ತೈಲೋತ್ಪನ್ನ, ಎಲ್‌ಪಿಜಿ ಬೆಲೆ ಏರಿಕೆ: ತ್ವರಿತ ಕ್ರಮ ಅನಿವಾರ್ಯ
Team Udayavani, Mar 11, 2021, 7:10 AM IST
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಕೆಲವು ತಿಂಗಳಿಂದ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದ್ದು ಇದರ ನೇರ ಪರಿಣಾಮವನ್ನು ದೇಶದ ಜನರು ಎದುರಿಸುವಂತಾಗಿದೆ. ದೇಶದಲ್ಲಿ ತೈಲೋತ್ಪನ್ನಗಳು ಮತ್ತು ಎಲ್‌ಪಿಜಿ ಬೆಲೆ ಗರಿಷ್ಠ ಪ್ರಮಾಣದಲ್ಲಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಹತ್ತು ದಿನಗಳಿಂದೀಚೆಗೆ ತೈಲ ಬೆಲೆ ಒಂದಿಷ್ಟು ಸ್ಥಿರತೆಯನ್ನು ಕಾಯ್ದುಕೊಂಡಿದೆಯಾದರೂ ಗರಿಷ್ಠ ಮಟ್ಟದಲ್ಲಿಯೇ ಇದೆ. ಆದರೂ ಕೇಂದ್ರ ಮತ್ತು ರಾಜ್ಯ ಸರಕಾರಗಳು ತೈಲೋತ್ಪನ್ನಗಳ ಮೇಲೆ ವಿಧಿಸುತ್ತಿರುವ ಸುಂಕ, ವ್ಯಾಟ್ ಅನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇನ್ನೂ ಮೀನಮೇಷ ಎಣಿಸುತ್ತಿರುವುದು ಜನರ ಆಕ್ರೋಶವನ್ನು ಹೆಚ್ಚಿಸುವಂತೆ ಮಾಡಿದೆ.
ಕಚ್ಚಾತೈಲಕ್ಕಾಗಿ ಭಾರತವು ಸೌದಿ ಅರೇಬಿಯಾ, ಇರಾಕ್, ಯುಎಇ, ನೈಜೀ ರಿಯಾ, ವೆನಿಜುವೆಲಾವನ್ನು ಅವಲಂಬಿಸಿದ್ದು ಅಮೆರಿಕದಿಂದಲೂ ಅಲ್ಪ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ತೈಲ ಆಮದು ರಾಷ್ಟ್ರಗಳ ಪೈಕಿ ವಿಶ್ವದಲ್ಲಿ 3ನೇ ಸ್ಥಾನದಲ್ಲಿರುವ ಭಾರತವು ಸೌದಿ ಅರೇಬಿಯಾದಿಂದ ಗರಿಷ್ಠ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಸೌದಿ ಆದಿಯಾಗಿ ಒಪೆಕ್ ರಾಷ್ಟ್ರಗಳು ತೈಲೋತ್ಪಾದನೆಯನ್ನು ಹೆಚ್ಚಿಸುವ ಜತೆಯಲ್ಲಿ ಬೆಲೆಯಲ್ಲಿ ಕಡಿತ ಮಾಡಬೇಕೆಂದು ಭಾರತ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಲೇ ಬಂದಿದೆಯಾದರೂ ಅಲ್ಲಿನ ಸರಕಾರಗಳು ಸ್ಪಂದಿಸುತ್ತಿಲ್ಲ. ಒಪೆಕ್ ರಾಷ್ಟ್ರಗಳು ತೈಲೋತ್ಪಾದನೆ ಕಡಿಮೆ ಮಾಡಿರುವುದಲ್ಲದೆ ಬೆಲೆಯಲ್ಲಿಯೂ ಭಾರೀ ಏರಿಸಿವೆ. ಅಲ್ಲದೆ ಸೌದಿಯಲ್ಲಿನ ತೈಲ ಸಂಗ್ರಹಾಗಾರದ ಮೇಲೆ ಹೌತಿ ಬಂಡು ಕೋರರು ನಡೆಸಿದ ದಾಳಿಯಿಂದಾಗಿ ಕಳೆದೆರಡು ದಿನಗಳಲ್ಲಿ ಸೌದಿಯಲ್ಲಿ ತೈಲ ಬೆಲೆ ದಿಢೀರನೆ ಏರಿಕೆಯಾಗಿದೆ. ಇದು ಭಾರತದ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಅಡುಗೆ ಅನಿಲದ ಬೆಲೆ ಏಳು ವರ್ಷಗಳ ಅವಧಿಯಲ್ಲಿ ದುಪ್ಪಟ್ಟಾಗಿದೆಯಲ್ಲದೆ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಸರಕಾರ ನೀಡುತ್ತಿದ್ದ ಸಬ್ಸಿಡಿಯನ್ನೂ ಸ್ಥಗಿತಗೊಳಿಸಿದ್ದು ಗ್ರಾಹಕರನ್ನು ಕಂಗೆಡುವಂತೆ ಮಾಡಿದೆ.
ಒಂದು ವರ್ಷದ ಅವಧಿಯಲ್ಲಿ ಒಟ್ಟಾರೆ ತೈಲ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳನ್ನು ಗಮನಿಸಿರುವ ಸರಕಾರ ಕೊನೆಗೂ ಎಚ್ಚೆತ್ತು ಕಚ್ಚಾ ತೈಲಕ್ಕಾಗಿ ಮಧ್ಯಪ್ರಾಚ್ಯ ದೇಶಗಳ ಜತೆ ಪಾಶ್ಚಾತ್ಯ ದೇಶಗಳತ್ತಲೂ ಮುಖ ಮಾಡಲು ಚಿಂತನೆ ನಡೆಸಿದೆ. ಅಮೆರಿಕದಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ತೈಲ ಪ್ರಮಾಣದಲ್ಲಿ ಹೆಚ್ಚಳ, ರಷ್ಯಾದೊಂದಿಗಿನ ಒಪ್ಪಂದದ ನವೀ ಕರಣ, ಕಚ್ಚಾ ತೈಲಕ್ಕಾಗಿ ಇರಾನ್‌ಗೆ ಮೊರೆ ಮಾತ್ರವಲ್ಲದೆ ಗಯಾನಾದಿಂದಲೂ ತೈಲವನ್ನು ಆಮದು ಮಾಡಿಕೊಳ್ಳಲು ಮುಂದಾಗಿದೆ. ಈ ಮೂಲಕ ಕಚ್ಚಾತೈಲಕ್ಕಾಗಿ ಮಧ್ಯಪ್ರಾಚ್ಯದ ಸೌದಿ ಅರೇಬಿಯಾ ಮತ್ತು ಇರಾಕ್ ಮೇಲಣ ಅವಲಂಬನೆಯನ್ನು ಕೊಂಚ ತಗ್ಗಿಸುವುದು ಸರಕಾರದ ಸದ್ಯದ ಚಿಂತನೆ. ಇವೆಲ್ಲದರ ಜತೆಯಲ್ಲಿ ನವೀಕರಿಸಬಹುದಾದ ಮೂಲಗಳಿಂದ ಗರಿಷ್ಠ ಪ್ರಮಾಣದ ಇಂಧನವನ್ನು ಉತ್ಪಾದಿಸಲು ಸರಕಾರ ಯೋಜನೆ ಹಾಕಿಕೊಂಡಿದೆ. ಇವೆಲ್ಲವೂ ದೂರದೃಷ್ಟಿಯ ಮತ್ತು ದೂರಗಾಮಿ ಪರಿಣಾಮದ ಯೋಜನೆಗಳಾಗಿರುವುದರಿಂದ ಇವು ಸದ್ಯ ತೈಲ ಬೆಲೆ ಏರಿಕೆ ಯಿಂದ ಕಂಗಾಲಾಗಿರುವ ಗ್ರಾಹಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಪೂರಕವಾಗಲಾರವು. ಈ ದಿಸೆಯಲ್ಲಿ ಸರಕಾರ ಶೀಘ್ರ ಕಾರ್ಯೋನ್ಮುಖವಾಗಿ ತೈಲೋತ್ಪನ್ನಗಳ ಬೆಲೆಯನ್ನು ನಿಯಂತ್ರಣದಲ್ಲಿಡಲು ತುರ್ತು ಕ್ರಮ ಕೈಗೊಳ್ಳುವುದು ಅನಿವಾ ರ್ಯವಾಗಿದೆ. ಇಲ್ಲವಾದಲ್ಲಿ ಅಗತ್ಯ ವಸ್ತುಗಳ ಧಾರಣೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿ ಹಣದುಬ್ಬರ ಮತ್ತಷ್ಟು ಹೆಚ್ಚಿ ದೇಶದ ಇಡೀ ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿರುವುದಂತೂ ನಿಶ್ಚಿತ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Organ Donation: ಸಾವಿನ ನಂತರವೂ ನೆರವಾದ ಜೀವ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.