ದೇಗುಲವೇ ಗುರಿ?- ಶಾರೀಕ್ ಗುರಿ ಕದ್ರಿ ದೇವಸ್ಥಾನ ಹೊಣೆ ಹೊತ್ತ ಇಆರ್‌ಸಿ?; ತನಿಖೆ ಎನ್‌ಐಎಗೆ
Team Udayavani, Nov 25, 2022, 7:00 AM IST
ಮಂಗಳೂರು/ಬೆಂಗಳೂರು: ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧಿತನಾಗಿರುವ ಶಾರೀಕ್ ಗುರಿ ಮಂಗಳೂರಿನ ದೇಗುಲಗಳಾಗಿದ್ದವು. ಅಷ್ಟೇ ಅಲ್ಲ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಇಆರ್‌ಸಿ) ಹೊತ್ತುಕೊಂಡಿದೆ ಎನ್ನಲಾದ ಹೇಳಿಕೆಯ ಪ್ರತಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇದರ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಉರ್ದು ಮತ್ತು ಆಂಗ್ಲ ಭಾಷೆಯಲ್ಲಿ ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ ಎಂಬ ಶಿರೋನಾಮೆ ಇರುವ ಪ್ರಕಟನೆಯಲ್ಲಿ ಉಗ್ರ ಶಾರೀಕ್‌ನ ಫೋಟೋ ಕೂಡ ಇದೆ. “ಮಂಗಳೂರಿನಲ್ಲಿನ ಕದ್ರಿ ದೇವಸ್ಥಾನದ ಮೇಲೆ ನಮ್ಮ ಮುಜಾಹಿದ್ ಸಹೋದರ ಮಹಮ್ಮದ್ ಶಾರೀಕ್ ದಾಳಿ ಮಾಡಲು ಪ್ರಯತ್ನಿಸಿದ. ಆಕಸ್ಮಿಕವಾಗಿ ಸ್ಫೋಟಗೊಂಡಿದ್ದರಿಂದ ಆತ ಸಿಕ್ಕಿ ಬೀಳುವಂತಾಗಿದೆ. ನಮ್ಮ ಉದ್ದೇಶ ಈಡೇರದಿದ್ದರೂ ರಾಜ್ಯ ಮತ್ತು ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ತಪ್ಪಿಸಿ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾನೆ. ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ. ಯುದ್ಧ ಸಾರಲಾಗಿದೆ. ಕಾನೂನುಗಳನ್ನು ತಂದು ನಮ್ಮ ಧರ್ಮದ ಅಮಾಯಕರನ್ನು ಜೈಲಿಗೆ ಹಾಕಲಾಗುತ್ತಿದೆ. ಹಾಗಾಗಿ ಇಂತಹ ಭಯೋತ್ಪಾದನ ಕೃತ್ಯಗಳನ್ನು ನಡೆಸುತ್ತಿದ್ದೇವೆ’ ಎಂಬ ಟಿಪ್ಪಣಿಯನ್ನು ಹೊಂದಿದೆ.
ಲಭ್ಯ ಮಾಹಿತಿಯಂತೆ ಈ ಪೋಸ್ಟ್ ಇದುವರೆಗೆ ಕೇವಲ ಸಾಮಾಜಿಕ ಜಾಲತಾಣದಲ್ಲಷ್ಟೇ ಹರಿದಾಡುತ್ತಿದೆ. ಆದರೆ ಉನ್ನತ ಮೂಲಗಳ ಪ್ರಕಾರ ಉಗ್ರ ಸಂಘಟನೆಗಳು ತಮ್ಮ ಕಾರ್ಯಾಚರಣೆ ಯಶಸ್ವಿ ಆದಾಗಲಷ್ಟೇ ಈ ರೀತಿ ಹೊಣೆ ಹೊರುತ್ತವೆ. ಮಂಗಳೂರಿನಲ್ಲಿ ಕಾರ್ಯಾಚರಣೆ ವಿಫಲಗೊಂಡಿದೆ. ಇನ್ನು ದೇವಸ್ಥಾನದ ಹೆಸರು, ಪೊಲೀಸ್ ಅಧಿಕಾರಿಗಳ ಹೆಸರು ಇತ್ಯಾದಿ ಸೂಕ್ಷ್ಮ ವಿವರಗಳನ್ನು ಉಗ್ರ ಸಂಘಟನೆಗಳು ಹಾಕುವುದು ಕಡಿಮೆ. ಹಾಗಾಗಿ ಇದರ ಸತ್ಯಾಸತ್ಯತೆಯನ್ನು ಪರಿಶೀಲಿಸಲಾಗುತ್ತಿದೆ.
ಕದ್ರಿ ದೇಗುಲದ ಮೇಲೆ ವಿಶೇಷ ನಿಗಾ :
ಕದ್ರಿ ದೇವಸ್ಥಾನವನ್ನು ಸ್ಫೋಟಿಸುವ ಸಂಚು ನಡೆದಿತ್ತು ಎನ್ನಲಾದ ಹೇಳಿಕೆಗಳ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸರು ಗುರುವಾರ ಕದ್ರಿ ದೇವಸ್ಥಾನ ಪರಿಸರದಲ್ಲಿ ವಿಶೇಷ ನಿಗಾ ವಹಿಸಿದ್ದರು. ಬಾಂಬ್ ಪತ್ತೆ ದಳದವರು ಕೂಡ ತೆರಳಿ ಪರಿಶೀಲಿಸಿದರು.
ಶಾರೀಕ್ ಎಲ್ಲಿ ಬಾಂಬ್ ಸ್ಫೋಟ ಮಾಡಲು ಉದ್ದೇಶಿಸಿರಬಹುದು ಎಂಬ ಸಾಧ್ಯಾಸಾಧ್ಯತೆಯ ವಿಶ್ಲೇಷಣೆ ಈಗ ನಡೆಯುತ್ತಿದೆ, ಅದರಂತೆ ದೇವಸ್ಥಾನಗಳು, ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಿಗೆ ಬಾಂಬ್ ದಾಳಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆಯಾದರೂ ಇವುಗಳಿಗೆ ಯಾವುದೇ ಪ್ರಮುಖ ಸಾಕ್ಷ್ಯ ಸಿಕ್ಕಿಲ್ಲ.
ಶೂ ಎಸೆದು ಚಪ್ಪಲಿ ಧರಿಸಿದ್ದ!:
ಸಿಸಿ ಕೆಮರಾದಲ್ಲಿ ಗುರುತು ದಾಖಲಾಗಬಾರದು, ಯಾರು ಕೂಡ ಗುರುತು ಪತ್ತೆ ಹಚ್ಚಬಾರದು ಎಂಬ ಉದ್ದೇಶದಿಂದ ಆರೋಪಿ ಶಾರೀಕ್ ಮಂಗಳೂರಿಗೆ ಬರುವಾಗ ಮೂರು ಬಟ್ಟೆಗಳನ್ನು ಧರಿಸಿದ್ದ. ರಿಕ್ಷಾ ಏರುವ ಮೊದಲು ಒಂದು ಅಂಗಿಯನ್ನು ತೆಗೆದಿದ್ದ. ಇಷ್ಟು ಮಾತ್ರವಲ್ಲದೆ ಪಡೀಲ್‌ನಲ್ಲಿ ಬಸ್‌ನಿಂದ ಇಳಿಯುವಾಗ ಧರಿಸಿದ್ದ ಶೂಗಳನ್ನು ಎಸೆದು ಚಪ್ಪಲಿ ಧರಿಸಿ ಆಟೋ ಏರಿದ್ದ ಎಂದು ಮೂಲಗಳು ತಿಳಿಸಿವೆ.
ಬಿ.ಸಿ. ರೋಡ್‌ನಲ್ಲಿ ಬಸ್ ಬದಲಾಯಿಸಿದ್ದ? :
ಮೈಸೂರಿನಿಂದ ಪುತ್ತೂರಿನ ವರೆಗೆ ಒಂದೇ ಬಸ್‌ನಲ್ಲಿ ಬಂದಿದ್ದ ಶಾರೀಕ್ ಪುತ್ತೂರು ಬಸ್ ನಿಲ್ದಾಣದಲ್ಲಿ ಬಸ್ ನಿಂತಾಗ ಸ್ವಲ್ಪ ಹೊತ್ತು ಎಲ್ಲಿಗೋ ಹೋಗಿ ವಾಪಸ್ ಅದೇ ಬಸ್‌ನಲ್ಲಿ ಬಂದು ಕುಳಿತಿದ್ದ. ಆದರೆ ಬಿ.ಸಿ. ರೋಡ್‌ನಲ್ಲಿ ಇಳಿದು ಬೇರೊಂದು ಬಸ್ ಹತ್ತಿ ಪಡೀಲ್‌ಗೆ ಆಗಮಿಸಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಫೋಟೋ ಕ್ಲಿಕ್ಕಿಸಿದ್ದು ಯಾರು?:
ಶಾರೀಕ್ ಕುಕ್ಕರನ್ನು ಹಿಡಿದು ಎಚ್ಚರಿಕೆಯ ಪೋಸ್ ನೀಡುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಈ ಫೋಟೋವನ್ನು ಆರೋಪಿ ಮೈಸೂರಿನಿಂದ ಹೊರಡುವಾಗ ತೆಗೆಸಿದ್ದ ಎನ್ನಲಾಗಿದೆ. ಫೋಟೋ ತೆಗೆದವರು ಯಾರು ಎಂಬುದು ಕೂಡ ನಿಗೂಢವಾಗಿದೆ.
ಶಾರೀಕ್ ತುಸು ಚೇತರಿಕೆ:
ಕುಕ್ಕರ್ ಬಾಂಬ್ ಸ್ಫೋಟದಿಂದ ತೀವ್ರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೋಗ್ಯ ಸ್ಥಿತಿ ಗುರುವಾರ ತುಸು ಸುಧಾರಿಸಿದೆ. ಆದರೂ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಆತ ಮಾತನಾಡದೆ ಯಾವುದೇ ಮಹತ್ವದ ಮಾಹಿತಿಯನ್ನು ಪಡೆಯುವುದಕ್ಕೆ ಪೊಲೀಸರಿಂದ ಸಾಧ್ಯವಾಗುತ್ತಿಲ್ಲ. ಸದ್ಯದ ಮಟ್ಟಿಗೆ ಆತನಿಂದ ವಶಕ್ಕೆ ಪಡೆಯಲಾದ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತಿತರ ಗ್ಯಾಜೆಟ್‌ಗಳಿಂದ ಸಿಕ್ಕಿರುವ ಸುಳಿವುಗಳ ಹಿನ್ನೆಲೆಯಲ್ಲಿ ಮಾತ್ರ ತನಿಖೆ ನಡೆಯುತ್ತಿದೆ.
ಎಡಿಜಿಪಿ ಆಲೋಕ್ ಕುಮಾರ್‌ಗೆ ಬೆದರಿಕೆ :
“ನಮ್ಮ ಸಹೋದರ ಶಾರೀಕ್ ಬಂಧನವಾದದ್ದಕ್ಕೆ ಕೆಲವರು ಖುಷಿ ಪಡುತ್ತಿದ್ದಾರೆ. ಅದರಲ್ಲೂ ಎಡಿಜಿಪಿ ಆಲೋಕ್ ಕುಮಾರ್ ಬಹಳ ಖುಷಿ ಪಡುತ್ತಿದ್ದಾರೆ. ಈ ಖುಷಿ ಬಹಳ ದಿನ ಇರುವುದಿಲ್ಲ. ನಿಮ್ಮ ದಬ್ಬಾಳಿಕೆಗೆ ಶೀಘ್ರವೇ ಪ್ರತಿಫಲ ಅನುಭವಿಸುವಿರಿ. ನಿಮ್ಮ ಚಟುವಟಿಕೆಗಳ ಬಗ್ಗೆ ಸದಾ ನಿಗಾ ವಹಿಸುತ್ತಿದ್ದೇವೆ. ಯಾವಾಗ ನಿಮ್ಮ ಬಳಿಗೆ ಬರುತ್ತೇವೆ ಎಂಬುದು ಈಗಿನ ವಿಷಯ’ ಎಂದು ಬೆದರಿಕೆ ಹಾಕಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಆಲೋಕ್ ಕುಮಾರ್, ಈ ಬಗ್ಗೆ ತಮ್ಮ ಗಮನಕ್ಕೆ ಬಂದಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಈ ಸಂಘಟನೆ ಯಾವುದು ಎಂಬ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಐಸಿಸ್‌ನಿಂದಲೇ ಐಆರ್‌ಸಿ ಹುಟ್ಟು?! :
ಐಸಿಸ್ ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸಿದ ಬಳಿಕ ಅಲ್-ಹಿಂದ್ ಸಹಿತ ಕೆಲವು ಪ್ರೇರಿತ ಸಂಘಟನೆಗಳು ಹುಟ್ಟಿಕೊಂಡಿವೆ. ಐಆರ್‌ಸಿ ಕೂಡ ಇದೇ ರೀತಿ ಹುಟ್ಟಿಕೊಂಡಿರುವ ಸಾಧ್ಯತೆಯಿದೆ. ಈ ಪತ್ರ ಅರೆಬಿಕ್ ಭಾಷೆಯಲ್ಲಿರುವುದರಿಂದ ಸಿರಿಯಾ, ಇರಾನ್ ಹಾಗೂ ಅಫ್ಘಾನಿಸ್ಥಾನ ವ್ಯಾಪ್ತಿಯಿಂದಲೇ ವೈರಲ್ ಆಗಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಸ್ಫೋಟದ ತನಿಖೆ ಎನ್‌ಐಗೆ :
ಕುಕ್ಕರ್ ಸ್ಫೋಟ ಪ್ರಕರಣದ ಬಗ್ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಎಫ್ಐಆರ್ ದಾಖಲಿಸಿಕೊಂಡಿದೆ. ಈಗಾಗಲೇ ದಿಲ್ಲಿ ಎನ್‌ಐಎ ಅಧಿಕಾರಿಗಳು ಪ್ರಕರಣ ಕುರಿತು ಪ್ರಾಥಮಿಕ ಮಾಹಿತಿ ಸಂಗ್ರಹಿಸಿದ್ದು, ಬೆಂಗಳೂರಿನ ಎನ್‌ಐಎ ಅಧಿಕಾರಿಗಳ ಜತೆ ಕಾರ್ಯಾಚರಣೆ ಆರಂಭಿಸಿದ್ದಾರೆ.
ಪ್ರಕರಣದಲ್ಲಿ ಭಯೋತ್ಪಾದನೆ ಸಂಘಟನೆಯ ಪಾತ್ರ ಕಂಡುಬಂದಿರುವ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿಯಲ್ಲಿ ಕೇಸ್ ದಾಖಲಿಸಿಕೊಂಡಿದೆ. ಪ್ರಕರಣದಲ್ಲಿ ಮೊಹಮ್ಮದ್ ಶಾರೀಕ್‌ನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಐಸಿಸ್ ಪ್ರೇರಿತ ಅಲ್-ಹಿಂದ್ ಸಂಘಟನೆ ಮೊಹಮ್ಮದ್ ಮತೀನ್ ತಾಹಾನ ಸೂಚನೆ ಮತ್ತು ಸಂಪರ್ಕದ ಮೇರೆಗೆ ಶಾರೀಕ್ ಉಗ್ರ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖೀಸಲಾಗಿದೆ.
ರಾಜ್ಯ ಸರಕಾರದಿಂದಲೂ ಶಿಫಾರಸು :
ನಾಗುರಿ ಸಮೀಪ ಇತ್ತೀಚೆಗೆ ನಡೆದ ಕುಕ್ಕರ್ ಸ್ಫೋಟ ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆಯನ್ನು ಎನ್‌ಐಎಗೆ ವರ್ಗಾವಣೆ ಮಾಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರಾಥಮಿಕ ತನಿಖೆಯಲ್ಲಿ ಸಂಗ್ರಹಿಸಲಾದ ಸಾಕ್ಷ್ಯ ಹಾಗೂ ಇತರ ಮಾಹಿತಿಗಳ ಆಧಾರದ ಮೇಲೆ ರಾಜ್ಯ ಸರಕಾರ ಈ ನಿರ್ಧಾರಕೈಗೊಂಡಿದ್ದು, ಯುಎಪಿಎ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸಲು ಶಿಫಾರಸು ಮಾಡಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
ರಾಜ್ಯದಲ್ಲಿ ಕೇರಳದ ಅಸುರಕ್ಷಿತ ಕುರುಕಲು ತಿಂಡಿ ಮಾರಾಟ
MUST WATCH
ಹೊಸ ಸೇರ್ಪಡೆ
Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.