ಶೇಂಗಾ ಇಳುವರಿ ಭಾರೀ ಕುಸಿತ, ರೈತರಲ್ಲಿ ಆತಂಕ
ಕಳಪೆ ಬೀಜ ಪೂರೈಕೆ,ವಾತಾವರಣ ಪರಿಣಾಮ ಹಿನ್ನೆಲೆ
Team Udayavani, May 7, 2022, 7:43 AM IST
ಸರಿಯಾಗಿ ಬೆಳೆಯದೆ ಕಪ್ಪಾಗಿರುವ ಶೇಂಗಾ ಬೀಜ.
ಕುಂದಾಪುರ ಕರಾವಳಿಯ ಮಟ್ಟಿಗೆ ಉಡುಪಿ ಜಿಲ್ಲೆಯ ಉತ್ತರ ಭಾಗದ ಕೆಲವು ಕಡೆ ಮಾತ್ರ ಬೆಳೆಯಲಾಗುವ ನೆಲಗಡಲೆ ಬೆಳೆಗೆ ಈ ಬಾರಿ ಸಂಕಷ್ಟ ಎದುರಾಗಿದೆ. ಪ್ರತೀ ರೈತನಿಗೂ ಕ್ವಿಂಟಾಲ್ ಗಟ್ಟಲೆ ಕಡಿಮೆ ಇಳುವರಿ ಬಂದಿದೆ.
ಆಗಾಗ್ಗೆ ಮಳೆ, ಮೋಡ ಮತ್ತು ಚಳಿ ಕಡಿಮೆಯಾದ ಪರಿಣಾಮ ಹಾಗೂ ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಕೆ ಇದಕ್ಕೆ ಕಾರಣ.
ಉಡುಪಿ ಜಿಲ್ಲೆಯ ಬೈಂದೂರು, ವಂಡ್ಸೆ, ಕುಂದಾಪುರ, ಕೋಟ, ಬ್ರಹ್ಮಾವರ ಮತ್ತು ಉಡುಪಿ ಹೋಬಳಿಯಲ್ಲಿ ಶೇಂಗಾ ಬೆಳೆಯಲಾಗುತ್ತಿದೆ. ಅಂದಾಜು 1,700-2,000 ಹೆಕ್ಟೇರ್‌ನಲ್ಲಿ ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಬೆಳೆಗಾರರಿದ್ದಾರೆ. ಈ ಬಾರಿ ಒಟ್ಟು 1,900 ಹೆಕ್ಟೇರ್‌ನಲ್ಲಿ ಬಿತ್ತಲಾಗಿದ್ದು, ಹಿಂದಿನ ವರ್ಷಗಳಿಗಿಂತ 100 ಹೆಕ್ಟೇರ್‌ನಷ್ಟು ಕಡಿಮೆ ಬಿತ್ತನೆಯಾಗಿದೆ.
9 ಕ್ವಿಂಟಾಲ್ ಬೆಳೆಯುವಲ್ಲಿ 2-3 ಕ್ವಿಂಟಾಲ್
ಪ್ರತೀ ವರ್ಷ 60 ಸೆಂಟ್ಸ್ (1 ಮುಡಿ) ಗದ್ದೆಯಲ್ಲಿ ನೆಲಗಡಲೆ ಬೆಳೆಯುತ್ತೇನೆ. ಪ್ರತೀ ವರ್ಷ 9ರಿಂದ 10 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಆದರೆ ಈ ಬಾರಿ 2-3 ಕ್ವಿಂಟಾಲ್ ಕೂಡ ಬಂದಿಲ್ಲ. ಪ್ರತೀ ವರ್ಷ 30 ಸಾವಿರ ರೂ. ಖರ್ಚು ಮಾಡಿದರೆ 70-75 ಸಾವಿರ ರೂ. ಆದಾಯ ಬರುತ್ತಿತ್ತು. ಈ ಬಾರಿ 30 -35 ಸಾವಿರ ರೂ. ಖರ್ಚು ಮಾಡಿದ್ದೇನೆ. ಶೇಂಗಾ ಇನ್ನೂ ಮಾರಾಟ ಮಾಡಿಲ್ಲ. ಆದ ಖರ್ಚು ಕೂಡ ಹುಟ್ಟುವುದು ಕಷ್ಟ ಎನ್ನುತ್ತಾರೆ ಹೆರಂಜಾಲಿನ ಹಿರಿಯ ಕೃಷಿಕ ಶೀನ ಗಾಣಿಗ.
ಕಳಪೆ ಬೀಜ ಕಾರಣ: ಆರೋಪ
ಈ ಬಾರಿ ಇಲಾಖೆಯಿಂದ ವಿತರಣೆಯಾದ ಶೇಂಗಾ ಬೀಜ ಹಲವು ದಿನಗಳಾದರೂ ಮೊಳಕೆ ಬಂದಿರಲಿಲ್ಲ ಎನ್ನುವ ಆರೋಪ ಆರಂಭದಲ್ಲೇ ಕೇಳಿ ಬಂದಿತ್ತು. ಕಳಪೆ ಗುಣಮಟ್ಟದ ಬೀಜದಿಂದಾಗಿಯೇ ಇಳುವರಿ ಕಡಿಮೆಯಾಗಿದೆ. ಬಂದಿರುವ ಬೆಳೆಯೂ ಬಹುಪಾಲು ಟೊಳ್ಳಾಗಿದೆಯಲ್ಲದೆ ಗಾತ್ರವೂ ಸಣ್ಣದಾಗಿದೆ ಎನ್ನುವುದು ರೈತರ ಅಳಲು.
ಹವಾಮಾನ ಪರಿಣಾಮ?
ಶೇಂಗಾ ಒಣಭೂಮಿಯ ಬೆಳೆ. ನವೆಂಬರ್ ಆರಂಭದಲ್ಲಿ ಗದ್ದೆ ಹದ ಮಾಡಿ, ಡಿಸೆಂಬರ್‌ನಲ್ಲಿ ಬಿತ್ತಲಾಗುತ್ತದೆ. ಆದರೆ ಈ ಬಾರಿ ನಿರಂತರ ಮಳೆಯಿಂದಾಗಿ ಜನವರಿಯ ವರೆಗೂ ತೇವಾಂಶ ಹೆಚ್ಚಿದ್ದು, ಬಿತ್ತನೆ ಸಾಧ್ಯವಾಗಿರಲಿಲ್ಲ. ಕಡಿಮೆ ಇಳುವರಿಗೆ ಇದು ಕೂಡ ಕಾರಣವಾಗಿರಬಹುದು. ಶೇಂಗಾ ಕಾಯಿ ಕಟ್ಟುವ ವೇಳೆ ನೀರಿನ ಕೊರತೆಯಾದರೂ ಸಮಸ್ಯೆಯಾಗುತ್ತದೆ. ಈ ಬಾರಿಯ ಏರುಪೇರು ಹವಾಮಾನ ಇಳುವರಿ ಕುಸಿತಕ್ಕೆ ಕಾರಣವಾಗಿರಬಹುದು ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ಅಭಿಪ್ರಾಯ.
ಬೆಳೆ ನಷ್ಟವಾಗಿದೆ:
ಪರಿಹಾರ ಕೊಡಿ
ಖಾಸಗಿಯವರಲ್ಲಿ ಖರೀದಿಸಿದ ಬಿತ್ತನೆ ಬೀಜದಿಂದ ಹೆಚ್ಚೇನೂ ನಷ್ಟವಾಗದೆ ಉತ್ತಮ ಫಸಲು ಬಂದಿದೆ. ಆದರೆ ಇಲಾಖೆಯಿಂದ ಪಡೆದ ಬೀಜದಿಂದ ಇಳುವರಿ ಕಡಿಮೆಯಾಗಿದೆ ಎನ್ನುವುದು ರೈತರ ವಾದ. ನಿರೀಕ್ಷಿತ ಬೆಳವಣಿಗೆ ಆಗದೆ ಶೇಂಗಾದ ಗಾತ್ರ ಸಣ್ಣದಿದೆ. ಇದು ತೂಕದಲ್ಲಿ ವ್ಯತ್ಯಾಸಕ್ಕೂ ಕಾರಣವಾಗಿದೆ. ವಾತಾವರಣವೂ ಕಾರಣ ಇರಬಹುದು. ಇಲಾಖೆ ಮತ್ತು ಸರಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲಿ ಎನ್ನುವುದು ಶೇಂಗಾ ಬೆಳೆಗಾರರ ಆಗ್ರಹ.
ಕಳಪೆ ಮಟ್ಟದ ಬೀಜ ಪೂರೈಸಲಾಗಿದೆ ಎನ್ನುವ ಆರೋಪದಲ್ಲಿ ಹುರುಳಿಲ್ಲ. ಪರೀಕ್ಷೆ ನಡೆಸಿಯೇ ಬೀಜ ವಿತರಿಸಲಾಗಿದೆ. ನಿರಂತರ ಮಳೆ ಮತ್ತು ಬೇಕಾದ ವೇಳೆ ನೀರಿನ ಕೊರತೆಯಿಂದ ಇಳುವರಿ ಕುಂಠಿತಗೊಂಡಿರಬಹುದು. ಈ ರೀತಿ ಇಳುವರಿ ಕಡಿಮೆಯಾದಾಗ ಪರಿಹಾರ ಕೊಡುವ ಕ್ರಮವಿಲ್ಲ. ನೆರೆ, ಬರ ಬಂದರೆ ಮಾತ್ರ ನಷ್ಟ ಪರಿಹಾರ ಸಿಗುತ್ತದೆ. ಇದು ಸರಕಾರದ ಮಟ್ಟದಲ್ಲಿಯೇ ಆಗಬೇಕಿದೆ.
– ಕೆಂಪೇಗೌಡ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಉಡುಪಿ
ಖಾಸಗಿಯಿಂದ ಸ್ವಲ್ಪ ಬೀಜ ಖರೀದಿಸಿದ್ದೆ, ಉಳಿದದ್ದು ಇಲಾಖೆಯಿಂದ. ಇಲಾಖೆಯಿಂದ ಪೂರೈಕೆಯಾದ ಬೀಜದ ಇಳುವರಿ ಕಡಿಮೆ ಬಂದಿದೆ. ಇಲಾಖಾಧಿಕಾರಿಗಳು ಭೇಟಿ ನೀಡಿ ಅಧ್ಯಯನ ನಡೆಸಿ, ಪರಿಹಾರ ನೀಡಬೇಕು.
– ರಾಜೇಶ್ , ನಾವುಂದ,
ಶೇಂಗಾ ಬೆಳೆಗಾರ
-ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Actor Darshan Bail Case: ಹತ್ಯೆ ಸ್ಥಳದಲ್ಲಿ ದರ್ಶನ್ ಇದ್ರು: ಫೋಟೋ ಸಾಕ್ಷ್ಯ ಲಭ್ಯ!
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.