ಹಳೇ ಪಿಂಚಣಿ ವ್ಯವಸ್ಥೆ ಕಲ್ಪಿಸುವ ಪಕ್ಷಕ್ಕೆ ಮತ ಬೀಳುವ ಗಟ್ಟಿ ನಿರ್ಧಾರ
ರಾಜ್ಯದ 6.50 ಲಕ್ಷ ಸರಕಾರಿ ನೌಕರರಿಂದ ಓಟ್ ಫಾರ್ ಒಪಿಎಸ್ ಪ್ರತಿಜ್ಞೆ
Team Udayavani, Apr 16, 2023, 6:19 AM IST
ಬೆಳ್ತಂಗಡಿ: ದೇಶದೆಲ್ಲೆಡೆ 28 ರಾಜ್ಯಗಳನ್ನು ಒಳ ಗೊಂಡಂತೆ ಒಂದು ಕೋಟಿಗೂ ಮಿಕ್ಕಿ ಸರಕಾರಿ ನೌಕರರನ್ನು ಹಳೇ ಪಿಂಚಣಿ ವ್ಯವಸ್ಥೆಗೆ ಒಳಪಡಿಸಬೇಕೆಂಬ ಕಳೆದ 8 ವರ್ಷಗಳ ಹೋರಾಟದ ಪಟ್ಟು ಆಯಾಯ ರಾಜ್ಯಗಳ ಚುನಾವಣೆ ಮೇಲೆ ಬಿಗಿ ಹಿಡಿತ ಸಾಧಿಸುತ್ತಿದೆ.
ರಾಜ್ಯದ ಎನ್‌ಪಿಎಸ್ (ನೂತನ ಪಿಂಚಣಿ ಯೋಜನೆಯ) 2.98 ಲಕ್ಷ ಸರಕಾರಿ ಹಾಗೂ 3.30 ಲಕ್ಷ ಅರೆ ಸರಕಾರಿ ನೌಕರರು ಸೇರಿದಂತೆ 11.20 ಲಕ್ಷದಷ್ಟು ಕುಟುಂಬ ವರ್ಗ ಸೇರಿ ಒಟ್ಟು 17.70 ಲಕ್ಷ ಮಂದಿ ಓಟ್ ಫಾರ್ ಒಪಿಎಸ್ ಅಭಿಯಾನದ ಪ್ರತಿಜ್ಞೆ ಕೈಗೆತ್ತಿಕೊಂಡಿದ್ದಾರೆ. ಓಟು ನಮ್ಮ ಹಕ್ಕು ಆದರೆ ಯಾವ ಪಕ್ಷ ತಮ್ಮ ಪ್ರಣಾಳಿಕೆಯಲ್ಲಿ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವಲ್ಲಿ ಗಟ್ಟಿತನ ನಿರ್ಧಾರ ತಾಳುತ್ತದೆಯೋ ಆ ಪಕ್ಷಕ್ಕೆ ತಮ್ಮ ಮತ ಎಂಬ ಪಟ್ಟು ರಾಜ್ಯದೆಲ್ಲೆಡೆ ಪಕ್ಷಗಳಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.
ಎನ್‌ಪಿಎಸ್ ಒಪಿಎಸ್ ಎಂದರೇನು?
ಒಪಿಎಸ್ ಎಂದರೆ ಸರಕಾರಿ ನೌಕರರಿಗೆ ತಾವು ನಿವೃತ್ತಿ ಪಡೆದ ಬಳಿಕ ದೊರೆಯುವ ನಿಶ್ಚಿತ ಪಿಂಚಣಿಯಾಗಿದೆ. ಇದನ್ನು ಕೇಂದ್ರ ಸರಕಾರಿ ನೌಕರರಿಗೆ 2004ರಿಂದ ತೆಗೆದುಹಾಕಲಾಯಿತು. ರಾಜ್ಯದಲ್ಲಿ 2006ರಿಂದ ಅನ್ವಯ ಮಾಡಿದೆ. ಬಳಿಕ ಎನ್‌ಪಿಎಸ್ ಜಾರಿಯಾಯಿತು. ಇದರಂತೆ ಸರಕಾರಿ ನೌಕರರ ವೇತನದಿಂದ ಶೇ. 10 ಹಾಗೂ ಸರಕಾರವು ಶೇ. 14 ಮೊತ್ತವನ್ನು ಎಸ್‌ಬಿಐ, ಯುಟಿಐ, ಎಲ್‌ಐಸಿಗಳಲ್ಲಿ ಷೇರು ಹೂಡುತ್ತವೆ. ನೌಕರರು ತಮ್ಮ ನಿವೃತ್ತಿ ಬಳಿಕ ಆ ಷೇರು ಹಣದಲ್ಲಿ ಬಂದ ಲಾಭಾಂಶವನ್ನು ಆಧರಿಸಿ ಪಿಂಚಣಿ ನಿಗದಿಯಾಗುತ್ತದೆ. ಇಷ್ಟೇ ಪಿಂಚಣಿ ಎಂಬ ಬಗ್ಗೆ ಪಿಎಫ್‌ಆರ್‌ಡಿ ಕಾಯ್ದೆಯಲ್ಲಿ ಯಾವುದೇ ಖಾತ್ರಿ ಇಲ್ಲ. ಆದರೆ ಹಿಂದೆ ತಮ್ಮ ವೇತನದ ಶೇ. 50 ಕೈಗೆ ನೀಡಿದರೆ, ಪ್ರಸಕ್ತ ಎನ್‌ಪಿಎಸ್ ಪದ್ಧತಿಯಿಂದಾಗಿ ಷೇರು ಆಧಾರದಡಿ ಮಾಸಿಕ 1,500 ರೂ. ಪಿಂಚಣಿ ಪಡೆಯುವಂತಾಗಿದೆ.
ಹಿಮಾಚಲ ಪ್ರದೇಶದಲ್ಲಿ ಮೊದಲ ಒಪಿಎಸ್ ಜಾರಿ
ಇದಕ್ಕಾಗಿ ಕಳೆದ 8 ವರ್ಷಗಳಿಂದ ನಿಶ್ಚಿತ ಪಿಂಚಣಿಗಾಗಿ ದೇಶಾದ್ಯಂತ ಒಂದು ಕೋಟಿಗೂ ಮಿಕ್ಕಿ ಎನ್‌ಪಿಎಸ್ ನೌಕರರು ಹಳೇ ಪಿಂಚಣಿ ವ್ಯವಸ್ಥೆಗಾಗಿ ಹೋರಾಟ ನಡೆಸಿದ್ದಾರೆ. 2022 ಎಪ್ರಿಲ್‌ನಲ್ಲಿ ರಾಜಸ್ಥಾನದಲ್ಲಿ ಸಭೆ ನಡೆಸಿ ಎನ್‌ಎಂಒಪಿಎಸ್ ಸಂಘಟನೆಯಡಿ ವಿಜಯ ಕುಮಾರ್ ಅಧ್ಯಕ್ಷತೆಯಲ್ಲಿ 28 ರಾಜ್ಯಗಳಲ್ಲಿ ಚಳವಳಿ ಹಮ್ಮಿಕೊಂಡಿದೆ. ಇದರ ಭಾಗವಾಗಿ ಹಿಮಾಚಲ ಪ್ರದೇಶ ಮೊದಲ ಬಾರಿಗೆ ವೋಟ್ ಫಾರ್ ಒಪಿಎಸ್ ಮಾಡಲಾಗಿತ್ತು. ಅಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರಕಾರ ತಾನು ನೀಡಿದ ವಾಗ್ಧಾನದಂತೆ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಿದೆ. ರಾಜಸ್ಥಾನ, ಛತ್ತೀಸ್‌ಗಢ ಮತ್ತು ಝಾರ್ಖಂಡ್ ರಾಜ್ಯಗಳು ಈಗಾಗಲೇ ಒಪಿಎಸ್ ಜಾರಿಗೊಳಿಸಿವೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಯೋಜನೆಯ ಸುಧಾರಣೆಗಾಗಿ ಕಮಿಟಿ ರಚಿಸಿರುವುದರಿಂದ ಹೋರಾಟ ಮತ್ತಷ್ಟು ತೀವ್ರತೆ ಪಡೆದಿದೆ.
ಕರ್ನಾಟಕದಲ್ಲಿ ಹೋರಾಟ ದಿಕ್ಕು
ಕರ್ನಾಟಕದಲ್ಲಿ ಕಳೆದ ಅ. 13ರಂದು ಬೆಂಗಳೂರು ಶಕ್ತಿ ಸೌಧದ ಮುಂದೆ ಒಪಿಎಸ್ ಸಂಕಲ್ಪಯಾತ್ರೆ ಆರಂಭಗೊಂಡು ನ. 13ಕ್ಕೆ ದಾವಣಗೆರೆಯಲ್ಲಿ ಸಮಾಪನಗೊಂಡಿದೆ. ಅಲ್ಲಿಂದ 224 ವಿಧಾನ ಸಭಾ ಕ್ಷೇತ್ರದಲ್ಲಿ ಓಟ್ ಫಾರ್ ಒಪಿಎಸ್ ಎಂಬ ಮತದಾನದ ಚಳವಳಿ ನ. 13ರಿಂದ ಡಿ. 13ರ ವರೆಗೆ ಕರ್ನಾಟಕ ರಾಜ್ಯ ಸರಕಾರಿ ಎನ್‌ಪಿಎಸ್ ನೌಕರ ಸಂಘ ನಡೆಸಿದೆ. ಡಿ. 19ರಂದು ಫ್ರೀಡಮ್ ಪಾರ್ಕ್‌ನಲ್ಲಿ ಸರ್ವ ಪಕ್ಷಗಳನ್ನು ಕರೆಸಿ ಮನದಟ್ಟು ಮಾಡಿದ್ದಾರೆ. ಆಡಳಿತ ಪಕ್ಷ ಸದನದಲ್ಲೂ ಚರ್ಚಿಸಿಲ್ಲ, ಬಜೆಟ್‌ನಲ್ಲೂ ತಂದಿಲ್ಲ, ಪ್ರಸಕ್ತ ಚುನಾವಣೆ ನೀತಿಸಂಹಿತೆ ಜಾರಿಯಾದ್ದರಿಂದ ಭರವಸೆ ಈಡೇರಿಸಲಾಗಿಲ್ಲ. ಇನ್ನು ಕಾಂಗ್ರೆಸ್, ಜೆಡಿಎಸ್ ಪಕ್ಷ ಪ್ರಣಾಳಿಕೆಯಲ್ಲಿ ಸೇರಿಸುವುದಾಗಿ ಭರವಸೆ ನೀಡಿದ್ದು ಅದು ಈವರೆಗೂ ಈಡೇರಿಲ್ಲ.
ಪ್ರತಿ ವಿ.ಸ. ಕ್ಷೇತ್ರದಲ್ಲಿ 5,000 ಮತದಾರರು ಭಾಗಿ
ಹೀಗಾಗಿ ರಾಜ್ಯದ ಅಷ್ಟು ಎನ್‌ಪಿಎಸ್ ನೌಕರರು ಮಾ. 24ರಿಂದ 28ರ ವರೆಗೆ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ದು, ಪೋಸ್ಟರ್ ಅಭಿಯಾನವನ್ನು ನಡೆಸಿದೆ. ಯಾವ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಗಟ್ಟಿ ನಿರ್ಧಾರ ಪ್ರಕಟಿಸುತ್ತವೆಯೋ ಎಂದು ಸಮಸ್ತ ಸರಕಾರಿ ನೌಕರರು ಕಾಯುತ್ತಿದ್ದಾರೆ. ಇದಕ್ಕಾಗಿ
2.90 ಲಕ್ಷ ಎನ್‌ಪಿಎಸ್ ನೌಕರರೊಂದಿಗೆ 2.42 ಲಕ್ಷ ಒಪಿಎಸ್ ನೌಕರರು ಬೆಂಬಲ ನೀಡಿದ್ದಾರೆ. ಹೀಗಾಗಿ ಪ್ರತೀ ವಿ.ಸ.
ಕ್ಷೇತ್ರದಲ್ಲಿ ಸರಕಾರಿ, ನಿಗಮ ಮಂಡಳಿ ಅರೆ ಸರಕಾರಿ, ಅನುದಾನಿತ ಹಾಗೂ ಸ್ವಯಕ್ತ ಸಂಸ್ಥೆಗಳ ಲಕ್ಷ ನೌಕರರು ಹಾಗೂ ಅವರ ಕುಟುಂಬ ವರ್ಗ ಸೇರಿ ಸುಮಾರು ಪ್ರತೀ ವಿ.ಸಭಾ ಕ್ಷೇತ್ರದಲ್ಲಿ 5000 ಮತದಾರರು ಓಟ್ ಫಾರ್ ಒಪಿಎಸ್ ಚಳವಳಿಯಲ್ಲಿ ಭಾಗಿಯಾಗಲಿದ್ದಾರೆ.
ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೇ ಪಿಂಚಣಿ ಒದಗಿಸಲು ನಮ್ಮ ನಿರಂತರ ಹೋರಾಟ ಸಾಗಿದೆ. ಅದಕ್ಕಾಗಿ ಆರು ತಿಂಗಳು ವೋಟ್ ಫಾರ್ ಒಪಿಎಸ್ ಅಭಿಯಾನ ನಡೆಸಲಾಗಿದೆ. ಇದು ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ಜತೆಗೆ ಶೇ. 40 ವೇತನ ಪರಿಷ್ಕರಣೆಗೆ ಬೇಡಿಕೆಯಿಟ್ಟಿದ್ದೆವು ಅದು ಈಡೇರಿಲ್ಲ. 2022 ಜುಲೈನಿಂದ ರಾಜ್ಯ ವೇತನ ಪರಿಷ್ಕರಣೆಯಾಗಬೇಕಿತ್ತು. ತಡವಾಗಿ ಶೇ.17 ಪರಿಷ್ಕರಣೆ ಮಾಡಿದ್ದರಿಂದ 8 ತಿಂಗಳ ನಷ್ಟ ಉಂಟಾಗಿದೆ. ಇದನ್ನೆಲ್ಲಾ ರಾಜ್ಯದಲ್ಲಿರುವ ಸಮಸ್ತ ಸರಕಾರಿ ನೌಕರರು ಗಮನಿಸಿದ್ದಾರೆ. ಈ ಅನ್ಯಾಯವನ್ನು ಸರಿಪಡಿಸುತ್ತ ಸಂಘಟನೆ ನಿರಂತರವಾಗಿ ಪ್ರಯತ್ನಿಸುತ್ತಿದೆ.
– ಶಾಂತರಾಮ ತೇಜ, ಅಧ್ಯಕ್ಷರು ರಾಜ್ಯ ಎನ್‌ಪಿಎಸ್ ನೌಕರರ ಸಂಘ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರು ಎನ್‌ಎಂಒಪಿಎಸ್ (ನ್ಯಾಶನಲ್ ಮೋಮೆಂಟ್ ಫಾರ್ ಓಲ್ಡ್ ಪೆನ್ಶನ್)
1987ರಲ್ಲಿ ನಾನು ತಾತ್ಕಾಲಿಕ ನೆಲೆಯಲ್ಲಿ ಶಿಕ್ಷಕಿಯಾಗಿ ನೇಮಕವಾದೆ. 2007ರಲ್ಲಿ ಹುದ್ದೆ ಖಾಯಂಗೊಂಡಿತು. 2020 ಜೂನ್‌ನಲ್ಲಿ ನಿವೃತ್ತಿಯಾದೆ. ಎನ್‌ಪಿಎಸ್‌ಗಾಗಿ ಮಾಸಿಕ 4,500 ವೇತನದಿಂದ ಕಡಿತವಾಗುತ್ತಿತ್ತು. ಹಳೇ ಪಿಂಚಣಿ ವ್ಯವಸ್ಥೆಯಲ್ಲಿ 25 ಸಾವಿರ ಮಾಸಿಕ ಪಿಂಚಣಿ ಬರಬೇಕಿದ್ದಲ್ಲಿ ಪ್ರಸಕ್ತ ಎನ್‌ಪಿಎಸ್ ಯೋಜನೆಯಡಿ 1,637 ರೂ. ಮಾಸಿಕ ಪಿಂಚಣಿ ಲಭಿಸುತ್ತಿದೆ. ಇದಕ್ಕಾಗಿ ನಮ್ಮ ಮತ ಒಪಿಎಸ್‌ಗೆ.
– ಕಾತ್ಯಾಯಿನಿ, ನಿವೃತ್ತ ಶಿಕ್ಷಕಿ, ನಿಡ್ಲೆ, ಬೆಳ್ತಂಗಡಿ ತಾಲೂಕು
~ ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.