ಡಿಕೆಶಿ, ಸಿದ್ದು ಪಟ್ಟು : CM ಆಯ್ಕೆ ಕಗ್ಗಂಟು
ಹೈಕಮಾಂಡ್ ನಿರ್ಧಾರಕ್ಕೆ ಬಿಡಲು ಸಿಎಲ್‌ಪಿ ಸಭೆಯಲ್ಲಿ ಒಂದು ಸಾಲಿನ ನಿರ್ಣಯ : ಎರಡು ಬಣಗಳಿಂದಲೂ ತಂತ್ರ, ಪ್ರತಿತಂತ್ರ
Team Udayavani, May 15, 2023, 7:14 AM IST
ಬೆಂಗಳೂರು: ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಬಿಗಿಪಟ್ಟಿನಿಂದಾಗಿ ಸಿಎಂ ಆಯ್ಕೆ ವಿಚಾರ ಈಗ ಕಾಂಗ್ರೆಸ್ ಹೈಕಮಾಂಡ್ ಬಳಿಗೆ ತಲುಪಿದೆ. ಕಾಂಗ್ರೆಸ್ ವೀಕ್ಷಕರು ವರಿಷ್ಠರಿಗೆ ವರದಿ ಸಲ್ಲಿಸಲಿದ್ದು, ಸೋಮವಾರ ಹೊಸ ಮುಖ್ಯಮಂತ್ರಿ ಯಾರೆಂಬ ಕುತೂಹಲಕ್ಕೆ ತೆರೆ ಬೀಳಲಿದೆ.
ಮಹಾರಾಷ್ಟ್ರದ ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ನೇತೃತ್ವದಲ್ಲಿ ಬೆಂಗಳೂರಿಗೆ ಆಗಮಿಸಿದ ಕಾಂಗ್ರೆಸ್‌ನ ಮೂವರು ವೀಕ್ಷಕರು ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಿದರು. “ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡಲಾಗುವುದು” ಎಂಬ ಒಂದು ಸಾಲಿನ ನಿರ್ಣಯವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಸಿಎಂ ಆಯ್ಕೆಯನ್ನು ಎಐಸಿಸಿ ಅಧ್ಯಕ್ಷ ಖರ್ಗೆ ಮತ್ತು ಹೈಕಮಾಂಡ್ ಅಂಗಳಕ್ಕೆ ತಳ್ಳಲಾಗಿದೆ.
ಪ್ರತ್ಯೇಕ ಮಾತುಕತೆ
ಈ ನಿರ್ಣಯ ತೆಗೆದುಕೊಳ್ಳುವುದಕ್ಕೆ ಮುನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಜತೆಗೆ ವೀಕ್ಷಕರು ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. “ನಾನು ಪಕ್ಷವನ್ನು ಅಧಿಕಾರಕ್ಕೆ ತರುವುದಕ್ಕೆ ಶ್ರಮ ಪಟ್ಟಿದ್ದೇನೆ. ಶ್ರಮಕ್ಕೆ ಪ್ರತಿಫಲವನ್ನು ಕೇಳುತ್ತಿದ್ದೇನೆ. ಮುಖ್ಯಮಂತ್ರಿ ರೇಸ್‌ನಿಂದ ನಾನು ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಎಐಸಿಸಿ ವೀಕ್ಷಕರಿಗೆ ಡಿ.ಕೆ. ಶಿವಕುಮಾರ್ ರವಾನೆ ಮಾಡಿದ್ದಾರೆ. ಈ ಬಿಗಿಪಟ್ಟು ಮತ್ತೂಮ್ಮೆ ಮುಖ್ಯಮಂತ್ರಿಯಾಗುವ ಸಿದ್ದರಾಮಯ್ಯನವರ ಕನಸಿಗೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗಾಗಿ ಸಿದ್ದರಾಮಯ್ಯ ಬಣದ ಶಾಸಕರ ಪೈಕಿ ಕೆಲವರು ಅಭಿಪ್ರಾಯ ಸಂಗ್ರಹಣೆಗೆ ಪಟ್ಟು ಹಿಡಿದಿದ್ದಾರೆ. ಅಂತಿಮವಾಗಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಹೈಕಮಾಂಡ್ ವಿವೇಚನೆಗೆ ಬಿಡುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇಬ್ಬರನ್ನು ಕರೆಸಿ ದಿಲ್ಲಿಯಲ್ಲಿಯೇ ಒಮ್ಮತದ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಒಕ್ಕಲಿಗರು-ಕುರುಬರಿಂದ ಒತ್ತಡ ತಂತ್ರ
ಸಿಎಂ ಹುದ್ದೆಗೆ ಪೈಪೋಟಿ ತೀವ್ರಗೊಂಡಿರುವಂತೆಯೇ ಡಿ.ಕೆ. ಶಿವಕುಮಾರ್ ಪರವಾಗಿ ಒಕ್ಕಲಿಗರ ಸಂಘ, ಒಕ್ಕಲಿಗ ಸಮಾಜದ ಮಠಾಧೀಶರು ಕೂಗೆಬ್ಬಿಸಿದ್ದರೆ, ಸಿದ್ದರಾಮಯ್ಯ ಪರವಾಗಿ ಕುರುಬ ಸಮಾಜದ ಮುಖಂಡರು, ಮಠಾಧೀಶರು ಒತ್ತಡ ಹೇರುತ್ತಿದ್ದಾರೆ. ರವಿವಾರ ಉಭಯ ನಾಯಕರ ನಿವಾಸ ಗಳ ಬಳಿಯೂ ಅವರ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡಿದರು. ಶಾಸಕಾಂಗ ಪಕ್ಷದ ಸಭೆ ನಡೆದ ಹೊಟೇಲ್ ಮುಂದೆಯೂ ಬಲಾಬಲ ಪ್ರದರ್ಶಿಸಿದರು. ಎರಡೂ ಕಡೆಯಿಂದಲೂ ಸಾಕಷ್ಟು ಹೈಡ್ರಾಮಾಗಳು ನಡೆದವು. ಡಿಕೆಶಿ ಪಕ್ಷ ಸಂಘಟನೆಯಲ್ಲಿ ಬಹಳ ಶ್ರಮಿಸಿದ್ದು, ಅವರಿಗೆ ಅವಕಾಶ ಕಲ್ಪಿಸಬೇಕು ಎಂದು ರಾಜ್ಯ ಒಕ್ಕಲಿಗರ ಸಂಘ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಸಮಾಜದ ಮಠಾಧೀಶರು ಆಗ್ರಹಿಸುವ ಮೂಲಕ ಡಿಕೆಶಿ ಬೆಂಬಲಕ್ಕೆ ಒಕ್ಕಲಿಗ ಸಮಾಜವಿದೆ ಎಂಬ ಸಂದೇಶ ರವಾನಿಸಿದ್ದು ವಿಶೇಷ. ಇದೇವೇಳೆ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ 14 ಮಂದಿ ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಸುಮಾರು ನೂರು ಶಾಸಕರು ಸಿದ್ದರಾಮಯ್ಯ ಅವರ ವರ್ಚಸ್ಸಿನಿಂದ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಕುರುಬ ಸಮುದಾಯದ ಮುಖಂಡರು ಒತ್ತಾಯಿಸಿದರು.
ಸಿಎಂ: ಇಂದೇ ನಿರ್ಣಯ?
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಚಾರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿವೇಚನೆಗೆ ಬಿಡಲಾಗಿದ್ದರೂ ದಿಲ್ಲಿಯಿಂದ ಆಗಮಿಸಿರುವ ವೀಕ್ಷಕರು ಪ್ರತ್ಯೇಕವಾಗಿ ಶಾಸಕರ ಅಭಿಪ್ರಾಯ ಸಂಗ್ರಹಿಸಿದರು. ಸಿಎಂ ಆಯ್ಕೆ ವಿಚಾರವನ್ನು ಹೈಕಮಾಂಡ್ ನಿರ್ಧಾರಕ್ಕೆ ಬಿಡುವ ಒಂದು ಸಾಲಿನ ನಿರ್ಣಯ ಅಂಗೀಕರಿಸಿದ ಬಳಿಕ ಶಾಸಕರು ತಮ್ಮ ಅಭಿಪ್ರಾಯ ತಿಳಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಶಾಸಕರನ್ನು ಕರೆದು, ಸಿಎಂ ಯಾರಾಗಬೇಕೆಂಬ ಬಗ್ಗೆ ಲಿಖೀತವಾಗಿ ಬರೆದುಕೊಡುವಂತೆ ಸೂಚಿಸಲಾಯಿತು. ಶಾಸಕರು ತಮ್ಮ ಅಭಿಪ್ರಾಯ ನೀಡಿದ್ದು, ಇದನ್ನು ವೀಕ್ಷಕರು ಎಐಸಿಸಿಗೆ ತಲುಪಿಸಲಿದ್ದಾರೆ. ಸೋಮವಾರ ಖರ್ಗೆ ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸಿಎಂ ಹೆಸರನ್ನು ಪ್ರಕಟಿಸುವ ಸಾಧ್ಯತೆಗಳಿವೆ. ಬಹುತೇಕ ಸೋಮವಾರವೇ ನಿರ್ಣಯ ಹೊರಬೀಳಲಿದೆ.
ಎಐಸಿಸಿ ವೀಕ್ಷಕರನ್ನು ರಾಜ್ಯಕ್ಕೆ ಕಳುಹಿಸಲಾಗಿದೆ. ಅವರು ಪಕ್ಷದ ಶಾಸಕರ ಅಭಿಪ್ರಾಯವನ್ನು ಹೈಕಮಾಂಡ್‌ಗೆ ತಲುಪಿಸಲಿದ್ದಾರೆ. ಅನಂತರ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ.
– ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
MUST WATCH
ಹೊಸ ಸೇರ್ಪಡೆ
By Election: ಶಿಗ್ಗಾಂವಿ ಸವಿ ಬೊಮ್ಮಾಯಿ ಪುತ್ರನಿಗೋ, ಯಾಸಿರ್ ಪಠಾಣಗೋ?
King Cobra: “ಕಾಳಿಂಗ’ ಸರ್ಪಕ್ಕೆ ಕನ್ನಡದ್ದೇ ವೈಜ್ಞಾನಿಕ ಹೆಸರು!
Mysuru:’ಕರ್ನಾಟದಲ್ಲಿ “ಗ್ಯಾರಂಟಿ’ ಹೆಸರಲ್ಲಿ ಲೂಟಿ, ಮಹಾರಾಷ್ಟ್ರದಲ್ಲಿ ನೀವು ಘೋಷಿಸಬೇಡಿ’
By Election: ಚನ್ನಪಟ್ಟಣದಲ್ಲಿ ಎಚ್.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್ ಮೇಕೆದಾಟು ಜಟಾಪಟಿ
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.