K P Rao: ತನ್ಮಯಶೀಲ ಕೆ.ಪಿ.ರಾವ್ ಜೀವನ ಚರಿತ್ರೆ ದಾಖಲಾಗಬೇಕು: ಸಾಹಿತಿ ಜಯಂತ್ ಕಾಯ್ಕಿಣಿ
ಕೆ.ಪಿ.ರಾಯರು ನಮ್ಮ ಬದುಕಿಗೂ ಕಿಟಕಿಯಾಗಿ ದೊರೆತ ವಿಶಿಷ್ಟ ಪ್ರತಿಭೆಯ ವ್ಯಕ್ತಿಯಾಗಿದ್ದಾರೆ
Team Udayavani, Aug 6, 2023, 3:26 PM IST
ಉಡುಪಿ: ತನ್ಮಯತೆ ಇಲ್ಲದ ಚಿಂತನೆಶೀಲತೆಯಿಂದಲೂ ಏನೂ ಪ್ರಯೋಜನ ಇಲ್ಲ, ಅದೇ ರೀತಿ ಚಿಂತನೆಶೀಲತೆ ಇಲ್ಲದ ತನ್ಮಯತೆಯಿಂದಲೂ ಏನೂ ಪ್ರಯೋಜನ ಇಲ್ಲ. ಅವೆರಡೂ ಒಂದಾದ ಪವಾಡದ ಅದ್ಭುತ ವ್ಯಕ್ತಿತ್ವವೇ ಕೆ.ಪಿ.ರಾವ್ ಎಂಬುದಾಗಿ ಪ್ರಸಿದ್ಧ ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.
ಅವರು ಭಾನುವಾರ (ಅ.6) ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಉಡುಪಿ ತಾಲೂಕು ಘಟಕದ ಕನ್ನಡ ಸಾಹಿತ್ಯ ಪರಿಷತ್ ಮತ್ತು 30ಕ್ಕೂ ಅಧಿಕ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಆಯೋಜಿಸಿದ್ದ ನಾಡೋಜ ಪ್ರೊ.ಕೆ.ಪಿ.ರಾವ್ ಅವರ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆಯ ನುಡಿಗಳನ್ನಾಡಿದರು.
ಸೂತ್ರವಿಲ್ಲದೇ ಗಾಳಿಪಟ ಹೇಗೆ ಹಾರಲು ಸಾಧ್ಯವಿಲ್ಲವೋ, ಕೆ.ಪಿ.ರಾವ್ ಅವರ ಬಹುಮುಖ ಪ್ರತಿಭೆಯ ಅನಾವರಣದ ಹಿಂದೆ ಅವರ ಪತ್ನಿ ನಿರ್ಮಲಾ ಅವರ ಪ್ರೋತ್ಸಾಹ, ಸಹಕಾರವನ್ನು ನೆನಪಿಸಿಕೊಳ್ಳದಿರುವುದು ಕೂಡಾ ಸಾಧ್ಯವಿಲ್ಲ ಎಂದು ಕಾಯ್ಕಿಣಿ ಹೇಳಿದರು.
ಕೆ.ಪಿ.ರಾಯರಿಗೆ ಸಂಗೀತ, ಸಿನಿಮಾ, ಭಾಷೆ, ಸಂಶೋಧನೆ ಸೇರಿದಂತೆ ಬಹು ಆಯಾಮಗಳಲ್ಲಿ ಆಸಕ್ತಿ ಹೊಂದಿ, ಅದರಲ್ಲಿ ಪರಿಣತಿಯನ್ನು ಪಡೆದ ಮಹಾನ್ ಚೇತನ ಅವರು. ಅವರನ್ನು ಅಭಿನಂದಿಸುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ದೊರೆತ ಅವಕಾಶವೇ ನಮಗೊಂದು ವಿನೀತ ಭಾವವನ್ನು ತಂದಿದೆ.
ರೈಲಿನಲ್ಲಿ ಪ್ರಯಾಣಿಸುವುದು ಕೆಪಿ ರಾಯರಿಗೆ ತುಂಬಾ ಇಷ್ಟವಾದ ಹವ್ಯಾಸವಾಗಿದೆ. ಅಷ್ಟೇ ಅಲ್ಲ ಅವರಿಗೆ ಕಿಟಕಿ ಪಕ್ಕವೇ ಕುಳಿತು ಎಲ್ಲವನ್ನೂ ವೀಕ್ಷಿಸುವ ಕುತೂಹಲ. ಹೀಗೆ ಪ್ರಯಾಣ, ಜನರೊಂದಿಗೆ ಬೆರೆಯುವ ಅವರ ನಿಷ್ಕಳಂಕ ವ್ಯಕ್ತಿತ್ವದ ಕೆ.ಪಿ.ರಾಯರು ನಮ್ಮ ಬದುಕಿಗೂ ಕಿಟಕಿಯಾಗಿ ದೊರೆತ ವಿಶಿಷ್ಟ ಪ್ರತಿಭೆಯ ವ್ಯಕ್ತಿಯಾಗಿದ್ದಾರೆ ಎಂದು ಕಾಯ್ಕಿಣಿ ಬಣ್ಣಿಸಿದರು.
ಜಯಂತ್ ಕಾಯ್ಕಿಣಿಯವರ ಅಭಿನಂದನಾ ನುಡಿಯ ನಂತರ ವಾದ್ಯ-ಘೋಷದೊಂದಿಗೆ ಕೆಪಿ ರಾವ್ ಅವರನ್ನು ಸನ್ಮಾನಿಸಲು ಹೂ ಹಾರ, ಅಭಿನಂದನಾ ಪತ್ರ, ಬಾಳೆಗೊನೆ, ಹಣ್ಣು, ಹಂಪಲು ಸೇರಿದಂತೆ ವಿವಿಧ ವಸ್ತುಗಳನ್ನು ವೇದಿಕೆಗೆ ತರಲಾಗಿತ್ತು. ಬಳಿಕ ಕೆ.ಪಿ ರಾವ್ ಅವರನ್ನು ಅದ್ದೂರಿಯಾಗಿ ಅಭಿನಂದಿಸಲಾಯಿತು.
ಅಭಿನಂದನಾ ಕಾರ್ಯಕ್ರಮದ ಬಳಿಕ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಕೆಪಿ ರಾವ್ ಅವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಮುರಳೀಧರ ಉಪಾಧ್ಯ ಹಿರಿಯಡ್ಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ, ನಿವೃತ್ತ ಉಪನ್ಯಾಸಕ ಸೇಡಿಯಾಪು ಜಯರಾಮ್ ಭಟ್, ಅಭಿನಂದನಾ ಸಮಿತಿಯ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ್ ಶೆಣೈ, ಅಭಿನಂದನಾ ಸಮಿತಿ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಉಪಸ್ಥಿತರಿದ್ದರು.
ರವಿರಾಜ್ ಎಚ್.ಪಿ ಸ್ವಾಗತಿಸಿದ್ದು, ರಾಜೇಶ್ ಭಟ್ ಪಣಿಯಾಡಿ ವಂದಿಸಿ, ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಭಾನುವಾರ ಬೆಳಗ್ಗೆ ನಡೆದ ಅಭಿನಂದನಾ ಸಮಾರಂಭದ ಉದ್ಘಾಟನಾ ಸಮಾರಂಭದಲ್ಲಿ ಮೂಡುಬಿದಿರೆ ಜೈನಮಠದ ಮಠಾಧಿಪತಿ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಸಂದೇಶ ನುಡಿಗಳನ್ನಾಡಿದ್ದರು. ಡಾ.ಪಿ.ವಿ.ಭಂಡಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಸಾಪ ಜಿಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಉಡುಪಿ ವಿಶ್ವನಾಥ್ ಶೆಣೈ, ಜಯಕರ್ ಶೆಟ್ಟಿ ಇಂದ್ರಾಳಿ, ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಉಪಸ್ಥಿತರಿದ್ದರು.
ಬೆಳಗ್ಗೆ ನಡೆದ ಗೋಷ್ಠಿಯಲ್ಲಿ ಕಂಪ್ಯೂಟರ್ ಮತ್ತು ಕೆಪಿ ರಾವ್ ವಿಷಯದ ಕುರಿತು ಡಾ.ಯು.ಬಿ.ಪವನಜ ಬೆಂಗಳೂರು ವಿಷಯ ಮಂಡಿಸಿದ್ದರು. ಕೆಪಿ ರಾವ್ ಬದುಕು ಹಾಗೂ ವರ್ಣಕ ಕಾದಂಬರಿ ಕುರಿತು ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆಂಡ್ ಸೈನ್ಸ್ ಮಾಹೆಯ ಮುಖ್ಯಸ್ಥರಾದ ಪ್ರೊ.ವರದೇಶ ಹಿರೇಗಂಗೆ ವಿಷಯ ಮಂಡಿಸಿದ್ದರು. ಕೆಪಿ ರಾವ್ ಅವರೊಂದಿಗಿನ ಒಡನಾಟದ ಬಗ್ಗೆ ಹಿರಿಯ ವಿದ್ವಾಂಸ ಡಾ.ಎನ್.ಟಿ.ಭಟ್ ವಿಷಯ ಹಂಚಿಕೊಂಡರು.
ಕೆ.ಪಿ.ರಾವ್ ಅವರೊಂದಿಗಿನ ಮಾತುಕತೆಯಲ್ಲಿ ಡಾ.ಪಾದೇಕಲ್ಲು ವಿಷ್ಣುಭಟ್, ಉಪನ್ಯಾಸಕ ಡಾ.ಕೆ.ಮಹಾಲಿಂಗ ಭಟ್, ಮಣಿಪಾಲ ಯುನಿರ್ವಸಲ್ ಪ್ರೆಸ್ ಮಾಹೆಯ ಪ್ರಧಾನ ಸಂಪಾದಕ ಪ್ರೊ.ನೀತಾ ಇನಾಂದಾರ್, ಭೂ ವಿಜ್ಞಾನಿ ಡಾ.ಉದಯ್ ಶಂಕರ್ ಎಚ್.ಎಸ್, ರಿಸರ್ಚ್ ಸ್ಕಾಲರ್ ಸುಶ್ಮಿತಾ ಶೆಟ್ಟಿ, ಎಂಜಿಎಂ ಕಾಲೇಜು ವಿದ್ಯಾರ್ಥಿನಿ ಕು.ಪಲ್ಲವಿ ಕೊಡಗು ಭಾಗವಹಿಸಿದ್ದರು.
ಜಯಂತ್ ಕಾಯ್ಕಿಣಿ ಹೇಳಿದ ಪ್ರಸಂಗಗಳು…
*ಒಮ್ಮೆ ಕೋಟ ಶಿವರಾಮ ಕಾರಂತರ ಷಷ್ಟ್ಯಬ್ಧ ಕಾರ್ಯಕ್ರಮದಲ್ಲಿ ಕಾರಂತರಿಗೆ ಯಕ್ಷಗಾನದಲ್ಲಿ ಬಹಳ ಆಸಕ್ತಿ ಅಂತ ಭಾವಿಸಿ ಅವರನ್ನು ಖುಷಿಪಡಿಸಲು ಕಾರ್ಯಕ್ರಮದ ಆಯೋಜಕರು 60 ಯಕ್ಷಗಾನ ವೇಷಧಾರಿಗಳನ್ನು ಕರೆಯಿಸಿ ಸ್ವಾಗತಿಸಲು ನಿಲ್ಲಿಸಿದ್ದರಂತೆ. ಆದರೆ ಕಾರಂತರು ಅಂದ್ರೆ ಕಾರಂತರೇ ಅವರಿಗೆ ಸಿಟ್ಟು ಬಂದು…ಭಾಷಣ ಆರಂಭಿಸುವಾಗಲೇ ನಾವು ಯಕ್ಷರಂಗವನ್ನು ರೂಪಿಸಿದ್ದು, ತಯಾರಿಸಿದ್ದು ಅವರ ಲೋಕಕ್ಕೆ ಹೋಗಬೇಕೆಂದೇ ಹೊರತು…ಅವರನ್ನು(ವೇಷಧಾರಿ) ತಂದು ಬಿಸಿಲಿನಲ್ಲಿ ನಿಲ್ಲಿಸಲು ಅಲ್ಲ ಅಂತ ಹೇಳಿದ್ದರು. ಅದೇ ರೀತಿ ಕೆಪಿ ರಾಯರು ಕೂಡಾ ತುಂಬಾ ಸ್ಪಷ್ಟತೆ ಮತ್ತು ಖಚಿತತೆ ಹೊಂದಿರುವ ವ್ಯಕ್ತಿತ್ವದವರಾಗಿದ್ದಾರೆ.
*ಕಾರ್ಯಕ್ರಮವನ್ನು ತುಂಬಾ ಚೆನ್ನಾಗಿ ಆಯೋಜಿಸಿದ್ದೀರಿ…ಎಲ್ಲರೂ ಸಮರ್ಪಕವಾಗಿ ಎಷ್ಟು ಬಾಲ್ ಗೆ ಎಷ್ಟು ರನ್ ಹೊಡೆಯಬೇಕು (ಸಮಯದ ಪರಿಪಾಲನೆ) ಅಷ್ಟನ್ನು ಹೊಡೆದು ನಿಗದಿತ ಸಮಯಕ್ಕೆ ಭಾಷಣ ಮುಗಿಸಿದ್ದನ್ನು ಕಂಡಿದ್ದೇನೆ.
*ನಾವು ಚಿಕ್ಕವರಿದ್ದಾಗ ನಮಗೆ ಶಾಲೆಯಲ್ಲಿ ಕಾರವಾರದ ಬಗ್ಗೆ ಬರೆಯಿರಿ ಅಂತ ಪ್ರಶ್ನೆ ಬಂದಿತ್ತು. ಕಾರವಾರಕ್ಕೆ ಹೋಗಿ ಬಂದ ನಮಗೆಲ್ಲಾ ಚೆನ್ನಾಗಿ ಗೊತ್ತು..ಅಲ್ಲೊಂದು ಹಡಗು ಬಂದರಿದೆ, ಸಮುದ್ರ ಇದೆ ಅಂತ. ಆದರೆ ನನ್ನ ಗೆಳೆಯನೊಬ್ಬ ಕಂಗಾಲಾಗಿಬಿಟ್ಟಿದ್ದ. ಯಾಕೆಂದರೆ ಅವನಿಗೆ ಕಾರವಾರದ ಬಗ್ಗೆ ಏನೂ ಗೊತ್ತಿಲ್ಲವಾಗಿತ್ತು. ಆದರೆ ನಾವು ಆತನಿಗೆ ಕಾರವಾರದಲ್ಲಿರುವ ಶ್ರೀಕೃಷ್ಣ ವಿಲಾಸ
ಹೋಟೆಲ್ ವೊಂದರ ಬಗ್ಗೆ ಅಲ್ಲಿಯ ದೋಸೆಯ ಬಗ್ಗೆ ಹೇಳಿದ್ದೇವು. ಆತ ಕೊನೆಗೆ ಕಾರವಾರದ ಬಗ್ಗೆ ಬರೆಯುತ್ತಾ ಆ ಹೋಟೆಲ್ ವಿಷಯದಲ್ಲೇ ಎರಡು ಪುಟ ಬರೆದು ಬಿಟ್ಟಿದ್ದ!
*ಬೆಂಗಳೂರಿನಿಂದ ಬರುವಾಗ ನಾನು ಕೆಪಿ ರಾಯರ ಮಗನ ಜೊತೆಗೆ ಹರಟುತ್ತಾ ಬಂದಿದ್ದೆ. ಆಗ ನನಗೆ ಕೆಲವೊಂದಿಷ್ಟು ವಿಷಯಗಳು ಸಿಕ್ಕವು. ಅದೇನೆಂದರೆ ಕೆಪಿ ರಾಯರ ಬಾಲ್ಯದ ಶಾಲಾ ದಿನಗಳು…ಆ ಕಾಲದಲ್ಲಿ ಎಲ್ಲರಿಗೂ ಕಷ್ಟ ಇದ್ದಂತಹ ದಿನಗಳು. ಬಹುತೇಕ ನಾವೆಲ್ಲ ಏನು ಮಾಡುತ್ತಿದ್ದೇವೆ ಅಂದರೆ ಪುಸ್ತಕಗಳನ್ನು ತೆಗೆದುಕೊಂಡು ಬರೆದು ವಾಪಸ್ ಕೊಡುತ್ತಿದ್ದೇವು. ಆದರೆ ಕೆಪಿ ರಾಯರು ಪಠ್ಯ ಪುಸ್ತಕ ಬೇರೆಯವರಿಂದ ತೆಗೆದುಕೊಂಡು ಅದನ್ನು ಮರದ ಕೆಳಗೆ ಕುಳಿತು ಯಕ್ಷಗಾನ ದಾಟಿಯಲ್ಲಿ ಕಂಠಪಾಠ ಮಾಡಿ ವಾಪಸ್ ಕೊಡುತ್ತಿದ್ದರಂತೆ. ಹಾಗಾಗಿ ಅವರಿಗೆ 7,8, 9ನೇ ತರಗತಿಯ ಎಲ್ಲಾ ಪಠ್ಯಗಳು ಬಾಯಿಪಾಠವಾಗಿತ್ತಂತೆ.
*ಕೆಪಿ ರಾಯರು ಕಲೆ, ಸಾಹಿತ್ಯ, ಸಿನಿಮಾ, ವಿಜ್ಞಾನ ಎಲ್ಲದರ ಬಗ್ಗೆಯೂ ತಿಳಿದುಕೊಂಡಿದ್ದಾರೆ. ಆದರೆ ಅವರಿಗೆ ತುಂಬಾ ಇಷ್ಟವಾದ ಪುಸ್ತಕ ಯಾವುದೆಂದರೆ ರೈಲ್ವೆ ಟೈಮ್ ಟೇಬಲ್. ಹೌದು ರೈಲು ಎಲ್ಲಿಂದ ಎಲ್ಲಿಗೆ ಹೋಗುತ್ತದೆ…ಅಲ್ಲಿ ಯಾವ ನಿಲ್ದಾಣ ಸಿಗುತ್ತದೆ ಎಂಬ ಮಾಹಿತಿ ಅವರಲ್ಲಿದೆ. ಅಷ್ಟೇ ಅಲ್ಲ ಅವರು ರೈಲಿನಲ್ಲಿ ಪ್ರಯಾಣಿಸುವುದಿದ್ದರೆ ಒಂದು ಗಂಟೆ ಮೊದಲೇ ರೈಲ್ವೆ ನಿಲ್ದಾಣಕ್ಕೆ ಹೋಗಿ ಅಲ್ಲಿ ಕುಳಿತುಕೊಂಡು ಜನರನ್ನು ಗಮನಿಸುವುದು ಅವರ ಹವ್ಯಾಸವಾಗಿದೆ.
*ಕೆ.ಪಿ.ರಾಯರು ತಮ್ಮ ಮಗಳಿಗೆ ಅಣು (Atam) ಅಂತ ಹೆಸರಿಟ್ಟಿದ್ದರು..ಕೊನೆಗೆ ಅನುರಾಧ ಅಂತ ವಿಸ್ತರಣೆ ಮಾಡಿದ್ದರು. ತಮ್ಮ ಮನೆಗೂ ಕೂಡಾ ಅಣು ಅಂತ ಹೆಸರಿಟ್ಟಿದ್ದರು. ಕೊನೆಗೆ ಅದು ಯಾವಾಗ ಸ್ಫೋಟ ಆಯಿತೋ ಗೊತ್ತಿಲ್ಲ….
*ಕೆ.ಪಿ.ರಾಯರು ತಮ್ಮ ಜೀವನ ಚರಿತ್ರೆಯನ್ನು ಮುಂದುವರಿಸಬೇಕು ಅಂತ ಮನವಿ ಮಾಡಿಕೊಳ್ಳುತ್ತೇನೆ. ಯಾಕೆಂದರೆ ನಿಮ್ಮ ಜೀವನ ಚರಿತ್ರೆ ದಾಖಲಾಗುವ ಮೂಲಕ ಅದು ಯುವಪೀಳಿಗೆಗೆ ಲಭಿಸುವಂತಾಗಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.