ಯುಗಾದಿ ಸಂಭ್ರಮದಲ್ಲಿ ಮೈಮರೆಯದಿರಿ
Team Udayavani, Apr 12, 2021, 6:40 AM IST
ಮಂಗಳವಾರ ಚಾಂದ್ರಮಾನ ಯುಗಾದಿಯ ಸಂಭ್ರಮವಾದರೆ, ಬುಧವಾರದಂದು ಸೌರಮಾನ ಯುಗಾದಿ ಸಡಗರ. ದೇಶದ ಬಹುತೇಕ ಕಡೆ ಹಿಂದೂಗಳಿಗೆ ಯುಗಾದಿ ಹೊಸ ವರ್ಷದ ಆರಂಭದ ದಿನ. ದೇಶದ ಮೂಲೆಮೂಲೆಗಳಲ್ಲಿ ಈ ಹಬ್ಬವನ್ನು ಜನರು ತಮ್ಮದೇ ಆದ ಪ್ರಾದೇಶಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವೈಶಿಷ್ಟ್ಯಗಳೊಂದಿಗೆ ಆಚರಿಸುತ್ತಾರೆ. ಮನೆಮಂದಿ ಎಲ್ಲ ಒಂದೆಡೆ ಸೇರಿ ಸಂಭ್ರಮವನ್ನಾಚರಿಸುವುದು ಈ ಹಿಂದಿನಿಂದಲೂ ಬಂದ ವಾಡಿಕೆ. ಆದರೆ ಕೊರೊನಾ ಸೋಂಕು ಮತ್ತೆ ವ್ಯಾಪಿಸತೊಡಗಿದ್ದು ಯುಗಾದಿ ಸಂಭ್ರಮಕ್ಕೆ ಬ್ರೇಕ್ ಹಾಕಿದೆ.
ದೇಶದ 16 ರಾಜ್ಯಗಳಲ್ಲಿ ಸೋಂಕಿನ ಹರಡುವಿಕೆ ಪ್ರಮಾಣ ತೀವ್ರಗೊಂಡಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 11ಲಕ್ಷವನ್ನು ದಾಟಿದೆ. ಮಹಾರಾಷ್ಟ್ರ, ಕರ್ನಾಟಕ, ಉತ್ತರಪ್ರದೇಶ ಮತ್ತು ಕೇರಳ ರಾಜ್ಯಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಸಾಗಿದೆ. ಕಳೆದ ಬಾರಿಯಂತೆ ಈ ಬಾರಿ ಏಕಾಏಕಿ ಲಾಕ್‌ಡೌನ್‌ನಂತಹ ಕಠಿನ ನಿರ್ಧಾರವನ್ನು ಕೈಗೊಳ್ಳಲು ಸರಕಾರ ಮುಂದಾಗಿಲ್ಲವಾದರೂ ಪರಿಸ್ಥಿತಿ ಕೈಮೀರಿದಲ್ಲಿ ಲಾಕ್‌ಡೌನ್‌ನ ಮೊರೆ ಹೋಗಬೇಕಾದೀತು ಎಂಬ ಪರೋಕ್ಷ ಸುಳಿವನ್ನಂತೂ ನೀಡಿದೆ.
ಇದೇ ವೇಳೆ ಕೇಂದ್ರ ಸರಕಾರ ಏ.11ರಿಂದ 14ರವರೆಗೆ “ಲಸಿಕಾ ಉತ್ಸವ’ ಹಮ್ಮಿಕೊಂಡಿದೆ. ಈ ಅಭಿಯಾನದಡಿಯಲ್ಲಿ ಕೊರೊನಾ ಲಸಿಕೆಯನ್ನು ಪಡೆಯಲು ಜನರನ್ನು ಉತ್ತೇಜಿಸುವ ಜತೆಯಲ್ಲಿ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. “ಲಸಿಕಾ ಉತ್ಸವ’ವನ್ನು ಕೊರೊನಾ ವಿರುದ್ಧದ ದೇಶದ ಎರಡನೇ ದೊಡ್ಡ ಯುದ್ಧದ ಆರಂಭ ಎಂದು ಬಣ್ಣಿಸಿರುವ ಪ್ರಧಾನಿ ಮೋದಿ, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ನೋಂದಣಿ ಮತ್ತು ಅವರನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಪಡೆದುಕೊಳ್ಳಲು ನೆರವಾಗುವಂತೆ ದೇಶದ ಯುವಜನತೆ ಮತ್ತು ಸಂಘಸಂಸ್ಥೆಗಳಿಗೆ ಕರೆ ನೀಡಿದ್ದಾರೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕೈ ಸ್ವತ್ಛಗೊಳಿಸುವುದು ಮತ್ತಿತರ ಆರೋಗ್ಯ ರಕ್ಷಣೆಯ ಮೂಲ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆಯೂ ಮನವಿ ಮಾಡಿದ್ದಾರೆ.
ಗರಿಷ್ಠ ಸಂಖ್ಯೆಯ ಜನರಿಗೆ ಲಸಿಕೆ ನೀಡುವುದರ ಮೂಲಕ ಲಸಿಕೆ ವ್ಯರ್ಥವಾಗುವುದನ್ನು ತಡೆಯುವುದು ಲಸಿಕಾ ಉತ್ಸವದ ಇನ್ನೊಂದು ಪ್ರಮುಖ ಉದ್ದೇಶ. ಲಸಿಕೆ ನೀಡಿಕೆಯಲ್ಲಿ ಒಟ್ಟಾರೆಯಾಗಿ ಭಾರತ ವಿಶ್ವ ದಲ್ಲಿಯೇ ಅಗ್ರಸ್ಥಾನದಲ್ಲಿದೆಯಾದರೂ ನಿರೀಕ್ಷಿತ ಪ್ರಮಾಣದಲ್ಲಿ ಜನರು ಲಸಿಕೆಯನ್ನು ಪಡೆದುಕೊಳ್ಳಲು ಮುಂದೆ ಬಾರದೇ ಇರುವುದರಿಂದ ಲಸಿಕೆಗಳು ವ್ಯರ್ಥವಾಗುತ್ತಿವೆ. ಇದನ್ನು ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿದೆ. ಲಸಿಕೆ ಕೊರತೆಯ ಬಗೆಗೆ ಕೆಲವೊಂದು ರಾಜ್ಯಗಳು ವ್ಯಕ್ತಪಡಿಸಿರುವ ಆತಂಕಕ್ಕೂ ಕೇಂದ್ರ ಸರಕಾರ ಸ್ಪಂದಿಸಬೇಕಿದೆೆ.
ಇಂತಹ ಸಂದಿಗ್ಧ ಸನ್ನಿವೇಶದ ನಡುವೆ ಯುಗಾದಿ ಹಬ್ಬದ ಜತೆಜತೆಯಲ್ಲಿ ಸರಣಿ ರಜೆ ಬಂದಿದೆ. ಈ ಸಂದರ್ಭದಲ್ಲಿ ಜನರು ಅನವಶ್ಯಕ ಪ್ರವಾಸ, ಜನದಟ್ಟಣೆ ಪ್ರದೇಶಗಳಲ್ಲಿ ಸುತ್ತಾಟಗಳಿಂದ ದೂರವುಳಿಯಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಕೋವಿಡ್ ನಿಯಮಾವಳಿಗಳ ಪಾಲನೆಯತ್ತ ಹೆಚ್ಚಿನ ಲಕ್ಷ್ಯ ವಹಿಸಬೇಕು. ಯುಗಾದಿ ಹಬ್ಬದ ಸಂಭ್ರಮ, ಸಡಗರದಲ್ಲಿ ಮೈಮರೆಯದೆ ಸಾಧ್ಯವಾದಷ್ಟು ಮನೆಯಲ್ಲಿಯೇ ಇದ್ದು ಹಬ್ಬವನ್ನು ಆಚರಿಸುವುದು ಸದ್ಯದ ಸ್ಥಿತಿಯಲ್ಲಿ ಹೆಚ್ಚು ಸೂಕ್ತ. ಈ ವರ್ಷದ ಮಟ್ಟಿಗೆ “ಮನೆಮನಗಳಲ್ಲಿ ಯುಗಾದಿ’ ಹೆಚ್ಚು ಪರಿಣಾಮಕಾರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.