ಕರಾಳ ದಿನ : ಪುನೀತ್ ಅಗಲಿಕೆಗೆ ಪ್ರಧಾನಿ ಮೋದಿ, ರಾಹುಲ್ ಸೇರಿ ಗಣ್ಯರ ಕಂಬನಿ
Team Udayavani, Oct 29, 2021, 4:49 PM IST
ಬೆಂಗಳೂರು : ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನಕ್ಕೆ ರಾಜಕೀಯ ರಂಗದ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ , ಬಿ ಎಸ್. ಯಡಿಯೂರಪ್ಪ ಸಹಿತ ರಾಜಕೀರ ರಂಗದ ಗಣ್ಯರು ಶುಕ್ರವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂತಾಪ
”ವಿಧಿಯ ಕ್ರೂರ ತಿರುವು ಪುನೀತ್ ರಾಜ್‌ಕುಮಾರ್ ಎಂಬ ಸಮೃದ್ಧ ಮತ್ತು ಪ್ರತಿಭಾವಂತ ನಟನನ್ನು ನಮ್ಮಿಂದ ಕಿತ್ತುಕೊಂಡಿದೆ. ಅವರಿಗೆ ಬಿಟ್ಟು ಹೋಗುವ ವಯಸ್ಸಾಗಿರಲಿಲ್ಲ. ಮುಂದಿನ ಪೀಳಿಗೆ ಅವರ ಕೆಲಸ ಮತ್ತು ಅದ್ಭುತ ವ್ಯಕ್ತಿತ್ವವ ನ್ನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತದೆ. ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳು, ಓಂ ಶಾಂತಿ” ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು
ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿರುವುದು ಅತ್ಯಂತ ದುರದೃಷ್ಟಕರ. ಅವರ ಕುಟುಂಬಕ್ಕೆ, ಕನ್ನಡ ಚಿತ್ರರಂಗಕ್ಕೆ ಹಾಗು ಕನ್ನಡದ ಜನರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿಃ
ರಾಹುಲ್ ಗಾಂಧಿ ಟ್ವೀಟ್
ಕನ್ನಡ ನಟ ಪುನೀತ್ ರಾಜ್ಕುಮಾರ್ ಅವರ ಕುಟುಂಬ, ಸ್ನೇಹಿತರು ಮತ್ತು ಅಭಿಮಾನಿಗಳಿಗೆ ನನ್ನ ಹೃದಯಪೂರ್ವಕ ಸಂತಾಪಗಳು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ನಳಿನ್‍ಕುಮಾರ್ ಕಟೀಲ್ ಸಂತಾಪ
“ಪವರ್ ಸ್ಟಾರ್” ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಯುವ ನಟರಾದ ಪುನೀತ್ ರಾಜ್ಕುಮಾರ್ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರು ಶಾಂತಿ- ಸಂಯಮದಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಸಂತಾಪ
ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದು, ಸದ್ದಿಲ್ಲದೇ ವಿವಿಧ ಸೇವಾ ಕಾರ್ಯಗಳನ್ನು ಮಾಡುವುದರ ಜೊತೆಗೆ ತಮ್ಮ ಉತ್ತಮ ಕಥಾ ಹಂದರವುಳ್ಳ ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಕೇವಲ 46 ವರ್ಷಗಳಲ್ಲೇ ಇಹಲೋಕ ತ್ಯಜಿಸಿದ್ದು ಕೋಟ್ಯಂತರ ಅಭಿಮಾನಿಗಳಿಗೆ ಅತೀವ ದುಖಃ ವನ್ನು ಉಂಟುಮಾಡಿದೆ ,ಈ ಸಂದರ್ಭದಲ್ಲಿ ಅಭಿ ಮಾನಿಗಳೆಲ್ಲರು ಸೇರಿ ಶಾಂತ ರೀತಿಯಿಂದ ಪುನೀತ್ ರವರ ಅಂತಿಮ ವಿಧಿ ವಿಧಾನಗಳಿಗೆ ಅವಕಾಶ ಮಾಡಿಕೊಟ್ಟು ಗೌರವ ಸಲ್ಲಿಸಿ ಅವರ ಆತ್ಮಕ್ಕೆ ಶಾಂತಿ ದೊರೆಯುವಂತೆ ಮಾಡೋಣ ,ಕನ್ನಡದ ಕೋಟ್ಯಾಧಿಪತಿ ಮೂಲಕ ಮನೆ ಮನಗಳನ್ನು ತಲುಪಿದ್ದ ನಟನ ಅಗಲಿಕೆಯ ದುಖಃ ವನ್ನು ಬರಿಸುವ ಶಕ್ತಿ ಭಗವಂತ ಅವರ ಕುಟುಂಬದವರಿಗೂ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
ಸುನಿಲ್ ಕುಮಾರ್ ದಿಗ್ಬ್ರಮೆ
ಕನ್ನಡ ಜನಮಾನಸದ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ ಎಂದು ಇಂಧನ, ಕನ್ನಡ ಹಾಗೂ ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕದ ಸಾಂಸ್ಕೃತಿಕ ಇತಿಹಾಸದಲ್ಲಿ ಡಾ. ರಾಜಕುಮಾರ್ ಹಾಗೂ ಅವರ ಕುಟುಂಬ ಸಲ್ಲಿಸಿದ ಸೇವೆ ಅಮರ ಅಧ್ಯಾಯವಾಗಿದೆ. ಅಂತಹ ಕುಟುಂಬದ ಕುಡಿ ಈಗ ಅಕಾಲಿಕ ಮೃತ್ಯುವಿಗೆ ತುತ್ತಾಗಿರುವುದು ನಿಜಕ್ಕೂ ಅತ್ಯಂತ ಆಘಾತಕಾರಿ ಸಂಗತಿ.
ಅವರ ಕುಟುಂಬ ಮತ್ತು ನಮ್ಮ ಕುಟುಂಬದ ಮಧ್ಯೆ ಅತ್ಯಂತ ಮಧುರವಾದ ಸಂಬಂಧವಿತ್ತು. ಅವರನ್ನು ನಾನು ಸಹೋದರನಂತೆ ಪ್ರೀತಿಸುತ್ತಿದ್ದೆ. ವೈಯಕ್ತಿಕವಾಗಿ ನಾನು ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡಿದ್ದೇನೆ ಎಂದು ಸಚಿವ ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ. ವೈಯಕ್ತಿಕವಾಗಿ ನನಗೆ ಆಗಿರುವ ಆಘಾತ ಅಷ್ಟಿಷ್ಟಲ್ಲ. ಇಂತಹ ಸುದ್ದಿ ಕೇಳಬೇಕಾಗುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ
ವಿಶ್ವೇಶ್ವರ ಹೆಗಡೆ ಕಾಗೇರಿ,ಸಭಾಧ್ಯಕ್ಷರು,ಕರ್ನಾಟಕ ವಿಧಾನ ಸಭೆ
ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನ ಧಿಗ್ಭ್ರಮೆ ಮೂಡಿಸಿದ್ದು, ಅತೀವ ದುಃಖವನ್ನುಂಟುಮಾಡಿದೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ನಟರಾಗಿದ್ದ ಪುನೀತ್ ಅವರು ತಮ್ಮ ಪ್ರಬುದ್ಧ ಅಭಿನಯ, ಮಾನವೀಯ ನಡವಳಿಕೆಯ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದರು. ಬಾಲ್ಯದಲ್ಲಿಯೇ ತಮ್ಮ ತಂದೆಯವರಾದ ದಿವಂಗತ ರಾಜಕುಮಾರ ಅವರಿಂದ ಬಳುವಳಿಯಾಗಿ ಪಡೆದ ನಟನೆ ಹಾಗೂ ವಿನಯವನ್ನು ಸಮರ್ಥವಾಗಿ ಅಳವಡಿಸಿಕೊಂಡು ಯುವಜನತೆಗೆ ಆದರ್ಶರಾಗಿದ್ದರು. ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿರುವುದು ವಿಧಿಯ ಸಂಕಲ್ಪವಾಗಿದೆ.ಅವರ ಆತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ.
ಮಾಜಿ ಸಿಎಂ ಶೆಟ್ಟರ್ ಸಂತಾಪ
ಕನ್ನಡದ ಜನಪ್ರಿಯ ಪ್ರತಿಭಾವಂತ ನಟ ಪುನೀತ್ ರಾಜ್‌ಕುಮಾರ್ ಹೃದಯಾಘಾತದಿಂದ ಅಕಾಲಿಕವಾಗಿರುವುದು ಕನ್ನಡ ನಾಡಿಗೆ ತುಂಬಲಾರದ ಹಾನಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿ.ಸಿ.ಪಾಟೀಲರ ಕಂಬನಿ
ತಮ್ಮ ಎಳೆ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದ ಶ್ರೇಷ್ಠ ಕಲಾವಿದರಾಗಿ, ಅಭಿಮಾನಿಗಳಲ್ಲಿ ವಿಶೇಷ ಛಾಪು ಮೂಡಿಸಿದ್ದ ನಮ್ಮೆಲ್ಲರ ನೆಚ್ಚಿನ “ಅಪ್ಪು” ಆಗಿದ್ದ ಶ್ರೀ ಪುನೀತ್ ರಾಜ್ ಕುಮಾರ್ ಅವರು ಅಕಾಲಿಕವಾಗಿ ನಿಧನರಾಗಿರುವುದು ನಿಜಕ್ಕೂ ದುಃಖದ ಬೆಳವಣಿಗೆಯಾಗಿದೆ. ಈ ಆಘಾತಕಾರಿ ಸುದ್ದಿಯನ್ನು ನಮಗೆ ನಂಬಲು ಸಾಧ್ಯವಾಗುತ್ತಿಲ್ಲ. ಅಗಲಿದ ಈ ಚೇತನಕ್ಕೆ ನನ್ನ ಆಶ್ರುತರ್ಪಣಗಳು.
ಸಿ.ಟಿ.ರವಿ ಸಂತಾಪ
ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿ ಕನ್ನಡಿಗರ ಕಣ್ಮಣಿಯೆನಿಸಿದ್ದ ಕನ್ನಡ ಚಿತ್ರರಂಗದ ಯುವ ನಟರಾದ ಪುನೀತ್ ರಾಜ್ಕುಮಾರ್ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ.ರವಿ ಅವರು ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ದಿನೇಶ್ ಗುಂಡೂರಾವ್
ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜ್‍ಕುಮಾರ್ ವಿಧಿವಶರಾದ ಸುದ್ದಿ ಬರಸಿಡಿಲಿನ ಆಘಾತ ತಂದಿದೆ. ಅಭಿಮಾನಿಗಳ ಪಾಲಿಗೆ ಪ್ರೀತಿಯ ‘ಅಪ್ಪು’ ಆಗಿದ್ದ ಪುನೀತ್ ಕೇವಲ 46ನೇ ವಯಸ್ಸಿಗೆ ನಿಧನರಾಗಿದ್ದು ಅತ್ಯಂತ ನೋವಿನ ವಿಚಾರ. ನಮ್ಮ ಕುಟುಂಬದೊಂದಿಗೆ ಆತ್ಮೀಯ ಒಡನಾಟವಿದ್ದ ಪುನೀತ್ ನಮ್ಮ ಜೊತೆ ಇಲ್ಲ ಎಂಬುದೇ ಅರಗಿಸಿಕೊಳ್ಳಲಾಗದ ಸಂಕಟ.
ಬಾಲ್ಯದ ಒಡನಾಡಿ ರಕ್ಷಾ ರಾಮಯ್ಯ
ಶಾಲಾ ದಿನಗಳ ಸಹಪಾಠಿ, ಒಡನಾಡಿಯಾಗಿದ್ದ ನಾಡಿನ ಹಿರಿಯ ನಟ ಹಿರಿಯ ನಟ ಪುನಿತ್ ರಾಜ್ ಕುಮಾರ್ ಅವರ ನಿಧನಕ್ಕೆ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಕಂಬನಿ ಮಿಡಿದಿದ್ದಾರೆ.
ಅತಿ ಚಿಕ್ಕ ವಯಸ್ಸಿನಲ್ಲಿಯೇ ಕನ್ನಡ ಚಿತ್ರರಂಗದಲ್ಲಿ ಶ್ರೇಷ್ಠ ನಟನಾಗಿ ಅಸಂಖ್ಯಾತ ಅಭಿಮಾನಿಗಳಲ್ಲಿ ಛಾಪು ಮೂಡಿಸಿದ್ದ ನಮ್ಮೆಲ್ಲರ ನೆಚ್ಚಿನ ಪುನೀತ್ ರಾಜ್ ಕುಮಾರ್ ಅಗಲಿಕೆ ದುಃಖ ತಂದಿದೆ.ಪುನೀತ್ ಅವರನ್ನು ಕಳೆದುಕೊಂಡಿರುವುದನ್ನು ಜೀರ್ಣೀಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಗಲಿದ ಈ ಚೇತನಕ್ಕೆ ನನ್ನ ಆಶ್ರುತರ್ಪಣಗಳು. ರಾಜಕಾರಣ ಮತ್ತು ಚಿತ್ರರಂಗವನ್ನು ಮೀರಿದ ಸ್ನೇಹ ನಮ್ಮದಾಗಿತ್ತು. ಅವರನ್ನು ನಾನು ಸಹೋದರನಂತೆ ಪ್ರೀತಿಸುತ್ತಿದ್ದೆ. ವೈಯಕ್ತಿಕವಾಗಿ ನಾನು ಬಹುದೊಡ್ಡ ಆಸ್ತಿಯನ್ನು ಕಳೆದುಕೊಂಡಿದ್ದೇನೆ.
ಆನಂದ್ ಸಿಂಗ್ ಸಂತಾಪ
ನನ್ನ ದೀರ್ಘಕಾಲದ ಸ್ನೇಹಿತರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿನ ನಿಧನದ ಸುದ್ದಿ ನನಗೆ ದಿಗ್ಭ್ರಮೆ ಉಂಟು ಮಾಡಿದೆ. ಪುನೀತ್ ರಾಜ್ ಕುಮಾರ್ ರವರು ಹೃದಯ ಶ್ರೀಮಂತಿಕೆಯ ವ್ಯಕ್ತಿತ್ವವುಳ್ಳವರಾಗಿದ್ದು, ಅಪರೂಪದ ವ್ಯಕ್ತಿ ಆಗಿದ್ದರು. ಹಾಗಾಗಿ ಪ್ರತಿಯೊಬ್ಬರಿಂದ ಗೌರವಕ್ಕೆ ಪಾತ್ರರಾಗಿದ್ದರು ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆನಂದ್ ಸಿಂಗ್ ಸಂತಾಪ ಸೂಚಿಸಿದ್ದಾರೆ.
ಎಸ್.ಆರ್.ವಿಶ್ವನಾಥ್, ಬಿಡಿಎ ಅಧ್ಯಕ್ಷರು.
ಆರೆಸ್ಸೆಸ್ ಸಂತಾಪ
ಪುನೀತ್ ರಾಜಕುಮಾರ್ ಅವರ ನಿಧನಕ್ಕೆ ಧಾರವಾಡದಲ್ಲಿ ನಡೆಯುತ್ತಿರುವ ಆರೆಸ್ಸೆಸ್ ನ ಅಖಿಲ ಭಾರತೀಯ ಕಾರ್ಯಕಾರಿ ಮಂಡಳಿಯು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ . ಪುನೀತ್ ರಾಜ್ಕುಮಾರ್ ಅವರ ಅಗಲಿಕೆಯನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಅವರ ಕುಟುಂಬದ ಸದಸ್ಯರು ಮತ್ತು ಅಭಿಮಾನಿಗಳಿಗೆ ಭಗವಂತನು ನೀಡಲೆಂದು ಸ್ವಯಂ ಸೇವಕ ಸಂಘ ಪ್ರಾರ್ಥಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.