ಮತ್ತೆ ಕತ್ತಲ ಕೂಪಕ್ಕೆ ಮ್ಯಾನ್ಮಾರ್?
Team Udayavani, Feb 3, 2021, 7:10 AM IST
ದಶಕಗಳಿಂದ ಸೇನಾಡಳಿತದ ಕಪಿಮುಷ್ಟಿಗೆ ಸಿಲುಕಿ, ಕೊನೆಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಸಾಗತೊಡಗಿದ್ದ ಮ್ಯಾನ್ಮಾರ್ ಈಗ ಮತ್ತೆ ಸಂಘರ್ಷದ ಕೂಪಕ್ಕೆ ಬೀಳುವ ಸೂಚನೆ ನೀಡುತ್ತಿದೆ. ಕಳೆದ ನವೆಂಬರ್ ತಿಂಗಳಲ್ಲಿ ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಮ್ಯಾನ್ಮಾರ್‌ನ ಮಿಲಿಟರಿಯು ಆಂಗ್ ಸಾನ್ ಸೂಕಿ ಅವರನ್ನು ವಶಕ್ಕೆ ಪಡೆದು, ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಿಸಿದೆ. ಮುಂದೆ ತಾನು ಪ್ರಜಾಪ್ರಭುತ್ವ ಮಾದರಿಯಲ್ಲೇ ಚುನಾವಣೆ ನಡೆಸುವುದಾಗಿ ಮಿಲಿಟರಿ ಹೇಳುತ್ತಿದೆಯಾದರೂ ಅದರ ಅಧಿಕಾರದಾಹದ ಪರಿಚಯವಿರುವ ನಾಗರಿಕರು ತತ್ತರಿಸಿದ್ದಾರೆ, ಆಕ್ರೋಶಗೊಂಡಿದ್ದಾರೆ. ಹಾಗಿದ್ದರೆ ಈ ಬಿಕ್ಕಟ್ಟು ಏಕೆ ಸೃಷ್ಟಿಯಾಯಿತು, ಮ್ಯಾನ್ಮಾರ್‌ನ ಮುಂದಿನ ದಾರಿ ಹೇಗಿರಬಹುದು? ಇಲ್ಲಿದೆ ಮಾಹಿತಿ…
2011ರಲ್ಲಿ ಅಂತ್ಯವಾಗಿತ್ತು 5 ದಶಕಗಳ ಸೇನಾಡಳಿತ
ಸುಮಾರು ಐದು ದಶಕಗಳ ಕಾಲ ಮ್ಯಾನ್ಮಾರ್ ಅನ್ನು ಅಲ್ಲಿನ ಸೇನೆಯೇ ಆಳುತ್ತಿತ್ತು. ಅದರ ದಮನಕಾರಿ ನೀತಿ ಹೇಗಿತ್ತೆಂದರೆ, ತನ್ನ ವಿರುದ್ಧ ಮಾತನಾಡುವವರನ್ನು ಒಂದೋ ಕಣ್ಮರೆ ಮಾಡುತ್ತಿತ್ತು, ಇಲ್ಲವೇ ಗೃಹಬಂಧನದಲ್ಲಿಟ್ಟು ಹಿಂಸಿಸುತ್ತಿತ್ತು. ಪ್ರಜಾಸತ್ತೆಯ ಪರವಾದ ಚಳವಳಿಯ ಮುಂದಾಳತ್ವ ವಹಿಸಿದ್ದ ಆಂಗ್‌ಸಾನ್ ಸೂಕಿ ಸೇನಾ ಮುನಿಸಿಗೆ ಒಳಗಾಗಿ 1989-2010ರ ನಡುವಿನ 21 ವರ್ಷಗಳಲ್ಲಿ ಸುಮಾರು 15 ವರ್ಷ ಗೃಹಬಂಧನದಲ್ಲೇ ಇರಬೇಕಾಯಿತು. ಗೃಹಬಂಧನದಲ್ಲಿರು ವಾಗಲೇ ಅವರಿಗೆ ನೊಬೆಲ್ ಶಾಂತಿ ಪುರಸ್ಕಾರವೂ ಒಲಿದು ಬಂದಿತ್ತು.
ಕೊನೆಗೆ ಜಗತ್ತಿನಾದ್ಯಂತ ಆಂಗ್ ಸಾನ್ ಸೂಕಿ ಅವರ ಬಿಡುಗಡೆಗೆ ಒತ್ತಡ ಬಂದಿದ್ದರಿಂದ 2010ರ ನವೆಂಬರ್ ತಿಂಗಳಲ್ಲಿ ಸೇನೆ ಸೂಕಿ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸಿತ್ತು. ಗಮನಿಸಬೇಕಾದ ಅಂಶವೆಂದರೆ ಅದೇ ವರ್ಷ ಸುಮಾರು ಎರಡು ದಶಕಗಳ ಅನಂತರ ಆ ರಾಷ್ಟ್ರದಲ್ಲಿ ಚುನಾವಣೆಗಳೂ ನಡೆದಿದ್ದವು. ಸೂಕಿ ಅವರ ಪಕ್ಷ ಚುನಾವಣೆಯನ್ನು ಬಹಿಷ್ಕರಿಸಿತ್ತು. ಸೂಕಿ ಅವರನ್ನು ಗೃಹ ಬಂಧನದಿಂದ ಮುಕ್ತಗೊಳಿಸುವ ಒಂದು ವಾರ ಮೊದಲೇ ಸೇನೆ ಚುನಾವಣ ಅಕ್ರಮ ನಡೆಸಿ ತನ್ನ ತಾಳಕ್ಕೆ ಕುಣಿಯುವ ಯುಎಸ್‌ಡಿಪಿ ಪಕ್ಷವನ್ನು ಅಧಿಕಾರಕ್ಕೆ ತಂದಿತು.
2015ರಲ್ಲಿ ಬೃಹತ್ ಪಲ್ಲಟ
ಯಾವಾಗ ಆಂಗ್ ಸಾನ್ ಸೂಕಿ ಗೃಹ ಬಂಧನದಿಂದ ಹೊರ ಬಂದರೋ ಅವರು ರಾಜಕೀಯವಾಗಿಯೂ ಬಲಿಷ್ಠವಾಗು ತ್ತಲೇ ಹೋದರು. 2015ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಪಕ್ಷ ಅಮೋಘ ಜಯಸಾಧಿಸಿ ಅಧಿಕಾರಕ್ಕೇರಿಬಿಟ್ಟಿತು. ಆದರೆ ಸೂಕಿ ಅಧ್ಯಕ್ಷರಾಗುವುದನ್ನು ಅಲ್ಲಿನ ಸಂವಿಧಾನ ನಿರ್ಬಂಧಿಸುತ್ತದೆ(ಅವರ ದಿವಂಗತ ಪತಿ ಮತ್ತು ಮಕ್ಕಳಿಬ್ಬರೂ ವಿದೇಶಿ ಪ್ರಜೆಗಳೆಂಬ ಕಾರಣಕ್ಕೆ). ಹೀಗಾಗಿ ಅವರು ಸರಕಾರದ ಮುಖ್ಯಸ್ಥರೆಂದು (ಸ್ಟೇಟ್ ಕೌನ್ಸಲರ್) ನೇಮಕವಾದರು.
ರೊಹಿಂಗ್ಯಾಗಳ ವಿರುದ್ಧದ ಹಿಂಸಾಚಾರಕ್ಕೆ ಮೌನ
ಗಮನಾರ್ಹ ಸಂಗತಿಯೆಂದರೆ ಆಂಗ್ ಸಾನ್ ಸೂಕಿ ಆಡಳಿತ ಬಂದಿದ್ದರೂ ಮ್ಯಾನ್ಮಾರ್‌ನಲ್ಲಿ ಮಿಲಿಟರಿಯ ಧ್ವನಿಯೇನೂ ತಗ್ಗಿರಲಿಲ್ಲ. ಅದು ತಾನು ನಡೆದದ್ದೇ ಹಾದಿ ಎನ್ನುವ ರೀತಿಯಲ್ಲಿ ಇರುತ್ತಿತ್ತು. ರೊಹಿಂಗ್ಯಾ ಮುಸ್ಲಿಮರ ಮೇಲೆ ಮ್ಯಾನ್ಮಾರ್ ಸೇನೆ ನಡೆಸಿದ್ದ ಮಾನವಹಕ್ಕು ಉಲ್ಲಂಘನೆಗಳೆಲ್ಲವನ್ನೂ ಸೂಕಿ ನೋಡಿಯೂ ನೋಡದಂತಿದ್ದರು ಎನ್ನುವ ಆರೋಪ ಜಾಗತಿಕ ವಲಯದಿಂದ ವ್ಯಕ್ತವಾಗುತ್ತಲೇ ಬಂದಿದೆ. ಒಂದು ಸಂದರ್ಶನದಲ್ಲಂತೂ ಸೂಕಿ, ರೊಹಿಂಗ್ಯಾಗಳನ್ನು ಮ್ಯಾನ್ಮಾರ್ ನಾಗರಿಕರು ಎಂದು ಒಪ್ಪಿಕೊಳ್ಳಬೇಕೋ ಇಲ್ಲವೋ ನನಗೆ ತಿಳಿಯದು ಎಂದು ಹೇಳಿದ್ದರು. ಆಗ ಮಾನವಹಕ್ಕು ಸಂಘಟನೆಗಳೆಲ್ಲ ಅವರಿಗೆ ನೀಡಲಾಗಿದ್ದ ನೊಬೆಲ್ ಶಾಂತಿ ಪುರಸ್ಕಾರವನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿಯೂ ಇದ್ದವು. ಈ ವಿಚಾರದಲ್ಲಿ
ತಮ್ಮ ಅಂತಾರಾಷ್ಟ್ರೀಯ ವರ್ಚಸ್ಸು ಕಡಿಮೆಯಾಗುತ್ತಿದೆ ಎನ್ನುವುದು ಅರಿವಾಗುತ್ತಿದ್ದಂತೆಯೇ ಅವರು ಮಿಲಿಟರಿ
ಪಾರಮ್ಯವನ್ನು ವಿರೋಧಿಸಲಾರಂಭಿಸಿದರು ಎನ್ನಲಾಗುತ್ತದೆ. ಈ ಸಂಗತಿಯೇ ಸೂಕಿಯ ಮೇಲೆ ಮಿಲಿಟರಿಗೆ ಮತ್ತೆ ಆಕ್ರೋಶ
ಮಡುಗಟ್ಟಲು ಕಾರಣ ಎನ್ನುತ್ತಾರೆ ಪರಿಣತರು.
2020ರ ಚುನಾವಣೆ ಸೇನೆಗೆ ತಂದಿದ್ದ ಅಚ್ಚರಿ
2020ರ ನವೆಂಬರ್ ತಿಂಗಳಲ್ಲಿ ಮ್ಯಾನ್ಮಾರ್‌ನಲ್ಲಿ ಮತ್ತೆ ಅಧ್ಯಕ್ಷೀಯ ಚುನಾವಣೆಗಳು ಬರಲಿದ್ದವು. ಅಷ್ಟರಲ್ಲಾಗಲೇ ಕೋವಿಡ್‌ನಿಂದಾಗಿ ಆ ದೇಶದ ಆರ್ಥಿಕ ಆರೋಗ್ಯವೂ ಹಳ್ಳ ಹಿಡಿದಿತ್ತು. ಹೀಗಾಗಿ ಚುನಾವಣೆ ನಡೆದರೆ ಸೂಕಿ ಸೋಲುವುದು ಖಚಿತ ಎಂಬ ವಿಶ್ವಾಸದಲ್ಲಿತ್ತು ಸೇನೆ. ಆದರೆ ಅಚ್ಚರಿಯೆಂಬಂತೆ ಕಳೆದ ವರ್ಷದ ಚುನಾವಣೆಯಲ್ಲೂ ಸೂಕಿ ನೇತೃತ್ವದ ನ್ಯಾಶನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ), ಮಿಲಿಟರಿ ಸ್ಥಾಪಿತ ಯುಎಸ್‌ಡಿಪಿ ವಿರುದ್ಧ ಮತ್ತೂಮ್ಮೆ ಅಮೋಘ ಜಯ ಪಡೆದುಬಿಟ್ಟಿತು. ಈ ಗೆಲುವು ಸೂಕಿ ಅವರ ಧ್ವನಿಯನ್ನು ಹೆಚ್ಚಿಸಿರುವುದು ಸುಳ್ಳಲ್ಲ. ಹೀಗಾಗಿ ಏನಕೇನ ಅವರನ್ನು ಅಧಿಕಾರದಿಂದ ದೂರವಿಟ್ಟರೇ ತಮಗೆ ಉಳಿಗಾಲ ಎಂದು ಭಾವಿಸಿರುವ ಸೇನೆ, 2020ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಪಕ್ಷ ವ್ಯಾಪಕ ಅಕ್ರಮ ಎಸಗಿದೆ ಎಂದು ಆರೋಪಿಸಿ, ಈಗ ಸೂಕಿ ಮತ್ತವರ ಪಕ್ಷದ ಪ್ರಮುಖ ನಾಯಕರನ್ನು ಬಂಧಿಸಿ, ಸೇನಾಡಳಿತ ಜಾರಿ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.