ನಾಯಕರ ವೈರುಧ್ಯಗಳಿಗೆ ಸಾಕ್ಷಿ ಮಹಾ ರಾಜಕೀಯ
Team Udayavani, Jul 10, 2023, 7:50 AM IST
ರಾಜಕೀಯ ಮಹತ್ವಾಕಾಂಕ್ಷೆ ಮತ್ತು ಪುತ್ರ ವ್ಯಾಮೋಹದಿಂದ ಯಾವ ಸ್ಥಿತಿ ಎದುರಾಗಬಹುದು ಎಂಬುದಕ್ಕೆ ಮಹಾರಾಷ್ಟ್ರದ ಸದ್ಯದ ರಾಜಕೀಯ ಬೆಳವಣಿಗೆಯೇ ಸಾಕ್ಷಿ. ರಾಷ್ಟ್ರೀಯ ಪಕ್ಷಗಳಾಗಿದ್ದರೂ ಸದ್ಯ ಮಹಾರಾಷ್ಟ್ರದಲ್ಲಷ್ಟೇ ಹೆಚ್ಚು ಗಟ್ಟಿಯಾಗಿರುವ ಶಿವಸೇನೆ ಮತ್ತು ಎನ್‌ಸಿಪಿ ಸದ್ಯ ಎದುರಿಸುತ್ತಿರುವ ಆತಂಕವು ಆ ಪಕ್ಷಗಳ ಬಗ್ಗೆ ಸಿಂಹಾವಲೋಕನ ಮಾಡುವಂತೆ ಮಾಡಿದೆ.
ದೇಶ ಮಟ್ಟದಲ್ಲಿ ಬಿಜೆಪಿಗೆ ಪರ್ಯಾಯವಾಗಿ ವಿಪಕ್ಷ ಮೈತ್ರಿಕೂಟ ರಚನೆಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಗಾಢ ಪ್ರಯತ್ನದ ಹೊತ್ತಿನಲ್ಲಿಯೇ ಮಹಾರಾಷ್ಟ್ರದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಅಸ್ತಿತ್ವಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ವಿಪಕ್ಷಗಳ ಒಗ್ಗೂಡಿಸುವಿಕೆಯ ಪ್ರಯತ್ನಕ್ಕೆ ಭಾರೀ ಹಿನ್ನಡೆಯುಂಟು ಮಾಡಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಬಂಡಾಯದಿಂದ ಸುದ್ದಿಯಲ್ಲಿರುವ ಅಜಿತ್ ಪವಾರ್ ರಾಜಕೀಯದಲ್ಲಿ ಸಾಕಷ್ಟು ಪಳಗಿದ ನಾಯಕ. ಅವರು ಚಿಕ್ಕಪ್ಪ ಶರದ್ ಪವಾರ್ ಅವರ ನೆರಳಲ್ಲೇ ರಾಜಕೀಯವಾಗಿ ಬೆಳೆದು ಸಮರ್ಥ ನಾಯಕನಾಗಿದ್ದರೂ ತನ್ನ ರಾಜಕೀಯ ಭವಿಷ್ಯಕ್ಕೆ ಸುಪ್ರಿಯಾ ಸುಳೆ ಅಡ್ಡಗಾಲಾಗುತ್ತಿದ್ದಾರೆ ಎಂಬ ಕಾರಣದಿಂದ ಇಂಥದ್ದೊಂದು ಬಂಡಾಯಕ್ಕೆ ಮುಂದಾಗಿರುವುದು ಸ್ಪಷ್ಟ. ಇತ್ತ ಶರದ್ ಪವಾರ್ ವಿಷಯವನ್ನು ನೋಡಿದರೂ ಒಂದು ಲೋಪ ಎದ್ದು ಕಾಣುತ್ತಿದೆ. ತನ್ನ ಪಕ್ಷದಲ್ಲಿ ಸಮರ್ಥ ಘಟಾನುಘಟಿ ನಾಯಕರಿದ್ದರೂ ಪುತ್ರಿ ಸುಪ್ರಿಯಾ ಸುಳೆಗೆ ಉತ್ತರಾಧಿಕಾರ ನೀಡಿರುವುದು ಇತರ ನಾಯಕರು ಕೆರಳುವಂತೆ ಮಾಡಿದೆ. ಈ ಹಿಂದೊಮ್ಮೆ ಬಿಜೆಪಿ ಜತೆಗೆ ಕೈಜೋಡಿಸಿ ಮೂರು ದಿನಗಳ ಕಾಲ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್ ಅವರನ್ನು ನಿರ್ಲಕ್ಷಿಸಿದ ಶರದ್ ಪವಾರ್ ಈಗ ದುಬಾರಿ ಬೆಲೆ ತೆರುವಂತಾಗಿದೆ. ಒಂದೊಮ್ಮೆ ಸುಪ್ರಿಯಾ ಬದಲಿಗೆ ಅಜಿತ್ ಅವರಂಥ ಸಮರ್ಥರಿಗೆ ಪಕ್ಷದ ಉತ್ತರಾಧಿಕಾರ ನೀಡಿದ್ದರೆ ಈಗಿನ ಬೆಳವಣಿಗೆ ನಡೆಯುತ್ತಲೇ ಇರಲಿಲ್ಲ.
ರಾಜಕೀಯ ಮಹತ್ವಾಕಾಂಕ್ಷೆ: ರಾಜಕೀಯ ಮಹತ್ವಾಕಾಂಕ್ಷೆ ಇದ್ದ ಕಾರಣವೇ ಶರದ್ ಪವಾರ್‌ಗೆ 38ನೇ ವರ್ಷಕ್ಕೆ ಮುಖ್ಯಮಂತ್ರಿ ಯಾಗಲು ಸಾಧ್ಯವಾದದ್ದು. ಮಹಾರಾಷ್ಟ್ರದಲ್ಲಿ ಹಲವು ಬಾರಿ ಮುಖ್ಯಮಂತ್ರಿಯಾಗಿರುವುದು ಕೂಡ ಒಂದೇ ಪಕ್ಷದಲ್ಲಿ ಇದ್ದುಕೊಂಡಲ್ಲ. ಅವರು ಕಾಂಗ್ರೆಸ್‌ನಿಂದ ಹೊರಬಂದು ಬಿಜೆಪಿ, ಜನತಾ ಪಕ್ಷದಂಥ ಕೆಲವು ಸಣ್ಣಪುಟ್ಟ ಪಕ್ಷಗಳ ಜತೆಗೆ ಕೈಜೋಡಿಸಿ ಪಿಡಿಎಫ್ ಎಂಬ ಪ್ರತ್ಯೇಕ ಮೈತ್ರಿಕೂಟವನ್ನು ರಚಿಸಿ ಸರಕಾರ ರಚಿಸಿದ್ದೂ ಇದೆ.
ಮಹಾರಾಷ್ಟ್ರದಲ್ಲಿ ಶಿವಸೇನೆ ಹುಟ್ಟು ಪಡೆದು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡು ಗಟ್ಟಿಯಾಗುತ್ತಾ ಬಂದಂತೆ ಶರದ್ ಪವಾರ್ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಸೇರಿದರು. ಆ ಬಳಿಕ ಅವರ ಗುರಿ ಪ್ರಧಾನಿ ಹುದ್ದೆಯ ಮೇಲಿತ್ತು. ರಾಜೀವ್ ಗಾಂಧಿ ನಿಧನದ ಬಳಿಕ ಆ ಮಹತ್ವಾಕಾಂಕ್ಷೆ ಮತ್ತಷ್ಟು ಗಟ್ಟಿಯಾಯಿತು. ಆದರೆ ಸೋನಿಯಾ ಗಾಂಧಿ ಪ್ರಧಾನಿಯಾಗುವ ಪರಿಸ್ಥಿತಿ ನಿರ್ಮಾಣವಾದಾಗ ಶರದ್ ಪವಾರ್ ತಮ್ಮ ಅಧಿನಾಯಕಿಯ ವಿದೇಶಿ ಮೂಲವನ್ನು ಮುಂದಿಟ್ಟು ಪಕ್ಷದಿಂದ ಹೊರ ಬಂದು ಪಿ.ಎ. ಸಂಗ್ಮಾ ಜತೆಗೆ ಸೇರಿಕೊಂಡು ಎನ್‌ಸಿಪಿಯನ್ನು ಹುಟ್ಟಿಹಾಕಿದರು. ಪಕ್ಷವನ್ನು ದೇಶಮಟ್ಟದಲ್ಲಿ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆಸುವಲ್ಲಿ ವಿಫಲರಾದರೂ ಮಹಾರಾಷ್ಟ್ರದಲ್ಲಿ ಮಾತ್ರ ಅದರ ಬೇರು ಗಟ್ಟಿಯಾಗುತ್ತಾ ಹೋಯಿತು. ಈಗ ಅದೇ ಸೋನಿಯಾ ಗಾಂಧಿಯ ಕಾಂಗ್ರೆಸ್ ಜತೆಗೆ ಸೇರಿಕೊಂಡು ವಿಪಕ್ಷಗಳ ಒಕ್ಕೂಟ ರಚನೆಗೆ ಮುಂದಾಗಿದ್ದಾರೆ.
ಚಿಕ್ಕಪ್ಪನಂತೆಯೇ ಅಜಿತ್ ಪವಾರ್ ಕೂಡ ರಾಜಕೀಯ ಮಹತ್ವಾಕಾಂಕ್ಷೆ ಹೊಂದಿದವರೇ. ತನಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲೇಬೇಕು ಎಂಬ ಮಹದಾಸೆ ಇದೆ ಎಂಬುದನ್ನು ಈಚೆಗೆ ಬಹಿರಂಗವಾಗಿ ಒಪ್ಪಿಕೊಂಡದ್ದೂ ಇದೆ. ಸುಪ್ರಿಯಾ ಸುಳೆ ಅಧೀನದಲ್ಲಿ ಎನ್‌ಸಿಪಿಯಲ್ಲಿ ಉಳಿದುಕೊಂಡರೆ ತನ್ನ ರಾಜಕೀಯ ಭವಿಷ್ಯಕ್ಕೆ ತಾನೇ ಕೊಳ್ಳಿ ಇಟ್ಟುಕೊಂಡಂತಾಗುತ್ತದೆ ಎಂದು ಅದರ ಘಟಾನುಘಟಿ ನಾಯಕರ ಜತೆಗೆ ಹೊರಗೆ ಕಾಲಿಟ್ಟಿದ್ದಾರೆ. ಬಹುಶಃ ಈ ವಿಷಯದಲ್ಲೂ ಅವರು ಚಿಕ್ಕಪ್ಪನ ರಾಜಕೀಯ ನಡೆಯನ್ನೇ ಅನುಸರಿಸಿರಬಹುದು.
ಪುತ್ರ ವ್ಯಾಮೋಹ: ಶಿವಸೇನೆಯಿಂದ ರಾಜ್ ಠಾಕ್ರೆ ಹೊರ ಹೋದದ್ದೂ ಮಹಾರಾಷ್ಟ್ರದ ರಾಜಕೀಯದಲ್ಲಿ ಒಂದು ಉಲ್ಲೇಖನಾರ್ಹ ಸಂಗತಿ. ಬಾಳಾ ಠಾಕ್ರೆ ಅವರು ರಾಜ್ ಠಾಕ್ರೆಯನ್ನು ತನ್ನ ಉತ್ತರಾಧಿಕಾರಿಯಾಗಿ ಘೋಷಿಸಿರುತ್ತಿದ್ದರೆ ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಪ್ರಬಲ ಶಕ್ತಿಯಾಗಿರುತ್ತಿತ್ತು ಹಾಗೂ ಮಹಾರಾಷ್ಟ್ರ ನವನಿರ್ಮಾಣ ಸೇನೆ ಹುಟ್ಟಿಕೊಳ್ಳುತ್ತಿರಲೂ ಇಲ್ಲ. ರಾಜಕೀಯದಲ್ಲಿ ಹೆಚ್ಚು ಆಸಕ್ತಿ ಇಲ್ಲದ ಉದ್ಧವ್ ಠಾಕ್ರೆಯವರನ್ನು ಉತ್ತರಾಧಿಕಾರಿಯಾಗಿ ಘೋಷಿಸಿರುವುದರ ಹಿಂದೆ ಪುತ್ರ ವ್ಯಾಮೋಹವಿತ್ತು ಎಂಬ ಮಾತು ಈಗಲೂ ಜೀವಂತವಾಗಿಯೇ ಇದೆ.
ಅದೇ ಉದ್ಧವ್ ಠಾಕ್ರೆ ಕೂಡ ಘಟಾನುಘಟಿ ನಾಯಕರಿದ್ದರೂ ರಾಜಕೀಯವಾಗಿ ಶಿಶುವಾಗಿರುವ ಪುತ್ರ ಆದಿತ್ಯ ಠಾಕ್ರೆಗೆ ಸರಕಾರದಲ್ಲಿ ಪ್ರಮುಖ ಹುದ್ದೆ ಕೇಳಿದ್ದೂ ಇದೆ. ಅದಕ್ಕೆ ಕಾಂಗ್ರೆಸ್ ಮತ್ತು ಎನ್‌ಸಿಪಿ ಒಪ್ಪದ ಕಾರಣ ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಮುಖ್ಯಮಂತ್ರಿ ಜವಾಬ್ದಾರಿಗೆ ಹೆಗಲು ಕೊಟ್ಟಿದ್ದರು ಎಂಬುದು ಸರ್ವವೇದ್ಯ ಸಂಗತಿ. ಈಗ ಅಂಥದ್ದೇ ಪುತ್ರಿ ವ್ಯಾಮೋಹವನ್ನು ಶರದ್ ಪವಾರ್ ತೋರಿಸಿ ಪಕ್ಷಕ್ಕೆ ಇಂಥದ್ದೊಂದು ಸಂದಿಗ್ಧತೆಯನ್ನು ತಂದೊಡ್ಡಿದರು ಎಂಬುದನ್ನು ಅಲ್ಲಗಳೆಯಲಾಗದು.
ರಾಜಕೀಯವಾಗಿ ಬಾಳಾ ಠಾಕ್ರೆ ಹಾಗೂ ಶರದ್ ಪವಾರ್ ಅವರ ಧೀಃಶಕ್ತಿ, ತಂತ್ರಗಾರಿಕೆ ಅತ್ಯದ್ಭುತವಾಗಿತ್ತು. ಆದರೆ ಉತ್ತರಾಧಿಕಾರಿ ಘೋಷಣೆಯಲ್ಲಿ ಇವರಿಬ್ಬರೂ ಎಡವಿದರೇ ಎಂಬ ಪ್ರಶ್ನೆ ರಾಜಕೀಯ ವಲಯವನ್ನು ಕಾಡುತ್ತಿದೆ.
ತಿರುಗುಬಾಣದ ಅಪಾಯ: ಪ್ರಸ್ತುತ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಸಂಪುಟದಲ್ಲಿ ಬಿಜೆಪಿ, ಶಿವಸೇನೆ, ಎನ್‌ಸಿಪಿಯ ಪ್ರಮುಖ ನಾಯಕರಿದ್ದಾರೆ. ಈ ಪೈಕಿ ಏಕನಾಥ ಶಿಂಧೆ ಸಹಿತ ಶಿವಸೇನೆ ಮತ್ತು ಎನ್‌ಸಿಪಿಯಿಂದ ಬಂದವರು ಬಂಡಾಯದ ಬಾವುಟ ಹಾರಿಸಿ ಸದ್ದು ಮಾಡಿದವರು. ಇವರೆಲ್ಲರೂ ಮಹತ್ವಾಕಾಂಕ್ಷಿಗಳೇ. ಆದ್ದರಿಂದಲೇ ಪಕ್ಷ ತೊರೆದು ಬಂದಿದ್ದಾರೆ.
ತಮ್ಮ ಉದ್ದೇಶ ಇಲ್ಲಿ ಈಡೇರುವ ಲಕ್ಷಣ ಕಾಣದೆ ಹೋದರೆ ಮತ್ತೂಂದು ಬಂಡಾಯದ ಬಾವುಟ ಹಾರಿಸಿದರೂ ಆಶ್ಚರ್ಯವಿಲ್ಲ. ಶಿವಸೇನೆಯ ಉದ್ಧವ್ ಬಣದ ಕೆಲವು ಪ್ರಮುಖರು ಹೇಳುವ ಪ್ರಕಾರ, ಏಕನಾಥ ಶಿಂಧೆಯ ಜತೆಯಲ್ಲಿ ಹೋಗಿರುವ ಕೆಲವರು ಈಗ ಮರಳಿ “ಮಾತೋಶ್ರೀ’ಗೆ ಬರಲು ಬಯಸಿದ್ದಾರೆ. ಅವರು ಉದ್ಧವ್ ಜತೆಗೆ ಸಂಪರ್ಕದಲ್ಲಿದ್ದಾರೆ. ಅವರಿಗೆ ಎನ್‌ಸಿಪಿ ಯ ಅಜಿತ್ ಬಣವನ್ನು ಸೇರಿಸಿಕೊಂಡಿರುವುದು ತೀವ್ರ ಅಸಮಾಧಾನ ಉಂಟು ಮಾಡಿದೆ ಎಂಬುದನ್ನು ಸುಲಭದಲ್ಲಿ ತಳ್ಳಿಹಾಕಲಾಗದು. ಅಂಥ ಪರಿಸ್ಥಿತಿ ನಿರ್ಮಾಣವಾದರೆ ಅಜಿತ್ ಪವಾರ್ ಮುಖ್ಯಮಂತ್ರಿಯಾಗಲಿದ್ದಾರೆ. ಆ ಆಸೆಯಿಂದಲೇ ಅಜಿತ್, ಹಾಲಿ ಸರಕಾರದ ಭಾಗವಾಗಿದ್ದಾರೆ ಹಾಗೂ ತನ್ನ ಮುಖ್ಯಮಂತ್ರಿಯಾಗುವ ಬಯಕೆಯನ್ನು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.
ಬಿಜೆಪಿಗೆ ಜಾಕ್‌ಪಾಟ್: ಮಹಾರಾಷ್ಟ್ರದಲ್ಲಿ ಬಿಜೆಪಿ ಈಗ ಏನೇನು ಮಾಡಿದೆಯೋ ಅವೆಲ್ಲದರಲ್ಲೂ ಆ ಪಕ್ಷಕ್ಕೆ ಉತ್ತಮ ಭವಿಷ್ಯ ಕಾದಿದೆ. ಇಲ್ಲಿನ ಎರಡು ಪ್ರಮುಖ ಪಕ್ಷಗಳನ್ನು ದುರ್ಬಲಗೊಳಿಸಿರುವ ಬಿಜೆಪಿಯ ರಾಜಕೀಯ ತಂತ್ರಗಾರಿಕೆ ಎಲ್ಲರ ಬೆರಳನ್ನೂ ಮೂಗಿನ ಮೇಲೇರುವಂತೆ ಮಾಡಿದೆ. ಮಹಾರಾಷ್ಟ್ರದ ಬೆಳವಣಿಗೆಯು ದೇಶಮಟ್ಟದಲ್ಲಿ ಬಿಜೆಪಿಗೆ ಲಾಭವನ್ನೇ ತಂದುಕೊಡಲಿದೆ. ಮೈತ್ರಿಕೂಟ ರಚನೆಯ ಬಗ್ಗೆ ವಿಪಕ್ಷಗಳು ಮತ್ತೂಮ್ಮೆ ಚಿಂತಿಸುವಂತೆ ಮಾಡಿದೆ.
ಜತೆಗಿದ್ದು ಕೊಂಡೇ ಸದಾ ಕಾಲೆಳೆಯುತ್ತಿದ್ದ ಉದ್ಧವ್ ನೇತೃತ್ವದ ಶಿವ ಸೇನೆಯ ಬಂಧನದಿಂದ ಮುಕ್ತಿ ಪಡೆಯುವುದರ ಜತೆಗೆ ಆ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಿದ ತೃಪ್ತಿಯೂ ಬಿಜೆಪಿಯಲ್ಲಿದೆ. ಕಟ್ಟಾ ಹಿಂದು ತ್ವವಾದಿಯಾಗಿದ್ದ ಉದ್ಧವ್ ನೇತೃತ್ವದ ಶಿವಸೇನೆಯು ಅಧಿಕಾರ ಕ್ಕಾಗಿ ಕಾಂಗ್ರೆಸ್ ಹಾಗೂ ಎನ್‌ಸಿಪಿಯೊಂದಿಗೆ ಕೈಜೋಡಿಸಿ ತನ್ನ ಮತದಾರರ ಭಾವನೆಗೆ ನೋವುಂಟು ಮಾಡಿತು ಹಾಗೂ ಸಂಪುಟದಲ್ಲಿ ಮುಸ್ಲಿಮರಿಗೂ ಅವಕಾಶ ನೀಡಿತ್ತು. ಒಂದು ಕಡೆ ಮುಸ್ಲಿಮರ ವಿರುದ್ಧ ಹೋರಾಡುತ್ತಾ ಮತ್ತೂಂದು ಕಡೆ ಅವರನ್ನೇ ಸಂಪುಟಕ್ಕೆ ಸೇರಿಸಿಕೊಂಡಿತು. ಈಗ ದೇಶಮಟ್ಟದಲ್ಲಿ ತನ್ನ ವಿರುದ್ಧ ಒಟ್ಟಾಗುವ ವಿಪಕ್ಷ ಮೈತ್ರಿಕೂಟವನ್ನೂ ಶಿವಸೇನೆ ಸೇರಿಕೊಳ್ಳುವಂತೆ ಮಾಡುವಲ್ಲಿ ಬಿಜೆಪಿ ಸಫಲವಾಗಿದೆ. ಇವೆಲ್ಲವೂ ಬಿಜೆಪಿಗೆ ಜಾಕ್‌ಪಾಟ್ ಸಿಕ್ಕಂತೆಯೇ.
ಶಿವಸೇನೆಯು ಬಿಜೆಪಿ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ಬಳಿಕ ಇಟ್ಟ ಪ್ರತಿಯೊಂದು ಹೆಜ್ಜೆಯೂ ಅದಕ್ಕೆ ರಾಜಕೀಯವಾಗಿ ಸೋಲನ್ನೇ ತಂದೊಡ್ಡಿತು. ಶಿವಸೇನೆಯ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ಬಳಿಕ ಬಿಜೆಪಿಗೆ ಮಹಾರಾಷ್ಟ್ರದಲ್ಲಿ ರಾಜಕೀಯ ಭವಿಷ್ಯ ಇಲ್ಲವೇ ಇಲ್ಲ ಎಂದು ಹೇಳಿದ್ದ ಎಲ್ಲ ರಾಜಕೀಯ ಪಂಡಿತರೂ ಈಗಿನ ಬೆಳವಣಿಗೆಗಳನ್ನು ನಿಬ್ಬೆರಗಾಗಿ ನೋಡುತ್ತಿ ದ್ದಾರೆ. ಬಿಜೆಪಿ ದೇಶದಲ್ಲಿ ಮುಂದೆ ಯಾವ ಪಕ್ಷವನ್ನು ಒಡೆದು ಹಾಕಲಿದೆ ಎಂಬ ಪ್ರಶ್ನೆಯನ್ನು ಈ ಎಲ್ಲ ಬೆಳವಣಿಗೆಗಳು ಮುಂದಿಟ್ಟಿವೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಡೆಗೆ ಇದು ಹೆಚ್ಚು ಸಹಕಾರಿಯಾಗಲಿದೆ ಎಂಬುದು ಸದ್ಯದ ಮಟ್ಟಿಗೆ ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
ಪುತ್ತಿಗೆ ಪದ್ಮನಾಭ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ
Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ
Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್ ಪೈ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.