Agriculture: ಹಿಂಗಾರು ಕೃಷಿಗೆ ಫೈಂಜಾಲ್ ಆತಂಕ: ದ್ವಿದಳ ಧಾನ್ಯ,ತರಕಾರಿ ಕೃಷಿಗೆ ಭಾರೀ ಕಂಟಕ
Team Udayavani, Dec 6, 2024, 6:55 AM IST
ಕೋಟ: ಕರಾವಳಿಯ ರೈತರು ಹಿಂಗಾರು ಋತುವಿನ ಭತ್ತ, ದ್ವಿದಳ ಧಾನ್ಯ, ತರಕಾರಿ ಕೃಷಿ ಬೆಳೆಯಲು ಸಿದ್ಧತೆ ನಡೆಸುತ್ತಿದ್ದು, ಕೆಲವು ಕಡೆ ಬೀಜ ನಾಟಿ ಕೂಡ ನಡೆಸಿದ್ದರು. ಆದರೆ ಫೈಂಜಾಲ್ ಚಂಡಮಾರುತದಿಂದಾಗಿ ಬಂದಿರುವ ಅಕಾಲಿಕ ಮಳೆಯು ಹಿಂಗಾರು ಕೃಷಿಗೆ ಸಮಸ್ಯೆ ತಂದೊಡ್ಡಿದ್ದು, ಬಿತ್ತನೆ ಹಾಗೂ ಬೆಳೆಯ ಪೋಷಣೆಗೆ ಆತಂಕ ಎದುರಾಗಿದೆ.
ದ.ಕ. ಜಿಲ್ಲೆಯಲ್ಲಿ 500 ಎಕ್ರೆ ಪ್ರದೇಶದಲ್ಲಿ ಹಾಗೂ ಉಡುಪಿ ಜಿಲ್ಲೆಯಲ್ಲಿ 3,810 ಎಕ್ರೆ ಪ್ರದೇಶದಲ್ಲಿ ಹಿಂಗಾರು ಭತ್ತದ ಬೇಸಾಯದ ಗುರಿ ಹೊಂದಲಾಗಿದೆ.
ಪ್ರಸ್ತುತ ಮಳೆಯಾಗುತ್ತಿರುವುದರಿಂದ ನಾಟಿ ಚಟುವಟಿಕೆಗೆ ಅನುಕೂಲವಾದರೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದರೆ ಬಿತ್ತಿದ ಬೀಜ, ನೇಜಿ ಹಾಳಾಗುವ ಆತಂಕವಿದೆ.
ಶೇಂಗಾಕ್ಕೂ ಆತಂಕ
ಉಡುಪಿ ಜಿಲ್ಲೆಯ ಕೋಟ ಹೋಬಳಿ ಹಾಗೂ ಬೈಂದೂರು, ಕುಂದಾಪುರ ತಾಲೂಕಿನಲ್ಲಿ ಸುಮಾರು 4 ಸಾವಿರಕ್ಕೂ ಹೆಚ್ಚು ಶೇಂಗಾ ಬೆಳೆಗಾರರಿದ್ದು, ಅಂದಾಜು 1,045 ಎಕ್ರೆ ಪ್ರದೇಶದಲ್ಲಿ ಶೇಂಗಾ ಬೆಳೆಯಲಾಗುತ್ತದೆ. ಕರಾವಳಿಯಲ್ಲಿ ಸಂಪೂರ್ಣ ಒಣಭೂಮಿಯಲ್ಲಿ ಶೇಂಗಾ ಬೆಳೆಯುವುದರಿಂದ ನವೆಂಬರ್ ಆರಂಭದಲ್ಲಿ ಭೂಮಿಯನ್ನು ಹದಮಾಡಿ ಡಿಸೆಂಬರ್‌ನಲ್ಲಿ ಬೀಜ ಬಿತ್ತನೆ ನಡೆಸಲಾಗುತ್ತದೆ. ಈಗ ಬಿತ್ತನೆಗಾಗಿ ಬೀಜದ ದಾಸ್ತಾನು ಹಾಗೂ ಗದ್ದೆ ಹದಮಾಡುವ ಪ್ರಕ್ರಿಯೆಯಲ್ಲಿ ರೈತರು ತೊಡಗಿದ್ದಾರೆ. ಆದರೆ ಆರಂಭದಲ್ಲೇ ಮಳೆಯಾದ್ದರಿಂದ ಡಿಸೆಂಬರ್ ಕೊನೆ ವಾರದ ತನಕ ಬಿತ್ತನೆ ನಡೆಸಲು ಅಸಾಧ್ಯ. ವಿಳಂಬವಾಗುವುದರಿಂದ ಇಳುವರಿಯೂ ಕುಸಿತವಾಗುತ್ತದೆ.
ಕಲ್ಲಂಗಡಿಗೂ ಕಂಟಕ
ದ.ಕ. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಅಪರೂಪ. ಆದರೆ ಉಡುಪಿ ಜಿಲ್ಲೆಯ ಕೋಟ ಹೋಬಳಿ, ಉಡುಪಿಯ ಮಟ್ಟು, ಹಿರಿಯಡಕ, ಬೈಂದೂರು ತಾಲೂಕಿನ ಹಲವು ಭಾಗಗಳಲ್ಲಿ ಕಲ್ಲಂಗಡಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ಇಲಾಖೆಯ ಮಾಹಿತಿ ಪ್ರಕಾರ ಈ ಬಾರಿ ಸುಮಾರು 220 ಎಕ್ರೆ ಪ್ರದೇಶದಲ್ಲಿ ಬಿತ್ತನೆಗೆ ಸಿದ್ಧತೆ ನಡೆದಿದ್ದು, ಇಲ್ಲೆಲ್ಲ ಮಳೆಯಿಂದಾಗಿ ಸಮಸ್ಯೆ ಎದುರಾಗಿದೆ. ಬಿತ್ತನೆ ಸಂದರ್ಭದಲ್ಲಿ ಮಳೆ ಬಂದರೆ ನಾಟಿಗೆ ಸಮಸ್ಯೆಯಾಗುತ್ತದೆ ಮತ್ತು ಬೀಜ ಮೊಳಕೆಯೊಡೆದು ಬೇರು ಬೆಳವಣಿಗೆ ಸರಿಯಾಗುವುದಿಲ್ಲ. ಗಿಡ ಚಿಗುರಿದ ಬಳಿಕವೂ ಮಳೆ ಹೆಚ್ಚಾದರೆ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಬಿತ್ತನೆಯ ಬಳಿಕ ಮಳೆ ಬಂದರೆ ಗದ್ದೆಯಲ್ಲಿ ಕಳೆ ಜಾಸ್ತಿಯಾಗುತ್ತದೆ. ಕಳೆದ ವರ್ಷ ಬಿತ್ತನೆಯ ಮೊದಲು ಹಾಗೂ ಅನಂತರ ಮಳೆಯಾದ್ದರಿಂದ ಬೆಳೆಗಾರರು ನಷ್ಟ ಅನುಭವಿಸುವಂತಾಗಿತ್ತು. ಈ ಬಾರಿಯೂ ಅದೇ ಆತಂಕ ಎದುರಾಗಿದೆ. ಕೋಟದ ಗಿಳಿಯಾರು, ಹರ್ತಟ್ಟು ಭಾಗದಲ್ಲಿ ಸುಮಾರು 5 ಎಕ್ರೆ ಕಲ್ಲಂಗಡಿ ನಾಟಿ ಮಾಡಿದ್ದು, ಮಳೆಯಿಂದ ಹಾನಿಯಾಗಿದೆ.
ದ್ವಿದಳ ಧಾನ್ಯಕ್ಕೂ ಹಿನ್ನಡೆ
ಹಿಂಗಾರು ಋತುವಿನಲ್ಲಿ ಭತ್ತ, ತೋಟಗಾರಿಕೆ ಬೆಳೆಗಳ ಜತೆಗೆ ಉದ್ದು, ಹುರುಳಿ, ಹೆಸರು ಮೊದಲಾದ ದ್ವಿದಳ ಧಾನ್ಯಗಳ ಬೇಸಾಯವನ್ನು ಮಾಡಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ದ್ವಿದಳ ಧಾನ್ಯ ಬೇಸಾಯ ಅಪರೂಪವಾಗಿದ್ದು, 50-60 ಎಕ್ರೆಗಳಲ್ಲಿ ಮಾತ್ರ ಬೆಳೆಯಲಾಗುತ್ತದೆ. ಉಡುಪಿ ಜಿಲ್ಲೆಯಲ್ಲಿ 4,162 ಎಕ್ರೆ ಪ್ರದೇಶದಲ್ಲಿ ಉದ್ದು, 20 ಎಕ್ರೆ ಹುರುಳಿ, 262 ಎಕ್ರೆ ಅಲಸಂಡೆ ಬೆಳೆಯಲಾಗುತ್ತದೆ. ಈಗ ಮಳೆಯಿಂದಾಗಿ ಬಿತ್ತನೆ ಮಾಡಿದ ಧಾನ್ಯದ ಬೀಜಗಳು ಕೊಳೆಯುವ ಅಪಾಯವಿದ್ದು, ಕಳೆ ಹೆಚ್ಚಾಗಿ ಇಳುವರಿ ಕುಸಿತಗೊಳ್ಳುವ ಅಪಾಯವಿದೆ.
ಮಳೆಯಿಂದ ಹಿಂಗಾರು ಕೃಷಿಗೆ ಸ್ವಲ್ಪ ಸಮಸ್ಯೆಯಾಗಿದೆ. ಶೇ.30ಕ್ಕಿಂತ ಹೆಚ್ಚು ಬೆಳೆ ನಾಶವಾದ ರೈತರು ಇಲಾಖೆ ಗಮನಕ್ಕೆ ತಂದಲ್ಲಿ ಪರಿಶೀಲಿಸಿ ಪರಿಹಾರದ ವ್ಯವಸ್ಥೆ ಮಾಡಲಾಗುವುದು.
-ಪೂರ್ಣಿಮಾ, ಜಂಟಿ ನಿರ್ದೇಶಕರು
ಕೃಷಿ ಇಲಾಖೆ, ಉಡುಪಿ
-ಹೊನ್ನಪ್ಪ ಗೌಡ, ಜಂಟಿ ನಿರ್ದೇಶಕರು
ಕೃಷಿ ಇಲಾಖೆ, ದ.ಕ.
ನಾಟಿ ಮುಂದೂಡಲೇ ಬೇಕು ಮಳೆ ಇರುವುದರಿಂದ ಕಲ್ಲಂಗಡಿ ಹಾಗೂ ಶೇಂಗಾ ಬಿತ್ತನೆಗೆ ಈಗ ಸೂಕ್ತ ಸಮಯವಲ್ಲ. ಇನ್ನೂ ಒಂದು ವಾರ ಮಳೆಯಾಗುವ ಸಾಧ್ಯತೆ ಇದ್ದು, ಕನಿಷ್ಠ 15-20 ದಿನ ತಡವಾಗಿ ಇವೆರಡನ್ನು ನಾಟಿ ಮಾಡುವುದು ಉತ್ತಮ. ದ್ವಿದಳ ಧಾನ್ಯ ಬಿತ್ತನೆ ಮಾಡಿದವರು ಕಳೆ ನಾಶದ ಕಡೆ ಗಮನ ನೀಡಬೇಕು.
-ಧನಂಜಯ್, ಸಹ ನಿರ್ದೇಶಕರು
ಕೆ.ವಿ.ಕೆ. ಬ್ರಹ್ಮಾವರ
-ರಾಜೇಶ್ ಗಾಣಿಗ ಅಚ್ಲಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Retirement: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸ್ಫೋಟಕ ಆಟಗಾರ
ಅಂತಾರಾಜ್ಯ ಮಕ್ಕಳ ಮಾರಾಟ ಜಾಲ ಪತ್ತೆ… 4.50 ಲಕ್ಷಕ್ಕೆ ಗೋವಾಕ್ಕೆ ಮಾರಿದ್ದ ಮಗುವಿನ ರಕ್ಷಣೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Surathkal: ಈಜಾಡಲು ತೆರಳಿದ್ದ ನಾಲ್ವರ ಪೈಕಿ ಮೂವರು ಸಮುದ್ರಪಾಲು
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.