Karnataka: ಅಕ್ಕಿ ಬದಲಿಗೆ ಹಣ- ಇಂದಿನಿಂದ ಚಾಲನೆ
ಆಯಾ ಜಿಲ್ಲಾ ಹಂತದಲ್ಲೇ ನಗದು ವರ್ಗಾವಣೆ- ತಿಂಗಳಿಗೆ ಸುಮಾರು 6,50-680 ಕೋಟಿ ರೂ.
Team Udayavani, Jul 10, 2023, 7:25 AM IST
ಬೆಂಗಳೂರು: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಕೇವಲ ಎರಡು ತಿಂಗಳ ಅಂತರದಲ್ಲಿ ಎರಡನೇ ಗ್ಯಾರಂಟಿ “ಅನ್ನಭಾಗ್ಯ’ದಡಿ ಈಗಾಗಲೇ ಘೋಷಿಸಿದಂತೆ ಅಕ್ಕಿ ಬದಲಿಗೆ ಫಲಾನುಭವಿಗಳಿಗೆ ನಗದು ವರ್ಗಾವಣೆ ಮಾಡುವ ಕಾರ್ಯಕ್ರಮಕ್ಕೆ ಸೋಮವಾರ ಅಧಿಕೃತ ಚಾಲನೆ ದೊರೆಯಲಿದೆ.
ವಿಧಾನಸೌಧದ ಸಮ್ಮೇಳನದಲ್ಲಿ ಸಭಾಂಗಣದಲ್ಲಿ ಸಂಜೆ 5ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂಕೇತಿಕವಾಗಿ ಫಲಾನುಭವಿಗಳ ಖಾತೆಗೆ ನಗದು ವರ್ಗಾವಣೆ ಮಾಡುವ ಮೂಲಕ ಈ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಹಾರ, ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಮತ್ತಿತರರು ಈ ಕ್ಷಣಗಳಿಗೆ ಸಾಕ್ಷಿಯಾಗಲಿದ್ದಾರೆ.
ಕೇಂದ್ರ ಸರ್ಕಾರವು ಪ್ರಸ್ತುತ ನೀಡುವ 5 ಕೆಜಿ ಜತೆಗೆ ರಾಜ್ಯ ಸರ್ಕಾರ ಕೂಡ ತಲಾ 5 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿತ್ತು. ಇದಕ್ಕಾಗಿ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯ ಅವಶ್ಯಕತೆ ಇದೆ. ಆದರೆ, ಹೆಚ್ಚುವರಿ ಅಕ್ಕಿ ಪೂರೈಕೆಗೆ ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ನೆರೆ ರಾಜ್ಯಗಳಿಂದ ಖರೀದಿಸಲು ಸರ್ಕಾರ ಪ್ರಯತ್ನಿಸಿತು. ಇದು ಫಲಿಸದಿದ್ದಾಗ, ಅನಿವಾರ್ಯವಾಗಿ ಅಕ್ಕಿಯ ಬದಲಿಗೆ ಅಷ್ಟೇ ಹಣವನ್ನು ಫಲಾನುಭವಿಗಳಿಗೆ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಚೆಗೆ ಘೋಷಿಸಿದ್ದರು. ಆ ಪ್ರಕ್ರಿಯೆಗೆ ಈಗ ಚಾಲನೆ ದೊರೆಯುತ್ತಿದೆ.
ಯೋಜನೆ ವ್ಯಾಪ್ತಿಗೆ 4 ಕೋಟಿ ಮಂದಿ:
ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 1.28 ಕೋಟಿ ವಿವಿಧ ಪ್ರಕಾರದ ಪಡಿತರಚೀಟಿ ಹೊಂದಿರುವ ಕುಟುಂಬಗಳಿದ್ದು, 4.41 ಕೋಟಿ ಸದಸ್ಯರಿದ್ದಾರೆ. ಈ ಪೈಕಿ ಅಂತ್ಯೋದಯದಲ್ಲಿ 1.08 ಲಕ್ಷ ಕಾರ್ಡ್‌ದಾರರಿದ್ದು, 44.77 ಲಕ್ಷ ಸದಸ್ಯರಿದ್ದಾರೆ. ಅದೇ ರೀತಿ, ಆದ್ಯತಾ ಕುಟುಂಬ (ಬಿಪಿಎಲ್)ಗಳು 1.17 ಕೋಟಿ ಇದ್ದು, ಅದರಲ್ಲಿ 3.97 ಕೋಟಿ ಸದಸ್ಯರಿದ್ದಾರೆ. ಇವೆರಡೂ ವರ್ಗಗಳಲ್ಲಿ ಬರುವ ಪ್ರತಿ ವ್ಯಕ್ತಿಗೆ ಹೆಚ್ಚುವರಿ ಐದು ಕೆಜಿ ಅಕ್ಕಿ ಬದಲಿಗೆ ಕೆಜಿಗೆ 34 ರೂ.ಗಳಂತೆ 5 ಕೆಜಿಗೆ ಲೆಕ್ಕಹಾಕಿ 170 ರೂ. ನಗದು ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಅದರಂತೆ ಅಂದಾಜು 4 ಕೋಟಿ ಸದಸ್ಯರು ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. 1.06 ಕೋಟಿ ಸದಸ್ಯರು ಈಗಾಗಲೇ ಸಕ್ರಿಯ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಮಾಸಿಕ ಸರಿಸುಮಾರು 650ರಿಂದ 680 ಕೋಟಿ ರೂ. ಆಗುತ್ತದೆ. ಹೆಚ್ಚುವರಿ ಅಕ್ಕಿ ಹೊಂದಾಣಿಕೆ ಆಗುವವರೆಗೂ ಈ ಮೊತ್ತವನ್ನು ಸರ್ಕಾರ ಪ್ರತಿ ತಿಂಗಳು ಆಯಾ ಕುಟುಂಬಗಳ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಿದೆ.
ಒಟ್ಟಾರೆ 1,28,16,253 ಪಡಿತರ ಚೀಟಿಗಳ ಪೈಕಿ ಈಗಾಗಲೇ 1,28,13,048 ಪಡಿತರ ಚೀಟಿಯಲ್ಲಿನ ಕಾರ್ಡ್‌ದಾರರ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಹೊಂದಾಣಿಕೆ ಮಾಡಲಾಗಿದ್ದು, ಉಳಿದ 3,106 ಸದಸ್ಯರ ಆಧಾರ್ ಸಂಖ್ಯೆ ಮತ್ತು ಪಡಿತರಚೀಟಿ ಹೊಂದಾಣಿಕೆ ಬಾಕಿ ಇದೆ ಎಂದು ಇಲಾಖೆ ತಿಳಿಸಿದೆ.
ಇನ್ನು ಪ್ರತಿ ತಿಂಗಳು ನಗದು ವರ್ಗಾವಣೆ ಪ್ರಕ್ರಿಯೆ ಜಿಲ್ಲಾ ಹಂತಗಳಲ್ಲೇ ಕೈಗೊಳ್ಳಲಾಗಿದೆ. ನಗದು ವರ್ಗಾವಣೆಗೆ ಅರ್ಹರಿರುವ ಪಡಿತರ ಚೀಟಿಗಳು ಮತ್ತು ಸದಸ್ಯರ ಪಟ್ಟಿಯನ್ನು ಎನ್‌ಐಸಿ ಸಂಸ್ಥೆಯು ಆಹಾರ ತಂತ್ರಾಂಶದಲ್ಲಿ ಸಿದ್ಧಪಡಿಸಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಗಳ ಬಗ್ಗೆ ಪರಿಶೀಲಿಸಲು ಇಲಾಖೆಯ ಡಿಬಿಟಿ (ನೇರ ನಗದು ವರ್ಗಾವಣೆ) ಕೋಶಕ್ಕೆ ವರ್ಗಾಯಿಸುತ್ತದೆ.
ನಂತರ ಕೋಶವು ಅದನ್ನು ಪರಿಶೀಲಿಸಿ ಪುನಃ ಎನ್‌ಐಸಿಗೆ ವರ್ಗಾಯಿಸುತ್ತದೆ. ಈ ಎಲ್ಲ ಪ್ರಕ್ರಿಯೆ ಮುಗಿದ ನಂತರ ಡಿಡಿಒಗಳ ಮೂಲಕ ಅನುಮೋದನೆಗೊಂಡು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ.
ನಗದು ವರ್ಗಾವಣೆಗೊಂಡಿರುವ ಬಗ್ಗೆ ಪ್ರತಿ ಫಲಾನುಭವಿಗೆ ಮೊಬೈಲ್ ಎಸ್‌ಎಂಎಸ್ ಮತ್ತು ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ತಲುಪಿಸಲಾಗುತ್ತದೆ. ಅಷ್ಟೇ ಅಲ್ಲ, ನಗದು ವರ್ಗಾವಣೆ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಲು ಅನುಕೂಲ ಆಗುವಂತೆ ವಾಟ್ಸ್‌ಆ್ಯಪ್ ಚಾಟ್‌ಬೋಟ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.