ಆಸ್ಟ್ರೇಲಿಯನ್ ಓಪನ್ ಫೈನಲ್ : ಜಪಾನಿನ ಒಸಾಕಾ ಮೆಲ್ಬರ್ನ್ ರಾಣಿ
Team Udayavani, Feb 20, 2021, 11:36 PM IST
ಮೆಲ್ಬರ್ನ್: ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಏರಿದರೆ ತನ್ನನ್ನು ತಡೆಯುವವರಿಲ್ಲ ಎಂಬುದನ್ನು ಜಪಾನಿನ ಟೆನಿಸ್ ತಾರೆ ನವೋಮಿ ಒಸಾಕಾ 4ನೇ ಸಲ ಸಾಬೀತುಪಡಿಸಿದರು. ಶನಿವಾರ ನಡೆದ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಅವರು ಅಮೆರಿಕದ ನವತಾರೆ ಜೆನ್ನಿಫರ್ ಬ್ರಾಡಿ ವಿರುದ್ಧ 6-4, 6-3 ಅಂತರದ ಗೆಲುವು ಸಾಧಿಸಿ 2ನೇ ಸಲ “ಮೆಲ್ಬರ್ನ್ ಕ್ವೀನ್’ ಕಿರೀಟ ಏರಿಸಿಕೊಂಡರು.
ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಕಾಣುತ್ತಿರುವ ಜೆನ್ನಿಫರ್ ಬ್ರಾಡಿ ವಿರುದ್ಧ ಒಸಾಕಾ ಅವರೇ ನೆಚ್ಚಿನ ಆಟಗಾರ್ತಿಯಾಗಿದ್ದರು. ಸೆಮಿಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲುಣಿಸಿದ ಬಳಿಕ ಅವರು ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸಿದ್ದರು. ಬಲಿಷ್ಠ ಹಾಗೂ ಆಕ್ರಮಣಕಾರಿ ಸರ್ವ್ ಮೂಲಕ ಜಪಾನಿ ಆಟಗಾರ್ತಿ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸುತ್ತಲೇ ಹೋದರು.
ಎರಡನೇ ಆಸೀಸ್ ಪ್ರಶಸ್ತಿ
ಇದು ಒಸಾಕಾ ಪಾಲಾದ ಎರಡನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ. 2019ರಲ್ಲಿ ಅವರು ಪೆಟ್ರಾ ಕ್ವಿಟೋವಾ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ ಗೆದ್ದು ಬಂದಿದ್ದರು. ಹಾಗೆಯೇ 2018 ಮತ್ತು ಕಳೆದ ವರ್ಷದ ಯುಎಸ್ ಓಪನ್ ಪ್ರಶಸ್ತಿ ಕೂಡ ಒಸಾಕಾ ಪಾಲಾಗಿದೆ. ಇದರೊಂದಿಗೆ ಮೊದಲ 4 ಗ್ರ್ಯಾನ್‌ಸ್ಲಾಮ್ ಫೈನಲ್‌ಗಳಲ್ಲಿ ಅಜೇಯವಾಗಿ ಉಳಿದ ಮೋನಿಕಾ ಸೆಲೆಸ್ ಅವರ 30 ವರ್ಷಗಳ ಹಿಂದಿನ ದಾಖಲೆಯನ್ನು ಒಸಾಕಾ ಸರಿದೂಗಿಸಿದರು.
2020ರ “ಎಪಿ ವರ್ಷದ ವನಿತಾ ಆ್ಯತ್ಲೀಟ್’ ಪ್ರಶಸ್ತಿಗೆ ಭಾಜನರಾಗಿರುವ ನವೋಮಿ ಒಸಾಕಾ ತಮ್ಮ ಸತತ ಗೆಲುವಿನ ಓಟವನ್ನು 21 ಪಂದ್ಯಗಳಿಗೆ ವಿಸ್ತರಿಸಿದ್ದಾರೆ.
ಇನ್ನೊಂದೆಡೆ ಜೆನ್ನಿಫರ್ ಬ್ರಾಡಿ ಆಸ್ಟ್ರೇಲಿಯಕ್ಕೆ ಆಗಮಿಸಿದ ಬಳಿಕ 15 ದಿನಗಳ ಕಠಿನ ಕ್ವಾರಂಟೈನ್ ಒತ್ತಡವನ್ನೆಲ್ಲ ಮೆಟ್ಟಿ ನಿಂತು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್‌ಗೆ ಲಗ್ಗೆ ಇರಿಸಿದ್ದೊಂದು ಅಸಾಮಾನ್ಯ ಸಾಧನೆಯೇ ಆಗಿದೆ.
ಜೊಕೋ ಓಟಕ್ಕೆ ಬ್ರೇಕ್ ಸಾಧ್ಯವೇ?
ಮೆಲ್ಬರ್ನ್: ಸರ್ಬಿಯಾದ ನೊವಾಕ್ ಜೊಕೋವಿಕ್, ರಶ್ಯದ ಡ್ಯಾನಿಲ್ ಮೆಡ್ವೆಡೇವ್ “ಮೆಲ್ಬರ್ನ್ ಪಾರ್ಕ್’ನಲ್ಲಿ ಉಳಿದಿರುವ ಕೊನೆಯ ಇಬ್ಬರು ಆಟಗಾರರಾಗಿದದ್ದು, ರವಿವಾರದ ಪ್ರತಿಷ್ಠಿತ ಫೈನಲ್‌ಗಾಗಿ ಕಾದು ನಿಂತಿದ್ದಾರೆ. ದಾಖಲೆ, ಅನುಭವ, ಇತಿಹಾಸ, ಸಾಮರ್ಥ್ಯವನ್ನೆಲ್ಲ ಮೇಲ್ನೋಟದಲ್ಲೇ ಗಮನಿಸಿ ಹೇಳುವುದಾದರೆ ಜೊಕೋವಿಕ್ 9ನೇ ಆಸ್ಟ್ರೇಲಿಯನ್ ಓಪನ್ ಟ್ರೋಫಿ ಜತೆಗೆ 18ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಮೇಲೆ ಹಕ್ಕು ಚಲಾಯಿಸುವುದು ಬಹುತೇಕ ಖಚಿತ.
ಕಳೆದೆರಡು ಬಾರಿಯ ಚಾಂಪಿಯನ್ ಜೊಕೋವಿಕ್ ಅವರಿಗೆ ಇದು 9ನೇ ಆಸ್ಟ್ರೇಲಿಯನ್ ಓಪನ್ ಫೈನಲ್. ಹಿಂದಿನ ಎಂಟೂ ಸಲ ಅವರು ಪ್ರಶಸ್ತಿಯನ್ನೆತ್ತಿ “ಮೆಲ್ಬರ್ನ್ ಪಾರ್ಕ್’ನಲ್ಲಿ ಪ್ರಭುತ್ವ ಸ್ಥಾಪಿಸಿದ್ದಾರೆ. ಅರ್ಥಾತ್, ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ಜೊಕೋಗೆ ಸೋಲಿಲ್ಲ! ಕೇವಲ 2ನೇ ಗ್ರ್ಯಾನ್‌ಸ್ಲಾಮ್ ಫೈನಲ್ ಕಾಣುತ್ತಿರುವ, ಇನ್ನೂ ಗ್ರ್ಯಾನ್‌ಸ್ಲಾಮ್ ಚಾಂಪಿಯನ್ ಆಗದ ಮೆಡ್ವೆಡೇವ್ ಹೊಸ ಇತಿಹಾಸ ನಿರ್ಮಿಸಬಲ್ಲರೇ? ಕುತೂಹಲ ಸಹಜ.
ಮುಖಾಮುಖೀ
ಜೊಕೋವಿಕ್-ಮೆಡ್ವೆಡೇವ್ ಈ ವರೆಗೆ 7 ಸಲ ಮುಖಾಮುಖೀಯಾಗಿದ್ದಾರೆ. ಜೊಕೋಗೆ 4 ಗೆಲುವು ಒಲಿದಿದೆ. ಆದರೆ ಇವರೆದುರು ಆಡಿದ ಕಳೆದ 4 ಪಂದ್ಯಗಳಲ್ಲಿ ಮೆಡ್ವೆಡೇವ್ ಮೂರರಲ್ಲಿ ಮೇಲುಗೈ ಸಾಧಿಸಿದ್ದಾರೆ. 2019ರ ಮಾಂಟೆಕಾರ್ಲೊ, ಸಿನ್ಸಿನಾಟಿ ಹಾಗೂ ಕಳೆದ ವರ್ಷದ ಎಟಿಪಿ ಫೈನಲ್ಸ್‌ನಲ್ಲಿ ರಶ್ಯನ್ ಟೆನಿಸಿಗನಿಗೆ ಗೆಲುವು ಕೈ ಹಿಡಿದಿದೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ ಇವರು ಒಮ್ಮೆಯಷ್ಟೇ ಎದುರಾಗಿದ್ದು, ಇಲ್ಲಿ ಜೊಕೋವಿಕ್ ಜಯ ಸಾಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.