ದ್ವೀಪರಾಷ್ಟ್ರ ಲಂಕಾದಲ್ಲಿ ಬದುಕೋದಾದ್ರು ಹೇಗೆ…1 ಕೆಜಿ ಹಾಲುಪುಡಿ ಬೆಲೆ 1,900 ರೂಪಾಯಿ!
ರಾಜಕಾರಣಿಗಳು ಮತ್ತು ಅವರ ಆಪ್ತರು ವಾಸಿಸುವ ಪ್ರದೇಶಗಳಲ್ಲಿ ಪವರ್ ಕಟ್ ಪರಿಣಾಮ ಬೀರಿಲ್ಲ
Team Udayavani, Apr 5, 2022, 11:21 AM IST
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ದ್ವೀಪರಾಷ್ಟ್ರವಾದ ಲಂಕಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬೆನ್ನಲ್ಲೇ ಜನಾಕ್ರೋಶ ತೀವ್ರ ಸ್ವರೂಪ ಪಡೆದುಕೊಂಡಿದೆ. ಸೂಕ್ತ ನಿರ್ಧಾರ ತೆಗೆದುಕೊಂಡು ಬಿಕ್ಕಟ್ಟನ್ನು ಬಗೆಹರಿಸುವಂತೆ ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ಹೇರುತ್ತಿರುವುದಾಗಿ ವರದಿ ತಿಳಿಸಿದೆ. ಮತ್ತೊಂದೆಡೆ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನರು ಪರದಾಡುವಂತಾಗಿದೆ ಎಂದು ವರದಿ ವಿವರಿಸಿದೆ.
ಗಗನಕ್ಕೇರಿದ ಬೆಲೆ:
ಶ್ರೀಲಂಕಾದಲ್ಲಿ ಒಂದು ಕೆಜಿ ಅಕ್ಕಿ ಬೆಲೆ 220 ರೂಪಾಯಿ, ಒಂದು ಕೆಜಿ ಗೋಧಿ ಬೆಲೆ 190 ರೂಪಾಯಿ. ಅದೇ ರೀತಿ ಸಕ್ಕರೆ ಮತ್ತು ತೆಂಗಿನ ಎಣ್ಣೆ ಬೆಲೆ ಜನ ಸಾಮಾನ್ಯರನ್ನು ಕಂಗೆಡಿಸಿದೆ. ಒಂದು ಕೆಜಿ ಸಕ್ಕರೆ ಬೆಲೆ 240 ರೂಪಾಯಿ, ಒಂದು ಲೀಟರ್ ತೆಂಗಿನ ಎಣ್ಣ ಬೆಲೆ 850 ರೂಪಾಯಿ. ಒಂದು ಕೆಜಿ ಹಾಲು ಪುಡಿಯನ್ನು 1,900 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
24 ಗಂಟೆಯಲ್ಲಿ 12 ಗಂಟೆ ಪವರ್ ಕಟ್:
ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿರುವ ಶ್ರೀಲಂಕಾದಲ್ಲಿ ಪ್ರತಿದಿನ 12 ಗಂಟೆಗಳ ಕಾಲ ಪವರ್ ಕಟ್ ಮಾಡಲಾಗುತ್ತಿದೆ. ಕೆಲವೆಡೆ ಕೇವಲ ಮೂರ್ನಾಲ್ಕು ಗಂಟೆ ವಿದ್ಯುತ್ ಲಭ್ಯವಿರುವುದಾಗಿ ವರದಿ ಹೇಳಿದೆ. ಆದರೆ ಕೊಲಂಬೋದಲ್ಲಿ ರಾಜಕಾರಣಿಗಳು ಮತ್ತು ಅವರ ಆಪ್ತರು ವಾಸಿಸುವ ಪ್ರದೇಶಗಳಲ್ಲಿ ಪವರ್ ಕಟ್ ಪರಿಣಾಮ ಬೀರಿಲ್ಲ ಎಂದು ವರದಿ ವಿವರಿಸಿದೆ.
ಆಹಾರ ಲಭ್ಯವಿದೆ…ಆದರೆ ಬೆಲೆ ಗಗನಕ್ಕೇರಿದೆ!
ದ್ವೀಪ ರಾಷ್ಟ್ರವಾದ ಲಂಕಾದಲ್ಲಿ ಆಹಾರ ಕೊರತೆ ದೊಡ್ಡ ಪ್ರಮಾಣದಲ್ಲಿ ಇಲ್ಲದಿದ್ದರೂ ಕೂಡಾ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಕೆಲವೇ ಕೆಲವು ಜನರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ಆಹಾರ ಸರಬರಾಜಾಗುತ್ತಿದೆ.ಪೆಟ್ರೋಲ್, ಡೀಸೆಲ್ ಖರೀದಿಗೆ ಕಿಲೋ ಮೀಟರ್ ದೂರದವರೆಗೆ ಜನರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ. ಗ್ಯಾಸ್ ಕೊರತೆಯೂ ಇದ್ದು, ಇದಕ್ಕೆಲ್ಲಾ ಯಾವಾಗ ಪರಿಹಾರ ದೊರೆಯಲಿದೆ ಎಂಬುದಕ್ಕೆ ಸ್ಪಷ್ಟ ಉತ್ತರವಿಲ್ಲ ಎಂದು ಜನರು ಆರೋಪಿಸಿದ್ದಾರೆ.
2012ರಿಂದ ಸರ್ಕಾರ ಸಂಪೂರ್ಣವಾಗಿ ಆಡಳಿತ ವೈಫಲ್ಯ ಕಾಣತೊಡಗಿದೆ. ಕಡಿಮೆ ಉಪಯುಕ್ತದ, ಹೆಚ್ಚು ಲಾಭದಾಯಕದ ನಿರ್ಮಾಣ ಕಾರ್ಯದಿಂದಾಗಿ ರಾಷ್ಟ್ರದ ಸ್ಥಿತಿ ನರಕ ಸದೃಶವಾಗಲು ಆರಂಭವಾಗಿತ್ತು. ಅಧಿಕ ಭ್ರಷ್ಟಾಚಾರ, ಅತೀ ಹೆಚ್ಚು ಬಡ್ಡಿದರದ ಸಾಲದಿಂದಾಗಿ ದ್ವೀಪ ರಾಷ್ಟ್ರ ದಿವಾಳಿ ಅಂಚಿಗೆ ಬಂದು ನಿಲ್ಲುವಂತಾಗಿದೆ ಎಂದು ಲಂಕಾದ ನಾಗರಿಕರು ದೂರಿರುವುದಾಗಿ ವರದಿ ವಿವರಿಸಿದೆ.
ಏಕತೆಯ ಸರ್ಕಾರಕ್ಕೆ ಆಹ್ವಾನ ಕೊಟ್ಟ ಗೋಟಬಯ
ಬಹುತೇಕ ಸಚಿವರ ರಾಜೀನಾಮೆ ನೀಡಿದ್ದಾಗ್ಯೂ, ಅಧಿಕಾರ ತ್ಯಜಿಸಲು ಮೀನಾಮೇಷ ಎಣಿಸುತ್ತಿರುವ ಅಧ್ಯಕ್ಷ ಗೋಟಬಯ ರಾಜ ಪಕ್ಸ, ಸೋಮವಾರ ವಿಪಕ್ಷಗಳ ಮೂಗಿಗೆ ಏಕತೆಯ ಸರ್ಕಾರದ ಬೆಣ್ಣೆ ಸವರಿದ್ದಾರೆ. “ದೇಶದ ಆರ್ಥಿಕತೆ ವಿಷಮ ಸ್ಥಿತಿ ತಲುಪಿರುವ ಈ ಹೊತ್ತಿನಲ್ಲಿ ಎಲ್ಲರೂ ಕೈಜೋಡಿಸಿ, ಸರ್ವ ಪಕ್ಷಗಳನ್ನೊಳಗೊಂಡ ಏಕತೆಯ ಸರಕಾರ ರಚಿಸೋಣ. ಲಂಕಾದ ಬಿಕ್ಕಟ್ಟಿಗೆ ಪರಿಹಾರ ಹುಡುಕೋಣ’ ಎಂದು ಕರೆಕೊಟ್ಟಿದ್ದಾರೆ. ಆದರೆ, ಅವರ ಕರೆಯನ್ನು ವಿಪಕ್ಷಗಳು ತಿರಸ್ಕರಿಸಿವೆ.
ಏತನ್ಮಧ್ಯೆ, ದೇಶದ ಸ್ಥಿತಿ ಸಹಜ ಸ್ಥಿತಿಗೆ ಮರಳು ವವರೆಗೆ ನಾಲ್ವರು ಸಚಿವರನ್ನೊಳಗೊಂಡ ಸಂಪುಟವನ್ನು ಕಾಯ್ದುಕೊಳ್ಳಲು ರಾಜಪಕ್ಸ ಸರ್ಕಾರ ತೀರ್ಮಾನಿಸಿದೆ. ಬಾಸಿಲ್ ರಾಜಪಕ್ಸ ರಾಜೀನಾಮೆ ಬಳಿಕ ತೆರವಾದ ಸ್ಥಾನಕ್ಕೆ ನೂತನ ವಿತ್ತಮಂತ್ರಿಯಾಗಿ ಅಲಿ ಸಾಬ್ರಿ ಅವರನ್ನು ನೇಮಿಸಲಾಗಿದೆ. ವಿಪಕ್ಷಗಳೊಂದಿಗೆ ಚರ್ಚಿಸಿ, ಇನ್ನಷ್ಟು ಸಚಿವ ಹುದ್ದೆಗಳನ್ನು ಭರ್ತಿಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಇತ್ತ ಲಂಕಾದ ಷೇರು ಮಾರುಕಟ್ಟೆ ಪಾತಾಳ ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.