ರಾಜ್ಯ ಬಿಜೆಪಿ ಹಿರಿಯ ನಾಯಕರಿಗೆ ನಿವೃತ್ತಿ ಭಾಗ್ಯವೇ? ಗುಜರಾತ್ ಫಲಿತಾಂಶ ಹುಟ್ಟು ಹಾಕಿದೆ ಬಹುದೊಡ್ಡ ಚರ್ಚೆ
ಆಡಳಿತ ವಿರೋಧಿ ಅಲೆಯನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ ಹಿಮಾಚಲ ಒಂದು ಉದಾಹರಣೆ
Team Udayavani, Dec 8, 2022, 4:25 PM IST
ಬಹು ನಿರೀಕ್ಷಿತ ಗುಜರಾತ್ ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಈ ಎರಡು ರಾಜ್ಯಗಳ ಫಲಿತಾಂಶ ಕರ್ನಾಟಕದ ಮೇಲೆ ಯಾವ ಪರಿಣಾಮ ಬೀರಬಹುದೆಂಬ “ಹಾಟ್ ಟಾಫಿಕ್” ಈಗ ರಾಜಕೀಯ ಪಡಸಾಲೆಯಲ್ಲಿ ಪ್ರಾರಂಭವಾಗಿದ್ದು, ಉಭಯ ಪಕ್ಷಗಳಿಗೂ ಇದು “ಸ್ವಲ್ಪ ಹುಳಿ, ಸ್ವಲ್ಪ ಸಿಹಿ” ಎಂದೇ ವ್ಯಾಖ್ಯಾನಿಸಬಹುದು.
ಸದ್ಯದಲ್ಲೇ ಕರ್ನಾಟಕದಲ್ಲಿ ಚುನಾವಣೆ ಎದುರಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಈಗ ಎರಡು ರಾಜ್ಯದ ಚುನಾವಣೆಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವ್ಯಾಖ್ಯಾನಿಸಿಕೊಳ್ಳುತ್ತಿವೆ. ಗುಜರಾತ್ ಗೆಲುವಿನಿಂದ ನೂರ್ಮಡಿ ಉಬ್ಬಿರುವ ಬಿಜೆಪಿ ಇಲ್ಲಿಯೂ ಹೀಗೆ ಆಗಲಿದೆ ಎಂದು ಭವಿಷ್ಯ ನುಡಿಯಲಾರಂಭಿಸಿದೆ. ಅದೇ ರೀತಿ ಕಾಂಗ್ರೆಸಿಗರಿಗೆ ಹಿಮಾಚಲ ಸಮರ್ಥನೆಗೆ ಬಹುದೊಡ್ಡ ಅಸ್ತ್ರವಾಗಿದೆ. ಅವರವರ ಮೂಗಿನ ನೇರಕ್ಕೆ ಈ ಎರಡೂ “ಮಾಡೆಲ್” ವ್ಯಾಖ್ಯಾನಕ್ಕೆ ಒಳಗಾಗುತ್ತಿದೆ.
ಗುಜರಾತ್ ರೀತಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರುತ್ತೇವೆ ಎಂದು ವಾದಿಸುವ ಬಿಜೆಪಿ ಮುಖಂಡರು ರಾಜ್ಯದಲ್ಲಿ ಕಾಂಗ್ರೆಸ್ ಸ್ಥಿತಿಗತಿ ಹೇಗಿದೆ ಎಂದು ಸದ್ಯಕ್ಕೆ ಮರೆತಂತೆ ಕಾಣುತ್ತಿದೆ. ಗುಡಿಸಿ ಕೈ ಕೊಡವಿ ಬಿಡುತ್ತೇವೆ ಎಂಬಷ್ಟು ದುರ್ಬಲ ನಾಯಕತ್ವ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಇಲ್ಲ. ಇಲ್ಲಿ ಸ್ಥಳೀಯ ನಾಯಕತ್ವ ಪ್ರಬಲವಾಗಿಯೇ ಇದೆ. ಆದರೆ ಗುಜರಾತ್ ನಲ್ಲಿ ಈ ಪರಿಸ್ಥಿತಿ ಇರಲಿಲ್ಲ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರು ಚುನಾವಣೆಗೆ ಮುನ್ನವೇ ಇಲ್ಲಿ ಗೆಲುವಿನ ಆಸೆಯನ್ನು ಬಿಟ್ಟು ಬಿಟ್ಟಿದ್ದರು. ಅದೇ ರೀತಿ ಹಿಮಾಚಲದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಮತದಾರರ ಮಗ್ಗುಲು ಬದಲಾಯಿಸುತ್ತಾನೆ ಎಂಬ ವಾಡಿಕೆ ನಿಜವಾದರೂ ಎಷ್ಟು ದಿನಗಳ ಕಾಲ ಕಾಂಗ್ರೆಸ್ ತನ್ನ ಸರ್ಕಾರವನ್ನು ಕಾಪಿಟ್ಟುಕೊಳ್ಳಬಹುದೆಂಬ ಪ್ರಶ್ನೆ ಆರಂಭದಿಂದಲೇ ಉದ್ಭವವಾಗಿದೆ. ಆಡಳಿತ ವಿರೋಧಿ ಅಲೆಯ ವಿರುದ್ಧ ಈಜುವುದು ಹೇಗೆಂಬುದಕ್ಕೆ ಗುಜರಾತ್ ಬಿಜೆಪಿಗೆ ಮಾದರಿಯಾದರೆ, ಆಡಳಿತ ವಿರೋಧಿ ಅಲೆಯನ್ನು ನಿರ್ಲಕ್ಷಿಸಿದರೆ ಏನಾಗುತ್ತದೆ ಎಂಬುದಕ್ಕೆ ಹಿಮಾಚಲ ಒಂದು ಉದಾಹರಣೆಯಾಗಬಹುದು. ಹೀಗಾಗಿ ಈ ಎರಡೂ ರಾಜ್ಯಗಳು ಬಿಜೆಪಿಗೆ “ಮಾಡೆಲ್” ಆಗಿಯೇ ಇದೆ.
ಆಡಳಿತಾತ್ಮಕವಾಗಿ ಬಿಜೆಪಿ ಮೊದಲಿನಿಂದಲೂ ಗುಜರಾತ್ “ಮಾಡೆಲ್” ಬಗ್ಗೆ ಮಾತನಾಡುತ್ತಲೇ ಬಂದಿದೆ. ರಾಜಕೀಯ “ಸ್ಥಿರತೆ” ದೃಷ್ಟಿಯಿಂದ ಈ ಮಾತುಗಳನ್ನು ತೇಲಿ ಬಿಡಲಾಗಿದೆ ಎಂಬುದು ಬಿಜೆಪಿ ನಾಯಕರ ವಾದ. ಆದರೆ ಈ ಬಾರಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ತಮ್ಮ ತವರು ಜಿಲ್ಲೆಯಲ್ಲಿ ಅನುಸರಿಸಿದ ತಂತ್ರಗಾರಿಕೆ ರಾಜ್ಯಕ್ಕೆ ಖಂಡಿತ ಮಾದರಿಯಾಗಬಲ್ಲದು. ಆಡಳಿತ ವಿರೋಧಿ ಅಲೆಯನ್ನೇ ಅಸ್ತ್ರವಾಗಿ ಪ್ರಯೋಗಿಸುವ ಪ್ರತಿಪಕ್ಷಗಳನ್ನು ಹೇಗೆ ಕಟ್ಟಿ ಹಾಕಬಹುದೆಂಬುದಕ್ಕೆ ಇದೊಂದು ದೃಷ್ಟಾಂತವಾಗಬಲ್ಲದು.
ಈ ಬಾರಿ ಗುಜರಾತ್ ನಲ್ಲಿ ಚುನಾವಣಾ ಪ್ರಕ್ರಿಯೆಗಳು ಆರಂಭವಾಗುತ್ತಿದ್ದಂತೆ, ಎರಡನೇ ಶ್ರೇಣಿಯ ನಾಯಕರನ್ನು ಮುಂಚೂಣಿಗೆ ತರುವ ಪ್ರಯತ್ನಗಳು ವ್ಯಾಪಕವಾಗಿ ನಡೆದವು. ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ 44 ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಯಿತು. ಹಾಲಿ ಸಚಿವ ಬ್ರಿಜೇಶ್ ಮಿಶ್ರಾ, ರಾಜೇಂದ್ರ ತ್ರಿವೇದಿ, ಹಾಲಿ ಸ್ಪೀಕರ್ ನೀಮಾ ಬೆನ್ ಸೇರಿದಂತೆ ಘಟಾನುಘಟಿಗಳು ಈ ಪಟ್ಟಿಯಲ್ಲಿದ್ದರು. ರೂಪಾನಿ ಸಂಪುಟದಲ್ಲಿ ಸಚಿವರಾಗಿದ್ದ 7 ಮಾಜಿ ಸಚಿವರಿಗೆ ಟಿಕೆಟ್ ಕೈ ತಪ್ಪಿತ್ತು. ಇದಕ್ಕೆ ಪರ್ಯಾಯವಾಗಿ ಯುವ ಮುಖಗಳು, ಮಹಿಳೆಯರು, ಸ್ಥಳೀಯ ಸಂಸ್ಥೆ, ಎಪಿಎಂಸಿಗಳಲ್ಲಿ ಗೆದ್ದು ಪಕ್ಷದ ಪರವಾಗಿ ಭರವಸೆ ಮೂಡಿಸಿದ್ದ ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ಕಲ್ಪಿಸಲಾಯಿತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ವಿವಿಧ ಕಾರಣಗಳಿಂದ ಸೋತರೂ ಛಲ ಬಿಡದೇ ಐದು ವರ್ಷಗಳ ಕಾಲ ಪಕ್ಷ ಕಟ್ಟಿದ 13 ಮಾಜಿ ಶಾಸಕರಿಗೆ ಈ ಬಾರಿ ಟಿಕೆಟ್ ನೀಡಲಾಗಿತ್ತು. ಸ್ಪರ್ಧಾಳುಗಳ ಪೈಕಿ 13 ಜನರು 40 ವರ್ಷದೊಳಗಿನವರಾಗಿದ್ದರು. ಠಾಕೂರ್, ಕೋಲಿ, ಅಹಿರ್, ಚೌಧರಿ, ಖಾರ್ವ, ಮಾದಿ, ಪಾಂಚಾಲ್, ಮಿಸ್ತ್ರಿ ಸೇರಿದಂತೆ ಇತರೆ ಹಿಂದುಳಿದ ವರ್ಗಕ್ಕೆ 58 ಕ್ಷೇತ್ರಗಳಲ್ಲಿ ಇತರೆ ಹಿಂದುಳಿದ ವರ್ಗದ ಪ್ರತಿನಿಧಿಗಳಿಗೆ ಟಿಕೆಟ್ ನೀಡಲಾಗಿತ್ತು. ಪಾಟೀದಾರರಿಗೂ ಯಥೇಚ್ಚ ಪ್ರಾತಿನಿಧ್ಯ ದೊರಕಿತ್ತು. ಇನ್ನು ಟಿಕೆಟ್ ನಿರಾಕರಣೆಯ ವಿಚಾರಕ್ಕೆ ಬಂದರೆ ಅಲ್ಲೊಂದು ತಂತ್ರಗಾರಿಕೆ ಇತ್ತು. ಸರಕಾರದ ವಿರುದ್ಧ ವ್ಯಕ್ತಿಗತವಾಗಿ ಬೀಸುತ್ತಿದ್ದ ಅಲೆಯನ್ನು ಈ ಮೂಲಕ ನಿವಾರಿಸಲಾಯಿತು. ಇದೇ ಮಾನದಂಡವನ್ನು ಆಧಾರವಾಗಿಟ್ಟುಕೊಂಡು ಈಗ ರಾಜ್ಯದಲ್ಲೂ ಹಿರಿಯರಿಗೆ ಟಿಕೆಟ್ ನಿರಾಕರಣೆ ಮಾಡಬಹುದೆಂಬ ಚರ್ಚೆ ಬಲವಾಗಿ ಕೇಳಿ ಬರುತ್ತಿದೆ.
ಈ ನಿಟ್ಟಿನಲ್ಲಿ ಬಿಜೆಪಿ ಈಗಾಗಲೇ ನಾಲ್ಕು ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಆ ಎಲ್ಲ ಸರ್ವೆಯಲ್ಲೂ ಹಿರಿಯರಿಗೆ ವಿರುದ್ಧವಾದ ಅಭಿಪ್ರಾಯವೇ ವ್ಯಕ್ತವಾಗಿದೆ. ಹೀಗಾಗಿ ಗುಜರಾತ್ ಮಾನದಂಡದಲ್ಲಿ ಚುನಾವಣಾ ಚಾಣಕ್ಯ ಅಮಿತ್ ಶಾ ರಾಜ್ಯದಲ್ಲೂ ಪ್ರಯೋಗಕ್ಕೆ ಮುಂದಾದರೆ ಬಿಜೆಪಿಯ ಹಲವು ಮುಂಚೂಣಿ ನಾಯಕರಿಗೆ ಈ ಬಾರಿಯ ಚುನಾವಣೆಯಲ್ಲಿ ನಿವೃತ್ತಿ ಭಾಗ್ಯ ದೊರಕುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಷ್ಟ್ರೀಯ ಪಕ್ಷದ ಮಾನ್ಯತೆ
ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ ನಿರೀಕ್ಷಿತ ಸ್ಥಾನ ಗಳಿಕೆ ಮಾಡುವಲ್ಲಿ ಆಮ್ ಆದ್ಮಿ ಪಕ್ಷ ಸಫಲವಾಗದೇ ಇದ್ದರೂ, ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ದಿಲ್ಲಿಗೆ ಮಾತ್ರ ಸೀಮಿತವಾಗಿದ್ದ ಆಪ್ ಈಗ ಪಂಜಾಬ್, ಗೋವಾ, ಹಿಮಾಚಲ, ಗುಜರಾತ್ ನಲ್ಲೂ ತನ್ನ ಶಾಖೆಯನ್ನು ವಿಸ್ತರಿಸಿಕೊಂಡಿದೆ. ಈ ಮೂಲಕ ದೇಶದ 9ನೇ ರಾಷ್ಟ್ರೀಯ ಪಕ್ಷವಾಗಿ ಅದು ಹೊರಹೊಮ್ಮಲಿದೆ. ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಯೊಂದಿಗೆ ಅದು ಕರ್ನಾಟಕದ ಚುನಾವಣೆಯ ಅಖಾಡ ಪ್ರವೇಶ ಮಾಡಲಿದೆ ಎಂಬುದಷ್ಟೇ ಕೇಜ್ರೀವಾಲ್ ಬಣಕ್ಕೆ ಸದ್ಯಕ್ಕಿರುವ ಸಮಾಧಾನ. ಇದರ ಜತೆಗೆ ಬಿಜೆಪಿಗೆ ಅಲ್ಲಲ್ಲಿ “ಟಕ್ಕರ್” ಕೊಡುವ ಸಾಮರ್ಥ್ಯವೇನಾದರೂ ಇದ್ದರೆ ಅದು “ಆಮ್ ಆದ್ಮಿಗೆ “ ಎಂದು ಸದ್ಯಕ್ಕೆ ಅರ್ಥೈಸಿಕೊಳ್ಳಬಹುದೇನೋ ! ಇದನ್ನು ಹೊರತುಪಡಿಸಿದರೆ ರಾಜ್ಯ ರಾಜಕಾರಣದ ಮೇಲೆ ಆಪ್ ಪರಿಣಾಮ ಸದ್ಯಕ್ಕೆ ಶೂನ್ಯ ಎಂದೇ ಹೇಳಬಹುದು.
ರಾಘವೇಂದ್ರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Kambala: ಹೊಸ ಪ್ರಯೋಗದತ್ತ ಕಂಬಳ: ಈ ಬಾರಿ ಒಂದಲ್ಲ, ಮೂರು ಹೊಸ ತಂತ್ರಜ್ಞಾನ ಅಳವಡಿಕೆ
Home made food ನಿಜವಾಗಿಯೂ ಪೋಷಕಾಂಶದಿಂದ ತುಂಬಿದೆಯೇ…?
Health benefits: ನಿಂಬೆಹಣ್ಣಿನಿಂದ ಹಲವು ಆರೋಗ್ಯ ಪ್ರಯೋಜನಗಳು…
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.