ಹೆದ್ದಾರಿಗಳಲ್ಲಿ ಕೆಮರಾ ಅಳವಡಿಕೆ ಉತ್ತಮ ಕ್ರಮ
Team Udayavani, Jul 19, 2023, 5:53 AM IST
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ದಿನೇ ದಿನೆ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳು ಆತಂಕ ಸೃಷ್ಟಿಸಿದ್ದು, ಈ ದಾರಿಯಲ್ಲಿ ಓಡಾಡಲು ವಾಹನ ಸವಾರರು ಹೆದರುವಂಥ ಸ್ಥಿತಿ ಉದ್ಭವವಾಗಿದೆ. ರಸ್ತೆ ನಿರ್ಮಾಣದಲ್ಲೇ ದೋಷವಿರುವುದರಿಂದ ಈ ರೀತಿ ಅಪಘಾತಗಳು ಸೃಷ್ಟಿಯಾಗುತ್ತಿವೆ ಎಂಬುದು ಸ್ಥಳೀಯರ ವಾದವಾದರೆ, ವಾಹನ ಸವಾರರು ಹೆಚ್ಚು ವೇಗದಲ್ಲಿ ವಾಹನ ಚಲಾಯಿಸುತ್ತಿರುವುದೇ ಅಪಘಾತಗಳಿಗೆ ಕಾರಣ ಎಂಬ ಇನ್ನೊಂದು ವಾದವೂ ಕೇಳಿಬರುತ್ತಿದೆ. ಹೀಗಾಗಿಯೇ ಇತ್ತೀಚಿನ ದಿನಗಳಲ್ಲಿ ಪೊಲೀಸರು ಹೆದ್ದಾರಿ ಮೇಲೆ ನಿಗಾ ಇರಿಸಿ, ನಿಗದಿತ ವೇಗ ಮಿತಿ ಮೀರಿದವರಿಗೆ ಸ್ಥಳದಲ್ಲೇ ದಂಡ ವಿಧಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಒಂದು ಲೆಕ್ಕಾಚಾರದಲ್ಲಿ ಈ ರೀತಿ ಮಾಡಿದ ಮೇಲೆ ಅಪಘಾತಗಳಲ್ಲಿ ಕೊಂಚ ಇಳಿಕೆಯಾಗಿದೆ.
ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಪೊಲೀಸರು ಜತೆಗೂಡಿ ಬೆಂಗಳೂರು-ಮೈಸೂರು ರಸ್ತೆಯುದ್ದಕ್ಕೂ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಾರ್ಡರ್(ಎಎನ್‌ಪಿಆರ್) ಕೆಮರಾಗಳನ್ನು ಅಳವಡಿಸಲು ಮುಂದಾಗಿರುವುದು ಉತ್ತಮ ವಿಚಾರವೇ ಆಗಿದೆ. ಈ ಕಾರ್ಯ ವಾಹನದ ವೇಗದ ಮೇಲೆ ಕಡಿವಾಣ ಹಾಕಲು ಸಹಾಯಕವಾಗುವುದು ಖಚಿತ.
ಈ ಕೆಮರಾಗಳು ಎಕ್ಸ್‌ಪ್ರೆಸ್ ವೇನಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳನ್ನು ಸೆರೆ ಹಿಡಿದು, ನಂಬರ್‌ಪ್ಲೇಟ್ ಸಮೇತ ಜಿಲ್ಲಾ ಪೊಲೀಸ್ ಕೇಂದ್ರ ಕಚೇರಿಯಲ್ಲಿರುವ ಸರ್ವರ್‌ಗೆ ಕಳುಹಿಸುತ್ತದೆ. ಅಪಘಾತವಷ್ಟೇ ಅಲ್ಲ ಹೆದ್ದಾರಿಯಲ್ಲಿನ ಪ್ರತಿಯೊಂದು ದೃಶ್ಯಗಳೂ ಇದರಲ್ಲಿ ದಾಖಲಾಗುತ್ತವೆ. ಅಂದರೆ ಹೆದ್ದಾರಿಯಲ್ಲಿ ಅಪಘಾತ, ಡಕಾಯಿತಿ ಮೊದಲಾದ ಘಟನೆಗಳು ನಡೆದಾಗ, ವಾಹನಗಳು ಪದೇ ಪದೆ ಲೇನ್ ಕ್ರಾಸ್ ಮಾಡಿದಾಗಲೂ ಈ ಕೆಮರಾಗಳ ದೃಶ್ಯಗಳನ್ನು ಬಳಸಿ ಪ್ರಕರಣಗಳನ್ನು ಬೇಧಿಸಲು ಪೊಲೀಸರಿಗೆ ಸಹಕಾರಿಯಾಗಲಿದೆ.
2023ರ ಆರಂಭದಿಂದ ಇಲ್ಲಿವರೆಗೆ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತಗಳಿಂದಾಗಿ 91 ಮಂದಿ ಸಾವನ್ನಪ್ಪಿದ್ದರೆ, 365 ಮಂದಿ ಗಾಯಗೊಂಡಿದ್ದಾರೆ. ಅಂದರೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 14, ಬಿಡದಿ ವ್ಯಾಪ್ತಿಯಲ್ಲಿ 22, ರಾಮನಗರ 23, ಚನ್ನಪಟ್ಟಣ ವ್ಯಾಪ್ತಿಯಲ್ಲಿ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಸದ್ಯ ಇದೊಂದೇ ಹೆದ್ದಾರಿಯಲ್ಲ. ರಾಜ್ಯದ ಬೇರೆ ಬೇರೆ ಹೆದ್ದಾರಿಗಳಲ್ಲೂ ಇದೇ ರೀತಿಯ ಅಪಘಾತಗಳು ಸಂಭವಿಸುತ್ತಿವೆ. ಚಾಲಕರ ಪ್ರಮಾದದ ಜತೆಗೆ, ವಾಹನಗಳಲ್ಲಿನ ತಾಂತ್ರಿಕ ದೋಷಗಳು, ಹಾಳಾದ ರಸ್ತೆಗಳಿಂದಲೂ ಅಪಘಾತಗಳಾಗಿವೆ. ಇಂಥ ಅಪಘಾತಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಮೈಸೂರು-ತಿ.ನರಸೀಪುರ ಹೆದ್ದಾರಿಯಲ್ಲಿ ಇತ್ತೀಚೆಗಷ್ಟೇ ಸಂಭವಿಸಿದ ಅಪಘಾತದಲ್ಲಿ 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಅದರ ಭೀಕರತೆಯ ದೃಶ್ಯ ಕೆಮರಾದಲ್ಲಿಯೂ ದಾಖಲಾಗಿತ್ತು. ಇಲ್ಲಿ ಚಾಲಕ ಅತ್ಯಂತ ವೇಗವಾಗಿ ಬಂದು ಬಸ್‌ಗೆ ಗುದ್ದಿದ್ದ ದೃಶ್ಯ ಸೆರೆಯಾಗಿತ್ತು.
ಹೀಗಾಗಿ ರಸ್ತೆ ಸುರಕ್ಷತಾ ಕ್ರಮಗಳ ಜತೆಗೆ ಚಾಲಕರಲ್ಲಿಯೂ ವೇಗ ಮಿತಿ ಬಗ್ಗೆ ಅರಿವು ಮೂಡಿಸುವ ಜರೂರತ್ತು ಈ ಸಂದರ್ಭದಲ್ಲಿ ಇದೆ. ಅವಸರವೇ ಅಪಘಾತಕ್ಕೆ ಕಾರಣ ಎಂಬ ಸಾರಿಗೆ ಸಂಸ್ಥೆಯ ಹಿಂದಿನ ಘೋಷಣೆಯನ್ನು ಸರಿಯಾಗಿ ಓದಿಕೊಂಡು ವಾಹನವನ್ನು ಓಡಿಸುವುದನ್ನು ಕಲಿಯಬೇಕು. ಹಾಗೆಯೇ ರಸ್ತೆ ಸುರಕ್ಷತಾ ನಿಯಮಗಳನ್ನು ಶಿರಸಾ ವಹಿಸಿ ಪಾಲಿಸುವುದನ್ನೂ ಕಲಿಯಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.