IPL 2023: ಹೈದರಾಬಾದ್‌ಗೆ ಎದುರಾಗಿದೆ ಪಂಜಾಬ್ ಸವಾಲು
Team Udayavani, Apr 9, 2023, 8:10 AM IST
ಹೈದರಾಬಾದ್: ಆಡಿದ ಎರಡೂ ಪಂದ್ಯಗಳನ್ನು ಕಳೆದುಕೊಂಡಿರುವ ಸನ್‌ರೈಸರ್ ಹೈದರಾಬಾದ್ ಭಾನುವಾರ ಮೂರನೇ ಅಗ್ನಿಪರೀಕ್ಷೆಗೆ ಸಜ್ಜಾಗಲಿದೆ. ಎರಡನ್ನೂ ಗೆದ್ದಿರುವ ಪಂಜಾಬ್ ಕಿಂಗ್ಸ್ ತಂಡವನ್ನು ತವರಿನಂಗಳದಲ್ಲಿ ಎದುರಿಸಲಿದೆ. ಐಡನ್ ಮಾರ್ಕ್‌ರಮ್ ಪಡೆ ಮೊದಲ ಮಾರ್ಕ್ ಗಳಿಸೀತೇ ಎಂಬುದು ದೊಡ್ಡ ಪ್ರಶ್ನೆ.
ಕಳೆದೆರಡು ಐಪಿಎಲ್ ಆವೃತ್ತಿಗಳಲ್ಲಿ ಎಂಟರ ನಂಟನ್ನು ಗಟ್ಟಿಗೊಳಿಸಿರುವ ಹೈದರಾಬಾದ್ ಪ್ರಸಕ್ತ ಋತುವಿನಲ್ಲೂ ಪ್ರಗತಿ ಕಂಡಿಲ್ಲ. ರಾಜಸ್ಥಾನ ವಿರುದ್ಧ 72 ರನ್ನುಗಳ ಹೊಡೆತ ಅನುಭವಿಸಿದ ಬಳಿಕ ಒಂದು ದಿನದ ಹಿಂದಷ್ಟೇ ಲಕ್ನೋ ಕೈಯಲ್ಲಿ 5 ವಿಕೆಟ್‌ಗಳ ಸೋಲನುಭವಿಸಿತು. ಮುಗ್ಗರಿಸಲು ಮುಖ್ಯ ಕಾರಣ, ಬ್ಯಾಟಿಂಗ್ ವೈಫಲ್ಯ.
ಮೊದಲ ಪಂದ್ಯದಲ್ಲಿ 131 ರನ್, ಎರಡನೇ ಪಂದ್ಯದಲ್ಲಿ 121 ರನ್. ಇದು ಹೈದರಾಬಾದ್ ತಂಡದ ಬ್ಯಾಟಿಂಗ್ ದುರಂತವನ್ನು ಸಾರುತ್ತದೆ. ಅದರಲ್ಲೂ ಪ್ರಥಮ ಪಂದ್ಯವನ್ನು ತವರಲ್ಲೇ ಆಡಿತ್ತು. ರಾಜಸ್ಥಾನ್ ವಿರುದ್ಧ ಪವರ್ ಪ್ಲೇಯಲ್ಲಿ 2ಕ್ಕೆ 30 ರನ್ ಮಾಡಿದರೆ, ಲಕ್ನೋ ಎದುರು ಒಂದಕ್ಕೆ 43 ರನ್ ಮಾಡಿದ್ದಷ್ಟೇ ಪ್ರಗತಿಯ ಸೂಚ್ಯಂಕ. ಅಭಿಷೇಕ್ ಶರ್ಮ ಅವರ ಸೊನ್ನೆಯೊಂದಿಗೆ ಹೈದರಾಬಾದ್ ತನ್ನ ಈ ವರ್ಷದ ಬ್ಯಾಟಿಂಗ್‌ಗೆ ಚಾಲನೆ ನೀಡಿತ್ತು. ಇನ್ನೂ ಈ ಸಂಕಟದಿಂದ ಮುಕ್ತವಾಗಿಲ್ಲ. ಇದರಿಂದ ಪಾರಾಗದೆ ಮುನ್ನಡೆಯಲು ಸಾಧ್ಯವಿಲ್ಲ ಎಂಬುದು ಸದ್ಯದ ಸ್ಥಿತಿ.
ಮೊದಲ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಿದರು. ದ್ವಿತೀಯ ಪಂದ್ಯಕ್ಕೆ ನಾಯಕ ಐಡನ್ ಮಾರ್ಕ್‌ರಮ್ ಮರಳಿದರು. ಆದರೆ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಅವರೇ ಗೋಲ್ಡನ್ ಡಕ್ ಬಲೆಗೆ ಸಿಲುಕಿ ತಂಡವನ್ನು ಇನ್ನಷ್ಟು ಸಂಕಟಕ್ಕೆ ತಳ್ಳಿದರು. ಮಾಯಾಂಕ್ ಅಗರ್ವಾಲ್, ಅಭಿಷೇಕ್ ಶರ್ಮ, ಅನ್ಮೋಲ್‌ಪ್ರೀತ್ ಸಿಂಗ್, ರಾಹುಲ್ ತ್ರಿಪಾಠಿ, ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್… ಒಟ್ಟಾರೆಯಾಗಿ ತಂಡದ ಬ್ಯಾಟಿಂಗ್ ಲೈನ್‌ಅಪ್ ಸುಧಾರಣೆ ಕಾಣಬೇಕಾದದ್ದು ಬಹಳಷ್ಟಿದೆ. ದಕ್ಷಿಣ ಆಫ್ರಿಕಾದ ಬಿಗ್ ಹಿಟ್ಟಿಂಗ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್‌ಗೆ ಅವಕಾಶ ನೀಡಬೇಕಾದ ತುರ್ತು ಅಗತ್ಯವಿದೆ.
ಬೌಲಿಂಗ್ ವಿಭಾಗದಲ್ಲಿ ಅಫ್ಘಾನಿಸ್ತಾನದ ಪೇಸರ್ ಫಜಲ್ ಹಕ್ ಫಾರೂಖೀ, ಸ್ಪಿನ್ನರ್ ಆದಿಲ್ ರಶೀದ್ ಮಾತ್ರವೇ ಗಮನ ಸೆಳೆದಿದ್ದಾರೆ.
ಪಂಜಾಬ್ ಬಲಿಷ್ಠ:
ಪಂಜಾಬ್ ಕಿಂಗ್ಸ್ “ಹೈ ಫ್ಲೈಯಿಂಗ್’ ತಂಡ. ಕೆಕೆಆರ್ ಹಾಗೂ ಅತ್ಯಂತ ಬಲಿಷ್ಠವೆನಿಸಿದ ರಾಜಸ್ಥಾನ್ ರಾಯಲ್ಸ್‌ಗೆ ನೀರು ಕುಡಿಸಿದೆ. ಶಿಖರ್ ಧವನ್ ಅವರ ಕಪ್ತಾನನ ಆಟ, ಪ್ರಭ್‌ಸಿಮ್ರಾನ್ ಅವರ ಸ್ಫೋಟಕ ಆರಂಭ, ಅರ್ಷದೀಪ್ ಅವರ ಘಾತಕ ಸ್ಪೆಲ್ ಪಂಜಾಬ್‌ಗ ಹೆಚ್ಚಿನ ಬಲ ತಂದಿತ್ತಿದೆ. ರಾಜಪಕ್ಸ, ಆಲ್‌ರೌಂಡರ್ ಸ್ಯಾಮ್ ಕರನ್, ಸಿಕಂದರ್ ರಝ ಅವರೆಲ್ಲ ಅಪಾಯಕಾರಿಗಳೆಂಬುದು ಈಗಾಗಲೇ ಸಾಬೀತಾಗಿದೆ. ಹೇಳಿ ಕೇಳಿ ಹೈದರಾಬಾದ್ ಧವನ್ ಅವರ ಮಾಜಿ ತಂಡ. ಒಂದು ಕೈ ನೋಡಿಯೇ ಬಿಡುವುದರಲ್ಲಿ ಅನುಮಾನವಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.