ಇದು ಬರೇ ಮಾತಲ್ಲ: ವ್ರತ, ಆಧ್ಯಾತ್ಮಿಕ ಪಯಣ… 100ರ ಸಂಭ್ರಮದಲ್ಲಿ ಪ್ರಧಾನಿ ಮೋದಿ “ಬಾತ್”
ಶೂನ್ಯ ಭಾವವನ್ನು ಮರೆಸಿದ ಮನದ ಮಾತು
Team Udayavani, May 1, 2023, 7:55 AM IST
ಹೊಸದಿಲ್ಲಿ: “ಮನ್ ಕಿ ಬಾತ್ ಎನ್ನುವುದು ನನಗೆ ಬರೇ ಒಂದು ಕಾರ್ಯಕ್ರಮವಲ್ಲ, ಅದೊಂದು ನಂಬಿಕೆ, ಒಂದು ವ್ರತ, ಅದೊಂದು ಆಧ್ಯಾತ್ಮಿಕ ಪಯಣ. ಭಗವಂತನ ಪೂಜೆಗೆ ಹೋದ ಭಕ್ತರು ಬರುವಾಗ ಪ್ರಸಾದವನ್ನು ತರುತ್ತಾರೆ. ನನಗೆ ಮನ್ ಕೀ ಬಾತ್ ಎನ್ನುವುದು ದೇಶವಾಸಿಗಳೆಂಬ ಭಗವಂತನ ಪಾದದಲ್ಲಿ ಸಿಕ್ಕಿದ ಪ್ರಸಾದ…”
ತಮ್ಮ “ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮವು ಶತಕದ ಮೈಲುಗಲ್ಲನ್ನು ಸಾಧಿಸುತ್ತಿದ್ದಂತೆ ಪ್ರಧಾನ್ರಿ ನರೇಂದ್ರ ಮೋದಿಯವರು ಭಾವಪರವಶರಾಗಿ ನುಡಿದ ಮಾತುಗಳಿವು.
ರವಿವಾರ ಪ್ರಸಾರವಾದ 100ನೇ ಆವೃತ್ತಿಯಲ್ಲಿ ಮೋದಿಯವರು 9 ವರ್ಷಗಳ ನೆನಪುಗಳನ್ನು ಮೆಲುಕು ಹಾಕಿದರು. 2014ರಿಂದ ಇಂದಿನವರೆಗೂ “ಮನದ ಮಾತು’ ಕಾರ್ಯಕ್ರಮ ತಮ್ಮಲ್ಲಿ ಯಾವ್ಯಾವ ಬದಲಾವಣೆಯನ್ನು ಮೂಡಿಸಿತು, ದೇಶದಲ್ಲಿ ಎಂತಹ ಜನಾಂದೋಲನಗಳನ್ನು ರೂಪಿಸಿತು ಎಂಬುದನ್ನು ಅವರು ವಿವರಿಸುತ್ತ ಹೋದರು.
“ಮನ್ ಕೀ ಬಾತ್’ನ ಈ ಹಿಂದಿನ ಆವೃತ್ತಿಗಳಲ್ಲಿ ಪ್ರಸ್ತಾವಿಸಲ್ಪಟ್ಟ ದೇಶದ ಮೂಲೆ ಮೂಲೆಯ ಆಯ್ದ ಸಾಧಕರೊಂದಿಗೆ ರವಿವಾರದ 100ನೇ ಆವೃತ್ತಿಯ ಭಾಷಣದ ವೇಳೆ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆಯನ್ನೂ ನಡೆಸಿದರು. ಇದೇ ವೇಳೆ ಯುನೆಸ್ಕೋ ಮಹಾ ನಿರ್ದೇಶಕಿ ಔಡ್ರೆ ಅಜೌಲೆ ಕೂಡ ಮಾತನಾಡಿ ಮೋದಿಯವರಿಗೆ ಅಭಿನಂದನೆಗಳನ್ನು ತಿಳಿಸಿದರು.
ವಿಶ್ವದ ಮೂಲೆ ಮೂಲೆಯಲ್ಲೂ
ಮೋದಿಯವರ ಮಾಸಿಕ ರೇಡಿಯೋ ಕಾರ್ಯಕ್ರಮವು 100ರ ಹೊಸ್ತಿಲು ದಾಟಿದ ಸಂಭ್ರಮವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ಆಚರಿಸಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಹಿಡಿದು ಅಮೆರಿಕ, ಚೀನ, ಲಂಡನ್, ಬಾಂಗ್ಲಾ, ರಷ್ಯಾ, ಇಂಡೋನೇಷ್ಯಾ ಸೇರಿದಂತೆ ಹತ್ತು ಹಲವು ದೇಶಗಳೂ ಮೋದಿ ಭಾಷಣಕ್ಕೆ ಕಿವಿಯಾದವು. ಒಟ್ಟಾರೆ 4 ಲಕ್ಷ ಕಡೆ 100ನೇ ಆವೃತ್ತಿಯ ಮನದ ಮಾತನ್ನು ಜನರು ಆಲಿಸಿದರು.
100ರ ಮನದ ಮಾತು
– 2014ರಲ್ಲಿ ದಿಲ್ಲಿಗೆ ಬಂದಾಗ ನನ್ನಲ್ಲೊಂದು ಶೂನ್ಯ ಆವರಿಸಿತ್ತು. “ಮನ್ ಕೀ ಬಾತ್” ಬಾನುಲಿ ಕಾರ್ಯಕ್ರಮವು ಪವಾಡದಂತೆ ಆ ಶೂನ್ಯ ಭಾವವನ್ನು ಮರೆಸಿತು.
– ಇದು ಕೋಟ್ಯಂತರ ಭಾರತೀಯರ ಭಾವನೆಗಳ ಅಭಿವ್ಯಕ್ತಿಯಾಗಿದ್ದು, ನಾನು ಜನರಿಂದ ಎಂದಿಗೂ ದೂರವಾಗಬಾರದು ಎಂದು ಅಂದೇ ನಿರ್ಧರಿಸಿದೆ.
– ಮನ್ ಕೀ ಬಾತ್ ಭಾರತ ಮತ್ತು ಭಾರತೀಯರ ಧನಾತ್ಮಕತೆಯನ್ನು ಸಂಭ್ರಮಿಸುವಂಥ ಹಬ್ಬ
– 100ನೇ ಆವೃತ್ತಿಯ ಈ ಸಂದರ್ಭದಲ್ಲಿ ಶ್ರೋತೃಗಳಿಂದ ಹರಿದುಬಂದಿರುವ ಪತ್ರಗಳ ಮಹಾಪೂರವನ್ನು ನೋಡಿ ನಾನು ಭಾವುಕನಾದೆ.
– ಮನ್ ಕೀ ಬಾತ್ ಕಾರ್ಯಕ್ರಮವು ಕೋಟ್ಯಂತರ ಭಾರತೀಯರ ಮನದ ಮಾತಾಗಿತ್ತು, ಅವರ ಭಾವನೆಗಳ ಅಭಿವ್ಯಕ್ತಿಯಾಗಿತ್ತು.
– ಸ್ವತ್ಛ ಭಾರತ, ಖಾದಿ, ಹರ್ ಘರ್ ತಿರಂಗಾ, ಕ್ಯಾಚ್ ದಿ ರೈನ್‌ನಿಂದ ಹಿಡಿದು ಸ್ವಾತಂತ್ರ್ಯದ ಅಮೃತ ಮಹೋತ್ಸವದವರೆಗೆ ಈ ಕಾರ್ಯಕ್ರಮದಲ್ಲಿ ಪ್ರಸ್ತಾವವಾದ ಹತ್ತು ಹಲವು ವಿಚಾರಗಳು ಜನಾಂದೋಲನವಾಗಿ ರೂಪುಗೊಂಡವು.
ಮನ್ ಕಿ ಬಾತ್ ಶತಕಕ್ಕೆ ಮೆಚ್ಚುಗೆ
4 ಲಕ್ಷ ಸ್ಥಳಗಳಲ್ಲಿ 100ನೇ ಆವೃತ್ತಿ ಪ್ರಸಾರ
ಪ್ರಧಾನಿ ಮನದ ಮಾತಿಗೆ ಕಿವಿಯಾದ ಲಕ್ಷಾಂತರ ಜನರು
ಪ್ರಧಾನಿ ನರೇಂದ್ರ ಮೋದಿ ಅವರ ಐತಿಹಾಸಿಕ “ಮನ್ ಕಿ ಬಾತ್” 100ನೇ ಆವೃತ್ತಿಯನ್ನು ಭಾರತ ಮಾತ್ರವಲ್ಲದೇ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಿಂದ ಹಿಡಿದು ಅಮೆರಿಕ, ಚೀನಾ, ಲಂಡನ್, ಬಾಂಗ್ಲಾ, ರಷ್ಯಾ, ಇಂಡೋನೇಷ್ಯಾ ಸೇರಿದಂತೆ ಅನೇಕ ದೇಶಗಳು ಆಲಿಸಿದವು. ಒಟ್ಟಾರೆ 4 ಲಕ್ಷ ಸ್ಥಳಗಳಲ್ಲಿ 100ನೇ ಆವೃತ್ತಿಯ ಮನದ ಮಾತನ್ನು ಲಕ್ಷಾಂತರ ಜನರು ಆಲಿಸಿದರು.
ಈ ವಿಶೇಷ ದಿನದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ರಾಜ್ಯಪಾಲರು ಪದ್ಮ ಪುರಸ್ಕೃತರನ್ನು ರಾಜಭವನಕ್ಕೆ ಆಹ್ವಾನಿಸಿದ್ದರು. ವಿವಿಧ ರಾಜ್ಯಗಳ ರಾಜ್ಯಪಾಲರು ಪದ್ಮ ಪುರಸ್ಕೃತರೊಂದಿಗೆ 100ನೇ ಆವೃತ್ತಿಯ “ಮನ್ ಕಿ ಬಾತ್’ಗೆ ಕಿವಿಯಾದರು.
ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಶೇಷ ಫೋಟೋಗಳ ಪ್ರದರ್ಶನ ಉದ್ಘಾಟಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಂಬೈನಲ್ಲಿ ಕಾರ್ಯಕ್ರಮ ಆಲಿಸಿದರು. ಅವರ ಜತೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್ ಇದ್ದರು. ಗೋವಾ ರಾಜಧಾನಿ ಪಣಜಿಯಲ್ಲಿ ಸಿಎಂ ಪ್ರಮೋದ್ ಸಾವಂತ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್, ರಾಜಸ್ಥಾನ ರಾಜ್ಯಪಾಲ ಕಾಲ್‌ರಾಜ್ ಮಿಶ್ರಾ, ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಅನೇಕ ಗಣ್ಯರು “ಮನ್ ಕಿ ಬಾತ್’ ಆಲಿಸಿದರು. ಬಳಿಕ ಮಾತನಾಡಿದ ಪ್ರಮುಖರು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮಲ್ಟಿಪ್ಲೆಕ್ ಚಿತ್ರಮಂದಿರದಲ್ಲಿ ಆಯೋಜನೆ:
ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಶಂಕರ್ ಲಾಲ್‌ವಾಣಿ ಅವರು ಇಂದೋರ್‌ನ ಸಪ್ನಾ ಸಂಗೀತ್ ಪ್ರದೇಶದಲ್ಲಿರುವ ಮಲ್ಟಿಪ್ಲೆಕ್ ಚಿತ್ರಮಂದಿರದಲ್ಲಿ ನಾಗರಿಕರು “ಮನ್ ಕಿ ಬಾತ್” ವೀಕ್ಷಿಸಲು ಆಯೋಜನೆ ಮಾಡಿದ್ದರು.
ವಿಶ್ವಸಂಸ್ಥೆಯಲ್ಲಿ ಪ್ರಸಾರ:
ಭಾನುವಾರ ಬೆಳಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲೂ ಮೋದಿ ಮನದ ಮಾತಿನ 100ನೇ ಆವೃತ್ತಿ ಪ್ರಸಾರಗೊಂಡಿತು. ಇದೇ ವೇಳೆ, ಯುನೆಸ್ಕೋ ಪ್ರಧಾನ ನಿರ್ದೇಶಕಿ ಔಡ್ರೆ ಅಜೌಲೆ ಅವರೂ ಪ್ರಧಾನಿ ಮೋದಿಗೆ ಸಂದೇಶವೊಂದನ್ನು ರವಾನಿಸಿದ್ದು, ಮನ್ ಕಿ ಬಾತ್‌ನ ಶತಕದ ಮೈಲುಗಲ್ಲಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜತೆಗೆ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ ಮತ್ತು ಮಾಹಿತಿಯಲ್ಲಿ ಯುನೆಸ್ಕೋ ಮತ್ತು ಭಾರತ ಸಮಾನ ದೀರ್ಘಕಾಲದ ಇತಿಹಾಸವನ್ನು ಹೊಂದಿವೆ. 2030ರೊಳಗೆ ಜಗತ್ತಿನ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಒದಗಿಸಬೇಕು ಎನ್ನುವ ಗುರಿ ನಮ್ಮದು. ಈ ಗುರಿ ಸಾಧಿಸಲು ಭಾರತದಿಂದ ಏನಾದರೂ ಸಲಹೆ ಸಿಗಬಹುದೇ ಎಂದೂ ಅವರು ಪ್ರಶ್ನಿಸಿದ್ದಾರೆ. ಅಲ್ಲದೇ, ಒಂದು ರೇಡಿಯೋ ಕಾರ್ಯಕ್ರಮವು ಕೋಟ್ಯಂತರ ಮಂದಿಯನ್ನು ಒಂದುಗೂಡಿಸುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ ಅಜೌಲೆ.
ಜಗತ್ತಿನಾದ್ಯಂತ 100ರ ಸಂಭ್ರಮ
ವಿಶ್ವಸಂಸ್ಥೆ ಮಾತ್ರವಲ್ಲದೇ ಯುಕೆ, ಚೀನಾ, ದಕ್ಷಿಣ ಆಫ್ರಿಕಾ, ಚಿಲಿ, ಮೊರೊಕ್ಕೊ, ಮೆಕ್ಸಿಕೋ, ಕಾಂಗೋ, ಇರಾಕ್, ಇಂಡೋನೇಷ್ಯಾ ಸೇರಿದಂತೆ ವಿವಿಧ ದೇಶಗಳಲ್ಲೂ ಇದು ಪ್ರಸಾರಗೊಂಡಿತು. ಅಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು 100ನೇ ಆವೃತ್ತಿಯ ಮನ್ ಕಿ ಬಾತ್ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದವು. ಲಂಡನ್‌ನಲ್ಲಿ ಭಾರತೀಯ ಹೈಕಮಿಷನ್‌ನಲ್ಲಿ ಪ್ರಸಾರವಾದ ರೇಡಿಯೋ ಕಾರ್ಯಕ್ರಮಕ್ಕೆ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಸಾಕ್ಷಿಯಾದರು. ಬೀಜಿಂಗ್, ರಷ್ಯಾ, ಬಾಂಗ್ಲಾದೇಶದಲ್ಲೂ ನೂರಾರು ಭಾರತೀಯರು ಆಗಮಿಸಿ ಬಾನುಲಿ ಭಾಷಣವನ್ನು ಆಲಿಸಿದರು. ಅಮೆರಿಕ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕೂಡ ನ್ಯೂಜೆರ್ಸಿಯ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮನ್ ಕಿ ಬಾತ್ ಆಲಿಸಿದರು. ಈ ವೇಳೆ ಭಾರತೀಯ ಅಮೆರಿಕನ್ ಸಮುದಾಯ ಹಾಜರಿತ್ತು.
100ನೇ ಆವೃತ್ತಿಗೆ ಗೌರವ
ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ಪ್ರಾಂತ್ಯಗಳು ಪ್ರಧಾನಿ ಮೋದಿಯವರ ಮನ್ ಕಿ ಬಾತ್‌ನ 100ನೇ ಆವೃತ್ತಿಗೆ ಗೌರವ ಸೂಚಿಸಿ ನಿರ್ಣಯ ಕೈಗೊಂಡವು. ಉತ್ತಮ ಆಡಳಿತವನ್ನು ಉತ್ತೀಜಿಸುವ ಮತ್ತು ಪ್ರಜಾಸತ್ತೆಯನ್ನು ಬಲಿಷ್ಠಪಡಿಸುವ ಪರಿಣಾಮಕಾರಿ ಸಂವಹನ ಇದಾಗಿದೆ ಎಂದೂ ಈ ಪ್ರಾಂತ್ಯಗಳು ನಿರ್ಣಯದಲ್ಲಿ ಹೇಳಿವೆ. ಜತೆಗೆ ಮನ್ ಕಿ ಬಾತ್‌ನ 100ರ ಸಂಭ್ರಮಕ್ಕೆ ಅಭಿನಂದನೆಗಳನ್ನೂ ತಿಳಿಸಿವೆ.
300 ಮದರಸಾಗಳಲ್ಲಿ “ಮನ್ ಕಿ ಬಾತ್”:
ಉತ್ತರ ಪ್ರದೇಶದ 300ಕ್ಕೂ ಹೆಚ್ಚು ಮದರಸಾಗಳಲ್ಲಿ “ಮನ್ ಕಿ ಬಾತ್’ 100ನೇ ಆವೃತ್ತಿಯನ್ನು ಲೈವ್ ಆಗಿ ಪ್ರಸಾರ ಮಾಡಲಾಗಿತ್ತು ಎಂದು ಉತ್ತರ ಪ್ರದೇಶ ಬಿಜೆಪಿ ತಿಳಿಸಿದೆ. ಈ ಹಿಂದೆ ಬಿಜೆಪಿ ಅಲ್ಪಸಂಖ್ಯಾತರ ಘಟಕವು “ಮನ್ ಕಿ ಬಾತ್’ನ ಒಟ್ಟು 12 ಆವೃತ್ತಿಗಳನ್ನು ಉರ್ದುಗೆ ತರ್ಜುಮೆ ಮಾಡಿ, ಅದನ್ನು ಮದರಸಾಗಳು ಮತ್ತು ಇಸ್ಲಾಮಿಕ್ ವಿದ್ವಾಂಸರಿಗೆ ಹಂಚಿತ್ತು.
“ಮನ್ ಕಿ ಬಾತ್”ನಿಂದ ಬೆಳಕಿಗೆ ಬಂದ ಸ್ಫೂರ್ತಿದಾಯಕ ವ್ಯಕ್ತಿತ್ವಗಳು:
ವಿಜಯಶಾಂತಿ ದೇವಿ:
ಮಣಿಪುರದ ವಿಜಯಶಾಂತಿ ದೇವಿ ಅವರು ಕಮಲದ ನಾರಿನಿಂದ ಬಟ್ಟೆಗಳನ್ನು ತಯಾರಿಸುತ್ತಾರೆ. ಇವರ ಪರಿಸರ ಪೂರಕ ಮತ್ತು ಅನನ್ಯ ಆಲೋಚನೆಯ ಬಗ್ಗೆ “ಮನ್ ಕಿ ಬಾತ್’ನಲ್ಲಿ ಚರ್ಚಿಸಲಾಗಿತ್ತು. ದೇವಿ ಅವರಲ್ಲಿ 30 ಮಹಿಳಾ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಈ ಸಂಖ್ಯೆಯನ್ನು ಈ ವರ್ಷ 70ಕ್ಕೂ ಹೆಚ್ಚು ಮಹಿಳಾ ಉದ್ಯೋಗಿಗಳಿಗೆ ಏರಿಕೆ ಮಾಡುವುದು ದೇವಿ ಅವರ ಗುರಿಯಾಗಿದೆ. ಅಲ್ಲದೇ ಅವರು ಈ ಬಟ್ಟೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮುಂದಾಗಿದ್ದಾರೆ.
ಸುನೀಲ್ ಜಗಲನ್:
“ಸೆಲ್ಫಿ ವಿಥ್ ಡಾಟರ್’ ಅಭಿಯಾನವನ್ನು ಆರಂಭಿಸಿದ ಕೀರ್ತಿ ಸುನೀಲ್ ಜಗಲನ್ ಅವರದ್ದು. 2015ರ ಜೂನ್‌ನಲ್ಲಿ ಹರ್ಯಾಣದ ಪುಟ್ಟ ಗ್ರಾಮದಲ್ಲಿ ಆರಂಭಿಸಲಾದ ಈ ಅಭಿಯಾನವು ಯಶಸ್ಸು ಕಾಣಲು ಮನ್ ಕಿ ಬಾತ್ ಕಾರಣ”. ಹೀಗೆಂದು ಹೇಳಿದ್ದು ಈ ಅಭಿಯಾನದ ರೂವಾರಿ ಸುನಿಲ್ ಜಗಲನ್. ಮನದ ಮಾತಿನ 100ನೇ ಆವೃತ್ತಿಯಲ್ಲಿ ಮಗದೊಮ್ಮೆ ಪ್ರಧಾನಿ ಮೋದಿಯವರು ಸುನಿಲ್‌ರ “ಮಗಳೊಂದಿಗೆ ಸೆಲ್ಫಿ” ಕಾರ್ಯಕ್ರಮವನ್ನು ಶ್ಲಾ ಸಿದರು. ಈ ಅಭಿಯಾನದ ಉದ್ದೇಶ ಸೆಲ್ಫಿಯೂ ಆಗಿರಲಿಲ್ಲ, ತಂತ್ರಜ್ಞಾನವೂ ಆಗಿರಲಿಲ್ಲ. ಬದಲಾಗಿ ಹೆಣ್ಣುಮಕ್ಕಳಿಗೆ ನೀಡಬೇಕಾದ ಪ್ರಾಮುಖ್ಯತೆಯೇ ಇಲ್ಲಿ ಮುಖ್ಯವಾಗಿತ್ತು ಎಂದು ಮೋದಿ ಹೇಳಿದ್ದಾರೆ. “ಮೋದಿಯವರು ರೇಡಿಯೋ ಕಾರ್ಯಕ್ರಮದಲ್ಲಿ ನನ್ನ ಅಭಿಯಾನದ ಬಗ್ಗೆ ಉಲ್ಲೇಖೀಸಿದ ಬಳಿಕ ದೇಶ-ವಿದೇಶಗಳಿಂದ ನನಗೆ ಬೆಂಬಲ ವ್ಯಕ್ತವಾಯಿತು’ ಎಂದಿದ್ದಾರೆ ಜಗಲನ್. ಸುನಿಲ್ ಅವರು ಇದಕ್ಕಾಗಿ ಮೀಸಲಾದ ವೆಬ್‌ಸೈಟ್ ಆರಂಭಿಸಿದ್ದು, ಪೋಷಕರು ತಮ್ಮ ಪುತ್ರಿಯೊಂದಿಗೆ ಸೆಲ್ಫಿ ಚಿತ್ರ ಸೆರೆಹಿಡಿದು ವೆಬ್‌ಸೈಟ್‌ಗೆ ಕಳುಹಿಸಬಹುದಾಗಿದೆ.
ಪ್ರದೀಪ್ ಸಾಂಗ್ವಾನ್:
“ಹೀಲಿಂಗ್ ಹಿಮಾಲಯಾಸ್’ ಎಂಬ ಅಭಿಯಾನವನ್ನು ಪ್ರದೀಪ್ ಸಾಂಗ್ವಾನ್ ಮುನ್ನಡೆಸುತ್ತಿದ್ದಾರೆ. ಹಿಮಾಲಯವನ್ನು ಸ್ವತ್ಛವಾಗಿಡಲು ಪ್ರತಿ ದಿನ ವಿವಿಧ ಪ್ರದೇಶಗಳಿಂದ ಐದು ಟನ್ ಕಸವನ್ನು ಸಾಂಗ್ವಾನ್ ಅವರ ತಂಡ ಸಂಗ್ರಹಿಸುತ್ತದೆ. ಅವರ ಅಭಿಯಾನವು ಗ್ರಾಮೀಣ ಹಿಮಾಲಯ ಪ್ರದೇಶದಲ್ಲಿ ಸ್ವತ್ಛತಾ ಅಭಿಯಾನಗಳು, ತ್ಯಾಜ್ಯ ನಿರ್ವಹಣೆ ಮತ್ತು ಇತರ ಚಟುವಟಿಕೆಗಳ ಮೇಲೆ ಕೇಂದ್ರೀಕೃತವಾಗಿದೆ.
ಮನ್ಸೂರ್ ಅಹ್ಮದ್:
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಔಖು ಗ್ರಾಮದಲ್ಲಿ ಪೆನ್ಸಿಲ್ ತಯಾರಿಕಾ ಘಟಕವನ್ನು ಮನ್ಸೂರ್ ಅಹ್ಮದ್ ನಡೆಸುತ್ತಾರೆ. ಇದರಲ್ಲಿ 200ಕ್ಕೂ ಹೆಚ್ಚು ಜನರಿಗೆ ಅವರು ಉದ್ಯೋಗ ನೀಡಿದ್ದಾರೆ. ಔಖು ಗ್ರಾಮ ಇದೀಗ “ಭಾರತದ ಪೆನ್ಸಿಲ್ ಗ್ರಾಮ” ಎಂಬ ಅಭಿದಾನಕ್ಕೆ ಪಾತ್ರವಾಗಿದೆ. “ಗ್ರಾಮವು ಪೆನ್ಸಿಲ್‌ಗಳನ್ನು ತಯಾರಿಸುವ ಮೂಲಕ ಭಾರತದ ಜನರನ್ನು ವಿದ್ಯಾವಂತರನ್ನಾಗಿಸುತ್ತಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.