ಸುಸ್ಥಿರ ಆಡಳಿತದಿಂದ ಮಾತ್ರ ಸ್ವರಾಜ್ಯ ಸಾಧ್ಯ : ಇಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನ
Team Udayavani, Apr 24, 2021, 6:55 AM IST
ಅದೇಕೋ ಏನೋ ಈ ರಾಜ್ಯದಲ್ಲಿ ಮಾತ್ರವಲ್ಲ ದೇಶದಲ್ಲಿ ಒಂದೆಡೆ ಸಂವಿಧಾನದ ಶಕ್ತಿ ಪಡೆದು ಪಂಚಾಯತ್‌ರಾಜ್ ವ್ಯವಸ್ಥೆ ಗಟ್ಟಿಗೊಳ್ಳುತ್ತಿದ್ದರೆ ಮತ್ತೂಂದೆಡೆ ಪಂಚಾಯತ್ ಆಡಳಿತದ ಚುಕ್ಕಾಣಿ ಹಿಡಿದು ಆಡಳಿತಕ್ಕೆ ಮಾಂತ್ರಿಕ ಶಕ್ತಿ ಕೊಡಬೇಕಾದ ಚುನಾಯಿತ ಪಂಚಾಯತ್ ಸದಸ್ಯರು ತಮ್ಮ ಸಾಮಥ್ಯಾìಭಿವೃದ್ಧಿ ಕಡೆಗೆ ಗಮನ ಕೊಡುತ್ತಲೇ ಇಲ್ಲ ಅಥವಾ ಅಗತ್ಯ ತರಬೇತಿ ನೀಡಿ ಪ್ರತೀ ಪಂಚಾಯತ್ ಸದಸ್ಯರನ್ನು ಶಕ್ತಿಶಾಲಿ ಆಡಳಿತಗಾರರನ್ನಾಗಿ ಮಾಡುವಲ್ಲಿ ನಾವು ಸಫಲತೆ ಕಂಡಿಲ್ಲ. ಇದೀಗ ರಾಜ್ಯದಲ್ಲಿ 6,009 ಗ್ರಾಮ ಪಂಚಾಯತ್‌ಗಳು, ಹೊಸದಾಗಿ ರಚನೆಯಾದವೂ ಸೇರಿದಂತೆ 227 ತಾಲೂಕು ಪಂಚಾಯತ್ ಹಾಗೂ 30 ಜಿಲ್ಲಾ ಪಂಚಾಯತ್‌ಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಹೆಚ್ಚು ಕಡಿಮೆ ಒಂದು ಲಕ್ಷದಷ್ಟು ಮಂದಿ ಪಂಚಾಯತ್ ರಾಜ್ ಚುನಾಯಿತ ಪ್ರತಿನಿಧಿಗಳಿದ್ದಾರೆ. ಅವರ ಪೈಕಿ 90,000ಕ್ಕೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರು ಪ್ರಸ್ತುತ ಜನಸಾಮಾನ್ಯರ ಬದುಕನ್ನು ಕಟ್ಟಿಕೊಡುವ ಕೆಲಸ ಮಾಡಬೇಕಾಗಿದ್ದು, ಅವರೆಲ್ಲರ ಶ್ರಮ ಬಡವರ ಮಧ್ಯೆ ನಿತ್ಯ ಸಾಗುತ್ತದೆ. ಪಂಚಾಯತ್
ರಾಜ್‌ಗೆ ಕೊರತೆ ಇರುವುದು ಸಂಪನ್ಮೂಲದಲ್ಲಲ್ಲ. ಬದಲಾಗಿ ಈ ಒಂದು ಲಕ್ಷ ಜನಪ್ರತಿನಿಧಿಗಳನ್ನು ಸಮಾಜಮುಖೀ ಕೆಲಸಗಳಲ್ಲಿ ಅರ್ಥಗರ್ಭಿತವಾಗಿ ತೊಡಗಿಸಿಕೊಳ್ಳುವಂತೆ ಮಾಡುವಲ್ಲಿ ನಾವು ವಿಫಲವಾಗಿದ್ದೇವೆ ಎನ್ನುವುದು ಕಟುಸತ್ಯ.
ಗ್ರಾಮ ಪಂಚಾಯತ್‌ಗಳಿಗೆ ಸೀಮಿತವಾಗಿ ಹೇಳುವುದಾದರೆ 90 ಸಾವಿರ ಸದಸ್ಯರ ಪೈಕಿ 46 ಸಾವಿರಕ್ಕೂ ಮಿಕ್ಕಿ ಮಹಿಳೆಯರು, 18 ಸಾವಿರ ಸದಸ್ಯರು ಪರಿಶಿಷ್ಟ ಜಾತಿ, 10 ಸಾವಿರ ಪರಿಶಿಷ್ಟ ಪಂಗಡ ಇವರ ಜತೆಯಲ್ಲಿ ಅಂಗವಿಕಲರು, ಅವಿದ್ಯಾವಂತರು. ಹೀಗೆ ಒಟ್ಟಾರೆ ಸಮಾಜದಲ್ಲಿ ಕಟ್ಟಕಡೆಯ ವ್ಯಕ್ತಿಗಳೆಂದು ಗುರುತಿಸಿಕೊಳ್ಳುವವರು ಕೂಡ ಇಂದು ಪಂಚಾಯತ್ ಪ್ರತಿನಿಧಿಗಳಾಗಿ ಆಡಳಿತದ ಭಾಗವಾಗಿದ್ದಾರೆ. ಪಂಚಾಯತ್‌ನಿಂದ ಆರಂಭವಾಗಿ ಸಂಸತ್‌ವರೆಗೆ ಚುನಾಯಿತ ಪ್ರತಿನಿಧಿಗಳಾದ ನಾವು ಆಡಳಿತ ನಡೆಸುವ ಅನುಭವವನ್ನು ಹೊಂದಿದ್ದೇವೆ ಎಂದು ಭಾವಿಸಿದ್ದೇವೆ. ಹಾಗೊಂದು ವೇಳೆ ಅನುಭವದ ಕೊರತೆ ಇದ್ದರೆ ಅದನ್ನು ಸರಿದೂಗಿಸಲು ಪ್ರತಿನಿಧಿಗಳ ಸಾಮರ್ಥ್ಯ ಹೆಚ್ಚಿಸಲು ನಮ್ಮ ಕಾರ್ಯಯೋಜನೆಯೇನು? ಎಂಬ ಬಗ್ಗೆ ಯೋಚಿಸಿದ್ದು ಕಡಿಮೆ.
ಶಾಸಕರು, ಸಂಸದರಿಗೆ ಲೋಕಾನುಭವ ಸಾಕಷ್ಟಿರಬಹುದು. ಮುಖ್ಯಮಂತ್ರಿಗಳನ್ನು, ಪ್ರಧಾನ ಮಂತ್ರಿಗಳನ್ನೆಲ್ಲ ಕೈಯೆತ್ತಿ ಆಯ್ಕೆ ಮಾಡುವ ಹಕ್ಕು ಹೊಂದಿರುವ ಶಾಸಕ, ಸಂಸದರಿಗೆಲ್ಲ ಆಡಳಿತ ನಡೆಸುವ ಬಗ್ಗೆ ನಿಮಗೆ ತರಬೇತಿ ಕೊಡುತ್ತೇವೆ, ಒಂದು ವಾರ ಕುಳಿತು ಕೇಳಿ ಎಂದರೆ ಸಂಪನ್ಮೂಲ ವ್ಯಕ್ತಿಗಳೇ ಸಂಕಷ್ಟಕ್ಕೆ ಗುರಿಯಾಗಬಹುದು. ಆದರೆ ಅಂತಹ ಪ್ರಯತ್ನ ಮುಂದಿನ ದಿನಗಳಲ್ಲಾದರೂ ನಡೆಯಬೇಕು. ಇದೀಗ ಪಂಚಾಯತ್ ಸದಸ್ಯರನ್ನೇ ಗಮನದಲ್ಲಿಟ್ಟುಕೊಂಡು ನೋಡುವುದಾದರೆ ಆಡಳಿತದ ತರಬೇತಿ ಕಡ್ಡಾಯವಾಗಿ ಕೊಡದೇ ಹೋದರೆ ಅಥವಾ ತಳಮಟ್ಟದ ಪ್ರತಿನಿಧಿಗಳು ತಮಗೆ ಗೊತ್ತಿರುವುದನ್ನೇ ಆಡಳಿತದ ಭಾಗ ಎಂದು ವರ್ತಿಸಿದರೆ ಪಂಚಾಯತ್‌ರಾಜ್ ದಡ ಮುಟ್ಟುವುದು ಕಷ್ಟ.
ಗ್ರಾ. ಪಂ.ಗೆ ಚುನಾಯಿತರಾದ ಸದಸ್ಯರೆಲ್ಲರಿಗೂ ಪಂಚಾಯತ್ ಕ್ರಿಯಾಯೋಜನೆ, ಬಜೆಟ್ ತಯಾರಿಗಳ ಬಗ್ಗೆ ಅರಿವಿರಬೇಕು ಎಂದು ಕಲ್ಪಿಸುವುದೂ ಕಷ್ಟ. ಪಂಚಾಯತ್‌ನ ಪ್ರತಿಯೊಬ್ಬ ಸದಸ್ಯ ಜನ ಸಾಮಾನ್ಯರ ಸವಲತ್ತುಗಳಿಗಾಗಿ ಶ್ರಮಿಸಬೇಕಾಗಿದೆ. ಮೊದಲಾಗಿ ಇವರೆಲ್ಲರಿಗೂ ವಿಶ್ವಾಸದಿಂದ ಕೆಲಸ ಮಾಡಲು ಸಾಮಥ್ಯಾìಭಿವೃದ್ಧಿ ಅನಿವಾರ್ಯ ಎಂದು ನನಗನ್ನಿಸುತ್ತದೆ. ಐದು ವರ್ಷದ ಪಂಚಾಯತ್ ಆಡಳಿತದಲ್ಲಿ ಎಂತಹ ಸಮಸ್ಯೆಗಳು ಬರಬಹುದು? ಅದರ ಪರಿಹಾರ ಹೇಗೆ? ಎಂಬ ಬಗ್ಗೆ ಆಳವಾದ ತರಬೇತಿ ಮಾತ್ರ ಒಬ್ಬ ಸದಸ್ಯನನ್ನು ಉತ್ತಮ ಜನಪ್ರತಿನಿಧಿಯನ್ನಾಗಿ ರೂಪಿಸಲು ಸಾಧ್ಯ. ಹಾಗಾಗದೇ ಹೋದಲ್ಲಿ ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಸಹಭಾಗಿತ್ವದ ಕೊರತೆಯಿಂದ ಪಂಚಾಯತ್‌ನ ಸಾಮಾನ್ಯ ಸಭೆಗಳು ಅಧಿಕಾರಿಗಳಿಗಷ್ಟೇ ಕೇಂದ್ರೀಕೃತವಾಗಿ ನಡೆಯಬಹುದು. ಇದೀಗ ಪಂಚಾಯತ್ ಕೆ.ಡಿ.ಪಿ. ಸಭೆಗಳು ಸಾಂಕೇತಿಕವಾಗುತ್ತಿರುವುದು ಅಲ್ಲಲ್ಲಿ ಕಂಡುಬರುತ್ತಿದ್ದು ಅಧ್ಯಕ್ಷ-ಉಪಾಧ್ಯಕ್ಷರ ಬಿಗಿಹಿಡಿತ ಇಲ್ಲವೆಂದಾದರೆ ಸಹಜವಾಗಿಯೇ ಅಧಿಕಾರಿಗಳು ನೀರಸ ಪ್ರತಿಕ್ರಿಯೆ ತೋರುವ ಸಾಧ್ಯತೆ ಹೆಚ್ಚು.
ನಮ್ಮ ಗ್ರಾಮ ಸಭೆಗಳ ಮೇಲುಸ್ತುವಾರಿಯ ಜವಾಬ್ದಾರಿಯನ್ನು ಆಯಾಯ ವಾರ್ಡ್‌ನ ಸದಸ್ಯರು ನಿರ್ವಹಿಸಬೇಕು. ದುರಂತವೆಂದರೆ ಇಂದು ಅನೇಕ ಕಡೆ ಗ್ರಾಮಸಭೆಗಳೇ ಸಮರ್ಪಕ ವಾಗಿ ನಡೆಯುತ್ತಿಲ್ಲ. ವಾರ್ಡ್ ಸಭೆಗಳಂತೂ ಸಾಂಕೇತಿಕವಾಗುತ್ತಿದೆ ಅಥವಾ ವಾರ್ಡ್ ಮತ್ತು ಗ್ರಾಮಸಭೆಗಳು ಕೇವಲ ಅನುದಾನ ಬೇಡಿಕೆ ಗಳಾದ ರಸ್ತೆ, ಸೇತುವೆ, ಅಂಗನವಾಡಿ ಕಟ್ಟಡಗಳ ಚರ್ಚೆಗೆ ಸೀಮಿತವಾಗುತ್ತಿವೆ. ಕೆಲವೆಡೆ ಎರಡೋ ಮೂರೋ ರಾಜಕೀಯ ಪಕ್ಷಗಳ ಮೇಲಾಟಕ್ಕೆ ವೇದಿಕೆಯಾಗುತ್ತಿರುವುದು ಕಾಣುತ್ತಿ ದ್ದೇವೆ. ಬದಲಾಗಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಗ್ರಾಮಸಭೆಯ ಮೇಲುಸ್ತುವಾರಿ ವಹಿಸಿ ಆ ಗ್ರಾಮದ ಸಮಸ್ಯೆಗಳು ಹಾಗೂ ಪರಿಹಾರದ ಬಗ್ಗೆ ಚರ್ಚಿಸಲು ಸಾಧ್ಯವಿದೆಯಲ್ಲವೇ?. ಪಂಚಾಯತ್ ವ್ಯವಸ್ಥೆಯೊಳಗೆ ಕಾಯಿದೆಬದ್ಧವಾಗಿ ಬರಬೇಕಾದ ಪ್ರಾಥಮಿಕ ಶಾಲೆಗಳ ಮಕ್ಕಳ ಬಿಸಿಯೂಟ, ಸಮವಸ್ತ್ರಗಳೂ ಸೇರಿದಂತೆ ಸಕಾಲದಲ್ಲಿ ಶಿಕ್ಷಕರಿಂದ ಪಾಠ ಪ್ರವಚನಗಳು ನಡೆಯುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕಾದ ಗ್ರಾಮಸಭೆಗಳನ್ನು ಹೇಳುವವರು ಕೇಳುವವರು ಇಲ್ಲದಂತಾದರೆ ಹಳ್ಳಿಯ ಮಟ್ಟದಲ್ಲಿ ಆಡಳಿತದ ಸುಧಾರಣೆಯಾಗುವುದೆಂತು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ಸರಬರಾಜು ಮಾಡಬಹುದಾದ ಔಷಧಗಳು, ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ವಿತರಣೆ, ಗ್ರಂಥಾಲಯಗಳ ನಿರ್ವಹಣೆ, ಗ್ರಾಮಸ್ಥರ ಕುಂದುಕೊರತೆ, ಗ್ರಾಮದ ಗಲ್ಲಿಗಲ್ಲಿಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟದಿಂದ ಜನರಿಗಾಗುವ ತೊಂದರೆಗಳು.. ಇವೆಲ್ಲವುಗಳ ಮೇಲೆ ಕಣ್ಗಾವಲು ಇರಿಸಬೇಕಾದ ಪಂಚಾಯತ್ ವ್ಯವಸ್ಥೆಯನ್ನು ಬಲಪಡಿಸಲು ಗ್ರಾಮ ಮಟ್ಟದ ಜನಪ್ರತಿನಿಧಿಗಳು ಆಡಳಿತದ ಇಚ್ಛಾಶಕ್ತಿಯ ಪ್ರದರ್ಶನ ಮಾಡಲೇಬೇಕಾದ ಆವಶ್ಯಕತೆ ಇಂದು ಹೆಚ್ಚಾಗಿದೆ.
ಭ್ರಷ್ಟಾಚಾರದ ವಿರುದ್ಧ ದೇಶದಲ್ಲಿ ಸಮರ ಸಾರಿದ ಅಣ್ಣಾ ಹಜಾರೆ ಅವರು “ನಿರ್ಲಿಪ್ತ ಆಡಳಿತ ಪ್ರಜಾಪ್ರಭುತ್ವಕ್ಕೆ ಮಾರಕ; ಆಡಳಿತದಲ್ಲಿ ಪಾರದರ್ಶಕತೆ ತರದೇ ಹೋದರೆ ಯಾವ ಲೋಕಪಾಲ್‌ಗೂ ಭ್ರಷ್ಟಾಚಾರ ನಿಲ್ಲಿಸಲೂ ಅಸಾಧ್ಯ; ಆಡಳಿತದಲ್ಲಿ ಸಜ್ಜನರ ಸಹಭಾಗಿತ್ವ ಮಾತ್ರ ನೈಜ ಅಭಿವೃದ್ಧಿಗೆ ಅವಕಾಶವಾಗುತ್ತದೆ’ ಎಂದು ಪ್ರತಿಪಾದಿಸುತ್ತಲೇ ಬಂದಿದ್ದಾರೆ. ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ದಿನವಾದ ಇಂದು ನಮ್ಮ ಜನಪ್ರತಿನಿಧಿಗಳು ಆಡಳಿತದ ಇಚ್ಛಾಶಕ್ತಿಗೆ ತಮ್ಮನ್ನು ತೊಡಗಿಸಿಕೊಳ್ಳ ಬೇಕು. ಅದರೊಂದಿಗೆ ಆಡಳಿತ ನಡೆಸಲು ಅಗತ್ಯವಿರುವ ಸ್ವಯಂ ಸಾಮಥ್ಯಾìಭಿವೃದ್ಧಿಯನ್ನು ಹೆಚ್ಚಿಸಿ
ಕೊಳ್ಳಬೇಕಿದೆ. ಇಲ್ಲವಾದಲ್ಲಿ ಅಧಿಕಾರ ವಿಕೇಂದ್ರೀಕರಣದ ದೃಷ್ಟಿಯಿಂದ ರೂಪುಗೊಂಡ ಪಂಚಾಯತ್ ರಾಜ್ ವ್ಯವಸ್ಥೆ “ಆಟಕ್ಕುಂಟು-ಲೆಕ್ಕಕ್ಕಿಲ್ಲ’ ಎಂದಾಗುವ ಅಪಾಯವಿದೆ.
– ಕೋಟ ಶ್ರೀನಿವಾಸ ಪೂಜಾರಿ , ದ.ಕ. ಜಿಲ್ಲಾ ಉಸ್ತುವಾರಿ ಸಚಿವರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.