LS Election; ಮೆಹಂದಿ, ಮದುವೆ ಮೇಲೂ ಆಯೋಗದ ಹದ್ದಿನ ಕಣ್ಣು
ರಾಜಕೀಯ ನಾಯಕರಿಂದ ಮತಯಾಚನೆ ಸಾಧ್ಯತೆ, ಫ್ಲೇಯಿಂಗ್ ಸ್ಕ್ವಾಡ್‌ನಿಂದ ಎಲ್ಲೆಡೆ ಪರಿಶೀಲನೆ
Team Udayavani, Mar 24, 2024, 6:30 AM IST
ಉಡುಪಿ/ಮಂಗಳೂರು: ಚುನಾವಣೆ ಘೋಷಣೆಯಾದ ಬಳಿಕ ಮನೆಯಲ್ಲಿ ನಡೆಸುವ ಕೌಟುಂಬಿಕ ಕಾರ್ಯಕ್ರಮಗಳಿಗೂ ಸಮಸ್ಯೆ ಎದುರಾಗಿದೆ. ಇದಕ್ಕೂ ಅನುಮತಿ ಪಡೆಯಬೇಕೆಂದು ನೀತಿ ಸಂಹಿತೆಯಲ್ಲಿ ತಿಳಿಸ
ಲಾಗಿದೆ. ಎಲ್ಲದಕ್ಕೂ ಅನುಮತಿ ನೀಡು ತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆಯಾದರೂ ಅದಕ್ಕಾಗಿ ಅಲೆದಾಡುವುದೇ ದೊಡ್ಡ ತಲೆ ನೋವಾಗಿದೆ.
ಶುಭಕಾರ್ಯಗಳನ್ನು ರಾಜಕೀಯ ಪಕ್ಷದ ನಾಯಕರು, ಕಾರ್ಯಕರ್ತರು ಮತಯಾಚನೆ ವೇದಿಕೆಯಾಗಿ ಮಾಡಿ ಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಮದುವೆ, ಮೆಹಂದಿ, ಔತಣ, ಜನ್ಮ ದಿನಾಚರಣೆ, ಗೃಹಪ್ರವೇಶದಂತಹ ಕೌಟುಂಬಿಕ ಕಾರ್ಯಕ್ರಮಗಳ ಮೇಲೂ ಚುನಾವಣ ಆಯೋಗ ಹದ್ದಿನ ಕಣ್ಣಿರಿಸಿದೆ. ಈ ಕಾರ್ಯಕ್ರಮಗಳನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ.
ಸದ್ಯ ನಗರ, ಗ್ರಾಮಾಂತರ ಭಾಗದಲ್ಲಿ ಈಗಾಗಲೇ ಮದುವೆ, ಗೃಹ ಪ್ರವೇಶ, ನೇಮ, ಬ್ರಹ್ಮ ಕಲಶೋತ್ಸವ ಸಹಿತ ಖಾಸಗಿ ಶುಭ ಕಾರ್ಯ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳ ಸೀಸನ್ ಆರಂಭಗೊಂಡಿದೆ. ಹೆಚ್ಚು ಜನ ಸೇರಿಸಿ ಮಾಡುವ ಎಲ್ಲ ಕಾರ್ಯಕ್ರಮಗಳಿಗೆ ಆಯೋಗವು ಅನುಮತಿ ಕಡ್ಡಾಯ ಗೊಳಿಸಿದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಕಾರ್ಯಕ್ರಮ ಸಂಘಟಕರು, ಹೊಟೇಲ್, ಸಭಾಂಗಣ, ರೆಸಾರ್ಟ್ ಮಾಲಕರಿಗೆ ಆಯೋಗವು ಸೂಚಿಸಿದೆ.
ಮದುವೆ ಮೊದಲಾದ ಕಾರ್ಯ ಕ್ರಮಗಳ ನೆಪದಲ್ಲಿ ನೀತಿ ಸಂಹಿತೆ ಉಲ್ಲಂಘನೆ ನಡೆಯುತ್ತಿದ್ದರೆ ಕಣ್ಗಾವಲಿರಿಸಲು ಜಿಲ್ಲಾಮಟ್ಟದ ಪ್ಲಾಯಿಂಗ್ ಸ್ಕ್ವಾಡ್‌ಗೆ ಜವಾಬ್ದಾರಿ ವಹಿಸಲಾಗಿದೆ. ಪ್ರತೀ ಹೋಬಳಿ ಮಟ್ಟದಲ್ಲಿ ನಡೆಯುವ ಎಲ್ಲ ಶುಭ ಕಾರ್ಯಕ್ರಮಗಳ ಮೇಲೆ ಅವರು ನಿಗಾ ವಹಿಸುತ್ತಿದ್ದಾರೆ. ಮದುವೆ, ನಿಶ್ಚಿತಾರ್ಥ, ನಾಮಕರಣ, ರಿಸೆಪ್ಶನ್, ಜನ್ಮದಿನಾಚರಣೆ ಎಂದು ಸಭಾಂಗಣವನ್ನು ಬಾಡಿಗೆ ಪಡೆದು, ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡರೆ ಕೂಡಲೇ ಕಟ್ಟಡ ಮಾಲಕರು, ಪೊಲೀಸರ ಗಮನಕ್ಕೆ ತರಬೇಕು. ಲಾಭದ ಆಸೆಗೆ ಸುಮ್ಮನಿದ್ದರೆ ಹೊಟೇಲ್, ಕಟ್ಟಡದ ಮಾಲಕರ ವಿರುದ್ದವೂ ಕ್ರಮ ತೆಗೆದು ಕೊಳ್ಳಲಾಗುತ್ತದೆ.
ಅಭ್ಯರ್ಥಿಗಳು, ಮುಖಂಡರ ಮೇಲೆ ನಿಗಾ ?
ಮದುವೆ, ಮೆಹಂದಿ, ಬೀಗರ ಊಟ (ರಿಸೆಪ್ಶನ್) ಇನ್ನಿತರ ಶುಭ ಸಮಾರಂಭ, ಸಾಮಾಜಿಕ, ಧಾರ್ಮಿಕ ಸಹಿತ ಕೆಲವು ಕಾರ್ಯ ಕ್ರಮಗಳಿಗೆ ರಾಜಕೀಯ ಮುಖಂಡರನ್ನು ಅತಿಥಿಗಳಾಗಿ ಆಹ್ವಾನಿಸುವುದು ಪ್ರತಿಷ್ಠೆಯ ಸಂಗತಿಯಾಗಿರುತ್ತದೆ. ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶುಭಸಮಾರಂಭಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು, ರಾಜಕೀಯ ಮುಖಂಡರು ಬಂದಲ್ಲಿ ಅವರು ಕೇವಲ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದು ಹಾರೈಸಿ ಹೋಗಬೇಕು. ಅದನ್ನು ಹೊರತುಪಡಿಸಿ ರಾಜಕೀಯ ಪಕ್ಷದ ಚಿಹ್ನೆ ಬಳಕೆ ಮಾಡುವುದು, ಮತ ಯಾಚನೆ ಮಾಡುವುದು, ಸೇರಿದಂತೆ ರಾಜಕೀಯ ಚಟುವಟಿಕೆಗಳನ್ನು ಶುಭ ಸಮಾರಂಭದಲ್ಲಿ ನಡೆಸಿದರೆ ನೀತಿ ಸಂಹಿತೆ ಉಲ್ಲಂಘನೆಯಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಅನುಮತಿ ನಿರಾಕರಿಸುವುದಿಲ್ಲ
ದ.ಕ. ಅಪರ ಜಿಲ್ಲಾಧಿಕಾರಿ ಸಂತೋಷ್ ಕುಮಾರ್ “ಉದಯವಾಣಿ’ ಜತೆಗೆ ಮಾತನಾಡಿ, “ಮದುವೆ, ನಾಮಕರಣ ಸಹಿತ ಯಾವುದೇ ಖಾಸಗಿ ಕಾರ್ಯಕ್ರಮ ಮಾಡುವುದಿದ್ದರೂ ಚುನಾವಣಾಧಿಕಾರಿ ಕಚೇರಿಯಿಂದ ಅನುಮತಿ ಪಡೆಯಬೇಕು. ಯಾವುದೇ ಕಾರಣಕ್ಕೂ ನಾವು ಅನುಮತಿ ನಿರಾಕರಿಸುವುದಿಲ್ಲ. ಸಿಂಗಲ್ ವಿಂಡೋ ಸಿಸ್ಟಮ್‌ನಲ್ಲಿ ಅನುಮತಿ ನೀಡಲಾಗುವುದು’ ಎಂದರು.
ಅನುಮತಿ ಪಡೆಯುವುದು ಹೇಗೆ?
ಸಾರ್ವಜನಿಕ ಅಥವಾ ಖಾಸಗಿ ಕಾರ್ಯಕ್ರಮಗಳಿಗೆ ಅನುಮತಿಯನ್ನು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಚುನಾವಣೆ ಶಾಖೆ, ಉಡುಪಿ, ಕುಂದಾಪುರ, ಕಾಪು, ಕಾರ್ಕಳ ಹಾಗೂ ಬೈಂದೂರು ತಹಶೀಲ್ದಾರ್ ಕಚೇರಿಯ ಚುನಾವಣೆ ವಿಭಾಗದಲ್ಲಿ (ಎಆರ್‌ಒ ಕಚೇರಿ) ನಿರ್ದಿಷ್ಟ ದಾಖಲೆ ಸಮೇತ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬಹುದಾಗಿದೆ. ಇದಲ್ಲದೆ ಸರಕಾರದ ಸುವಿಧಾ ಪೋರ್ಟಲ್ ಮೂಲಕವೂ ಅರ್ಜಿ ಸಲ್ಲಿಸಿ ಅನುಮತಿ ಪಡೆಯಲು ಅವಕಾಶವಿದೆ.
ಬೆಳ್ತಂಗಡಿ ಕ್ಷೇತ್ರ ವ್ಯಾಪ್ತಿಯವರು ಬೆಳ್ತಂಗಡಿ ತಾಲೂಕು ಆಡಳಿತ ಸೌಧ, ಮೂಡುಬಿದಿರೆಯವರು ತಾಲೂಕು ಆಡಳಿತ ಸೌಧ, ಮಂಗಳೂರು ನಗರ ಉತ್ತರದವರು ಮಂಗಳೂರು ತಾಲೂಕು ಆಡಳಿತ ಸೌಧ, ಮಂಗಳೂರು ದಕ್ಷಿಣ ಕ್ಷೇತ್ರದವರು ಮಂಗಳೂರು ಪಾಲಿಕೆ ಕಚೇರಿ, ಮಂಗಳೂರು ಕ್ಷೇತ್ರದವರು ಜನರು ಉಳ್ಳಾಲ ನಗರಸಭೆ ಕಾರ್ಯಾಲಯ, ಬಂಟ್ವಾಳದವರು ತಾಲೂಕು ಆಡಳಿತ ಸೌಧ, ಪುತ್ತೂರಿನವರು ಪುತ್ತೂರು ತಾಲೂಕು ಆಡಳಿತ ಸೌಧ ಹಾಗೂ ಸುಳ್ಯ ಭಾಗದವರು ಸುಳ್ಯ ಆಡಳಿತ ಸೌಧಕ್ಕೆ ತೆರಳಿ ಅನುಮತಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದ.ಕ. ಜಿಲ್ಲಾಧಿಕಾರಿ ಕಚೇರಿ ಚುನಾವಣ ಕಂಟ್ರೋಲ್ ರೂಂ 1950 ಸಂಪರ್ಕಿಸಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ.
ಅನುಮತಿ ಅಗತ್ಯ
ಉತ್ಸವ ವಿವಿಧ, ಸಮಾವೇಶ, ನೇಮ, ಕೋಲ, ಕ್ರಿಕೆಟ್, ವಾಲಿಬಾಲ್ ಸಹಿತ ವಿವಿಧ ಪಂದ್ಯಾವಳಿ, ಕ್ರೀಡೋತ್ಸವ, ಸಾರ್ವಜನಿಕ ಸ್ಪರ್ಧೆಗಳು, ಜನ ಪ್ರತಿನಿಧಿಗಳನ್ನು ಆಹ್ವಾನಿಸಿ ಮಾಡುವ ವಿವಿಧ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಇದರ ಜತೆಗೆ ಮದುವೆ, ಗೃಹ ಪ್ರವೇಶ, ಮೆಹಂದಿ, ಸಭಾಂಗಣದಲ್ಲಿ ನಡೆಸುವ ನಾಮಕರಣ, ಸಾಮೂಹಿಕ ಪೂಜೆ ಇತ್ಯಾದಿಗಳಿಗೆ ಅನುಮತಿ ಪಡೆಯಬೇಕು. ಎಲ್ಲ ರೀತಿಯ ಸಾರ್ವಜನಿಕ ಕಾರ್ಯಕ್ರಮಗಳಿಗೂ ಅನುಮತಿ ಪಡೆಯಬೇಕು.
ಕುಟುಂಬದ ಸದಸ್ಯರು ಸೀಮಿತವಾಗಿ ಮನೆಯಲ್ಲೇ ನಡೆಸುವ ಕಾರ್ಯಕ್ರಮಗಳಿಗೆ ಅನುಮತಿ ಅಗತ್ಯವಿಲ್ಲ.
ಅನುಮತಿ ಪಡೆಯಲು 90 ಕಿ.ಮೀ. ಅಲೆದಾಟ…!
ಕುಂದಾಪುರ: ಲೋಕಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಮದುವೆ, ಜಾತ್ರೆ, ಯಕ್ಷಗಾನ, ಕೋಲ, ಇನ್ನಿತರ ಮನೆ ಕಾರ್ಯಕ್ರಮಗಳಿಗೆ ಈಗ ನೀತಿ ಸಂಹಿತೆ ಸಂಕಟ ಆರಂಭವಾಗಿದೆ. ಚುನಾವಣಾಧಿಕಾರಿಗಳು ಅಥವಾ ಸಹಾಯಕ ಚುನಾವಣೆ ಅಧಿಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದು ಗ್ರಾಮಾಂತರ ಭಾಗದ ಜನರಿಗೆ ದೊಡ್ಡ ತಲೆನೋವು ತಂದಿಟ್ಟಿದೆ. ಅದರಲ್ಲೂ ಹೆಬ್ರಿ ತಾಲೂಕಿನ ಬೆಳ್ವೆ, ಮಡಾಮಕ್ಕಿ ಗ್ರಾಮಸ್ಥರು 90 (ತಲಾ 45 ಕಿ.ಮೀ.) ಕಿ.ಮೀ. ದೂರದ ಕುಂದಾಪುರಕ್ಕೆ ಬಂದು ಅನುಮತಿ ಪಡೆಯಬೇಕಿದೆ.
ಮಡಾಮಕ್ಕಿ, ಶೇಡಿಮನೆ, ಅಲಾºಡಿ, ಆರ್ಡಿ, ಬೆಳ್ವೆ ಗ್ರಾಮಗಳು ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಾಗಿದ್ದರೂ, ಹೆಬ್ರಿ ತಾಲೂಕು ವ್ಯಾಪ್ತಿಗೆ ಸೇರಿದೆ. ಇವರಿಗೆ ಕುಂದಾಪುರಕ್ಕೆ ಹೋಗಿ ಬರಲು ತಲಾ 45 ಕಿ.ಮೀ. ನಂತೆ ಬರೋಬ್ಬರಿ 90 ಕಿ.ಮೀ. ದೂರವಾಗುತ್ತದೆ. ಇವರಿಗೆ ಮನೆ ಕಾರ್ಯಕ್ರಮಗಳಿಗೆ ಅನುಮತಿಗಾಗಿ ಕುಂದಾಪುರಕ್ಕೆ ಬರಬೇಕಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆಗೂ ಇದೇ ರೀತಿ ಮಾಡಲಾಗಿದ್ದು, ಗ್ರಾಮಸ್ಥರು ಭಾರೀ ತೊಂದರೆ ಅನುಭವಿಸಿದ್ದರು. ಹೆಬ್ರಿ ತಾಲೂಕು ಕೇಂದ್ರ ಆಗಿರುವುದರಿಂದ ಅಲ್ಲಿಯೇ ಏಕ ಗವಾಕ್ಷಿ ಕೇಂದ್ರ ತೆರೆದು ಅನುಮತಿ ನೀಡಲು ವ್ಯವಸ್ಥೆ ಮಾಡಿ ಅಥವಾ ಕನಿಷ್ಠ ಕಾರ್ಕಳ ಕೊಟ್ಟರೂ ಕುಂದಾಪುರಕ್ಕಿಂತ ಹತ್ತಿರ ಆಗಲಿದೆ ಎನ್ನುವುದಾಗಿ ಇಲ್ಲಿನ ಜನರು ಮನವಿ ಮಾಡಿಕೊಂಡಿದ್ದಾರೆ. ಇದೇ ರೀತಿಯ ಸಮಸ್ಯೆಯನ್ನು ಕರಾವಳಿಯ ವಿವಿಧೆಡೆ ಜನರು ಎದುರಿಸುತ್ತಿದ್ದಾರೆ.
ಕಾರ್ಯಕ್ರಮಗಳಿಗೆ ಆಯೋಗದ ಅನುಮತಿ ಪಡೆಯುವುದು ಕಡ್ಡಾಯ. ಮದುವೆ, ಮೆಹಂದಿ ಸಹಿತ ಎಲ್ಲ ರೀತಿಯ ಶುಭ ಕಾರ್ಯಗಳ ಮೇಲೂ ನಿಗಾ ವಹಿಸಲಾಗುತ್ತದೆ. ಎಲ್ಲಡೆ ಫ್ಲೈಯಿಂಗ್ ಸ್ಕ್ವಾ$Âಡ್ ಈ ಬಗ್ಗೆ ಕಣ್ಗಾವಲು ಇರಿಸಿದೆ.
– ಡಾ| ಕೆ. ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ
ಚುನಾವಣ ಪ್ರಚಾರ ಕಾರ್ಯಕ್ರಮ ಸಹಿತ ಜಿಲ್ಲೆಯಲ್ಲಿ ಯಾವುದೇ ರೀತಿಯ ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸುವಾಗಲೂ ಸಂಬಂಧಪಟ್ಟವರು ಆಯಾ ವ್ಯಾಪ್ತಿಯ ಸಹಾಯಕ ಚುನಾವಣ ಅಧಿಕಾರಿ ಕಚೇರಿಯಿಂದ ಅನುಮತಿ ಪಡೆಯುವುದು ಕಡ್ಡಾಯ
– ಮುಲೈ ಮುಗಿಲನ್, ದ.ಕ. ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
KMC: ನವೀಕೃತ ವೈದ್ಯಕೀಯ ಆಂಕೊಲಾಜಿ ಹೊರರೋಗಿ, ಕಿಮೊಥೆರಪಿ ಡೇ ಕೇರ್ ಕೇಂದ್ರ ಉದ್ಘಾಟನೆ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.