ಒಂದೂವರೆ ತಿಂಗಳಲ್ಲಿ ಮಂಗಳೂರಿನಲ್ಲಿ ಮಹಿಳಾ ಕ್ರೀಡಾ ಹಾಸ್ಟೆಲ್ ಉದ್ಘಾಟನೆ
Team Udayavani, Jul 15, 2023, 7:51 AM IST
ಬೆಂಗಳೂರು: ಮಂಗಳೂರಿನಲ್ಲಿ ಬಾಲಕಿಯರ ಕ್ರೀಡಾ ವಸತಿ ನಿಲಯ ಇನ್ನು ಒಂದೂವರೆ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ.
ಪ್ರತಾಪಸಿಂಹ ನಾಯಕ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬಾಲಕಿಯರಿಗಾಗಿ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಕಟ್ಟಡದ ನೆಲಮಹಡಿ ಮತ್ತು ಮೊದಲನೇ ಮಹಡಿಯಲ್ಲಿ ಕ್ರೀಡಾಪಟುಗಳ ಕೊಠಡಿ ನಿರ್ಮಾಣ ಕಾರ್ಯ ಮುಕ್ತಾಯವಾಗಿದೆ. ಕಟ್ಟಡ ಫ್ಲೋರಿಂಗ್, ಪ್ಲಾಸ್ಟರಿಂಗ್, ನೀರು ಸರಬರಾಜು, ಒಳಚರಂಡಿ ಮತ್ತು ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ ಬಾಕಿ ಇದೆ ಎಂದು ತಿಳಿಸಿದರು.
ಒಂದೂವರೆ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ 1.40 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಪ್ರಸ್ತುತ ಮಂಗಳಾ ಕ್ರೀಡಾಂಗಣದ ಆವರಣದಲ್ಲಿರುವ ಕ್ರೀಡಾ ವಸತಿ ನಿಲಯದ ಆ್ಯತ್ಲೆಟಿಕ್ಸ್ ಕ್ರೀಡಾ ವಿಭಾಗದಲ್ಲಿ 33 ಬಾಲಕರು ಮತ್ತು 14 ಬಾಲಕಿಯರು ಸಹಿತ ಒಟ್ಟು 47 ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ಉಚಿತ ವಸತಿ, ಊಟೋಪಹಾರ, ವೈಜ್ಞಾನಿಕ ಕ್ರೀಡಾ ತರಬೇತಿ, ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಪ್ರಯಾಣ ಭತ್ತೆ/ದಿನ ಭತ್ತೆ, ಕ್ರೀಡಾಸಮವಸ್ತ್ರ, ಉಚಿತ ವೈದ್ಯಕೀಯ ಸೌಲಭ್ಯ, ಮನೆಪಾಠ, ನಿತ್ಯ ಬಳಕೆಯ ಸಾಮಗ್ರಿಗಳನ್ನು ಇಲಾಖೆ ಒದಗಿಸುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.