ಸರ್ವಾಧಿಕಾರದ ಬೀಜ ಬಿತ್ತಿದ್ದು ಕಾಂಗ್ರೆಸ್ಸೇ ಹೊರತು ಬಿಜೆಪಿಯಲ್ಲ: ಡಿಸಿಎಂ ಸವದಿ
Team Udayavani, Aug 28, 2020, 5:07 PM IST
ಬೆಂಗಳೂರು : ಕೆ.ಪಿ.ಸಿ.ಸಿ.ಯ ಮಾಜಿ ಅಧ್ಯಕ್ಷರಾದ ಶ್ರೀ ದಿನೇಶ್ ಗುಂಡೂರಾವ್ ಅವರು ತಮ್ಮ ಕಾಂಗ್ರೆಸ್ ವರಿಷ್ಠಾಧಿಪತಿಗಳ ವಂಶಪಾರಂಪರ್ಯದತ್ತವಾದ ಅಧಿಕಾರ ಲಾಲಸೆಯನ್ನು ಸಮರ್ಥಿಸುವ ಭರದಲ್ಲಿ ವಿನಾಕಾರಣ ಬಿಜೆಪಿಯ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸಿದ್ದು ವಿಪರ್ಯಾಸವೇ ಸರಿ. ಸನ್ಮಾನ್ಯ ನರೇಂದ್ರ ಮೋದಿಜಿ ಸರ್ಕಾರದ ಸರ್ವಾಧಿಕಾರಿ ನೀತಿಯನ್ನು ಎದುರಿಸಲು ಕಾಂಗ್ರೆಸ್ಸಿಗೆ ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯ ಎಂದು ಅವರು ಹೇಳಿದ್ದು ನಿಜಕ್ಕೂ ಹಾಸ್ಯಸ್ಪದ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಪಾಪ, ಶ್ರೀ ದಿನೇಶ್ ಗುಂಡೂರಾಯರಿಗೆ ಕಾಂಗ್ರೆಸ್ಸಿನ ಪೂರ್ವ ಇತಿಹಾಸದ ಬಗ್ಗೆ ಜಾಣ ಮರೆವು ಇದ್ದಿರಬಹುದು. ಈ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ಸರ್ವಾಧಿಕಾರದ ಯುಗವನ್ನು ಪ್ರಾರಂಭಿಸಿದ್ದು ಕಾಂಗ್ರೆಸ್ಸಿನ ಅಧಿನಾಯಕಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರೇ ಹೊರತು, ಬೇರೆ ಪಕ್ಷಗಳಿಂದ ಪ್ರಧಾನಿಗಳಾದ ಮೊರಾರ್ಜಿ ಭಾಯಿ ಅಥವಾ ಅಟಲ್‍ಜೀ ಅವರಲ್ಲ.
ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮೊದಲ ಬಾರಿಗೆ ಸಂವಿಧಾನದತ್ತವಾದ ಮೂಲಭೂತ ಹಕ್ಕುಗಳನ್ನೇ ಕಿತ್ತುಕೊಂಡು ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಅಸಂಖ್ಯಾತ ಅಮಾಯಕರನ್ನು ಜೈಲಿಗೆ ತಳ್ಳಿದ ಕರಾಳ ಘಟನೆ ನಿಮಗೆ ಸರ್ವಾಧಿಕಾರಿ ಧೋರಣೆಯೆಂದು ಅನ್ನಿಸಿಲ್ಲವೇ, “ಗಾಜಿನ ಮನೆಯಲ್ಲಿ ಕುಳಿತು ಕಲ್ಲೆಸೆಯುವುದಕ್ಕೆ ತಾವು ಯಾಕೆ ಮುಂದಾಗುತ್ತೀರಿ ಸನ್ಮಾನ್ಯ ದಿನೇಶ್ ಗುಂಡೂರಾಯರೇ ಎಂದಿದ್ದಾರೆ?
ಸ್ವಾತಂತ್ರ್ಯ ಬಂದ ನಂತರ ಮೊದಲ ಬಾರಿಗೆ ಈ ರೀತಿಯ ಸರ್ವಾಧಿಕಾರಿ ಧೋರಣೆಗೆ ಶ್ರೀಕಾರ ಹಾಕಿದ ಇಂದಿರಾ ಗಾಂಧಿಯವರ ಪರಂಪರೆ ಕಾಂಗ್ರೆಸ್ಸಿನಲ್ಲಿ ಇಂದಿಗೂ ವಂಶವಾಹಿನಿಯಾಗಿ ಹರಿದು ಬಂದಿದೆ ಎಂಬುದಕ್ಕೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಗಾದಿ ಏರಲು “ಅಮ್ಮ-ಮಗನ” ಬಿಟ್ಟರೆ ಬೇರೆ ಯಾರಿಗೂ ಈಗ ಯೋಗ – ಯೋಗ್ಯತೆ ಒದಗಿ ಬರುತ್ತಿಲ್ಲ ಎಂಬುದೇ ಸಾಕ್ಷಿಯಾಗಿದೆ.
ಸನ್ಮಾನ್ಯ ದಿನೇಶ್ ಗುಂಡೂರಾಯರೇ… ಮೋದಿಜಿಯವರ ಸರ್ಕಾರದ್ದು ಸರ್ವಾಧಿಕಾರಿ ನೀತಿ ಎಂದು ಆರೋಪಿಸಿರುವ ನೀವು ಯಾವ ಆಧಾರವನ್ನು ಇಟ್ಟುಕೊಂಡು ಈ ರೀತಿಯಲ್ಲಿ ಜನತೆಯಲ್ಲಿ ತಪ್ಪು ಸಂದೇಶ ಬೀರುತ್ತಿದ್ದೀರಿ? ಮೋದಿಜಿಯವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ “ಸರ್ವಾಧಿಕಾರಿತನ” ತೋರಿಸಿದ ಒಂದೇ ಒಂದು ಉದಾಹರಣೆಯನ್ನಾದರೂ ತಾವು ಕೊಡಬಲ್ಲಿರಾ?
ಹಿಂದೆ ಲೋಕಸಭಾ ಚುನಾವಣೆಗಳು ನಡೆದಾಗ ಎರಡೆರಡು ಬಾರಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿ ಪ್ರಜಾಪ್ರಭುತ್ವದ ಪಥದಲ್ಲಿಯೇ ಸರ್ಕಾರ ರಚಿಸಿ, ಮೇಕ್ ಇನ್ ಇಂಡಿಯಾ ದಿಂದ ಹಿಡಿದು ಕಿಸಾನ್ ಸಮ್ಮಾನ್ ತನಕ ನೂರಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ನಿಮ್ಮ ಕಾಮಾಲೆ ಕಣ್ಣಿಗೆ “ಸರ್ವಾಧಿಕಾರಿ ನೀತಿ” ಯಾಗಿ ಕಂಡು ಬಂತೇ?
ನಿಮ್ಮ ಪ್ರಕಾರ ಮೋದಿಜಿ ಸರ್ಕಾರವನ್ನು ಎದುರಿಸಿ ನಿಲ್ಲಲು ಗಾಂಧಿ ಪರಿವಾರದ ನಾಯಕತ್ವವೇ ಅನಿವಾರ್ಯವೆಂದು ತಾವು ಫರ್ಮಾನು ಹೊರಡಿಸಿರುವುದು ಹಾಸ್ಯಾಸ್ಪದ, ಏಕೆಂದರೆ ಒಂದು ವೇಳೆ ಮೋದಿ ಸರ್ಕಾರವನ್ನು ಸಮರ್ಥವಾಗಿ ಎದುರಿಸುವ ತಾಕತ್ತು ನಿಮ್ಮ ಗಾಂಧಿ ಪರಿವಾರಕ್ಕೆ ಇದ್ದಿದ್ದರೆ ಕಳೆದ ಎರಡು ಲೋಕಸಭಾ ಚುನಾವಣೆಗಳಲ್ಲೂ ಕಾಂಗ್ರೆಸ್ ಹಿಂದೆಂದೂ ಇಲ್ಲದಂತೆ ಹೀನಾಯ ಸೋಲು ಉಂಡಿದ್ದು ಹೇಗೆ?
ಫುಲ್ವಾಮಾ ಘಟನೆಯಲ್ಲಿ ಬಿಜೆಪಿ ನಡೆಸಿದ ಭಾವನಾತ್ಮಕ ಪ್ರಚಾರವೇ 2019ರಲ್ಲಿ ಕಾಂಗ್ರೆಸ್ ಸೋಲಲು ಕಾರಣ ಎಂದು ತಾವು ಕುಂಟುನೆಪವೊಡ್ಡಿ ನಿಮ್ಮ ಗಾಂಧಿ ಪರಿವಾರದ ಅಸಮರ್ಥತೆಯನ್ನು ಮರೆಮಾಚಲು ಪ್ರಯತ್ನಿಸಿದ್ದೀರಿ. ಹಾಗಿದ್ದರೆ 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವು ಸಾಧಿಸಿದ್ದಕ್ಕೆ ತಾವು ಯಾವ ಕಾರಣ ನೀಡುತ್ತಾ “ಮೊಸರಲ್ಲಿ ಕಲ್ಲು ಹುಡುಕುತ್ತೀರಿ”? ಫುಲ್ವಾಮಾದಂತಹ ದೇಶ ರಕ್ಷಣೆ ವಿಚಾರಕ್ಕೂ ಚುನಾವಣಾ ರಾಜಕೀಯಕ್ಕೂ ತಾವು ಥಳಕು ಹಾಕುತ್ತಾ ಗಾಂಧಿ ಪರಿವಾರದ ಕೃಪೆಗೆ ಪಾತ್ರರಾಗಬೇಕೆಂದು ಹವಣಿಸುತ್ತಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದೆ.
ಶ್ರೀ ರಾಹುಲ್ ಗಾಂಧಿಯವರು ಅತ್ಯಂತ ಸಮರ್ಥ ನಾಯಕ ಎಂದು ತಾವು ಪದೇಪದೇ ಬಿಂಬಿಸುತ್ತಿದ್ದರೂ ರಾಹುಲ್ ಅವರ ಸಾಮರ್ಥ್ಯದ ಸಾಲಿನಲ್ಲಿ ನಾವು ಮೋದಿಜಿಯವರಂತಹ ದಿಟ್ಟ ಮುತ್ಸದ್ಧಿತನದ ನಾಯಕನನ್ನು ಹೋಲಿಕೆ ಮಾಡಲು ಹೋಗುವುದಿಲ್ಲ. ಈ ದೇಶದ ಮಹಾಜನತೆಯೇ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತಾರೆ ಬಿಡಿ.
ಇನ್ನು ಕಾಂಗ್ರೆಸ್ಸಿಗೆ ಯಾರು ಅಧಿನಾಯಕರಾಗಬೇಕೆಂಬ ವಿಚಾರಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಅದು ನಿಮ್ಮ ಪಕ್ಷದ ಆಂತರಿಕ ವಿಚಾರ, ಅಷ್ಟೇ ಅಲ್ಲ, ತಾವು “ಅನ್ಯಥಾ ಶರಣಂ ನಾಸ್ತಿ” ಎನ್ನುತ್ತಿದ್ದರೂ ತಮ್ಮ ಪಕ್ಷದವರೇ ಆದ 23 ಮಂದಿ ಹಿರಿಯ ನಾಯಕರು ಈ ಬಗ್ಗೆ ಈಗಾಗಲೇ ಪ್ರತಿಕ್ರಿಯಿಸಿದ್ದಾರೆ ಬಿಡಿ. ಅವರ ಪ್ರತಿಕ್ರಿಯೆಯಲ್ಲಿ ತಮಗೆ ಸತ್ಯದ ಹೂರಣ ಕಂಡಿಲ್ಲದಿರುವುದು ಆಶ್ಚರ್ಯವೇ ಸರಿ.
ದಿನೇಶ್ ಗುಂಡೂರಾಯರೇ ನೀವು ನಿಮ್ಮ ನಾಯಕರಿಗೆ ಬಹು ಪರಾಕ್ ಹೇಳಲು ನಮ್ಮ ಅಭ್ಯಂತರವೇನಿಲ್ಲ. ಆದರೆ ಈ ಸಂದರ್ಭದಲ್ಲಿ ಸತ್ಯದ ಮೇಲೆ ಸುತ್ತಿಗೆ ಹೊಡೆದಂತೆ ನಮ್ಮ ಬಿಜೆಪಿ ಸರ್ಕಾರದ ಮೇಲೆ ಅನಗತ್ಯವಾಗಿ ಆರೋಪಿಸುವುದು ಎಷ್ಟು ಸರಿ? ಟೀಕೆಗೂ ನೀತಿ ಬೇಡವೇ? ಎಂದು ಕಿಡಿ ಕಾರಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಶಾಸಕ ಸ್ಥಾನವನ್ನು ಗಿರವಿ ಇಟ್ಟರಾ ಆರಗ ಜ್ಞಾನೇಂದ್ರ ?
Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಕೇಸ್: ಪಿಐ ಸೆರೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Shimoga; ಜಮೀರ್ ಅವರನ್ನು ಗಡಿಪಾರು ಮಾಡಿ: ಶಾಸಕ ಚನ್ನಬಸಪ್ಪ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.