ಕಡೇ ದಿನದ ಕಸರತ್ತು : ಎ.6ರ ಹಕ್ಕು ಚಲಾವಣೆಗೆ ಬಿರುಸಿನ ಪ್ರಚಾರ ಮುಕ್ತಾಯ
Team Udayavani, Apr 5, 2021, 6:10 AM IST
ತಿರುವನಂತಪುರ/ಚೆನ್ನೈ: ದಕ್ಷಿಣ ಚುನಾವಣ ರಾಜ್ಯಗಳಾದ ಕೇರಳ, ತಮಿಳುನಾಡಿನಲ್ಲಿ ಅಲ್ಲಿಯ ತನಕ ಪ್ರಾದೇಶಿಕ ಮುಖಂಡರದ್ದೇ ಹೋರಾಟ… ಕೊನೆಯ ವಾರದಲ್ಲಿ ಹೊಸದಿಲ್ಲಿಯ ನಾಯಕರ ಪ್ರವೇಶದಿಂದಾಗಿ “ಕಡೇ ಕಸರತ್ತು’ಗಳು ಅಖಾಡಗಳಲ್ಲಿ ವಿಭಿನ್ನ ಅಲೆಗಳನ್ನು ಎಬ್ಬಿಸಿವೆ.
ಕೇರಳದಲ್ಲಿ ಕ್ರಿಶ್ಚಿಯನ್ ಮತಗಳನ್ನು ತೆಕ್ಕೆಯಲ್ಲಿಟ್ಟುಕೊಂಡು ಪುನಃ ಅಧಿಕಾರಕ್ಕೇರುವ ಕನಸಿನಲ್ಲಿದ್ದ ಎಲ್‌ಡಿಎಫ್ ಮುಖಂಡ, ಸಿಎಂ ಪಿಣರಾಯಿ ವಿಜಯನ್ ಮೇಲೆ ಪ್ರಧಾನಿ ಮೋದಿ ಕಟ್ಟಕಡೆಯದಾಗಿ ಪ್ರಯೋಗಿಸಿದ ಅಸ್ತ್ರ “ಜುಡಾಸ್’! “ತುಂಡು ಬೆಳ್ಳಿಗಾಗಿ ಜುಡಾಸ್, ಕ್ರಿಸ್ತನಿಗೆ ಮೋಸ ಮಾಡಿದಂತೆ; ತುಂಡು ಚಿನ್ನಕ್ಕಾಗಿ ಪಿಣರಾಯಿ ಕೇರಳಕ್ಕೆ ಮೋಸ ಮಾಡಿದರು’ ಎಂಬ ಆರೋಪಕ್ಕೆ, ಪಿಣರಾಯಿ ಕಡೇ ದಿನದ ರ್ಯಾಲಿಗಳಲ್ಲೂ ಸ್ಪಷ್ಟನೆ ನೀಡುತ್ತಲೇ ಬಂದಿದ್ದಾರೆ.
ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ರವಿವಾರದಂದೂ ಪಿಣರಾಯಿ, “ದೇಶದಲ್ಲಿ ಜುಡಾಸ್ ಪಾತ್ರ ಯಾರು ನಿರ್ವಹಿಸುತ್ತಿದ್ದಾರೆಂದು ಜನರಿಗೆ ಚೆನ್ನಾಗಿ ಗೊತ್ತು’ ಎಂದು ಪ್ರಧಾನಿಗೆ ತಿರುಗೇಟು ನೀಡಿದ್ದಾರೆ. ಇದರ ನಡುವೆ, ಕಾಂಗ್ರೆಸ್ ಕೂಡ ಕ್ರಿಶ್ಚಿಯನ್ನರ ಮತಗಳತ್ತಲೇ ಕಣ್ಣು ಹಾಯಿಸಿದೆ. ವಯನಾಡಿನ ಕಲ್ಪೆಟ್ಟಾದ “ಈಸ್ಟರ್ ಲಂಚ್’ನಲ್ಲಿ ಭೋಜನ ಸವಿದ ರಾಹುಲ್ ಗಾಂಧಿ, ಹೊಸದಿಲ್ಲಿಯಲ್ಲಿ ಐಸೋಲೇಶನ್‌ನಲ್ಲಿರುವ ಸೋದರಿ ಪ್ರಿಯಾಂಕಾ ವಾದ್ರಾ ಅವರಿಗೆ ವೀಡಿಯೋ ಕಾಲ್ ಮೂಲಕ ಲಂಚ್‌ಗೆ ಸಾಕ್ಷಿ ಆಗುವಂತೆ ಮಾಡಿ ಗಮನ ಸೆಳೆದರು.
ಅಲ್ಲದೆ ರಾಹುಲ್ ರವಿವಾರ ವಯನಾಡಿನ ತಿರುನೆಲ್ಲಿ ದೇಗುಲ ಸೇರಿದಂತೆ ಪ್ರಮುಖ ದೇಗುಲಗಳಿಗೆ ತೆರಳಿ ಭಕ್ತಿ ಮೆರೆದ ದೃಶ್ಯವೂ ಕಂಡು ಬಂತು.
ಕ್ಯಾಪ್ಟನ್ v/s ನೋ ಕ್ಯಾಪ್ಟನ್: ಕೇರಳ ಸಿಪಿಎಂ ನಲ್ಲಿ “ಯಾರು ಕ್ಯಾಪ್ಟನ್?’ ಎನ್ನುವ ಪ್ರಶ್ನೆ ಇನ್ನೂ ಜೀವಂತ. “ಪಿಣರಾಯಿ ನಮ್ಮ ಕ್ಯಾಪ್ಟನ್’ ಅಂತ ಅವರ ಅಭಿಮಾನಿಗಳು ಹೇಳುತ್ತಿದ್ದರೂ, ಇನ್ನೊಂದು ಬಣ ಮಾಜಿ ಸಿಎಂ ಅಚ್ಯುತಾನಂದನ್ ಮೇಲೆ ಒಲವು ಇಟ್ಟುಕೊಂಡಿದೆ. ಅಚ್ಯುತಾನಂದನ್ ಅವರಿಗೆ ಸಿಎಂ ಪಟ್ಟ ಕಟ್ಟುವ ರಹಸ್ಯ ಯೋಜನೆ ಇಟ್ಟುಕೊಂಡಿದೆ. ಇವೆಲ್ಲದರ ನಡುವೆ, ಸಿಪಿಎಂ ಕಾರ್ಯದರ್ಶಿ “ಪಕ್ಷದಲ್ಲಿ ಎಲ್ಲ ಕಾಮ್ರೆಡ್‌ಗಳೂ ಕ್ಯಾಪ್ಟನ್‌ಗಳೇ’ ಅಂದಿದ್ದಾರೆ.
ಆಡಳಿತ ಪಕ್ಷದ ಕ್ಯಾಪ್ಟನ್ ಜಗಳವನ್ನು ಸೂಕ್ಷ್ಮವಾಗಿ ನೋಡುತ್ತಿರುವ ಕಾಂಗ್ರೆಸ್ ರವಿವಾರ ಸಿಪಿಎಂನ ಕಾಲೆಳೆದಿದೆ. ಪುತುಪಳ್ಳಿಯಲ್ಲಿ ಮಾಜಿ ಸಿಎಂ ಊಮ್ಮನ್ ಚಾಂಡಿ, “ಕೇರಳದ ಕಾಂಗ್ರೆಸ್‌ನ ನಾಯಕತ್ವ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ಅಧಿಕಾರಕ್ಕೂ ಮುನ್ನ ಸಿಪಿಎಂನಂತೆ ಕ್ಯಾಪ್ಟನ್ ಆಯ್ಕೆ ಮಾಡುವ ಚಾಳಿ ಕಾಂಗ್ರೆಸ್‌ನಲ್ಲಿಲ್ಲ. ಯುಡಿಎಫ್ನಲ್ಲಿ ಏನಿದ್ದರೂ ಜಂಟಿ ನಾಯಕತ್ವವೇ ಪ್ರಧಾನ’ ಎಂದು ಟಾಂಗ್ ಕೊಟ್ಟಿದ್ದಾರೆ.
ತ.ನಾಡಿನಲ್ಲೂ ಸಂಚಲನ: ಮಧುರೈನಲ್ಲಿ ಪ್ರಧಾನಿ ಮೋದಿ, “ಜಲ್ಲಿಕಟ್ಟು ನಿಷೇಧಕ್ಕೆ ಡಿಎಂಕೆ- ಕಾಂಗ್ರೆಸ್ ನೇರ ಹೊಣೆ’ ಎಂದೇ ಆರೋಪಿಸಿದ್ದರು. ತಮಿಳು ಸಂಸ್ಕೃತಿಯ ವಿರುದ್ಧದ ಈ ಆರೋಪವನ್ನು ಕೊಡವಿಕೊಳ್ಳಲು ಎಂ.ಕೆ. ಸ್ಟಾಲಿನ್ ರವಿವಾರವೂ ಯತ್ನಿಸಿದ್ದು ಕಂಡುಬಂತು. ಚೆನ್ನೈನ ರ್ಯಾಲಿಯಲ್ಲಿ ಅವರು, “ಜಲ್ಲಿಕಟ್ಟು ನಿಷೇಧದ ನಿಜವಾದ ಹೀರೋ ಎಐಎಡಿಎಂಕೆಯ ಒ. ಪನ್ನೀರ್ ಸೆಲ್ವಂ’ ಅಂತಲೇ ಪುನಃ ಆರೋಪಿಸಿದ್ದಾರೆ.
ಅಲ್ಲದೆ ಪುತ್ರಿ ಸೆಂಥಮರಾಯಿ ಅವರ ನಿವಾಸದ ಮೇಲಿನ ಐಟಿ ದಾಳಿಗೆ ಸ್ಟಾಲಿನ್, ಉದಯ್ ನಿಧಿ ಸ್ಟಾಲಿನ್ ಕೇಂದ್ರ ಸರಕಾರದ ವಿರುದ್ಧ ಕಡೇ ಕ್ಷಣದವರೆಗೂ ಸಿಡಿಮಿಡಿಗೊಳ್ಳುತ್ತಲೇ ಇದ್ದರು.
ತ.ನಾಡಿನಲ್ಲಿ ಪಕ್ಷೇತರರ ತಲೆನೋವು!
ತಮಿಳುನಾಡಿನಲ್ಲಿ ಶೇ.17ರ ಸರಾಸರಿ ಪಕ್ಷೇತರರ ಅಭ್ಯರ್ಥಿಗಳು ಕಣದಲ್ಲಿದ್ದು, ಈ ಬಾರಿಯೂ ಪ್ರಮುಖ ಪಕ್ಷಗಳಿಗೆ ತಲೆನೋವಾಗಿ ಕಾಡುತ್ತಿದ್ದಾರೆ. 2016ರಲ್ಲಿ ಎಐಎಡಿಎಂಕೆ ಗೆದ್ದ 134 ಸ್ಥಾನಗಳಲ್ಲಿ 32 ಸೀಟುಗಳು ಕೂದಲೆಳೆ ಅಂತರದಿಂದ ಗೆಲ್ಲಲ್ಪಟ್ಟಿದ್ದವು. ಎಐಎಡಿಎಂಕೆಗೆ ಅಂತಿಮ ಹಂತದಲ್ಲಿ ಈ ಪರಿ ಎದೆ ಢವಗುಟ್ಟಲು ಕಾರಣವಾಗಿದ್ದೇ ಪಕ್ಷೇತರರ ಅಭ್ಯರ್ಥಿಗಳು. ಹಲವು ಅಖಾಡಗಳಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಯ ಹೆಸರಿಗೆ ಸಮೀಪದ ಹೆಸರು ಹೋಲುವ ಅಭ್ಯರ್ಥಿಗಳೇ ಮಂಡೆ ಬಿಸಿ ಹೆಚ್ಚಿಸಿದ್ದಾರೆ!
ಇಲ್ಲಿ ಮಹಿಳೆಯರದ್ದೇ ಫೈಟ್!
ಪಂಚರಾಜ್ಯಗಳ ಪೈಕಿ ಕೇರಳದ ವೈಕೊಂ ಕ್ಷೇತ್ರದ ವಿಶೇಷತೆಯೇ ಬೇರೆ. ಇಲ್ಲಿ ಮೂವರೂ ಕಣದಲ್ಲಿರುವುದು ಮಹಿಳಾ ಅಭ್ಯರ್ಥಿಗಳೇ! ಸಿಪಿಎಂ ಇಲ್ಲಿ “ಸಿಟ್ಟಿಂಗ್ ಎಂಎಲ್‌ಎ’ ಸಿ.ಕೆ. ಆಶಾ ಅವರನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ ಪಿ.ಆರ್. ಸೋನಾ ಮತ್ತು ಎನ್‌ಡಿಎ ಮೈತ್ರಿ ಕೂಟದ ಬಿಡಿಜಿಎಸ್‌ನಿಂದ ಅಜಿತಾ ಸಬು ಸ್ಪರ್ಧೆಗಿಳಿದಿದ್ದಾರೆ.
ತೃತೀಯ ಲಿಂಗಿ ಅಭ್ಯರ್ಥಿ ಕಣ ದಿಂದ ಹಿಂದ ಕ್ಕೆ!
ಕೇರಳದಲ್ಲಿ ಚುನಾವಣೆಗೆ ನಿಂತಿದ್ದ ಮೊಟ್ಟ ಮೊದಲ ತೃತೀಯ ಸಲಿಂಗಿ ಅಭ್ಯರ್ಥಿ, ಅನಣ್ಣಯ್ಯ ಕುಮಾರಿ ಅಲೆಕ್ಸ್! ಡಿಜೆ ಎಸ್ಪಿ ಪಕ್ಷದಿಂದ ಸ್ಪರ್ಧಿಸಿದ್ದ ಈಕೆ ಈಗ ಕಣದಿಂದ ಹಿಂದೆ ಸರಿಯುವುದಾಗಿ ಹೇಳಿಕೊಂಡಿದ್ದಾರೆ. ಸ್ವಪಕ್ಷೀಯರಿಂದ ಅಪಮಾನ, ಲಿಂಗತಾರತಮ್ಯ ಮತ್ತು ಲೈಂಗಿಕ ಕಿರುಕುಳ ಅನುಭವಿಸಿದ ಕಾರಣಕ್ಕಾಗಿ ಈ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.