂದರ್ಶಕರಾಗುತ್ತಾರೆ. ಇದೊಂದು ರೀತಿ ಆತ್ಮಾವಲೋಕನವೂ ಹೌದು. ಹೊಸಪೀಳಿಗೆಗೆ ನೀಡುವ ಮಾರ್ಗದರ್ಶನವೂ ಹೌದು. ಗಮನಿಸಲೇಬೇಕಾಗಿರುವುದೇನೆಂದರೆ ಆಗಿನ ಧೋನಿಗಿದ್ದ ಸಂಕೋಚ, ಈಗಿನ ಧೋನಿಗಿಲ್ಲ. ಆದರೆ ಸೌಜನ್ಯ, ಸರಳತೆ ಯಥಾರೀತಿ ಮುಂದುವರಿದಿದೆ. ಇದೊಂದೇ ನಿಜವಾದ ವ್ಯತ್ಯಾಸ. ಓದಿ ನೋಡಿ…
2021ರ ಧೋನಿ: ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮೊದಲ ವರ್ಷದಲ್ಲೇ ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಗೌರವ. ಎಂತಹ ಸಾಧನೆ! ಪಂದ್ಯವೊಂದರಲ್ಲಿ 183 ರನ್ ಬಾರಿಸಿದಿರಿ; ಅದೂ ಶ್ರೀಲಂಕಾ ಬೌಲಿಂಗ್ ದಾಳಿಯ ವಿರುದ್ಧ! 50 ಓವರ್ ವಿಕೆಟ್ ಕೀಪಿಂಗ್ ಮಾಡಿ, ಅನಂತರ 46 ಓವರ್ ಬ್ಯಾಟಿಂಗ್ ಮಾಡುವುದು ಸಾಮಾನ್ಯ ವಿಚಾರವಲ್ಲ. ಚೆನ್ನಾಗಿ ಆಡುತ್ತಿದ್ದೀರಿ…
(ಬಹಳ ನಿರಾಳವಾಗಿ, ಅಷ್ಟೇ ಸರಳವಾಗಿ, ನಗುಮೊಗದಿಂದ ಮಾತನಾಡುತ್ತಾರೆ)
2005ರ ಧೋನಿ: ವಿಕೆಟ್ ಬಹಳ ಫ್ಲಾಟ್ ಆಗಿತ್ತು ಎನ್ನುವುದು ನಿಮಗೂ ಗೊತ್ತಿದೆ ಸರ್. ಸ್ಥಿರವಾಗಿ ಆಡುತ್ತಿದ್ದರೆ, ಭಿನ್ನಭಿನ್ನ ಸಂದರ್ಭಗಳನ್ನೂ ಚೆನ್ನಾಗಿಯೇ ನಿಭಾಯಿಸಬಹುದು.
(ಮುಖದಲ್ಲಿ ಸಂಕೋಚ, ಸಣ್ಣ ಹಿಂಜರಿಕೆ, ಹಾಗೆಯೇ ಎದೆಯಲ್ಲಿ ಸರಿಯಾಗಿ ಮೈಕ್ರೋಫೋನ್ ಸಿಕ್ಕಿಸಿಕೊಳ್ಳಲು ಪರದಾಟ, ಸಹಾಯಕಿಯೊಬ್ಬರು ಬಂದು ಅದನ್ನು ಸರಿಯಾಗಿ ಸಿಕ್ಕಿಸುತ್ತಾರೆ)
2021ರ ಧೋನಿ: ನಿಜ ಅದೇ ದೊಡ್ಡ ಸವಾಲು. ಪ್ರತೀಪಂದ್ಯದಲ್ಲೂ ಸ್ಥಿರತೆ ಕಾಪಾಡಿಕೊಳ್ಳಬೇಕು. ಪ್ರತೀ ಬಾರಿಯೂ ಅತ್ಯುತ್ತಮವಾಗಿ ಆಡಿ ತಂಡಕ್ಕೆ ಕೊಡುಗೆ ನೀಡಲೇಬೇಕೆಂಬ ಮನೋಭಾವ ಇರಬೇಕು. ನೀವೆಷ್ಟು ಉತ್ತಮವಾಗಿ ಸಿದ್ಧತೆ ನಡೆಸಿದ್ದೀರಿ ಎನ್ನುವುದೇ ಇದರಲ್ಲಿ ಗಮನಿಸಬೇಕಾದ ಸಂಗತಿ. ನಿಮ್ಮ ಯೋಜನೆಗಳೇನು, ಅದನ್ನು ಹೇಗೆ ಜಾರಿ ಮಾಡುತ್ತೀರಿ ಎನ್ನುವುದೆಲ್ಲ ಇಲ್ಲಿ ಮಹತ್ವ ಪಡೆಯುತ್ತವೆ. ಎದುರಾಳಿ ಯಾರು? ಅವರ ಸಿದ್ಧತೆಗಳೇನು? ಎನ್ನುವುದನ್ನೆಲ್ಲ ನೋಡಿ ಇದನ್ನು ನಿರ್ಧರಿಸಬೇಕಾಗುತ್ತದೆ.
(ಮತ್ತೆ ನಿರರ್ಗಳವಾಗಿ, ಆದರೆ ಸೌಜನ್ಯದಿಂದ ಸಂಭಾಷಣೆ ಎನ್ನುವ ರೀತಿಯಲ್ಲೇ ಪ್ರಶ್ನೆಯನ್ನೂ ಎಸೆಯುತ್ತಾರೆ)
2005ರ ಧೋನಿ: ಹೌದು ಸರ್. ಅದಕ್ಕಾಗಿ ಪ್ರಯತ್ನವನ್ನಂತೂ ಮಾಡುತ್ತಿದ್ದೇನೆ. ಹೆಚ್ಚೆಚ್ಚು ಪಂದ್ಯಗಳನ್ನಾಡಲು ಅವಕಾಶ ಸಿಕ್ಕಿದಷ್ಟೂ ನಮ್ಮ ಸಾಮರ್ಥ್ಯವನ್ನು ಪ್ರಕಟಿಸಲು ಹೆಚ್ಚೆಚ್ಚು ಸಾಧ್ಯವಾಗುತ್ತದೆ. ಈ ಅನುಭವದಿಂದ ಕಲಿಯಲು ನಾನು ಯತ್ನಿಸುತ್ತಿದ್ದೇನೆ. ಒಂದು ಕಡೆ ಹಿರಿಯ ಕ್ರಿಕೆಟಿಗರು ಜತೆಯಲ್ಲಿದ್ದಾಗ ಅದರಿಂದಲೂ ಬಹಳ ನೆರವಾಗುತ್ತದೆ. ಪ್ರಯತ್ನವನ್ನಂತೂ ಮಾಡುತ್ತಾ ಇದ್ದೀನಿ…
(ಈಗಲೂ ಅದೇ ಸಂಕೋಚ, ಸಣ್ಣ ನಗು, ಸ್ವಲ್ಪ ಒತ್ತಡದಿಂದ, ಹಾಗೆಯೇ ಸಂಕೋಚದಿಂದ ಎರಡೂ ಕಾಲುಗಳನ್ನು ಕುಣಿಸುತ್ತಾರೆ)
2021ರ ಧೋನಿ: ಪರವಾಗಿಲ್ಲ ಆರಾಮವಾಗಿ ಕುಳಿತುಕೊಳ್ಳಿ.
2005ರ ಧೋನಿ: ಧನ್ಯವಾದ ಸರ್.
(ಅದೇ ನಾಚಿಕೆ ಮುಂದುವರಿಯುತ್ತದೆ)
2021ರ ಧೋನಿ: ಅನುಭವದಿಂದ ನಮ್ಮ ಕೆಲಸಗಳು ಹಗುರವಾಗುತ್ತವೆ. ಸಲೀಸಾಗಿ ಪರಿಸ್ಥಿತಿಯನ್ನು ನಿಭಾಯಿಸ ಬಹುದು. ಆದರೆ ಹೊಸಹೊಸ ಸವಾಲುಗಳು ಬರುತ್ತಲೇ ಇರುತ್ತವೆ. ಎದುರಾಳಿ ಎಂತಹ ಪರಿಸ್ಥಿತಿಯನ್ನೂ ನಿಭಾಯಿ ಸಲು ಅತ್ಯುತ್ತಮವಾಗಿ ಸಿದ್ಧವಾಗಿರುತ್ತಾರೆ. ನಿಮ್ಮ ಬಗ್ಗೆ ಅಧ್ಯಯನ ಮಾಡಿ, ಮಣಿಸಲು ಯತ್ನಿಸುತ್ತಾರೆ. ಆಗ ನಿಮ್ಮನ್ನು ನೀವು ಸುಧಾರಿಸಿಕೊಳ್ಳುತ್ತಲೇ ಹೋಗ ಬೇಕಾಗುತ್ತದೆ. ಒಮ್ಮೆ ನೀವು 3ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಹುದು, ಇನ್ನೊಮ್ಮೆ ಕೆಳಕ್ರಮಾಂಕದಲ್ಲಿ ಬರ ಬಹುದು. ಎರಡರ ಆವಶ್ಯಕತೆ ಬೇರೆಯಿರುತ್ತದೆ. ಎರಡೂ ಸ್ಥಿತಿಯನ್ನು ಅಗತ್ಯಕ್ಕೆ ತಕ್ಕಂತೆ ನಿಭಾಯಿಸಲು ನೀವು ಮಾನಸಿಕವಾಗಿ ಸಿದ್ಧರಿರಬೇಕಾಗುತ್ತದೆ. ಅಂತಹ ಸಂದ ರ್ಭಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ನಿಮಗೆ ಗೊತ್ತಿರಬೇಕು. ನೀವು ಪಂದ್ಯಕ್ಕಿಂತ ಒಂದು ಹೆಜ್ಜೆ ಮುಂದೆ ನಿಂತು ಯೋಚಿಸಬೇಕು, ಅದೇ ವೇಳೆ ಆಟವನ್ನೂ ಆನಂದಿಸಬೇಕು. ಎಷ್ಟೆಷ್ಟು ಹೊಸಹೊಸ ಸವಾಲುಗಳು ಬರುತ್ತವೋ, ಅಷ್ಟಷ್ಟು ನಮ್ಮ ಸಾಮರ್ಥ್ಯವನ್ನು ತೋರಲು ಅವಕಾಶವೂ ಹೌದು. ಯಾವುದು ತಂಡದ ಆವಶ್ಯಕತೆಯೋ, ಅದೇ ನಮ್ಮ ಅಗತ್ಯವೂ ಆಗಿರಬೇಕು…
(ಅದೇ ಸರಳತೆ, ಮಾತಿನಲ್ಲಿ ಸ್ಪಷ್ಟತೆ)
2005ರ ಧೋನಿ: (ಸಣ್ಣದಾಗಿ ನಗುತ್ತಾ, ಹೇಳಲೋ, ಬೇಡವೋ ಎಂದು ಮುಖ ಮಾಡುತ್ತಾರೆ)
2021ರ ಧೋನಿ: ಏನು ಯೋಚನೆ ಮಾಡುತ್ತಿದ್ದೀರಿ?
2005ರ ಧೋನಿ: ಸರ್ ನೀವು ಇಷ್ಟೆಲ್ಲ ಟೆಸ್ಟ್, ಏಕದಿನ ಪಂದ್ಯಗಳನ್ನು ಆಡಿದ್ದೀರಿ. ನಿಮ್ಮ ಮಟ್ಟಿಗೆ ನಿಮ್ಮ ಅತ್ಯಂತ ಪ್ರಮುಖ ಇನಿಂಗ್ಸ್ ಯಾವುದು?
(ಮತ್ತೆ ಸಂಕೋಚದಿಂದಲೇ ಮಾತನಾಡುತ್ತಾರೆ. ಇಲ್ಲಿ 2005ರ ಧೋನಿಯೇ ನಿಧಾನಕ್ಕೆ ಸಂದರ್ಶಕರಾಗಿ ಬದಲಾಗುವುದನ್ನು ಗಮನಿಸಬೇಕು)
2021ರ ಧೋನಿ: ವಿಶ್ವಕಪ್ ಫೈನಲ್, ಆ ಪಂದ್ಯವನ್ನು ಮುಗಿಸುವ ಮಜವೇ ಬೇರೆ.
2005ರ ಧೋನಿ: ವಿಶ್ವಕಪ್ ಫೈನಲ್?
2021ರ ಧೋನಿ: ಹೌದು, 2011ರಲ್ಲಿ ವಾಂಖೇಡೆ ಮೈದಾನದಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯ.
2005ರ ಧೋನಿ: ನೀವು ವಿಶ್ವಕಪ್ ಗೆದ್ರಾ?
2021ರ ಧೋನಿ: ಅಂತಹದ್ದೊಂದು ಬ್ಯಾಟಿಂಗ್ ಮಾಡಲು ಬಹಳ ಪರಿಶ್ರಮ ಬೇಕು. ಅದರ ಜತೆಗೆ ತ್ಯಾಗವೂ ಬೇಕು. ನಿಮಗೆ ಬಹಳ ಪ್ರಿಯವಾದ ಬಟರ್ ಚಿಕನ್, ತಂಪು ಪಾನೀಯ, ಮಿಲ್ಕ್ಶೇಕ್‌ಗಳನ್ನುಗಳನ್ನು ಬಿಡಬೇಕಾಗುತ್ತದೆ.
2005ರ ಧೋನಿ: ಸ್ಥಿರತೆ, ಶಿಸ್ತು ಅಂತೆಲ್ಲ ಹೇಳಿಕೊಂಡು ನಿಮ್ಮ ಇಷ್ಟದ ಸಂಗತಿಗಳನ್ನೆಲ್ಲ ಬಿಟ್ಟೇ ಬಿಟ್ಟಿರಾ?
2021ರ ಧೋನಿ: ಛೇ ಛೇ ಹಾಗೇನಿಲ್ಲ, ಬೈಕ್ ಓಡಿಸುವುದನ್ನು ಮಾತ್ರ ಬಿಟ್ಟೇ ಇಲ್ಲ! 80 ಬೈಕ್‌ಗಳಿವೆ, ಅವೆಲ್ಲ ನಿಮಗಿಷ್ಟವಾದವೇ. ಮೊದಲ ಬೈಕೂ ಸೇರಿ!
2005ರ ಧೋನಿ: ಅದನ್ನು ಸುಮ್ಮನೆ ಇಟ್ಟಿದ್ದೀರಾ? ಈಗಲೂ ಚಲಿಸುತ್ತಾ?
2021ರ ಧೋನಿ: ಚಲಿಸುವುದಲ್ಲ, ನುಗ್ಗುತ್ತದೆ. ಮೊದಲ ಬೈಕಲ್ವಾ? ಅದಕ್ಕೆ ಹೆಚ್ಚಿನ ಮುತುವರ್ಜಿ ವಹಿಸುತ್ತೇನೆ.
2005ರ ಧೋನಿ: ಸರ್ ಇಲ್ಲೂ ಸ್ಥಿರತೆ ಉಳಿಸಿಕೊಂಡಿದ್ದೀರಲ್ಲ?
2021ರ ಧೋನಿ: ಕೊನೆಯ ಬಾರಿಗೆ ಯಾವಾಗ ಬೈಕ್ ಓಡಿಸಿದ್ದು?
(ಇಬ್ಬರಲ್ಲೂ ನಗು).
ಕೃಪೆ: ಗಲ್ಫ್ ಇಂಡಿಯಾ ವೀಡಿಯೋ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.