ಕಳ್ಳ ಯಾರೆಂದು ಗೊತ್ತಿದ್ರೂ ಯಾಕೆ ಹೇಳಲಿಲ್ಲ ಸರ್?
Team Udayavani, Dec 11, 2022, 6:00 AM IST
“ಈ ಸಿದ್ಧಾಂತ, ಆದರ್ಶ, ಪ್ರಾಮಾಣಿಕತೆ ಅನ್ನೋದೆಲ್ಲ ಭಾಷಣಕ್ಕೇ ಸರಿ. ಬದುಕಿಗಲ್ಲ. ನೆಮ್ಮದಿಯಾಗಿ ಬದುಕಬೇಕು ಅಂದ್ರೆ ಚೆನ್ನಾಗಿ ಸಂಪಾದನೆ ಮಾಡಬೇಕು. ಸಾಕಷ್ಟು ಉಳಿತಾಯ ಮಾಡಬೇಕು. ಇಷ್ಟಾಗಿಬಿಟ್ರೆ ಲೈಫ್ ನಲ್ಲಿ ಸೆಟ್ಲ ಆಗೋದು ಸುಲಭ. ಸ್ವಂತಕ್ಕೊಂದು ಮನೆ, ಸ್ವಲ್ಪ ಬ್ಯಾಂಕ್ ಬ್ಯಾಲೆನ್ಸ್ , ಖರ್ಚಿಗೆ ಕಾಸು, ಸಾಲ ಇಲ್ಲದ ಬದುಕು, ಸಣ್ಣದೊಂದು ಸಂಪಾದನೆಯ ಕೆಲಸ- ಇಷ್ಟಿದ್ರೆ, ಜನ ತಾವಾಗಿಯೇ ಬಂದು ಮಾತಾಡಿಸ್ತಾರೆ. ಈ ಥರ ಪ್ಲಾನ್ ಮಾಡದೇ ಹೋದವರು- ನಮ್ಮ ಅಪ್ಪನ ಥರಾ ಆಗ್ತಾರೆ! ನಮ್ಮಪ್ಪ ಪೂರ್ತಿ 37 ವರ್ಷ ಸ್ಕೂಲ್ ಟೀಚರ್ ಆಗಿದ್ರು. ಏನುಪಯೋಗ? ಒಂದು ಸೈಟ್ ಮಾಡಲಿಲ್ಲ. ಮನೆ ಕಟ್ಟಿಸಲಿಲ್ಲ. ಕಾರ್ ತಗೊಳ್ಳಲಿಲ್ಲ. ದುಡೂx ಮಾಡಲಿಲ್ಲ. ನನಗೆ ಯಾವುದೇ ಸಾಲವಿಲ್ಲ ಅನ್ನುತ್ತಾ, ಆದರ್ಶ, ಸಿದ್ಧಾಂತಗಳ ಜತೆ ಬದುಕಿಬಿಟ್ರಾ. ಪರಿಣಾಮ; ಈಗಲೂ ಬಾಡಿಗೆ ಮನೆಯಲ್ಲೇ ಬದುಕು ವಂತೆ ಆಗಿದೆ. ಆದರೆ ಅಪ್ಪನ ಜತೆಯಲ್ಲೇ ಇದ್ದವರು ಟ್ಯೂಷನ್ ಮಾಡಿ, ಚೀಟಿ ನಡೆಸಿ, ಬಡ್ಡಿಗೆ ಸಾಲ ಕೊಟ್ಟು ಲಕ್ಷಾಧಿಪತಿಗಳಾಗಿದ್ದಾರೆ! ಈ ಆದರ್ಶ, ಸಿದ್ಧಾಂತಗಳಿಂದ ಏನುಪಯೋಗ? ಅದನ್ನು ಉಪ್ಪು-ಖಾರ ಹಾಕ್ಕೊಂಡು ನೆಕ್ಕೊಕಾಗುತ್ತಾ?’
ಮಕ್ಕಳು ಹೀಗೆ ಮಾತಾಡಿದಾಗೆಲ್ಲ ಗೋವಿಂದಪ್ಪ ಮಾಸ್ಟರ್‌ಗೆ ಬೇಜಾರಾಗುತ್ತಿತ್ತು. ಅವರು ಸಂಕಟದಿಂದ ಲೇ-“ನನ್ನ ಕೈಲಾದದ್ದು ನಾನು ಮಾಡಿದೀನ್ರಪ್ಪಾ. ಮಕ್ಕಳಿಗಾಗಿ ಆಸ್ತಿ ಮಾಡುವುದು ಬೇಡ, ಮಕ್ಕಳೇ ನನ್ನ ಬಹುದೊಡ್ಡ ಆಸ್ತಿ ಅನ್ನುವಂತೆ ಬೆಳೆಸಬೇಕು ಅಂತಷ್ಟೇ ಯೋಚಿಸಿದೆ. ಒಳ್ಳೆಯ ಶಾಲೆ-ಕಾಲೇಜುಗಳಲ್ಲಿ ನಿಮ್ಮನ್ನು ಓದಿಸಿದೆ. ನಿಮಗೆ ಯಾವುದೇ ಹೊರೆ ಹೊರಿಸಿಲ್ಲ. ನಾನೂ ನಿಮಗೆ ಹೊರೆಯಾಗಿ ಬದುಕ್ತಾ ಇಲ್ಲ. ಇಷ್ಟು ಅರ್ಥ ಮಾಡಿಕೊಳ್ರಪ್ಪ…’ಅನ್ನುತ್ತಿದ್ದರು. ಆ ಮಾತನ್ನು ಮಕ್ಕಳು ಒಪ್ಪುತ್ತಿರಲಿಲ್ಲ.
*****
ಅವತ್ತು ರವಿವಾರ. ರಜೆಯ ಕಾರಣಕ್ಕೆ ಎಲ್ಲರೂ ಮನೆಯಲ್ಲೇ ಇದ್ದರು. ಎಲ್ಲರೂ ತಿಂಡಿ ಮುಗಿಸಿ ಕಾಫಿ ಹೀರುತ್ತಿದ್ದಾಗಲೇ ಕರೆ ಗಂಟೆಯ ಸದ್ದಾಯಿತು. ಬಾಗಿಲು ತೆರೆದವರಿಗೆ, ವ್ಯಕ್ತಿಯೊಬ್ಬ ಕಾಣಿಸಿದ. “ಗೋವಿಂದಪ್ಪ ಸಾರ್ ಇದ್ದಾರ?’ ಎಂದ!. ಇದ್ದಾರೆ ಬನ್ನಿ ಎಂದು ಮಕ್ಕಳು ಹೇಳುವುದಕ್ಕೂ, ಒಳಮನೆಯಿಂದ ನಿಧಾನವಾಗಿ ಒಂದೊಂದೇ ಹೆಜ್ಜೆಯಿಡುತ್ತಾ ಗೋವಿಂದಪ್ಪನವರು ನಡೆದು ಬರುವುದಕ್ಕೂ ಸರಿ ಹೋಯಿತು. ಅವರನ್ನು ನೋಡುತ್ತಿದ್ದಂತೆಯೇ, ವ್ಯಕ್ತಿ ಸಾಷ್ಟಾಂಗ ನಮಸ್ಕಾರ ಮಾಡಿಬಿಟ್ಟ. ನಮಸ್ಕಾರದ ಅನಂತರ ಗೋವಿಂದಪ್ಪನವರ ಕೈಗಳನ್ನು ಕಣ್ಣಿಗೆ ಒತ್ತಿಕೊಂಡ ಆ ವ್ಯಕ್ತಿ- “ಸಾರ್, ನನ್ನ ಗುರುತು ಸಿಕ್ತಾ? ನಾನು ವೆಂಕಟೇಶ. ಕೆ.ಆರ್.ಪೇಟೆಯ ಹೈಯರ್ ಪ್ರೈಮರಿ ಸ್ಕೂಲ್‌ನಲ್ಲಿ ನಿಮ್ಮ ಸ್ಟೂಡೆಂಟ್ ಆಗಿದ್ದೆ. 7ನೇ ಕ್ಲಾಸ್, ಬಿ ಸೆಕ್ಷನ್…’ ಅಂದ.
ತಾವು ಪಾಠ ಮಾಡಿದ ಶಾಲೆಯ ಹೆಸರು ಕೇಳುತ್ತಿ ದ್ದಂತೆಯೇ ಗೋವಿಂದಪ್ಪನವರ ಕಂಗಳು ಅರಳಿದವು. ಅದು ಮೈಸೂರು ಮಹಾರಾಜರು ಕಟ್ಟಿಸಿದ ಶಾಲೆ ಕಣಪ್ಪಾ…ಅಂದರು. ನಿಮಿಷದ ಅನಂತರ- ನೀವೀಗ ಏನು ಕೆಲಸ ಮಾಡ್ತಾ ಇದ್ದೀರ? ಎಂದರು. “ಸರ್, ನಾನೀಗ ಸ್ಕೂಲ್ ಟೀಚರ್ ಆಗಿದೀನಿ!’- ಈ ಮಾತು ಕೇಳುತ್ತಿದ್ದಂತೆಯೇ, “ಟೀಚರ್ ಕೆಲ್ಸಾನ? ಸಂಬಳ ತುಂಬಾ ಕಡಿಮೆ ಇರ್‌ಬೇಕಲ್ಲಪ್ಪ, ಏನೂ ತೊಂದ್ರೆ ಇಲ್ವಾ?’- ಗೋವಿಂದಪ್ಪನವರ ಪ್ರಶ್ನೆ. “ಊಟ- ಬಟ್ಟೆಗೆ ತೊಂದ್ರೆ ಇಲ್ಲ ಸರ್. ಬದುಕಿನಲ್ಲಿ ಸಂತೃಪ್ತಿ ಇದೆ…’ ಶಿಷ್ಯನ ವಿನೀತ ಉತ್ತರ.
“ಸರ್, 25 ವರ್ಷಗಳ ಹಿಂದೆ ನೀವು ಹೇಳಿದ ಮಾತು ನನ್ನ ಬದುಕನ್ನು ಬದಲಿಸಿಬಿಡ್ತು ! ನೀವು ತಿದ್ದದೇ ಹೋಗಿದ್ರೆ ನಾನು ಕಳ್ಳನೋ, ಸುಳ್ಳನೋ ಆಗಿಬಿಡ್ತಿದ್ದೆನೇನೋ. ಬುದ್ಧಿ ಬೆಳೆದಂತೆಲ್ಲ ನಾನು ಮಾಡಿದ್ದ ತಪ್ಪು ಮತ್ತು ನೀವು ನನ್ನನ್ನು ತಿದ್ದಿದ ರೀತಿ ಅರ್ಥವಾಗುತ್ತಾ ಹೋಯಿತು. ನೌಕರಿಗೆ ಸೇರಿದ ಮೇಲೆ ನಿಮಗೆ ನನ್ನ ಕಥೆ ಹೇಳಿಕೊಳ್ಳಬೇಕು, ನಿಮಗೆ ಕೃತಜ್ಞತೆ ಸಲ್ಲಿಸಬೇಕು ಅಂತ ಬಹಳ ಆಸೆಪಟ್ಟೆ. ಆದ್ರೆ ನೀವು ಊರು ಬಿಟ್ಟು ಸಿಟಿ ಸೇರಿಕೊಂಡ ವಿಷಯ ಗೊತ್ತಿರಲಿಲ್ಲ. ಕಡೆಗೂ ನಿಮ್ಮ ವಿಳಾಸ ಪತ್ತೆಹಚ್ಚಿ ಬಂದುಬಿಟ್ಟೆ ಸರ್…’
ಈ ವೇಳೆಗೆ ಮನೆಮಂದಿಗೆಲ್ಲ ಕುತೂಹಲ ಜತೆಯಾಗಿತ್ತು. ಎಲ್ಲರೂ ಅಲ್ಲಲ್ಲೇ ಕುಳಿತು ವೆಂಕಟೇಶನ ಮಾತುಗಳನ್ನು ಆಲಿಸುತ್ತಿದ್ದರು. ಆಗಲೇ ಆತ ಹೇಳಿದ: “ಸಾರ್, ಅದೊಮ್ಮೆ 7ನೇ ಕ್ಲಾಸಲ್ಲಿ ಸುಧೀರ ಎಂಬ ಹುಡುಗ ವಾಚ್ ಕಳ್ಕೊಂಡಿದ್ದ…ಆ ಬ್ಯಾಚ್‌ನ ವಿದ್ಯಾರ್ಥಿ ನಾನು. ನೆನಪಾಯ್ತಾ ಸಾರ್? ಅವತ್ತೂಂದು ದಿನ ಸುಧೀರ ಕ್ಲಾಸ್‌ಗೆ ವಾಚ್ ಕಟ್ಟಿಕೊಂಡು ಬಂದ. ಅದನ್ನು ಎಲ್ಲರಿಗೂ ತೋರಿಸಿದ. ಮನೆಯಲ್ಲಿ ಆ ಥರದ್ದು ಇನ್ನೂ 2 ವಾಚ್ ಇವೆ ಅಂದ! ಯಾಕೆ ಹಾಗನ್ನಿಸ್ತೋ ಗೊತ್ತಿಲ್ಲ. ನನಗೆ ಆ ವಾಚ್ ಬೇಕು ಅನ್ನಿಸಿಬಿಡು¤. ಅದನ್ನು ಖರೀದಿಸುವಷ್ಟು ಶ್ರೀಮಂತಿಕೆ ನಮಗಿರಲಿಲ್ಲ. ಅವತ್ತಿಗೆ ಅಂಥದೊಂದು ಯೋಚನೆ ಯಾಕೆ ಬಂತೋ ಗೊತ್ತಿಲ್ಲ. ಆ ವಾಚ್‌ನ ಕದಿಯಬೇಕು ಅನ್ನಿಸಿಬಿಡ್ತು …
ಮರುದಿನವೂ ಸುಧೀರ ವಾಚ್ ಕಟ್ಟಿಕೊಂಡು ಬಂದ. ಮಧ್ಯಾಹ್ನ ಆಟದ ಅವಧಿಯಲ್ಲಿ ಅವನು ಜಾಮಿಟ್ರಿ ಬಾಕ್ಸ್‌ನೊಳಗೆ ವಾಚ್ ಇಡುವುದನ್ನು ಗಮನಿಸಿದ್ದೆ . ಆಟದ ಪೀರಿಯಡ್‌ನಲ್ಲಿ ಯಾರಿಗೂ ಗೊತ್ತಾಗದಂತೆ ವಾಚ್ ಕದ್ದು ಜೇಬಲ್ಲಿಟ್ಟುಕೊಂಡೆ. ವಾಚ್ ಕಳುವಾಗಿ ರುವುದು ಗೊತ್ತಾದ ತತ್‌ಕ್ಷಣ, ಪಾಠ ಮಾಡುತ್ತಿದ್ದ ನಿಮಗೆ ಸುಧೀರ ದೂರುಕೊಟ್ಟ. ನೀವು, ಪಾಠ ಮಾಡುವುದನ್ನು ನಿಲ್ಲಿಸಿ- “ಮಕ್ಕಳೇ, ಕಳವು ಮಾಡುವುದು ಮಹಾಪರಾಧ. ನಾನು ಯಾರಿಗೂ ಹೊಡೆಯುವುದಿಲ್ಲ. ಬಯ್ಯುವುದೂ ಇಲ್ಲ. ಉದಾರವಾಗಿ ಕ್ಷಮಿಸುತ್ತೇನೆ. ಕದ್ದಿರುವವರು ತಂದು ಕೊಟ್ಟುಬಿಡಿ…’ ಅಂದಿರಿ. ಉಹೂಂ, ಯಾರೂ ತುಟಿ ಪಿಟಕ್ ಅನ್ನಲಿಲ್ಲ. ಎಲ್ಲರೂ ಕಲ್ಲಿನಂತೆ ಕುಳಿತು ಬಿಟ್ಟಿದ್ದೆವು. ಆಗ ನೀವು ಗಂಭೀರವಾಗಿ ಹೇಳಿದಿರಿ: ಪೀರಿಯಡ್‌ನಲ್ಲಿ ವಾಚ್ ಕಳ್ಳತನವಾಗಿದೆ ಅಂದ್ರೆ, ನಿಮ್ಮಲ್ಲೇ ಯಾರೋ ಒಬ್ರು ಕದ್ದಿದ್ದೀರಾ ಅಂತ ಅರ್ಥ. ನೀವಾಗಿ ಒಪ್ಪಿಕೊಳ್ಳಲಿಲ್ಲ. ಈಗ ನನಗೆ ಪರೀಕ್ಷೆ ಮಾಡದೆ ಬೇರೆ ದಾರಿ ಇಲ್ಲ. ಎಲ್ಲರೂ ಎದ್ದು ನಿಲ್ಲಿ. ಎಲ್ಲರನ್ನೂ ಚೆಕ್ ಮಾಡ್ತೇನೆ. ಅಷ್ಟು ಹೊತ್ತೂ ಎಲ್ಲರೂ ಕಣ್ಣು ಮುಚ್ಚಿಕೊಂಡೇ ನಿಂತಿರಬೇಕು…’
ನಮಗೆ ಬೇರೆ ದಾರಿಯೇ ಇರಲಿಲ್ಲ. ಎಲ್ಲರೂ ಎದ್ದುನಿಂತೆವು. ಕಣ್ಣು ಮುಚ್ಚಿಕೊಂಡಿದ್ದರೂ ನೀವು ಒಬ್ಬೊಬ್ಬರನ್ನೇ ದಾಟಿ ಬರುವುದು ಹೆಜ್ಜೆ ಸಪ್ಪಳದಿಂದ ಗೊತ್ತಾಗುತ್ತಿತ್ತು. ನೀವು ಬಳಿ ಬರುತ್ತಿದ್ದಂತೆ ನನ್ನ ಎದೆ ನಗಾರಿಯಂತೆ ಹೊಡೆದುಕೊಳ್ಳತೊಡಗಿತು. ನೀವು ಜೇಬಿಗೆ ಕೈ ಹಾಕುತ್ತಿದ್ದಂತೆಯೇ ನನ್ನ ಕಥೆ ಮುಗೀತು ಅಂದುಕೊಂಡೆ. ಆಯತಪ್ಪಿ ಬೀಳಲಿದ್ದವನು ಹೇಗೋ ನಿಂತುಕೊಂಡೆ. ಆಶ್ಚರ್ಯವೆಂಬಂತೆ, ಮುಂದಿನ 5 ನಿಮಿಷವೂ ತಪಾಸಣೆ ಮುಂದುವರಿಯಿತು! ಕಡೆಗೊಮ್ಮೆ-‘ ಎಲ್ಲರೂ ಕಣ್ಣು ಬಿಡಿ, ಕೂತುಕೊಳ್ಳಿ’ ಎಂದಿರಿ. ಒಮ್ಮೆ ಕಣ್ಣುಜ್ಜಿಕೊಂಡು ಅಚ್ಚರಿ, ಭಯ, ಕುತೂಹಲದಿಂದ ನೋಡಿದರೆ- ಕುರ್ಚಿಯ ಮೇಲೆ ಕುಳಿತಿದ್ದ ನೀವು ಕಾಣಿಸಿದಿರಿ. ನಿಮ್ಮ ಕೈಯ್ಯಲ್ಲಿ ವಾಚ್ ಇತ್ತು. ಸುಧೀರನನ್ನು ಕರೆದು, ಅವನಿಗೆ ವಾಚ್ ಕೊಟ್ಟು, “ಶಾಲೆಗೆ ಬೆಲೆಬಾಳುವ ವಸ್ತುಗಳನ್ನು ಇನ್ನೆಂದೂ ತರಬೇಡ’ ಎಂದು ಎಚ್ಚರಿಸಿದಿರಿ. ಅನಂತರ ನನ್ನ ಶಿಷ್ಯರಲ್ಲಿ ಒಬ್ಬ ಕಳ್ಳ ಇದ್ದಾನೆ ಅನ್ನಲು ನನಗೆ ಮನಸ್ಸು ಬರಲ್ಲ. ನೀವು ಕದ್ದು ಸಾಧಿಸುವುದೇನಿದೆ? ಗೆದ್ದು ತೋರಿಸಬೇಕು! ಒಳ್ಳೆ ಮಕ್ಕಳು ಅನ್ನಿಸ್ಕೊಳ್ಳಬೇಕು…’ ಅಂದು ಸುಮ್ಮನಾಗಿ ಬಿಟ್ರಿ ಸರ್.
ಅಕಸ್ಮಾತ್ ನೀವು ನನ್ನತ್ತ ಕೈ ತೋರಿಸಿ- ಇವನೇ ಕಳ್ಳ ಅಂದಿದ್ರೆ ನನ್ನ ಸ್ಥಿತಿ ಏನಾಗಿರ್ತಾ ಇತ್ತೋ, ಅಷ್ಟೂ ಜನ ಸಹಪಾಠಿಗಳು ನನ್ನನ್ನು ಹೇಗೆ ನೋಡ್ತಾ ಇದ್ರೋ ಗೊತ್ತಿಲ್ಲ ಸರ್. ಆ ಥರದ ಸಂದರ್ಭವೇ ಬಾರದ ಹಾಗೆ ನೀವು ನೋಡಿಕೊಂಡ್ರಿ. ಮುಂದೆ ನಾನೂ ಮೇಷ್ಟ್ರಾಗಬೇಕು. ನೀವು ನನ್ನನ್ನು ತಿದ್ದಿದ ರೀತಿಯಲ್ಲೇ ನಾನೂ ಮಕ್ಕಳನ್ನು ತಿದ್ದಬೇಕು. ಆ ಮೂಲಕ ನನ್ನ ತಪ್ಪಿಗೆ ಪ್ರಾಯಶ್ಚಿತ್ತವನ್ನು, ನನ್ನ ಬದುಕು ಬದಲಿಸಿದ ಗುರುವಿಗೆ ಕೃತಜ್ಞತೆ ಸಲ್ಲಿಸಬೇಕು ಅಂತ ನಿರ್ಧರಿಸಿದೆ ಸರ್…’ ಅಂದವನು, ಕುತೂಹಲದಿಂದಲೇ ಕೇಳಿಬಿಟ್ಟ: ಸಾರ್, ಇವನೇ ಕಳ್ಳ ಅಂತ ಅವತ್ತು ನೀವು ಯಾಕೆ ಹೇಳಲಿಲ್ಲ?
ಈ ವೇಳೆಗೆ ನಡೆದಿದ್ದ ಅಷ್ಟೂ ಘಟನೆ ಗೋವಿಂದಪ್ಪ ಮಾಸ್ಟರ್‌ಗೆ ನೆನಪಾಗಿಬಿಟ್ಟಿತ್ತು. ಅವರು ಹೇಳಿದರು: “ನನ್ನ ವಿದ್ಯಾರ್ಥಿಗಳ ಕುರಿತು ನನಗೂ ಒಂದು ಕಲ್ಪನೆ ಇರ್ತಾ ಇತ್ತು. ಇಂಥವನೇ ಕಳ್ಳ ಅಂತ ಗೊತ್ತಾದ್ರೆ ಆ ಕಲ್ಪನೆಯ ಚಿತ್ರವೇ ಕೆಟ್ಟು ಹೋಗುತ್ತೆ ಅನ್ನಿಸ್ತು. ಹಾಗಾಗಿ ಅವತ್ತು ನೀವೆಲ್ಲ ಕಣ್ಣು ಮುಚ್ಚಿಕೊಂಡು ನಿಂತಿದ್ದಾಗ, ನಾನೂ ಕಣ್ಣು ಮುಚ್ಚಿಕೊಂಡೇ ಎಲ್ಲರನ್ನೂ ಚೆಕ್ ಮಾಡಿದೆ! ವರ್ಷಗಟ್ಟಲೆ ಕಂಡಿದ್ದ ಸ್ಥಳವಾಗಿದ್ದರಿಂದ ಆ ರೂಮ್‌ನ ಇಂಚಿಂಚು ಜಾಗವೂ ಗೊತ್ತಿತ್ತು. ಹಾಗಾಗಿ ನನಗೆ ತಡವರಿಸುವ ಸಂದರ್ಭ ಬರಲಿಲ್ಲ. ವಾಚ್ ಕದ್ದಿದ್ದ ವಿದ್ಯಾರ್ಥಿ ಯಾರು ಅಂತ ಈ ಕ್ಷಣದವರೆಗೆ ನನಗೂ ಗೊತ್ತಿರಲಿಲ್ಲ!’ ಅಂದರು.
ಇಂಥದೊಂದು ಅಚ್ಚರಿಯನ್ನು ವೆಂಕಟೇಶನೂ ನಿರೀಕ್ಷಿಸಿರಲಿಲ್ಲ. ಆತ ಬ್ಯಾಗ್‌ನಿಂದ ಹಾರ ತೆಗೆದು ಮಾಸ್ಟರ್‌ಗೆ ಹಾಕಿದ. ಗುರು ಪತ್ನಿಯನ್ನೂ ಜತೆಗೆ ಕೂರಿಸಿ, ಅವರಿಗೆ ಶಾಲು ಹೊದ್ದಿಸಿದ. ಹಣ್ಣಿನ ಬುಟ್ಟಿಯನ್ನು ಅವರ ಮಡಿಲಿಗಿಟ್ಟು- “ನಿಮ್ಮಿಂದ ನಾನೊಬ್ಬ ಮನುಷ್ಯನಾದೆ’ ಅನ್ನುತ್ತಾ ಕಣ್ಣೊರೆಸಿಕೊಂಡ. ಏನು ಹೇಳಬೇಕೋ ತಿಳಿಯದೆ ಮನೆಮಂದಿ ಭಾವುಕರಾಗಿದ್ದಾಗಲೇ, ಅದುವರೆಗೂ ಅಪ್ಪನನ್ನು ಟೀಕಿಸುತ್ತಿದ್ದ ಮಕ್ಕಳು-ಅಪ್ಪಾ, ನೀವು ಗ್ರೇಟ್ ಕಣಪ್ಪಾ…’ ಅನ್ನುತ್ತಾ ತಬ್ಬಿಕೊಂಡರು.
-ಎ.ಆರ್.ಮಣಿಕಾಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.