ಈಸ್ಟರ್ ಹಬ್ಬ: ಪ್ರೀತಿ, ನಿಸ್ವಾರ್ಥ ಸೇವೆಯ ಸಂಭ್ರಮ
Team Udayavani, Apr 4, 2021, 6:30 AM IST
ಪ್ರೀತಿ ಎಂಬ ಎರಡಕ್ಷರದ ಪದವು ಮನುಷ್ಯರಿಗೆ ಪ್ರಪಂಚವನ್ನು ಗೆಲ್ಲಬಲ್ಲಂತಹ ಅಸ್ತ್ರ. ಅದರಲ್ಲಿಯೂ ದೇವರ ಪ್ರೀತಿಯು ಅತ್ಯಂತ ಅಪೂರ್ವವಾದದ್ದು. Miracle of Love – ಪ್ರೀತಿಯ ಪವಾಡ ಎನ್ನುವ ಇಂಗ್ಲೀಷ್ ಚಲನಚಿತ್ರವು ದೇವರು ಪ್ರೀತಿಯ ಹೊಳೆಯನ್ನು ಹರಿಸಿದಾಗ ಸಿಗುವ ಆನಂದವನ್ನು ತಿಳಿಸುತ್ತದೆ. ಈ ಚಲನಚಿತ್ರದ ಕಥೆ ಹೀಗಿದೆ.
ಒಂದು ದಂಪತಿಗೆ ಇಬ್ಬರು ಮಕ್ಕಳು. ಸಣ್ಣ ಮಗ ಐದು ವರ್ಷದವನು. ಬಾಲ್ಯದಲ್ಲಿಯೇ ಆತನಿಗೆ Autism ಎಂಬ ರೋಗವಿತ್ತು. ಈ ರೋಗ ಮಕ್ಕಳಿಗೆ ಬರುವ ಅಪರೂಪದ ಕಾಯಿಲೆ. ಈ ಕಾಯಿಲೆಯಿಂದಾಗಿ ಆ ಮಗು ಒಂದು ಮರದ ದಿಮ್ಮಿಯಂತೆ ಬಿದ್ದುಕೊಂಡಿರುತ್ತಿದ್ದನು. ಯಾವುದೇ ರೀತಿಯ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಹೆತ್ತವರಿಗೆ ಇದೊಂದು ದೊಡ್ಡ ಚಿಂತೆಯಾಗಿಬಿಟ್ಟಿತು. ಮಗು ವನ್ನು ಅನೇಕ ತಜ್ಞ ವೈದ್ಯರಿಗೆ ತೋರಿಸಿದರೂ ಪರಿಹಾರ ಸಿಗಲೇ ಇಲ್ಲ. ಕೊನೆಯಲ್ಲಿ ವೈದ್ಯರೊಬ್ಬರು ಅವರಿಗೆ ಒಂದು ಸಲಹೆಯನ್ನು ನೀಡಿದರು. “ನೀವು ಆ ಮಗುವಿನ ಪ್ರಪಂಚದೊಳಗೆ ಪ್ರವೇಶ ಪಡೆಯಬೇಕು. ಆ ಮಗು ಮಾಡಿದಂತೆಯೇ ಅನುಕರಿಸಬೇಕು’ ಎಂದು.
ಅದರಂತೆ ಅವರು ತಮ್ಮ ಮನೆಯ ಒಂದು ಕೋಣೆಯನ್ನು ಮಗುವಿಗಾಗಿ ಮೀಸಲಾಗಿಟ್ಟರು. ದಿನ ಪೂರ್ತಿ ತಾಯಿ ಮಗುವಿನೊಡನೆ ಕುಳಿತು ಕೊಂಡು ಆ ಮಗು ಏನು ಮಾಡುತ್ತದೆಯೋ ಅದನ್ನೇ ಅನುಕರಣೆ ಮಾಡತೊಡಗಿದರು. ತಾಯಿಗೆ ಆಯಾಸವಾದಾಗ ಮಗುವಿನ ತಂದೆ ಮಗುವಿನ ಮುಂದೆ ಕುಳಿತು ಅನುಕರಣೆ ಮಾಡಲು ಪ್ರಾರಂಭಿಸಿ ದರು. ಅವರ ಹಿರಿಯ ಮಗಳು ಕೂಡಾ ತನ್ನ ತಮ್ಮನ ಆರೋಗ್ಯದ ವಿಷಯದಲ್ಲಿ ಸಹಕರಿಸಿದಳು. ಒಂದು ದಿನ ಮಗು ನಗಲು ಪ್ರಾರಂಭಿಸಿತು, ಹಲವಾರು ವರ್ಷಗಳ ಬಳಿಕ ಮಗು ಸ್ವಲ್ಪ ಸ್ವಲ್ಪವೇ ನಡೆಯಲಾರಂಭಿಸಿತು. ಪರಿಚಯ ಹಿಡಿಯಲು ಮತ್ತು ಪ್ರತಿಕ್ರಿಯೆ ತೋರಿಸಲು ಆರಂಭಿಸಿತು.
ಎರಡು ವರ್ಷಗಳ ಹಿಂದೆ ಈ ಮಗುವಿನ ಬಗ್ಗೆ ಎಳ್ಳಷ್ಟೂ ಭರವಸೆಯನ್ನು ಹೊಂದದ ತಂದೆ- ತಾಯಿಗೆ ಮಗುವಿನಲ್ಲಾದ ಬದಲಾವಣೆ ನೋಡಿ ನಿಜಕ್ಕೂ ಆಶ್ಚರ್ಯವಾಯಿತು. ಹೆತ್ತವರು ಮಗುವಿನ ಪ್ರಪಂಚದೊಳಗೆ ಪ್ರವೇಶಿಸಿದ್ದರಿಂದ ಹಾಗೂ ಮಗು ವಿನ ಮೇಲೆ ತೋರಿದ ಪ್ರೀತಿ, ತ್ಯಾಗದಿಂದಾಗಿ Miracle of Love – ಪ್ರೀತಿಯ ಪವಾಡ ನಡೆಯಿತು.
Miracle of Love ಚಲನಚಿತ್ರದಲ್ಲಿ Autism ರೋಗದ ಮಗುವನ್ನು ಆ ರೋಗದಿಂದ ಬಿಡುಗಡೆಗೊಳಿಸಲು ಆತನ ತಂದೆ ತಾಯಿ ಮಗುವಿನ ಪ್ರಪಂಚದೊಳಗೆ ಪ್ರವೇಶಿಸುತ್ತಾರೆ. ಅದೇ ರೀತಿ ದೇವರ ಸುತ ಮನುಷ್ಯರನ್ನು ಪಾಪಗಳಿಂದ ಮುಕ್ತಗೊಳಿಸಲು ಮನುಷ್ಯನೊಳಗೆ ಪ್ರವೇಶಿಸಿದರು. ಪಾಪಗಳಿಂದ ಮನುಷ್ಯ ತನ್ನನ್ನೇ ದೇವರಿಂದ ಬೇರ್ಪಡಿಸಿದ್ದ. ಸೇತುವೆ ಕಟ್ಟುವ ಬದಲು ಗೋಡೆ ಕಟ್ಟಿ ತನ್ನದೇ ಎನ್ನುವ ಸ್ವಾರ್ಥದ, ದ್ವೇಷದ, ಸೇಡಿನ ಮತ್ತು ಎಲ್ಲ ತರಹದ ಕೆಟ್ಟತನದ ಪ್ರಪಂಚವನ್ನು ಸೃಷ್ಟಿಸಿದ್ದನು. ಯೇಸು ಈ ಪಾಪಿಗಳ ಪ್ರಪಂಚವನ್ನು ಪ್ರವೇಶಿಸಿದರು. ಪಾಪ ಒಂದನ್ನು ಬಿಟ್ಟು ನಮ್ಮಂತೆಯೇ ಜೀವಿಸಿದರು. ಪಾಪಗಳ ಬೇಡಿಯನ್ನು ತುಂಡರಿಸಿ, ಎಲ್ಲ ಗೋಡೆಗಳನ್ನು ಧ್ವಂಸಗೊಳಿಸಿ, ನಮಗೆ ಹೊಸ ಜೀವನವನ್ನು ಅನುಗ್ರಹಿಸಲು, ನಮ್ಮನ್ನು ಪಾಪಗಳಿಂದ ಮುಕ್ತಗೊಳಿಸಲು ಮನುಷ್ಯನಾಗಿ ಧರೆಗಿಳಿದು ಬಂದರು.
ಮಾನವನಾಗಿ ಧರೆಗಿಳಿದು ಬಂದ ಯೇಸುವು ಮನುಷ್ಯನಾಗಿಯೂ, ಪಾಪಕಾರ್ಯಗಳಲ್ಲಿ ಭಾಗಿ ಯಾಗದೆ ಬದುಕುವುದು ಸಾಧ್ಯ ಎಂದು ತೋರಿಸಿ ದರು. ಮನುಷ್ಯ ಸಂಬಂಧವು ಪ್ರೀತಿ ಹಾಗೂ ಕ್ಷಮೆಯ ತಳಹದಿಯಲ್ಲಿ ಕಟ್ಟಬೇಕಾದ ಬೃಹತ್ ಸೌಧ ಎಂದು ಪ್ರತಿಪಾದಿಸಿದರು.
ಪ್ರಭು ಯೇಸು ಕ್ರಿಸ್ತರು ತನ್ನ ಇಹಲೋಕದ ಜೀವನದುದ್ದಕ್ಕೂ ವ್ಯಕ್ತಪಡಿಸಿದ ಆಸೆ ಒಂದೇ. ಅದು ಮಾನವರನ್ನು ಪಾಪದಿಂದ ಬಿಡಿಸಿ, ನಿತ್ಯ ಜೀವನದೆಡೆಗೆ ಅವರನ್ನು ಕರೆದೊಯ್ಯುವುದು. ಮಾನವರಲ್ಲಿದ್ದಂತಹ ಅಮೂಲ್ಯ ಪ್ರೀತಿಯೇ ಇದಕ್ಕೆ ಕಾರಣ. ಇದನ್ನು ಕಾರ್ಯಗತಗೊಳಿಸುವಲ್ಲಿ ತಂದೆಯ ಚಿತ್ತವನ್ನು ನೆರವೇರಿಸುವಲ್ಲಿ ಈ ಲೋಕದಲ್ಲಿ ಅವರಿಗೆ ಎದುರಾದ ಸವಾಲುಗಳು ಕಲ್ಪನಾತೀತ.
ಶಿಲುಬೆಗೇರಿಸಲ್ಪಟ್ಟ ಯೇಸುದೇವ, ಮೂರನೇ ದಿನದಲ್ಲಿ ಸಮಾಧಿಯಿಂದ ಪುನರುತ್ಥಾನಗೊಂಡ ಸಂಭ್ರಮವನ್ನು ಆಚರಿಸುವ ಹಬ್ಬವೇ ಈಸ್ಟರ್.
ಯೇಸು ಭೂಲೋಕದಲ್ಲಿ ಅತ್ಯಂತ ಕಠೊರವಾದ ಸಾವನ್ನಪ್ಪಿದರು. ಅವರನ್ನು ಸಮಾಧಿ ಮಾಡಿದರು. ಆದರೆ ಅವರು ನಿತ್ಯಕ್ಕೆ ಸಾಯಬೇಕೆಂದು ದೇವರಾದ ತಂದೆಯ ಚಿತ್ತವಾಗಿರಲಿಲ್ಲ. ಆದ್ದರಿಂದ ದೇವರಾದ ತಂದೆಯು ತನ್ನ ಮಹಿಮಾಭರಿತ ಶಕ್ತಿ ಮತ್ತು ಅಧಿಕಾರದಿಂದ ಯೇಸುವನ್ನು ಮರಣದಿಂದ ಎಬ್ಬಿಸಿದರು. ಮರಣದ ಮೇಲೆ ಯೇಸು ಜಯ ಸಾರುವಂತೆ ಮಾಡಿದರು. ತಂದೆಯ ಅತೀ ಅಮೂಲ್ಯವಾದ, ಅಪರಿಮಿತವಾದ ಪ್ರೀತಿಯನ್ನು ಪುತ್ರನ ಮೇಲೆ ಸುರಿಸಿ ಅವರ ಪ್ರೀತಿಯ ಮಧ್ಯೆ ಯಾವ ಅಡೆತಡೆ ಇಲ್ಲವೆಂದು ಜಗಕ್ಕೆ ತೋರಿಸಿದರು.
ಈಸ್ಟರ್ ಹಬ್ಬವು ನಾವು ಹೇಗೆ ಪರಿಶುದ್ಧತೆ ಮತ್ತು ಪಾವಿತ್ರ್ಯ ಕಾಪಾಡಿಕೊಳ್ಳಬಹುದು ಎಂಬುದರ ಕಡೆಗೆ ನಮ್ಮ ಗಮನವನ್ನು ಸೆಳೆಯುತ್ತದೆ. ಇದಕ್ಕಾಗಿ ಕ್ರಿಸ್ತರು ಇಂದು ಎರಡು ಪ್ರಮುಖ ಮಾರ್ಗಗಳನ್ನು ತಿಳಿಯಪಡಿಸುತ್ತಾರೆ. ಮೊದಲನೆಯದು ಅಪಕಾರಕ್ಕೆ ಉಪಕಾರ, ಎರಡನೆಯದು ಶತ್ರು ಪ್ರೇಮ. ಒಂದು ವೇಳೆ ನಾವು ನಮ್ಮ ಸರ್ವೇಶ್ವರನಂತೆ ಪರಿಶುದ್ಧರಾಗಿರಲು, ಶ್ರೇಷ್ಟರಾಗಿರಲು ಬಯಸುವು ದಾದರೆ ಮೊದಲು ನಮ್ಮಲ್ಲಿ ಸೇವಾಮನೋಭವವನ್ನು ಬೆಳೆಸಿಕೊಳ್ಳಬೇಕು. ಇದಕ್ಕಾಗಿಯೇ ದೇವಪುತ್ರ ದೀನಮಾನವನಾಗಿ ಈ ಧರೆಗೆ ಬಂದು ನಮ್ಮ ಮಧ್ಯೆ ಬಾಳಿ, ನಿಸ್ವಾರ್ಥ ಸೇವೆ ಸಲ್ಲಿಸಿ ಸ್ನೇಹಕ್ಕಾಗಿ ಸಾವನ್ನಪ್ಪಿ ಪುನರುತ್ಥಾನರಾದರು. ಪರಿಶುದ್ಧತೆಯ ಎರಡನೆಯ ಮಾರ್ಗ ಶತ್ರುಪ್ರೇಮ. ಯಾವುದೇ ಕಾರಣಕ್ಕೂ ದ್ವೇಷವು ನಮ್ಮ ಜೀವನವನ್ನು ನಡೆಸುವಂತಾಗಲು ಬಿಡಬಾರದು. ಪ್ರೀತಿ ಜೀವನದ ಮೂಲಮಂತ್ರವಾಗಬೇಕು.
ಪ್ರೀತಿಯು ಜೀವನದ ತಳಹದಿ ಎಂದು ಜಗತ್ತಿಗೆ ಸಾರಿದ ಯೇಸುಕ್ರಿಸ್ತನ ಪುನರುತ್ಥಾನವನ್ನು ಸಂಭ್ರಮದಿಂದ ಆಚರಿಸುವ ಈ ಶುಭಸಂದರ್ಭದಲ್ಲಿ “ನಾನೇ ಜೀವ ನಾನೇ ಪುನರುತ್ಥಾನ’ ಎಂಬ ಯೇಸುವಿನ ಮಾತು ನಮ್ಮ ಜೀವನದಲ್ಲಿ ಪ್ರೀತಿ ತುಂಬುವ, ಭರವಸೆ ಮೂಡಿಸುವ ಮಾತುಗಳಾಗಿ ಮಾರ್ದನಿಸಬೇಕು.
– ಫಾ| ವಿಜಯ್ ಲೋಬೋ, ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ
Kannada; ಅನಿವಾಸಿ ಕನ್ನಡಿಗರ ಮಕ್ಕಳಲ್ಲೂ ಕನ್ನಡ ಚಿಗುರಲಿ
Kanchi swamiji; ದೇವಸ್ಥಾನಗಳ ಭೂಮಿ ದೇವಸ್ಥಾನಗಳಿಗೇ ಇರಲಿ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.