ಹೊಸ ಮಜಲಿನತ್ತ ಹೊರಳಿದ ಭಾರತ-ಅಮೆರಿಕ ಬಾಂಧವ್ಯ
Team Udayavani, Jun 24, 2023, 6:27 AM IST
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಪ್ರವಾಸ ಕೇವಲ ಉಭಯ ರಾಷ್ಟ್ರಗಳಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಸಂಚಲನ ಮೂಡಿಸಿತ್ತು. ರಕ್ಷಣೆ, ತಂತ್ರಜ್ಞಾನ, ಬಾಹ್ಯಾಕಾಶ ಸಹಿತ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಹಲವಾರು ಮಹತ್ವದ ಒಪ್ಪಂದಗಳಿಗೆ ಎರಡೂ ರಾಷ್ಟ್ರಗಳು ಸಹಿ ಹಾಕಿವೆ. ವಿಸ್ತರಣವಾದ, ಭಯೋತ್ಪಾದನೆ ವಿರುದ್ಧ ಸಂಘಟಿತ ಹೋರಾಟವನ್ನು ಮುಂದುವರಿಸುವ ಕುರಿತಂತೆ ಒಮ್ಮತದ ನಿಲುವು ತಾಳಿರುವ ಭಾರತ ಮತ್ತು ಅಮೆರಿಕ ತಮ್ಮ ಆದ್ಯತೆಯೇನು ಎಂಬುದನ್ನು ಸಾರುವ ಮೂಲಕ ಈ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವ ಜಗತ್ತಿನ ಕೆಲವು ರಾಷ್ಟ್ರಗಳಿಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶವನ್ನು ರವಾನಿಸಿವೆ.
ಅಮೆರಿಕದಲ್ಲಿನ ವಿವಿಧ ಕ್ಷೇತ್ರಗಳ ತಜ್ಞರು, ಉದ್ಯಮಿಗಳು, ಭಾರತೀಯ ಸಮುದಾಯದವರು ಮೋದಿ ಅವರನ್ನು ಭೇಟಿಯಾಗಿ ಚರ್ಚಿಸಿದರು. ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವ ರೊಡನೆ ನಡೆಸಿದ ಮಾತುಕತೆಯ ವೇಳೆ ಉಭಯ ರಾಷ್ಟ್ರಗಳ ಸಂಬಂಧ, ದ್ವಿಪಕ್ಷೀಯ ಸಹಕಾರ ಮತ್ತು ರಷ್ಯಾ-ಉಕ್ರೇನ್ ನಡುವೆ ನಡೆಯು ತ್ತಿರುವ ಯುದ್ಧವನ್ನು ರಾಜತಾಂತ್ರಿಕ ನೆಲೆಯಲ್ಲಿ ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸುವ ಕುರಿತಂತೆ ಪ್ರಸ್ತಾವಿಸಿದರು. ಈ ಎಲ್ಲ ವಿಷಯಗಳ ಬಗ್ಗೆಯೂ ಜೋ ಬೈಡೆನ್ ಅವರು ಸಹಮತ ವ್ಯಕ್ತಪಡಿಸಿದರು.
ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಅಮೆರಿಕದ ವಿವಿಧ ಸಂಸ್ಥೆಗಳು, ವಾಣಿಜ್ಯ ಕಂಪೆನಿಗಳ ಮುಖ್ಯಸ್ಥರೊಂದಿಗೆ ಮೋದಿ ಅವರು ನಡೆಸಿದ ಸಮಾಲೋಚನೆಯ ಸಂದರ್ಭದಲ್ಲಿ ಪ್ರಮುಖ ಒಪ್ಪಂದಗಳಿಗೆ ಅಂಕಿತ ಹಾಕಲಾಯಿತಲ್ಲದೆ ವಿವಿಧ ವಿಚಾರಗಳಲ್ಲಿ ಸಹಭಾಗಿತ್ವವನ್ನು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ರಕ್ಷಣ ಕ್ಷೇತ್ರದಲ್ಲಿ ಉಭಯ ದೇಶಗಳು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿವೆ. ಯುದ್ಧ ವಿಮಾನಗಳ ಎಂಜಿನ್ ಅನ್ನು ಭಾರತದಲ್ಲಿಯೇ ಉತ್ಪಾದಿಸುವ ಸಂಬಂಧ ಅಮೆರಿಕದ ಜನರಲ್ ಎಲೆಕ್ಟ್ರಿಕಲ್ ಮತ್ತು ಭಾರತದ ಎಚ್‌ಎಎಲ್ ನಡುವಣ ಒಪ್ಪಂದಕ್ಕೆ ಅಂಕಿತ ಹಾಕಲಾಯಿತು. ಈ ಬಗೆಗಿನ ತಂತ್ರಜ್ಞಾನ ವರ್ಗಾವಣೆಗೂ ಅಮೆರಿಕನ್ ಕಂಪೆನಿ ಸಮ್ಮತಿಸಿದೆ. ಇನ್ನು 30 ಪ್ರಿಡೇಟರ್ ಡ್ರೋನ್‌ಗಳನ್ನು ಖರೀದಿಸುವ ಪ್ರಸ್ತಾವನೆಗೆ ಅಮೆರಿಕ ತನ್ನ ಒಪ್ಪಿಗೆ ಸೂಚಿಸಿದೆ. ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಜಂಟಿ ಗಗನಯಾನ ಕೈಗೊಳ್ಳಲು ಇಸ್ರೋ ಮತ್ತು ನಾಸಾ ಪರಸ್ಪರ ಒಪ್ಪಿಗೆ ಸೂಚಿಸಿವೆ.
ಸೆಮಿಕಂಡಕ್ಟರ್‌ಗಳ ಜೋಡಣೆ ಮತ್ತು ಪರೀಕ್ಷಾ ವ್ಯವಸ್ಥೆ ನಿರ್ಮಾಣಕ್ಕೆ ಸಹಕಾರ, ಅಮೆರಿಕ ನೇತೃತ್ವದ ಖನಿಜಗಳ ಸುರಕ್ಷ ಭಾಗೀದಾರಿಕೆಯಲ್ಲಿ ಭಾರತದ ಸೇರ್ಪಡೆ, ಸುಸ್ಥಿರ ಇಂಧನಗಳಿಗೆ ಉತ್ತೇಜನ, ಎಲೆಕ್ಟ್ರಿಕ್ ವಾಹನಗಳಲ್ಲಿ ಬಳಸಲ್ಪಡುವ ಬ್ಯಾಟರಿಗಳ ಉತ್ಪಾದನೆ, ಸುಧಾರಿತ ದೂರಸಂಪರ್ಕ, ಕೃತಕ ಬುದ್ಧಿಮತ್ತೆ, ಸುಧಾರಿತ ಕಂಪ್ಯೂಟಿಂಗ್ ತಂತ್ರಜ್ಞಾನ, ಸ್ಟೆಮ್ ವಲಯದಲ್ಲಿ ಪ್ರತಿಭಾವಂತರಿಗೆ ಉತ್ತೇಜನ, ಪ್ರಯಾಣಿಕ ವಿಮಾನಗಳ ಖರೀದಿ, ಎಚ್-1ಬಿ ವೀಸಾ ನಿಯಮಾವಳಿಗಳಲ್ಲಿ ಸಡಿಲಿಕೆ, ಬೆಂಗಳೂರು ಮತ್ತು ಅಹ್ಮದಾಬಾದ್‌ನಲ್ಲಿ ಅಮೆರಿಕದ ದೂತಾವಾಸ ಕಚೇರಿ ಸ್ಥಾಪನೆ, ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಪರಸ್ಪರ ಸಹಕಾರದಿಂದ ಕಾರ್ಯಾಚರಣೆ, ಶಿಕ್ಷಣ, ಆರೋಗ್ಯ ಸಹಿತ ವಿವಿಧ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರದೊಂದಿಗೆ ಕಾರ್ಯನಿರ್ವಹಿಸಲು ಭಾರತ ಮತ್ತು ಅಮೆರಿಕ ಸಮ್ಮತಿಸಿವೆ.
ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಪ್ರವಾಸ ನಿರೀಕ್ಷೆಗೂ ಮೀರಿ ಯಶ ಕಂಡಿದೆ. ಉಭಯ ದೇಶಗಳು ಮಾಡಿಕೊಂಡಿರುವ ಒಪ್ಪಂದಗಳು ಮತ್ತು ಸಹಮತ ವ್ಯಕ್ತಪಡಿಸಿರುವ ವಿಚಾರಗಳು ಅಕ್ಷರಶಃ ಅನುಷ್ಠಾನಕ್ಕೆ ಬಂದದ್ದೇ ಆದಲ್ಲಿ ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಹೊಸ ಮಜಲಿನತ್ತ ಕೊಂಡೊಯ್ಯಲಿರುವುದು ನಿಶ್ಚಿತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.