ಉಚಿತ ಪ್ರಣಾಳಿಕೆಗಳು ರಾಜ್ಯದ ಅಭಿವೃದ್ಧಿಗೆ ಅಡ್ಡಿ
Team Udayavani, May 3, 2023, 5:51 AM IST
ರಾಜ್ಯ ವಿಧಾನಸಭಾ ಚುನಾವಣ ಹಿನ್ನೆಲೆಯಲ್ಲಿ ಈಗ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಗಳನ್ನು ಬಿಡುಗಡೆಗೊಳಿಸಿವೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಭರವಸೆ ಪತ್ರದಲ್ಲಿ ಉಚಿತ ಘೋಷಣೆಗಳೇ ರಾರಾಜಿಸುತ್ತಿದ್ದು, ಇದರಿಂದ ರಾಜ್ಯದ ಒಟ್ಟಾರೆ ಬೆಳವಣಿಗೆಯ ಗತಿಯ ಮೇಲಾಗುವ ಪರಿಣಾಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ. ದುರ್ಬಲ, ಶೋಷಿತ, ಅವಕಾಶ ವಂಚಿತ ಸಮುದಾಯಗಳು, ಮಹಿಳೆಯರು, ವೃದ್ಧರು, ಅಂಗವಿಕಲರ ಏಳಿಗೆಗೆ ಯೋಜನೆಗಳನ್ನು ರೂಪಿಸುವುದು ಸರಕಾರದ ಕರ್ತವ್ಯ. ಆ ನಿಟ್ಟಿನಲ್ಲಿ ವಿನಿಯೋಗಿಸುವ ಹಣವನ್ನು ಬೊಕ್ಕಸಕ್ಕಾಗುವ ನಷ್ಟ ಎಂದು ಯಾರೂ ಪರಿಗಣಿಸಲು ಸಾಧ್ಯವಿಲ್ಲ. ಆದರೆ ಸಾರಾಸಗಟಾಗಿ ಉಚಿತ ಭರವಸೆ ಹಾಗೂ ಓಲೈಕೆಯ ಘೋಷಣೆಗಳು ದೂರಗಾಮಿ ದೃಷ್ಟಿಯಿಂದ ಅನನುಕೂಲತೆ ಸೃಷ್ಟಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಇದಕ್ಕಿಂತ ಪ್ರಮುಖವಾಗಿ ಘೋಷಣೆ ಮಾಡಿದ ಮೇಲೆ ಅವುಗಳನ್ನು ಈಡೇರಿಸುವ ಕುರಿತಂತೆಯೂ ರಾಜಕೀಯ ಪಕ್ಷಗಳು ವಾಗ್ಧಾನ ನೀಡಬೇಕಾದ ಅಗತ್ಯತೆಯೂ ಇದೆ.
ಪ್ರಣಾಳಿಕೆ ಬಿಡುಗಡೆಗೆ ಮುನ್ನವೇ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿ ಕಾರ್ಡ್‌ಗಳು ಈಗಾಗಲೇ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎಲ್ಲ ಕುಟುಂಬಗಳಿಗೆ 200 ಯುನಿಟ್ ಉಚಿತ ವಿದ್ಯುತ್, ನಿರುದ್ಯೋಗಿ ಪದವೀಧರರಿಗೆ 3,000 ರೂ. ಭತ್ತೆ, ಡಿಪ್ಲೊಮಾ ಪದವೀಧರರಿಗೆ 1,500 ರೂ. ಭತ್ತೆ, ಪ್ರತೀ ವ್ಯಕ್ತಿಗೆ 10 ಕೆ.ಜಿ. ಅಕ್ಕಿ, ಪ್ರತೀ ಮನೆಯ ಯಜಮಾನಿಗೆ ಮಾಸಿಕ 2,000 ರೂ. ಎಲ್ಲ ಮಹಿಳೆಯರಿಗೆ ಸರಕಾರಿ ಬಸ್‌ನಲ್ಲಿ ಉಚಿತ ಪ್ರಯಾಣದ ಆಶ್ವಾಸನೆಯನ್ನು ಕಾಂಗ್ರೆಸ್ ನೀಡಿದೆ. ಇದರ ಜತೆಗೆ ಇನ್ನು ಹಲವು ಜನಪ್ರಿಯ ಘೋಷಣೆಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಇವೆೆ.
ಇಷ್ಟು ದಿನಗಳ ಕಾಲ ಉಚಿತ ಘೋಷಣೆಗಳನ್ನು ಟೀಕೆ ಮಾಡುತ್ತಿದ್ದ ಬಿಜೆಪಿ ಕೂಡ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಜಾಡನ್ನೇ ಹಿಡಿದಿದೆ. ಪ್ರಧಾನಿ ನರೇಂದ್ರ ಮೋದಿಯವರು ಉಚಿತ ಯೋ ಜನೆಗಳ ಬಗ್ಗೆ ಲೇವಡಿಯಾಡಿ ವಾರ ಕಳೆಯವಷ್ಟರಲ್ಲಿ ಬಿಜೆಪಿ ಕೂಡ ಒಂದಿಷ್ಟು ಘೋ ಷಣೆ ಮಾಡಿದೆ. ಈ ಪೈಕಿ ಬಿಪಿಎಲ್ ಕಾರ್ಡ್‌ದಾರರಿಗೆ ಪ್ರತೀ ದಿನ ಅರ್ಧ ಲೀಟರ್ ಉಚಿತ ಹಾಲು, 5 ಕೆ.ಜಿ. ಅಕ್ಕಿ, 5 ಕೆ.ಜಿ. ಸಿರಿಧಾನ್ಯ, ಗಣೇಶ ಚರ್ತುರ್ಥಿ, ಯುಗಾದಿ ಹಾಗೂ ದೀಪಾವಳಿಗೆ ಮೂರು ಉಚಿತ ಅಡುಗೆ ಅನಿಲ ನೀಡುವ ಭರವಸೆ ನೀಡಿದೆ. ಕಾಂಗ್ರೆಸ್ ಮಾಡಿದರೆ ಓಲೈಕೆಗಾಗಿ ಉಚಿತ ಘೋಷಣೆ, ಬಿಜೆಪಿ ಜಾರಿಗೆ ತಂದರೆ ಶೋಷಿತರ ಉನ್ನತೀಕರಣ ಎಂಬ ವಾದವೇ ದ್ವಂದ್ವದ ಪರಾಕಾಷ್ಠೆಯಾಗಿ ತೋರುತ್ತದೆ. ಈ ವಿಚಾರದಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಬಡವರಿಗೆ 6 ಉಚಿತ ಸಿಲಿಂಡರ್, ರೈತರಿಗೆ ಪಿಂಚಣಿ ಸಹಿತ ಹಲವು ಅಂಶಗಳು ಜೆಡಿಎಸ್ ಬತ್ತಳಿಕೆಯಲ್ಲಿದೆ.
ಸುದೈವವಶಾತ್ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುವ ಸಾಧ್ಯತೆ ಇರು ವುದರಿಂದ ಎಲ್ಲರ ಘೋಷಣೆಯ ಭಾರ ಹೊರುವ ಸಂದಿಗ್ಧತೆ ಕರದಾತರ ಮೇಲಿಲ್ಲ. ಆದರೆ ಉಚಿತ ಯೋಜನೆಗಳಿಗೆ ತಾವು ಕಟ್ಟಿದ ತೆರಿಗೆ ವ್ಯಯವಾಗುತ್ತದೆ ಎಂದಾ ದಾಗ ತೆರಿಗೆದಾರ ಬೇಸರಗೊಳ್ಳುವುದರಲ್ಲಿ ತಪ್ಪೇನಿಲ್ಲ. ಅಷ್ಟರಮಟ್ಟಿಗಾದರೂ ತೆರಿಗೆ ದಾರನ ನಿಷ್ಠೆಗೆ ಎಲ್ಲ ರಾಜಕೀಯ ಪಕ್ಷಗಳು ಬೆಲೆ ಕೊಡಲೇಬೇಕಾಗುತ್ತದೆ. ಟೀಕೆ ಗಳನ್ನು ಸಹಿಸಲೇಬೇಕಾಗುತ್ತದೆ. ಒಂದು ಮೂಲದ ಪ್ರಕಾರ ಕಾಂಗ್ರೆಸ್ ನೀಡಿದ ಐದು ಭರವಸೆಗಳ ಈಡೇರಿಕೆಗೆ ವಾರ್ಷಿಕ ಸುಮಾರು 40 ಸಾವಿರ ಕೋಟಿ ರೂ. ಬೇಕಾಗುತ್ತದೆ. ರಾಜ್ಯಾದಾಯ ವಾರ್ಷಿಕ ಶೇ.30ರಷ್ಟು ವೃದ್ಧಿಯಾಗುತ್ತದೆ. ಕರ ಸಂಗ್ರಹಣೆ ಎಂದು ಇಳಿಯುವುದಿಲ್ಲ ಎಂಬ ವಾದದ ಮಧ್ಯೆಯೂ ಒಟ್ಟಾರೆ ಆಯವ್ಯಯದ ಮೇಲೆ ಇಷ್ಟು ದೊಡ್ಡ ಮೊತ್ತದ ಉಚಿತ ಘೋಷಣೆಗಳು ಹೊರೆಯೇ ಸರಿ. ಇದು ರಾಜ್ಯದ ಇನ್ನಿತರ ಅಭಿವೃದ್ಧಿ ಕಾರ್ಯಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೊಸ್ತಿಲಿನಲ್ಲೂ ರಾಜಕೀಯ ಪಕ್ಷಗಳು ಉಚಿತ ಹಾಗೂ ಓಲೈಕೆಯ ಘೋಷಣೆಗೆ ಶರಣಾಗಿವೆ ಎಂದರೆ ಅದು ಆತ್ಮವಿಮರ್ಶೆಗೆ ಹಾಗೂ ಸಾಮಾಜಿಕ ವಿಮರ್ಶೆಗೆ ಅರ್ಹವಾದ ಸಂಗತಿಯೇ ಸರಿ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.