ಧೀರೋದಾತ್ತ ಕೆದಂಬಾಡಿ ರಾಮಯ್ಯ ಗೌಡ
Team Udayavani, Nov 19, 2022, 6:15 AM IST
1837ರಲ್ಲಿ ಕೆನರಾ ಮತ್ತು ಕೊಡಗು ಪ್ರಾಂತದಲ್ಲಿ ರೈತರು, ಕೂಲಿಕಾರ್ಮಿಕರು, ಜನಸಾಮಾನ್ಯರನ್ನು ಒಗ್ಗೂಡಿಸಿಕೊಂಡು ವಸಾಹತುಶಾಹಿಗಳ ವಿರುದ್ಧ ಶಸ್ತ್ರಸಜ್ಜಿತ ಹೋರಾಟ ನಡೆಸಿ ಈ ಪ್ರಾಂತವನ್ನು 13 ದಿನಗಳ ಕಾಲ ಸ್ವತಂತ್ರಗೊಳಿಸಿದ ಹೆಗ್ಗಳಿಕೆ ರೈತ ದಂಗೆಗೆ ಸಲ್ಲುತ್ತದೆ. ಇಡೀ ಹೋರಾಟವನ್ನು ಸಂಘಟಿಸಿ, ಯಶಸ್ವಿಯಾಗಿ ಮುನ್ನಡೆಸಿದ ಶ್ರೇಯ ಕೆದಂಬಾಡಿ ರಾಮಯ್ಯ ಗೌಡ ಅವರದು. ರಾಜ್ಯ ಸರಕಾರ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಈ ಧೀರೋದಾತ್ತ ದೇಶಪ್ರೇಮಿಗೆ ಗೌರವವನ್ನು ಸಲ್ಲಿಸಿದೆ.
ಯಾವ ಕಥನವು ತುಳುನಾಡಿನ ಸ್ವಾಭಿಮಾನ, ಆತ್ಮಸ್ಥೈರ್ಯಕ್ಕೆ ಸಾಕ್ಷಿಯಾಗಿತ್ತೋ ಆ ಕಥನವು ಸುಮಾರು ಒಂದೂವರೆ ಶತ ಮಾನದ ಕಾಲ ಕತ್ತಲಿನ ಗರ್ಭದಲ್ಲಿ ಹೂತು ಹೋಗಿತ್ತು. ಇತಿಹಾಸದ ಕತ್ತಲಿನ ಮಾಯೆಯಲ್ಲಿ ದೀವಟಿಕೆ ಹಿಡಿದು ಬೆಳಕು ಕಂಡ ಈ ರೈತ ಹೋರಾಟ ತುಳುನಾಡು ಮಾತ್ರವಲ್ಲ ಸಮಸ್ತ ಭಾರತೀಯರಿಗೆಲ್ಲ ಹೆಮ್ಮೆ ಮತ್ತು ಅಭಿಮಾನದ ಸಂಗತಿಯಾಗಿದೆ. ದೇಶದ ಪ್ರಪ್ರ ಥಮ ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ನಡೆ ಯಿತು ಎಂದು ಇತಿಹಾಸದಲ್ಲಿ ದಾಖಲಾಗಿದೆ. ಆದರೆ ಇದಕ್ಕಿಂತ ಎರಡು ದಶಕಗಳಿಗೂ ಮುನ್ನವೇ ನಮ್ಮ ನೆಲದಲ್ಲಿ ಅಂದರೆ ಕೆನರಾ ಹಾಗೂ ಕೊಡಗು ಜಿಲ್ಲೆಯ ಜನಸಾ ಮಾನ್ಯರು, ರೈತರು, ಕೂಲಿಕಾರರು ಪಾಲ್ಗೊಂಡು, ವಸಾಹತು ಶಾಹಿಗಳಿಗೆ ಮೈ ನಡುಕ ಹುಟ್ಟಿಸಿದ ಹೋರಾಟದ ಚರಿತ್ರೆ ನಿಜಕ್ಕೂ ರೋಚಕ.
1799ರಲ್ಲಿ ಟಿಪ್ಪು ಸುಲ್ತಾನನ ಪತನದ ಅನಂತರ ವಸಾಹತುಶಾಹಿಗಳ ತೆಕ್ಕೆಗೆ ಜಾರಿದ ಮಂಗಳೂರು ಮತ್ತು ಸುತ್ತಲಿನ ಪ್ರಾಂತಗಳಲ್ಲಿ ಜನ ಬಹಳ ಅತೃಪ್ತಿಯಿಂದಿದ್ದರು. 1830ರಿಂದ ರೈತರ, ಜನಸಾಮಾನ್ಯರ ಅಸಹನೆ ಭುಗಿಲೆದ್ದಿತ್ತು. ಅವೈಜ್ಞಾನಿಕ ಕಂದಾಯ ನಿಗದಿ, ಉಪ್ಪು ಮತ್ತು ಹೊಗೆಸೊಪ್ಪು ಬಗೆಗಿನ ಏಕಸಾಮ್ಯದ ವಿರುದ್ದ ಕೆನರಾದ ಜನರು ನಿರಂತರವಾಗಿ ವಿರೋಧವನ್ನು ವ್ಯಕ್ತ ಪಡಿಸುತ್ತಾ ಬಂದಿದ್ದರು. ಇದು 1830ರಲ್ಲಿ ವಸಾ ಹತುಶಾಹಿಗಳ ವಿರುದ್ದ ನಡೆದ ಮಂಗಳೂರು ಕೂಟು ದಂಗೆಗೆ ಕಾರಣ ವಾಗಿತ್ತು. ಈ ಭಾಗದ ಜನರ ಅತೃಪ್ತಿಯು ಮುಂದೆ 1837ರ ರೈತ ದಂಗೆಯಲ್ಲಿ ಭಾಗಿ ಯಾಗಲು ವೇದಿಕೆಯನ್ನು ಸಿದ್ಧಪಡಿಸಿತ್ತು. ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ನಡೆದ 1837ರ ರೈತ ಹೋರಾಟ ಅತ್ಯಂತ ಶಿಸ್ತು ಬದ್ಧವಾಗಿತ್ತು ಎಂದು ಕೆನರಾ ಜಿಲ್ಲೆಯ ಚೀಫ್ ಕಲೆಕ್ಟರ್ ಲೆವಿನ್ ವರದಿ ಮಾಡಿ ರುವುದು ರಾಮಯ್ಯ ಗೌಡರ ಸಂಘಟನ ಶಕ್ತಿಗೆ ಸಾಕ್ಷಿಯಾಗಿದೆ. ಈ ಹೋರಾಟದಲ್ಲಿ ಹಾಲೇರಿ ಅರಸರ ಸಂಬಂಧಿ ಕಲ್ಯಾಣಸ್ವಾಮಿ ಯನ್ನು ನಾಯಕರನ್ನಾಗಿ ಮಾಡಿದ್ದು ರಾಮಯ್ಯ ಗೌಡರ ಮುಂದಾ ಲೋಚನಾ ಶಕ್ತಿಗೆ ಉದಾಹರಣೆಯಾಗಿತ್ತು. ಆದರೆ ಕಲ್ಯಾಣಸ್ವಾಮಿಯನ್ನು ವಸಾಹತು ಶಾಹಿಗಳು ಮೈಸೂರಿನಲ್ಲಿ ಬಂಧಿಸಿದರು. ಕಲ್ಯಾಣಸ್ವಾಮಿಯನ್ನೇ ಹೋಲುವ ಕುರಿಗಾಹಿ ಪುಟ್ಟಬಸಪ್ಪನನ್ನು ನಾಯಕ ಸ್ಥಾನದಲ್ಲಿ ಕುಳ್ಳಿರಿಸಿ ಜಾಣ್ಮೆ ಮೆರೆದಿದ್ದು ಇತಿಹಾಸದಲ್ಲಿ ಅಪರೂಪದ ಘಟನೆ ಎನ್ನಬಹುದು.
1837 ಮಾರ್ಚ್ 30ರಂದು ರೈತರ ದಂಡು ಮಿತ್ತೂರು ಗ್ರಾಮದ ಕೆದಂಬಾಡಿ ರಾಮಯ್ಯ ಗೌಡರಿಗೆ ಸೇರಿದ ಮದುವೆ ಗದ್ದೆಯಿಂದ ಕಲ್ಯಾಣಸ್ವಾಮಿ ನೇತೃತ್ವದಲ್ಲಿ ಹೊರಡುತ್ತದೆ. ಸಾವಿರಕ್ಕೂ ಮಿಕ್ಕಿ ರೈತರು ಬಂದೂಕು, ಖಡ್ಗ, ಸುರಗಿ, ಬರ್ಚಿ, ಒಡಿಕತ್ತಿ, ಒರೆಕತ್ತಿ ಮೊದಲಾದ ಆಯುಧಗಳೊಂದಿಗೆ ಬೆಳ್ಳಾರೆಯತ್ತ ಸಾಗುತ್ತಾರೆ. ಸೈನ್ಯವು ಬೆಳ್ಳಾರೆ ಪೇಟೆಯಲ್ಲಿ ಕಂಪೆನಿಯ ಖಜಾನೆಯನ್ನು ವಶಪಡಿಸಿ ಗೆಲುವು ಸಾಧಿಸುತ್ತದೆ. ಬೆಳ್ಳಾರೆಯಲ್ಲಿ ಹೋರಾಟದ ಸೇನಾಪಡೆಯನ್ನು ನಾಲ್ಕು ತಂಡಗಳಾಗಿ ವಿಂಗಡಿಸಿ ಮೊದಲ ತಂಡ ಕುಂಬ್ಳೆ, ಕಾಸರಗೋಡು, ಮಂಜೇಶ್ವರದ ಕಡೆ, ಎರಡನೇ ತಂಡವನ್ನು ಬಂಟ್ವಾಳ, ಕಾರ್ಕಳಕ್ಕೆ, ಮೂರನೇ ತಂಡವನ್ನು ಉಪ್ಪಿನಂಗಡಿ, ಬಿಸಿಲೆಗೆ ಕಳುಹಿಸಿದರೆ, ಕಲ್ಯಾಣ ಸ್ವಾಮಿ, ಕೆದಂಬಾಡಿ ರಾಮಯ್ಯ ಗೌಡ ಮತ್ತು ಕುಕ್ಕುನಾಡು ಚೆನ್ನಯ್ಯರನ್ನು ಒಳಗೊಂಡ ಪ್ರಧಾನ ಸೈನ್ಯ ಮಂಗಳೂರಿನ ಕಡೆ ಹೊರಡುತ್ತದೆ.
ಪುತ್ತೂರಿನಲ್ಲಿನ ಕಂಪೆನಿ ಕಚೇರಿ ಮಂಗಳೂರಿಗೆ ಹೊರಟ ಮುಖ್ಯ ದಂಡಿನ ಕೈವಶವಾಯಿತು. ಹೋರಾಟ ಗಾರರಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಗಳನ್ನು ನೋಡಿ ಕಂಪೆನಿಯ ಕ್ಯಾಪ್ಟನ್ ಲೆವಿನ್ ಸೈನ್ಯ ಅಪಾಯವನ್ನು ಅರಿತು ಮಂಗಳೂರನ್ನು ರಕ್ಷಿಸಲು ಎಪ್ರಿಲ್ 2ರಂದು ಅತ್ತ ಧಾವಿಸಿತು. ಪುತ್ತೂರಿನಿಂದ ಮಂಗಳೂ ರಿನತ್ತ ಸಾಗಿದ ರೈತರ ದಂಡನ್ನು ನಂದಾವರದ ಲಕ್ಷ್ಮಪ್ಪ ಬಂಗರಸ ತನ್ನ ಸೇನೆಯೊಂದಿಗೆ ಸೇರಿ ಕೊಳ್ಳುತ್ತಾರೆ. ಇದೇ ವೇಳೆ ನಗರದ ಕಾವಲು ಪಡೆ ಯೋಧರು, ಮಂಗಳೂರಿನ ವರ್ತಕರು ತಮ್ಮ ನಿಷ್ಠೆಯನ್ನು ಬದಲಿಸಿ ಹೋರಾಟ ಗಾರರೊಂದಿಗೆ ಕೈ ಜೋಡಿಸಿದರು. ಈಗ ಬಾವುಟಗುಡ್ಡೆ ಎಂದು ಕರೆಯುವ ಲೈಟ್ ಹೌಸ್ ಪ್ರದೇಶಗಳಲ್ಲಿದ್ದ ಬ್ರಿಟಿಷ್ ಬಂಗಲೆ ಗಳಿಗೆ ಬೆಂಕಿ ಹಚ್ಚಲಾಯಿತು. ಲೈಟ್ ಹೌಸ್‌ನಲ್ಲಿ ಸ್ಥಾಪಿಸಲಾದ ಧ್ವಜಸ್ತಂಭದಲ್ಲಿ ಹಾರಾ ಡುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಬಾವುಟವನ್ನು ಗುಡ್ಡೆಮನೆ ತಮ್ಮಯ್ಯ ಗೌಡ ಕಿತ್ತೆಸೆದು ರಾಜಲಾಂಛನದ ಧ್ವಜವನ್ನು ಹಾರಿಸಿ ಮಂಗಳೂರನ್ನು ವಶಪಡಿಸಿಕೊಂಡ ಸಂಭ್ರಮ ವನ್ನು ಆಚರಿಸುತ್ತಾರೆ. ಬಾವುಟ ಗುಡ್ಡೆಯಲ್ಲಿ ಧ್ವಜವನ್ನು ಹಾರಿಸಿದ ರೈತರು ಮುಂದೆ ನಗರದ ಖಜಾನೆಯನ್ನು ವಶಪಡಿಸಿಕೊಂಡರು. ಸೆರೆಮನೆಗಳ ಬಾಗಿಲನ್ನು ಒಡೆದು ಅಲ್ಲಿರುವ ಕೈದಿಗಳನ್ನು ಬಿಡುಗಡೆಗೊಳಿಸಿದರು.
ಮಂಗಳೂರನ್ನು ಗೆದ್ದ ದಂಡು ಮಡಿಕೇರಿಯನ್ನು ವಶಪಡಿಸಲು ಹೋರಾಟಗಾರರು ಯೋಜನೆ ರೂಪಿಸಿ ದರು. ಕೂಜುಗೋಡು ಅಪ್ಪಯ್ಯ ಗೌಡ ಮತ್ತು ಕೂಜುಗೋಡು ಮಲ್ಲಪ್ಪ ಗೌಡ ಇವರ ನೇತೃತ್ವದಲ್ಲಿ ಬಿಸಿಲೆಘಾಟಿಯ ಮುಖಾಂತರ ರೈತ ಸೈನ್ಯ ಮಡಿಕೇರಿಯ ಕಡೆ ಸಾಗಿತು. ಇತ್ತ ಮಂಗಳೂರನ್ನು ಕಳೆದುಕೊಂಡ ವಸಾಹತುಶಾಹಿಗಳು ಮುಂಬಯಿಯಿಂದ ಸೈನ್ಯ, ಮದ್ದು ಗುಂಡು, ಯುದ್ದ ಸಾಮಗ್ರಿಗಳನ್ನು ತರಿಸಿ ಪ್ರತಿ ಹೋರಾಟಕ್ಕೆ ಸಿದ್ಧತೆ ಮಾಡಿ ಕೊಂಡರು. ಬ್ರಿಟಿಷರ ಸುಸಜ್ಜಿತ ಸೇನೆ ಮತ್ತು ರೈತ ಸೈನ್ಯದ ನಡುವೆ ನಡೆದ ರಕ್ತಸಿಕ್ತ ಕಾಳಗದಲ್ಲಿ ರೈತ ಹೋರಾಟ ಗಾರರಿಗೆ ಮಂಗಳೂರನ್ನು ಉಳಿಸಿ ಕೊಳ್ಳಲಾಗಲಿಲ್ಲ. ವಿವಿಧ ಪ್ರದೇಶಗಳಲ್ಲಿ ಹೋರಾಟಗಾರರಿಗೆ ಸೋಲು ಉಂಟಾಯಿತು. 1837ರ ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಒಟ್ಟು 1,115 ರೈತ ಹೋರಾಟಗಾರರನ್ನು ಬಂಧಿಸಲಾಗಿತ್ತು. ಹೋರಾಟ ದಲ್ಲಿ ಪ್ರಮುಖ ಪಾತ್ರ ವಹಿಸಿದ ಲಕ್ಷ್ಮಪ್ಪ ಬಂಗರಸ, ಉಪ್ಪಿನಂಗಡಿಯ ಮಂಜ, ಪುಟ್ಟ ಬಸವನನ್ನು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಲಾಯಿತು. ಕೆದಂಬಾಡಿ ರಾಮಯ್ಯ ಗೌಡ, ಅವರ ಮಗ ಸಣ್ಣಯ್ಯ ಗೌಡ ಸಹಿತ ಹಲವಾರು ಸ್ವಾತಂತ್ರ್ಯ ಯೋಧರನ್ನು ಪ್ರಾಣಿಗಳಂತೆ ಬೋನಿನಲ್ಲಿ ತುಂಬಿಸಿ ಸಿಂಗಾಪುರ, ಬರ್ಮಾ ಮುಂತಾದ ದೇಶಗಳಿಗೆ ಬ್ರಿಟಿಷರು ಸಾಗ ಹಾಕಿದರು.
ಕೆದಂಬಾಡಿ ರಾಮಯ್ಯ ಗೌಡರ ಚಾಣಾಕ್ಷ ನಡೆಗಳು ಇಡೀ ರೈತ ಹೋರಾಟವನ್ನು ನಿಯಂತ್ರಿಸಿ ಯಶಸ್ಸು ಕಂಡದ್ದು ಅವಿಸ್ಮರಣೀಯ. ತಮ್ಮ ಸರ್ವಸ್ವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ಧಾರೆಯೆರೆದ ರಾಮಯ್ಯ ಗೌಡರ ಶ್ರೇಷ್ಠ ನಾಯಕತ್ವ ಗುಣಗಳಿಂದ ಕೆನರಾ ಜಿಲ್ಲೆ 13 ದಿನಗಳ ಕಾಲ ಸ್ವಾತಂತ್ರ್ಯವನ್ನು ಗಳಿಸಿತು. ಇಂತಹ ಸ್ವಾತಂತ್ರ್ಯ ವೀರರನ್ನು ಗುರುತಿಸುವ, ಅವರ ಸಾಧನೆಗಳನ್ನು ದೇಶದ ಚರಿತ್ರೆಯ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಮತ್ತು ಅವರ ಹೆಸರನ್ನು ಶಾಶ್ವತವಾಗಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಮಂಗಳೂರಿನ ಬಾವುಟಗುಡ್ಡೆಯಲ್ಲಿ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ನಿರ್ಮಿಸಿ ಲೋಕಕ್ಕೆ ಅರ್ಪಿಸುತ್ತಿರುವುದು ನಿಜಕ್ಕೂ ಸ್ತುತ್ಯಾರ್ಹ.
ಡಾ| ಪ್ರಭಾಕರ ನೀರ್‌ಮಾರ್ಗ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.