ನಾಡಿನೆಲ್ಲೆಡೆ ಇಂದು ಶಿವ ನಾಮ ಸ್ಮರಣೆ, ಜಾಗರಣೆ
Team Udayavani, Mar 11, 2021, 5:55 AM IST
ಕುಂದಾಪುರ: ನಾಡಿನ ವಿವಿಧ ಶಿವದೇಗುಲಗಳಲ್ಲಿ ಗುರುವಾರ ಭಕ್ತಿ, ಸಂಭ್ರಮದಿಂದ ಶಿವರಾತ್ರಿ ಆಚರಣೆ, ಜಾಗರಣೆ ನಡೆಯಲಿದೆ. ಅಭಿಷೇಕ ಪ್ರಿಯನಾದ ರುದ್ರನಿಗೆ ರುದ್ರಾಭಿಷೇಕ ನಡೆಯಲಿದ್ದು ಜಾಗರದ ಸಂದರ್ಭ ಭಜನೆ ನಡೆಯಲಿದೆ. ಕಳೆದ ಶಿವರಾತ್ರಿ ಆಚರಣೆಗೆ ಕೊರೊನಾ ಇರಲಿಲ್ಲ. ಈ ಬಾರಿಯ ಆಚರಣೆ ಸಂದರ್ಭ ಕೊರೊನಾ ಭಯ ಕಡಿಮೆಯಾಗಿದೆ. ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದ್ದರಿಂದ ಈಚಿನ ದಿನಗಳಲ್ಲಿ ಬಂದ ಹಬ್ಬಗಳ ಪೈಕಿ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವ ಹಬ್ಬ ಎಂದು ಪರಿಗಣಿಸಲಾಗಿದೆ.
ಶಿಶಿರ ಋತುವಿನ ಮಾಘ ಮಾಸದ ಕೃಷ್ಣಪಕ್ಷ ಚತುರ್ದಶಿಯಂದು ಶಿವರಾತ್ರಿ ಆಚರಣೆ ನಡೆಯುತ್ತದೆ. ಈ ದಿನ ರಾತ್ರಿ ಸಮಯದಲ್ಲಿ ಶಿವ, ಪಾರ್ವತಿಯ ಜತೆಯಲ್ಲಿ ಭೂಮಿಗೆ ಬರುತ್ತಾನೆ. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂಬ ಶಾಸ್ತ್ರೋಕ್ತಿ ಇದೆ. ಈ ನಂಬಿಕೆಯಂತೆ ಶಿವರಾತ್ರಿಯಂದು ಜಾಗರಣೆ, ಆಚರಣೆ, ಅಭಿಷೇಕ, ಭಜನೆ, ಪಾದಯಾತ್ರೆ, ದೇವರ ದರ್ಶನ ಇತ್ಯಾದಿ ನಡೆಸಲಾಗುತ್ತದೆ. ಕುಂದಾಪುರ, ಬೈಂದೂರು ತಾಲೂಕಿನ ಎಲ್ಲ ಶಿವಾರಾಧನನ ಕ್ಷೇತ್ರಗಳಲ್ಲೂ ಶಿವರಾತ್ರಿ ಆಚರಣೆಗೆ ಸಿದ್ಧತೆ ನಡೆದಿದೆ.
ದೊಡ್ಡ ಮಟ್ಟದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೇ, ಅದ್ದೂರಿ ಕಡೆಗೆ ಮನ ಮಾಡದೇ, ಭಜನೆಯಂತಹ ಧಾರ್ಮಿಕ ಚಟುವಟಿಕೆಗೆ ಹೆಚ್ಚಿನ ಆದ್ಯತೆ ದೊರೆತದ್ದು ಈ ಬಾರಿಯ ವಿಶೇಷ.
ದೇವಾಲಯಗಳಲ್ಲಿ ದೀಪಾಲಂಕಾರ ನಡೆದಿದೆ. ಬೆಳಗ್ಗೆಯಿಂದಲೇ ಭಜನೆ, ಅಭಿಷೇಕ, ಅರ್ಚನೆ ನಡೆಯಲಿದೆ ಎಂದು ಈಗಾಗಲೇ ದೇವಾಲಯಗಳ ಪ್ರಕಟನೆ ತಿಳಿಸಿದೆ. ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದು ಕೊಂಡೇ ಧಾರ್ಮಿಕ ಆಚರಣೆಗಳು, ಭಕ್ತರ ದೇಗುಲ ಭೇಟಿ ನಡೆಯಲಿದೆ.
ಪಂಚ ಶಂಕರನಾರಾಯಣ ಕ್ಷೇತ್ರಗಳಲ್ಲಿ ಆಚರಣೆ
ಕ್ರೋಢ ಶ್ರೀ ಶಂಕರನಾರಾಯಣ ಕ್ಷೇತ್ರದಲ್ಲಿ ಬೆಳಗ್ಗೆ 9ರಿಂದ ಶತರುದ್ರಾಭಿಷೇಕ, ಮಹಾಪೂಜೆ, ಸಂಜೆ 6ರಿಂದ 8ರ ತನಕ ಶಂಕರನಾರಾಯಣ ಯಕ್ಷಗಾನ ಬಾಲಕ ಸಂಘದಿಂದ ಯಕ್ಷಗಾನ ಪ್ರದರ್ಶನ, ರಾತ್ರಿ 9ರಿಂದ ಮಹಾ ರಂಗಪೂಜೆ, ಪಲ್ಲಕಿ ಉತ್ಸವ ನಡೆಯಲಿವೆ.
ಹೊಳೆ ಶಂಕರನಾರಾಯಣ
ಕ್ಷೇತ್ರದಲ್ಲಿ ರುದ್ರಾಭಿಷೇಕ, ಸಂಜೆ 6ರಿಂದ ರಂಗಪೂಜೆ, ಮಹೋತ್ಸವ ಮತ್ತು ಭಜನೆ ಸೇವಾ ಕಾರ್ಯಗಳು ಜರಗಲಿವೆ.
ಮಾಂಡವಿ ಶಂಕರನಾರಾಯಣ
ಕ್ಷೇತ್ರದಲ್ಲಿ ರುದ್ರಾಭಿಷೇಕ, ರಂಗಪೂಜೆ, ಭಜನೆ ಸೇವಾ ಕಾರ್ಯಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ.
ಬೆಳ್ವೆ ಶಂಕರನಾರಾಯಣ
ದೇಗುಲದಲ್ಲಿ ರುದ್ರಾಭಿಷೇಕ, ರಾತ್ರಿ ರಂಗಪೂಜಾ ಮಹೋತ್ಸವ ಮತ್ತು ಭಜನೆ ಸೇವಾ ಕಾರ್ಯಗಳು ಜರಗಲಿವೆ.
ಆವರ್ಸೆ ಶಂಕರನಾರಾಯಣ
ಕ್ಷೇತ್ರದಲ್ಲಿ ರುದ್ರಾಭಿಷೇಕ, ರಾತ್ರಿ ರಂಗಪೂಜಾ ಮಹೋತ್ಸವ ಮತ್ತು ಭಜನೆ ಸೇವಾ ಕಾರ್ಯಗಳು ಜರಗಲಿವೆ.
ಹಣುಬು ಕಾಮನ ಹಬ್ಬ
ಶಿವರಾತ್ರಿ ಹಬ್ಬ ಎಲ್ಲರ ಪ್ರಿಯವಾದ ಹಬ್ಬಗಳಲ್ಲಿ ಒಂದು. ಕುಂದಾಪುರದ ಹಲವು ಕಡೆಗಳಲ್ಲಿ ಶಿವರಾತ್ರಿ ದಿನ ಅಥವಾ ಮಾರನೇದಿನ ಹಣುಬು ಸುಡುವ ಆಚರಣೆ ಇದ್ದು, ಶಿವನು ಮನ್ಮಥನನ್ನು ತನ್ನ ಮೂರನೇ ಕಣ್ಣಿನಿಂದ ದಹಿಸುವಿಕೆಯ ಪ್ರತೀಕವಾಗಿ ಈ ಸಂಪ್ರದಾಯ ಆಚರಿಸಲಾಗುತ್ತದೆ.
ಶಿವರಾತ್ರಿಯಂದು ಗ್ರಾಮಸ್ಥರೆಲ್ಲ ಊರಿನ ಹಿರಿಯರ ಮುತುವರ್ಜಿಯಲ್ಲಿ ತಂಡ ಮನೆ ಮನೆಗೆ ಭೇಟಿ ನೀಡಿ, ಚೆಂಡೆ, ತಾಳ, ಜಾಗಟೆ ಬಾರಿಸುತ್ತ ಧೀಂಸ್ಸಾಲ್ ಎನ್ನಿರೋ..ಧೀಂಗುಟ್ಕ ಕುಣಿರೋ..ಎಂಬ ಕುಂದಾಪ್ರ ಕನ್ನಡದ ಜನಪದ ಪದ್ಯ ಹೇಳುತ್ತಾ ಸಾಂಪ್ರದಾಯಿಕವಾಗಿ ತೆಂಗಿನಕಾಯಿ, ಅಕ್ಕಿ, ತೆಂಗಿನ ಹೆಡೆಯನ್ನು (ಮಡ್ಲ್) ಕಾಣಿಕೆ ಪಡೆಯುವುದು ವಾಡಿಕೆ.
ಕಾಮನ ದಹಿಸಿದ ಶಿವ ಮನೆಗೆ ಬರುವನೆಂಬ ನಂಬಿಕೆಯಿಂದ ಮನೆಯವರು ಅಕ್ಕಿ- ತೆಂಗಿನಕಾಯಿ ನೀಡುತ್ತಾರೆ. ಹಣುಬು ಸುಡುವ ಜಾಗದಲ್ಲಿ ಒಂದು ಮರನೆಟ್ಟು ಅದಕ್ಕೆ ಸಮುದ್ರ ಕಿನಾರೆಯಲ್ಲಿ ಬೆಳೆಯುವ ಒಂದು ಮುಳ್ಳುಜಾತಿಯ ಬಳ್ಳಿ ಯಂತೆ ಹಬ್ಬುವ ಚುಂಗಿ ರಾಶಿ ಹಾಕಿ, ಒಣ ಹುಲ್ಲು ಹಾಕಿ ತೆಂಗಿನ ಮಡಲನ್ನು ಸುತ್ತ ಕಟ್ಟಿ, ಹಣುಬಿನ ರಥ ನಿರ್ಮಿಸುತ್ತಾರೆ.
ಸಂಜೆ ಊರ ದೇವಸ್ಥಾನದಲ್ಲಿ ಪೂಜೆ ಮಾಡಿ ಶಿವ ನಾಮಾರ್ಚನೆ ಮಾಡಿ ಪ್ರಾರ್ಥನೆ ಸಲ್ಲಿಸಿ, ಗ್ರಾಮದ ಜನರೆಲ್ಲ ಹಣುಬಿನ ಗದ್ದೆಯಲ್ಲಿ ಸೇರಿ ದಿಮ್ಸಾಲ್ ಹಾಕುತ್ತ ನೆಟ್ಟ ಮರಕ್ಕೆ ಮೂರು ಸುತ್ತು ಬಂದು ಬೆಂಕಿ ಕೊಡುತ್ತಾರೆ. ಮರುದಿನ ಹಣುಬಿನ ರಾಶಿಯಲ್ಲಿ ಬೆಂದು ಉಳಿದ ತೆಂಗಿನಕಾಯಿ ಪ್ರಸಾದವೆಂದು ತೆಗೆಯುತ್ತಾರೆ.
ಆಚರಣೆ ಉಳಿಸಿ
ಈ ಜನಪದ ವಿಶಿಷ್ಟ ಆಚರಣೆಯನ್ನು ಯುವಜನಾಂಗ ತಮ್ಮ ಸಂಘ-ಸಂಸ್ಥೆಯ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸಿದರೆ ಜನಪದ ಲೋಕದ ಈ ಅಪರೂಪದ ಆಚರಣೆ ಉಳಿಸಿಕೊಳ್ಳಬಹುದಾಗಿದೆ.
-ಪ್ರವೀಣ್ ಡಿ. ಕಟೀಲು ಸಾಲಿಗ್ರಾಮ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.