ಪೆಟ್ರೋಲ್ ಶತಕದಾಟ : ಜನರ ಬದುಕಿನೊಂದಿಗೆ ಸರಕಾರದ ಚೆಲ್ಲಾಟ
Team Udayavani, Feb 23, 2021, 7:30 AM IST
ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ನಿರಂತರವಾಗಿ ತೈಲೋತ್ಪನ್ನಗಳ ಧಾರಣೆಯಲ್ಲಿ ಹೆಚ್ಚಳವಾಗಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆಯ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇದರ ಫಲಿತಾಂಶವಾಗಿ ಕೆಲವು ರಾಜ್ಯಗಳಲ್ಲಿ ಲೀಟರ್ ಪೆಟ್ರೋಲ್‌ನ ಬೆಲೆ ಈಗಾಗಲೇ 100 ರೂ.ಗಳ ಗಡಿ ದಾಟಿದೆ. ತೈಲ ಬೆಲೆ ಏರುಗತಿಯಲ್ಲಿದ್ದರೂ ಸರಕಾರ ಮಾತ್ರ ಅಬಕಾರಿ ಸುಂಕವನ್ನು ಇಳಿಸಲು ಮುಂದಾಗಿಲ್ಲ. ಇದು ಗ್ರಾಹಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ತಿಂಗಳಲ್ಲಿ 14 ಬಾರಿ ಹೆಚ್ಚಳ
ಫೆಬ್ರವರಿಯಲ್ಲಿ ಇದುವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 14 ಬಾರಿ ಹೆಚ್ಚಾಗಿದೆ. ಜನವರಿಯಲ್ಲಿ 10 ಬಾರಿ ಹೆಚ್ಚಿಸಲಾಗಿತ್ತು. ಈ ವರ್ಷ ಅಂದರೆ 52 ದಿನಗಳಲ್ಲಿ ತೈಲ ಬೆಲೆಗಳನ್ನು ಒಟ್ಟು 24 ಬಾರಿ ಹೆಚ್ಚಿಸಲಾಗಿದೆ.
ಕಡಿಮೆ ಇದ್ದಾಗಲೂ ಬೆಲೆ ಇಳಿಸಿರಲಿಲ್ಲ
ಕಳೆದ ಅಕ್ಟೋಬರ್‌ನಿಂದ ಕಚ್ಚಾ ತೈಲದ ಬೆಲೆ ಶೇ. 50ರಷ್ಟು ಏರಿಕೆಯಾಗಿದೆ. ಈ ವರ್ಷ ಇಲ್ಲಿಯ ವರೆಗೆ ಕಚ್ಚಾ ತೈಲವು ಶೇ. 21ರಷ್ಟು ದುಬಾರಿಯಾಗಿದೆ. ಇದು ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂಬುದು ಸರಕಾರ ಮತ್ತು ತೈಲ ಕಂಪೆನಿಗಳ ಸಮರ್ಥನೆ. ಆದರೆ ಕಳೆದ ವರ್ಷ ಜನವರಿಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಆದರೆ ಅಂದು ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯನ್ನು 1 ಪೈಸೆ ಕೂಡ ಇಳಿಸಿರಲಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ.
ಇಂಧನ ಬೆಲೆ ಏರಿಕೆ ಏಕೆ?
ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (ಒಪೆಕ್) ಮತ್ತು ರಷ್ಯಾ ಸಹಿತ ಅದರ ಮಿತ್ರ ರಾಷ್ಟ್ರಗಳ ನಡುವಿನ ಒಪ್ಪಂದದ ಪ್ರಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಸೌದಿ ಅರೇಬಿಯಾ ದಿನಕ್ಕೆ 1 ಮಿಲಿಯನ್ ಬ್ಯಾರೆಲ್‌ಗಳ ಹೆಚ್ಚುವರಿ ಸ್ವಯಂಪ್ರೇರಿತ ಉತ್ಪಾದನೆ ಕಡಿತಕ್ಕೆ ನಿರ್ಧರಿಸಿದೆ. ಈ ಘೋಷಣೆಯ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಗಳು ಏರಿಕೆ ಹಾದಿಯಲ್ಲಿವೆ.
ರಾಜ್ಯ, ಕೇಂದ್ರದ ಬೊಕ್ಕಸಕ್ಕೆ ಲಾಭ
ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವು ಕಳೆದ ವರ್ಷ 19.98 ರೂ. ಗಳಷ್ಟಿತ್ತು. ಆದರೆ ಈಗ ಅದು 32.90 ರೂ.ಗಳಿಗೆ ಏರಿಕೆಯಾಗಿದೆ. ಅದೇ ರೀತಿ ಪ್ರತೀ ಲೀಟರ್ ಡೀಸೆಲ್ ಮೇಲೆ 15.83 ರೂ. ಗಳಷ್ಟಿದ್ದ ಅಬಕಾರಿ ಸುಂಕ ಇದೀಗ 31.80 ರೂ.ಗಳಿಗೆ ಏರಿಕೆಯಾಗಿದೆ. ಈ ಮೂಲಕ ಕೇಂದ್ರ ಸರಕಾರ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ರಾಜ್ಯ ಸರಕಾರಗಳೂ ವ್ಯಾಟ್ ಹೇರಿ ತಮ್ಮ ವರಮಾನವನ್ನು ಹೆಚ್ಚಿಸಿಕೊಂಡಿವೆ. ಈ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ಗ್ರಾಹಕರಿಗೆ ಬರೆ ಎಳೆದು ತಮ್ಮ ಬೊಕ್ಕಸ ಭರ್ತಿ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ.
ಪೆಟ್ರೋಲ್‌ಗಾಗಿ ನೇಪಾಲಕ್ಕೆ !
ಬಿಹಾರ-ನೇಪಾಲ ಗಡಿಯಲ್ಲಿ ವಾಸವಿರುವ ಜನಸಾಮಾನ್ಯರು ಪೆಟ್ರೋಲ್, ಡೀಸೆಲ್‌ಗಾಗಿ ಅವರು ಸರಂಧ್ರ ಗಡಿಗಳ ಮೂಲಕ ನೇಪಾಲದತ್ತ ಪ್ರಯಾಣಿಸುತ್ತಿದ್ದಾರೆ. ಇಲ್ಲಿ ಭಾರತದಲ್ಲಿನ ತೈಲ ಬೆಲೆಗಳಿಗಿಂತ ಅಂದಾಜು 23 ರೂ. ಕಡಿಮೆಯಾಗಿದೆ. ನೇಪಾಲದ ಹೆಚ್ಚಿನ ಪೆಟ್ರೋಲ್ ಬಂಕ್‌ಗಳನ್ನು ಐಒಸಿ ನಡೆಸುತ್ತಿದೆ. ಬಿಹಾರದ ಅರೇರಿಯಾ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ 93.50 ರೂ.ಗಳಷ್ಟಿದ್ದರೆ ನೇಪಾಲದ ಗಡಿಯಲ್ಲಿ 70.62 ರೂ.ಗಳಾಗಿದೆ.
13,055 ಕೋಟಿ ರೂ. ಲಾಭ
2020-21ರ ಮೊದಲ ಮೂರು ತ್ತೈಮಾಸಿಕ ಅಮಧಿಯಲ್ಲಿ ಅಂದರೆ ಎಪ್ರಿಲ್‌ನಿಂದ ಡಿಸೆಂಬರ್ ವರೆಗಿನ ಒಂಬತ್ತು ತಿಂಗಳುಗಳಲ್ಲಿ ಐಒಸಿಯ ನಿವ್ವಳ ಲಾಭ 13,055 ಕೋಟಿ ರೂ.ಗಳು. ಆದರೆ 2019ರ ಇದೇ ಒಂಬತ್ತು ತಿಂಗಳುಗಳಲ್ಲಿ ಐಒಸಿ 6,499 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿತ್ತು. 2020-21ನೇ ಸಾಲಿನ ಎಪ್ರಿಲ…, ಮೇ ಮತ್ತು ಜೂನ್‌ನಲ್ಲಿ ಲಾಕ್‌ಡೌನ್ ಇದ್ದರೂ ಕಂಪೆನಿಯು 9 ತಿಂಗಳುಗಳಲ್ಲಿ ದ್ವಿಗುಣ ಲಾಭ ಗಳಿಸಿತು. ಕಳೆದ ಎಪ್ರಿಲ…-ಮೇ ಅವಧಿಯಲ್ಲಿ 45 ದಿನಗಳ ವರೆಗೆ ಪೆಟ್ರೋಲ್ ಬೆಲೆ ಹೆಚ್ಚಾಗಿರಲಿಲ್ಲ.
ಲಾಟರಿ ಹೊಡೆದಿದ್ದೆಲ್ಲಿ?
ಪೆಟ್ರೋಲ್-ಡೀಸೆಲ್, ನಾಫ್ತಾ, ಸೀಮೆ ಎಣ್ಣೆ, ಎಲ್‌ಪಿಜಿ ಸಹಿತ ಎಲ್ಲ ಪೆಟ್ರೋಲಿಯಂ ಉತ್ಪನ್ನಗಳನ್ನು ತಯಾರಿಸಲು ಇಂಡಿಯನ್ ಆಯಿಲ್ ವಿದೇಶದಿಂದ ಕಚ್ಚಾ ತೈಲವನ್ನು ಖರೀದಿಸುತ್ತದೆ. ಕಚ್ಚಾ ತೈಲವು 2020ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್‌ನಲ್ಲಿ ಬ್ಯಾರೆಲ್‌ಗೆ 63.65 ಡಾಲರ್‌ಗಳಷ್ಟಿತ್ತು. ಆದರೆ ಜೂನ್‌ನಲ್ಲಿ ಕೇವಲ 40.27 ಡಾಲರ್, ಜುಲೈಯಲ್ಲಿ 43.24 ಡಾಲರ್ ಮತ್ತು ಡಿಸೆಂಬರ್ ವೇಳೆಗೆ ಬ್ಯಾರೆಲ್‌ಗೆ 49.99 ಡಾಲರ್‌ಗಳಷ್ಟಿತ್ತು.
ದಾಸ್ತಾನಿಟ್ಟಿದ್ದ ಐಒಸಿ!
ವಿದೇಶಿ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಅಗ್ಗವಾಗುತ್ತಿರುವಾಗ ಐಒಸಿ ಕಚ್ಚಾ ತೈಲವನ್ನು ಖರೀದಿಸಿ ದಾಸ್ತಾನಿರಿಸಿಕೊಂಡಿತ್ತು. ಭಾರತದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಮತ್ತು ಬೆಲೆಗಳೂ ಹೆಚ್ಚಾದಾಗ ತನ್ನ ದಾಸ್ತಾನಿನಲ್ಲಿದ್ದ ಕಚ್ಚಾ ತೈಲವನ್ನು ಬಳಸಿಕೊಳ್ಳುವ ಮೂಲಕ ಭಾರೀ ಪ್ರಮಾಣದಲ್ಲಿ ಲಾಭ ಮಾಡಿಕೊಂಡಿದೆ.
ಆಮದು ಪ್ರಮಾಣ?
ಭಾರತ ತನ್ನ ಬೇಡಿಕೆಯ ಶೇ. 85ಕ್ಕಿಂತಲೂ ಹೆಚ್ಚಿನ ಪ್ರಮಾಣದ ಕಚ್ಚಾ ತೈಲವನ್ನು ಇತರ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಳೆದ ವರ್ಷದ ಎಪ್ರಿಲ್‌ನಿಂದ ಡಿಸೆಂಬರ್‌ವರೆಗಿನ 9 ತಿಂಗಳುಗಳಲ್ಲಿ ಭಾರತ 143 ದಶಲಕ್ಷ ಟನ್ ಕಚ್ಚಾ ತೈಲವನ್ನು ಖರೀದಿಸಿದೆ. ಇಂಡಿಯನ್ ಆಯಿಲ್ ಅದರಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. 2019-20ನೇ ಹಣಕಾಸು ವರ್ಷದಲ್ಲಿ ಅತೀ ಹೆಚ್ಚು ಎಂದರೆ 59.7 ಮಿಲಿಯನ್ ಟನ್ ಕಚ್ಚಾ ತೈಲವನ್ನು ಖರೀದಿಸಲಾಗಿತ್ತು. ಭಾರತ 69.4 ಮಿಲಿಯನ್ ಟನ್ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.