ಜಡೇಜ ಬ್ಯಾಟಿಂಗ್ ಕಮಾಲ್; ಅಜೇಯ RCBಯನ್ನು ಮಣಿಸಿದ CSK, ಅಂಕಪಟ್ಟಿಯ ಅಗ್ರಸ್ಥಾನದಲ್ಲಿ ಚೆನ್ನೈ
Team Udayavani, Apr 25, 2021, 9:03 PM IST
ಮುಂಬೈ : ಒಂದರ ಹಿಂದೊಂದರಂತೆ ಸಿಕ್ಸರ್ ಸಿಡಿತ, ಓವರಿಗೆ 37 ರನ್ ಸೂರೆ, ಐಪಿಎಲ್ ದಾಖಲೆಯನ್ನು ಸರಿದೂಗಿಸಿದ ಸಾಧನೆ, ಬೌಲಿಂಗ್‌ನಲ್ಲೂ ಮಿಂಚು, 13ಕ್ಕೆ 3 ವಿಕೆಟ್ ಬೇಟೆ, ಮ್ಯಾಕ್ಸ್‌ವೆಲ್ ಹಾಗೂ ಎಬಿಡಿ ಅವರನ್ನು ಕ್ಲೀನ್‌ಬೌಲ್ಡ್ ಮಾಡಿದ ಸಾಹಸ, ಡೈರೆಕ್ಟ್ ಹಿಟ್ ಮೂಲಕ ಕ್ರಿಸ್ಟಿಯನ್ ಅವರನ್ನು ರನೌಟ್ ಮಾಡಿದ ಪರಾಕ್ರಮ… ಇಂಥದೊಂದು ಫುಲ್ ಕ್ರಿಕೆಟ್ ಪ್ಯಾಕೇಜ್’ ಮೂಲಕ ಮೆರೆದಾಡಿದ ರವೀಂದ್ರ ಜಡೇಜ 14ನೇ ಐಪಿಎಲ್‌ನಲ್ಲಿ ಅಜೇಯವಾಗಿ ಮುನ್ನುಗ್ಗಿ ಬಂದಿದ್ದ ಆರ್‌ಸಿಬಿಗೆ ಮೊದಲ ಸೋಲಿನ ರುಚಿ ತೋರಿಸಿದ್ದಾರೆ. ಯಾರಿಂದಲೂ ಸೋಲಿಸಲಾಗದ ಕೊಹ್ಲಿ ಬಳಗವನ್ನು ಜಡೇಜ ಏಕಾಂಗಿಯಾಗಿ ಕೆಡವಿದ್ದು ಈ ಪಂದ್ಯದ ವಿಶೇಷ.
“ಹೈ ವೋಲ್ಟೇಜ್ ಮ್ಯಾಚ್’ ಎಂದೇ ಬಿಂಬಿಸಲ್ಪಟ್ಟಿದ್ದ ರವಿವಾರದ ವಾಂಖೇಡೆ ಮುಖಾಮುಖೀಯಲ್ಲಿ ಆರ್‌ಸಿಬಿ 69 ರನ್ನುಗಳ ದೊಡ್ಡ ಸೋಲಿಗೆ ತುತ್ತಾಗಿ ಚೆನ್ನೈಗೆ ಅಗ್ರಸ್ಥಾನವನ್ನು ಬಿಟ್ಟುಕೊಟ್ಟಿತು. ಟಾಸ್ ಗೆದ್ದ ಧೋನಿ ಅಪರೂಪಕ್ಕೆ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಆರಂಭದ ಅಬ್ಬರ, ಡೆತ್ ಓವರ್‌ನ ಸುನಾಮಿಯಿಂದಾಗಿ 4 ವಿಕೆಟಿಗೆ 191 ರನ್ ಪೇರಿಸಿತು. ಬಿಗ್ ಹಿಟ್ಟರ್ಗಳನ್ನು ಹೊಂದಿದ್ದ ಆರ್‌ಸಿಬಿ ಪಟಪಟನೆ ವಿಕೆಟ್ ಉರುಳಿಸಿಕೊಳ್ಳುತ್ತ ಹೋಗಿ 9 ವಿಕೆಟಿಗೆ ಕೇವಲ 122 ರನ್ ಮಾಡಿ ಶರಣಾಯಿತು.
ರವೀಂದ್ರ ಜಡೇಜ ಗಳಿಕೆ 28 ಎಸೆತಗಳಿಂದ ಅಜೇಯ 62 ರನ್. ಬಾರಿಸಿದ್ದು 4 ಫೋರ್ ಮತ್ತು 5 ಸಿಕ್ಸರ್. ಈ ಐದೂ ಸಿಕ್ಸರ್ ಹರ್ಷಲ್ ಪಟೇಲ್ ಅವರ ಅಂತಿಮ ಓವರ್‌ನಲ್ಲಿ ಸಿಡಿದಿತ್ತು.
ಚೆನ್ನೈ ಭರವಸೆಯ ಆರಂಭ
ಫಾ ಡು ಪ್ಲೆಸಿಸ್ ಮತ್ತು ಋತುರಾಜ್ ಗಾಯಕ್ವಾಡ್ ಚೆನ್ನೈಗೆ ಭರ್ಜರಿ ಆರಂಭ ಒದಗಿಸಿದ್ದರು. ಅರ್ಧ ಹಾದಿ ಮುಗಿಯುತ್ತ ಬಂದರೂ ಈ ಜೋಡಿಯನ್ನು ಬೇರ್ಪಡಿಸಲು ಆರ್‌ಸಿಬಿಯಿಂದ ಸಾಧ್ಯವಾಗಿರಲಿಲ್ಲ. 10ನೇ ಓವರ್‌ನ ಮೊದಲ ಎಸೆತದಲ್ಲಿ ಗಾಯಕ್ವಾಡ್ (33) ಅವರನ್ನು ಕೆಡವಿದ ಚಹಲ್ ಮೊದಲ ಯಶಸ್ಸು ತಂದಿತ್ತರು.
ಡು ಪ್ಲೆಸಿಸ್-ಸುರೇಶ್ ರೈನಾ ಸೇರಿಕೊಂಡು ಮೊತ್ತವನ್ನು 111ಕ್ಕೆ ಏರಿಸಿದರು. ಸಿಡಿದು ನಿಂತ ರೈನಾ 3 ಸಿಕ್ಸರ್ ಹಾಗೂ ಒಂದು ಬೌಂಡರಿ ಹೊಡೆದರೂ 24ಕ್ಕೆ ಆಟ ಮುಗಿಸಿದರು. ಇವರಿಬ್ಬರನ್ನೂ ಹರ್ಷಲ್ ಪಟೇಲ್ ಸತತ ಎಸೆತಗಳಲ್ಲಿ ಕೆಡವಿ ಚೆನ್ನೈಗೆ ಕಡಿವಾಣ ಹಾಕಿದರು.
ಡು ಪ್ಲೆಸಿಸ್ ಸತತ ಎರಡನೇ ಅರ್ಧ ಶತಕ ಬಾರಿಸಿ ಪ್ರಚಂಡ ಫಾರ್ಮ್ ಮುಂದುವರಿಸಿದರು. ಕೆಕೆಆರ್ ವಿರುದ್ಧ ಅಜೇಯ 95 ರನ್ ಬಾರಿಸಿದ್ದ ಆಫ್ರಿಕನ್ ಓಪನರ್ ಇಲ್ಲಿ 41 ಎಸೆತಗಳಿಂದ ಭರ್ತಿ 50 ರನ್ ಹೊಡೆದರು (5 ಬೌಂಡರಿ, ಒಂದು ಸಿಕ್ಸರ್). ಅಂಬಾಟಿ ರಾಯುಡು ಆಟ 14 ರನ್ನಿಗೆ ಮುಗಿಯಿತು. ವಿಕೆಟ್ ಟೇಕರ್ ಬೇರೆ ಯಾರೂ ಅಲ್ಲ, ಹರ್ಷಲ್ ಪಟೇಲ್. ಆದರೆ ಇದೇ ಪಟೇಲ್ ಅಂತಿಮ ಓವರ್‌ನಲ್ಲಿ ಸರಾಗವಾಗಿ ರನ್ ಬಿಟ್ಟುಕೊಟ್ಟು ಟೀಕೆಗೊಳಗಾಗಬೇಕಾಯಿತು.
ನಡು ಹಂತದಲ್ಲಿ ಆರ್‌ಸಿಬಿ ಬೌಲರ್ ಮೇಲುಗೈ ಸಾಧಿಸಿ ಚೆನ್ನೈಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದರು. ಆದರೆ ಡೆತ್ ಓವರ್‌ಗಳಲ್ಲಿ ಸಿಡಿದು ನಿಂತ ಎಡಗೈ ಆಟಗಾರ ರವೀಂದ್ರ ಜಡೇಜ ರನ್ ಸುನಾಮಿಯಾಗಿ ಗೋಚರಿಸಿದರು. ಹೀಗಾಗಿ ಚೆನ್ನೈ ಸ್ಕೋರ್‌ಬೋರ್ಡ್‌ನಲ್ಲಿ ಸವಾಲಿನ ಮೊತ್ತ ದಾಖಲಾಯಿತು.
ಚೆನ್ನೈ ಇನ್ನಿಂಗ್ಸ್‌ನ ಕೊನೆಯ ಓವರ್ ಆರಂಭವಾಗುವಾಗ ಸ್ಕೋರ್ 4ಕ್ಕೆ 154 ರನ್ ಆಗಿತ್ತು. ಚೆನ್ನೈ ಮೊತ್ತ 170ರ ತನಕ ಹೋದೀತು, ಅಷ್ಟೇ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಹರ್ಷಲ್ ಪಟೇಲ್-ರವೀಂದ್ರ ಜಡೇಜ ಮುಖಾಮುಖೀ ಆರ್‌ಸಿಬಿಯ ಹರ್ಷವನ್ನೇ ನುಂಗಿ ಹಾಕಿತು!
ಆರ್‌ಸಿಬಿ ನಾಟಕೀಯ ಕುಸಿತ
ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದ್ದ, ರಾಜಸ್ಥಾನ್ ಮೊತ್ತವನ್ನು ನೋಲಾಸ್‌ನಲ್ಲಿ ಹಿಂದಿಕ್ಕಿದ್ದ ಆರ್‌ಸಿಬಿಗೆ ಇದು ಬೆನ್ನಟ್ಟಲು ಅಸಾಧ್ಯವಾದ ಮೊತ್ತವೇನೂ ಆಗಿರಲಿಲ್ಲ. ಆದರೆ ಯಾರಿಂದಲೂ ಬ್ಯಾಟಿಂಗ್ ಜೋಶ್ ಕಂಡುಬರಲಿಲ್ಲ. ಗೆದ್ದು ಗೆದ್ದು ಬೇಜಾರಾಗಿ, ದೃಷ್ಟಿ ಬೊಟ್ಟಿಗೆ ಸೋಲೊಂದಿರಲಿ ಎಂಬಂತಿತ್ತು ರಾಯಲ್ ಚಾಲೆಂಜರ್ ಬೆಂಗಳೂರು ತಂಡದ ಬ್ಯಾಟಿಂಗ್!
34 ರನ್ ಮಾಡಿದ ಪಡಿಕ್ಕಲ್ ಅವರದೇ ಆರ್‌ಸಿಬಿ ಸರದಿಯ ಗರಿಷ್ಠ ಗಳಿಕೆ. ಮ್ಯಾಕ್ಸ್‌ವೆಲ್ (22), ಜಾಮೀಸನ್ (16) ಎರಡಂಕೆಯ ಗಡಿ ದಾಟಿದ ಉಳಿದಿಬ್ಬರು. ಕ್ಯಾಪ್ಟನ್ ಕೊಹ್ಲಿ 8 ರನ್ನಿಗೆ ಔಟಾಗಿ ಕುಸಿತಕ್ಕೆ ನಾಂದಿ ಹಾಡಿದರು.
ಸಂಕ್ಷಿಪ್ತ ಸ್ಕೋರ್
ಚೆನ್ನೈ ಸೂಪರ್ ಕಿಂಗ್ಸ್ 191/4, 20 ಓವರ್
ರವೀಂದ್ರ ಜಡೇಜ 62(28), ಡು ಫ್ಲೆಸಿಕ್ಸ್ 50(41), ಹರ್ಷಲ್ ಪಟೇಲ್ 51/3.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ದೇವದತ್ತ ಪಡೀಕ್ಕಲ್ 34(15), ಗ್ಲೆನ್ ಮ್ಯಾಕ್ಸ್‌ವೆಲ್ 22(15), ರವೀಂದ್ರ ಜಡೇಜ 13/3
ಪಂದ್ಯ ಶ್ರೇಷ್ಠ : ರವೀಂದ್ರ ಜಡೇಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Kinnigoli: ಪಕ್ಷಿಕೆರೆ; ಕೊಲೆ ಪ್ರಕರಣ ಮತ್ತಷ್ಟು ಸಂಗತಿಗಳು ಬೆಳಕಿಗೆ?
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.