ಎಚ್ಚರ ತಪ್ಪದಿರಿ: ಪ್ರವಾಸದಲ್ಲಿ ಕೋವಿಡ್ ಮುಂಜಾಗ್ರತೆ ಅಗತ್ಯ
ಸದ್ಯದಲ್ಲೇ ಸರಕಾರದಿಂದ ಮಾರ್ಗಸೂಚಿ?
Team Udayavani, Dec 24, 2022, 7:10 AM IST
ಬೆಂಗಳೂರು: ವಾರಾಂತ್ಯ, ವರ್ಷಾಂತ್ಯ, ಹೊಸ ವರ್ಷಾಚರಣೆ ಸಂಭ್ರಮ, ಕ್ರಿಸ್ಮಸ್ ರಜೆ ಎಲ್ಲವೂ ಒಟ್ಟೊಟ್ಟಿಗೆ ಬಂದಿದ್ದು, ಜನರು ಪ್ರವಾಸ ಹೋಗುವಾಗ ಕೋವಿಡ್ ರೂಪಾಂತರಿ ವೈರಸ್ ಬಗ್ಗೆ ಎಚ್ಚರ ವಹಿಸಬೇಕು.
-ಇದು ರಾಜ್ಯದ ಪ್ರಮುಖ ತಜ್ಞರ ಅಭಿಪ್ರಾಯ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಈಗಾಗಲೇ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದ್ದು, ಕೊರೋನಾ ಬಿಎಫ್ 7 ತಳಿಯ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರವೂ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಅಲರ್ಟ್ ಘೋಷಿಸಲಾಗಿದ್ದು, ಪ್ರವಾಸಿ ತಾಣಗಳಲ್ಲಿ ಮಾಸ್ಕ್ ಧರಿಸಲು ಜಿಲ್ಲಾಡಳಿತ ಸೂಚನೆ ನೀಡಿದೆ. ರಾಜ್ಯ ಸರಕಾರ ಹೊಸ ವರ್ಷಾಚರಣೆ ಮತ್ತು ಕ್ರಿಸ್ಮಸ್ ಆಚರಣೆ ಸಂಬಂಧ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವಿಯ ಅವರು ಶುಕ್ರವಾರ ಕರ್ನಾಟಕ ಸಹಿತ ವಿವಿಧ ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಚರ್ಚಿಸಿದ್ದು, ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆ ನೀಡಿದರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರಾಜ್ಯ ಆರೋಗ್ಯ ಸಚಿವ ಡಾ| ಸುಧಾಕರ್, ಮಾಸ್ಕ್ ಸಹಿತ ಎಲ್ಲ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಜನರಿಗೆ ಮನವಿ ಮಾಡಿದರು. ಹೆಚ್ಚು ಜನ ಸೇರುವ ಕಾರ್ಯಕ್ರಮಗಳ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆಯನ್ನು ಸ್ವಲ್ಪ ಕಾಲ ಮುಂದೂಡುವುದು ಸೂಕ್ತ ಎಂದು ಸಲಹೆ ನೀಡಿದರು.
17-18 ಮಂದಿಗೆ
ಹರಡುವ ಸಾಮರ್ಥ್ಯ
ಕೊರೊನಾ ರೂಪಾಂತರ ತಳಿ ಬಿಎಫ್ 7 ಆರ್ ವ್ಯಾಲ್ಯೂ ಪ್ರಕಾರ, ಇದು ಒಬ್ಬನಿಂದ 17-18 ಜನಕ್ಕೆ ಹರಡುವ ಸಾಮರ್ಥ್ಯ ಹೊಂದಿದೆ. ಪರೀಕ್ಷೆ, ಕಣ್ಗಾವಲು ಹೆಚ್ಚಿಸಲು ಕೂಡ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ರಾಜ್ಯದಲ್ಲಿ 8ರಿಂದ 10 ಲಕ್ಷ ಲಸಿಕೆಗಳಿದ್ದು, ಜನರು ಸ್ವಯಂ ಪ್ರೇರಿತರಾಗಿ ಇದನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಹೊಸ ವರ್ಷ ಸಹಿತ ಹೆಚ್ಚು ಜನರು ಸೇರುವ ಕಡೆ ಸಮಾರಂಭ ಆಯೋಜಿಸುವುದನ್ನು ಸ್ವಲ್ಪ ದಿನಗಳ ಕಾಲ ಮುಂದೂಡುವುದು ಉತ್ತಮ. ಪಾಸಿಟಿವ್ ಕೇಸ್‌ಗಳನ್ನು ಕಡ್ಡಾಯವಾಗಿ ಜಿನೋಮಿಕ್ ಸೀಕ್ವೆನ್ಸ್‌ಗೆ ಕಳುಹಿಸಲಿದೆ. ಹಿರಿಯರಿಗೆ ಪ್ರಾಶಸ್ತ್ಯ ನೀಡಿ ಬೂಸ್ಟರ್ ಡೋಸ್ ನೀಡಲಾಗುತ್ತದೆ.
ಏರ್‌ಪೋರ್ಟ್‌ನಲ್ಲಿ ಶೇ.2 ಪ್ರಯಾಣಿಕರಿಗೆ ರ್‍ಯಾಂಡಮ್ ಟೆಸ್ಟ್ ಮಾಡಲಾಗುತ್ತದೆ. ಏರ್ ಸುವಿಧಾ ಮೂಲಕ 72 ಗಂಟೆಗಳ ಒಳಗಡೆ ಅಂತಾರಾಷ್ಟ್ರೀಯ ಪ್ರಯಾಣಿಕರು ಆರ್‌ಟಿಪಿಸಿಆರ್ ನೆಗೆಟಿವ್ ಸರ್ಟಿಫಿಕೆಟ್ ಅಪ್‌ಲೋಡ್ ಮಾಡಬೇಕು ಅನ್ನುವ ಸಲಹೆಯನ್ನು ಕೇಂದ್ರ ಸರಕಾರಕ್ಕೆ ನೀಡಲಾಗಿದೆ. ಮಾಸ್ಕ್ ಧರಿಸುವುದು ಸಹಿತ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಜನರು ಕೈಗೊಳ್ಳಬೇಕು ಎಂದು ಹೇಳಿದರು.
ನಾವೇನು ಮಾಡಬೇಕು
– ಪ್ರವಾಸಿ ತಾಣಗಳಲ್ಲಿ ಜನರಿಂದ ಅಂತರ ಕಾಯ್ದುಕೊಳ್ಳಿ.
– ಮಾಸ್ಕ್ ಧರಿಸಿ.
– ಬಿಸಿನೀರನ್ನೇ ಸೇವಿಸಿ.
– ಹೊರಗಿನ ಆಹಾರ ಸೇವಿಸುವಾಗ ಎಚ್ಚರ ಇರಲಿ.
– ಹಣ್ಣು ಹಂಪಲು ಹೆಚ್ಚು ಸೇವಿಸಿ.
– ಉಸಿರಾಟದ ಸಮಸ್ಯೆ ಇರುವವರು ಪ್ರವಾಸ ಮುಂದೂಡುವುದು ಸೂಕ್ತ.
– ಸಿಕ್ಕಸಿಕ್ಕ ವಸ್ತುಗಳನ್ನು ಮುಟ್ಟಬೇಡಿ
– ದಿನಕ್ಕೆ ಕನಿಷ್ಠ 8-10 ಬಾರಿ ಸ್ಯಾನಿಟೈಸರ್ ಬಳಸುವುದು ಮುಖ್ಯ
ಮಾಸ್ಕ್ ಧರಿಸಿ, ಜನಸಂದಣಿ ಬೇಡ
ರಾಜ್ಯಗಳ ಆರೋಗ್ಯ ಸಚಿವರ ಜತೆಗೆ ಕೇಂದ್ರ ಆರೋಗ್ಯ ಸಚಿವ ಮನುಸುಖ ಮಾಂಡವಿಯಾ ಸಭೆ ನಡೆಸಿದ ಬಳಿಕ ಹೊಸ ಮಾರ್ಗಸೂಚಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಹೆಚ್ಚು ಜನರಿರುವ ಸ್ಥಳಗಳಿಗೆ ತೆರಳುವಾಗ ಮಾಸ್ಕ್ ಧರಿಸಬೇಕು. ಜಿಲ್ಲಾವಾರು ಇನ್‌ಫುಯೆಂಜಾ ಮಾದರಿಯ ಪ್ರಕರಣಗಳ ಮೇಲೆ ನಿಗಾ ಇರಿಸಲು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರದ ಮೂಲಕ ಸೂಚಿಸಿದ್ದಾರೆ. ಚೀನ ಸಹಿತ ಕೊರೊನಾ ಹೆಚ್ಚಿರುವ ದೇಶಗಳಿಂದ ಆಗಮಿಸುವವರಿಗೆ 72 ಗಂಟೆ ಮುಂಚಿತವಾಗಿ ನಡೆಸಿದ ಆರ್‌ಟಿ-ಪಿಸಿಆರ್ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯಗೊಳಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಬಗ್ಗೆ ಮುಂದಿನ ವಾರ ಜಗತ್ತಿನಲ್ಲಿ ಸೋಂಕಿನ ಪರಿಸ್ಥಿತಿ ಅವಲೋಕಿಸಿ, ನಿರ್ಧಾರ ಕೈಗೊಳ್ಳಲು ಕೇಂದ್ರ ಸರಕಾರ ತೀರ್ಮಾನಿಸಿದೆ.
1. ಹೆಚ್ಚು ಜನ ಸೇರುವಲ್ಲಿ ಮಾಸ್ಕ್ ಧರಿಸಬೇಕು. ಕಾರ್ಯಕ್ರಮ ಆಯೋಜಕರು ಹೆಚ್ಚಿನ ಜನರು ಸೇರದಂತೆ ಕ್ರಮ.
2. ಪಾಸಿಟಿವ್ ಬಂದ ಸ್ಯಾಂಪಲ್‌ಗಳ ವಂಶವಾಹಿ ಪರೀಕ್ಷೆ ನಡೆಸಬೇಕು. ಇದರಿಂದ ಹೊಸ ರೂಪಾಂತರಿ ಪತ್ತೆಗೂ ಅನುಕೂಲ
3. ಜಿಲ್ಲೆಗಳಲ್ಲಿ ಸಮರ್ಪಕವಾಗಿ ಕೊರೊನಾ ಪರೀಕ್ಷಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳಿ. ಸಾರಿ, ಇನ್‌ಫುÉಯೆಂಜಾ ಪ್ರಕರಣಗಳ ಮೇಲೆ ನಿಗಾ.
4. ಆಸ್ಪತ್ರೆಗಳಲ್ಲಿ ಸೋಂಕು ಪೀಡಿತರಿಗೆ ಲಭ್ಯವಾಗಲಿರುವ ಹಾಸಿಗೆಯ ಬಗ್ಗೆ ಮಾಹಿತಿ ನೀಡಬೇಕು. ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವುದರ ಬಗ್ಗೆ ಆರೋಗ್ಯ ಕಾರ್ಯಕರ್ತರಿಗೆ ಮತ್ತೂಮ್ಮೆ ತರಬೇತಿ.
5. ಎರಡು ಡೋಸ್ ಲಸಿಕೆ ಹಾಕಿದವರಿಗೆ ಬೂಸ್ಟರ್ ಡೋಸ್ ನೀಡುವುದರ ಬಗ್ಗೆ ಆದ್ಯತೆ.
6. ಕೊರೊನಾ ನಿಯಮ ಪಾಲಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಕಾರ್ಯಕ್ರಮ ಆಯೋಜನೆ.
ನೇಸಲ್ ಲಸಿಕೆಗೆ ಅನುಮೋದನೆ
ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಶೋಧನೆ ನಡೆಸಿ ಅಭಿವೃದ್ಧಿಪಡಿಸಿದ ಇಂಟ್ರಾ- ನೇಸಲ್ “ಇನ್‌ಕೊವ್ಯಾಕ್’ಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ. 18 ವರ್ಷ ಮೇಲ್ಪಟ್ಟವ ರಿಗೆ ಬೂಸ್ಟರ್ ಡೋಸ್ ಆಗಿ ಅದನ್ನು ನೀಡಲಾಗುತ್ತದೆ. ಸದ್ಯ ಇದರ 2 ಹನಿಯನ್ನು ಖಾಸಗಿ ಆಸ್ಪತ್ರೆಗಳಲ್ಲಿ ಮೂಗಿನ ಮೂಲಕ ಹಾಕಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.