ನೆಹರೂನಗರ ರೈಲ್ವೇ ಮೇಲು ಸೇತುವೆ ಅಗಲ ಕಿರಿದು: ತಪ್ಪದ ಕಿರಿ ಕಿರಿ
Team Udayavani, Mar 9, 2021, 4:20 AM IST
ಪುತ್ತೂರು: ದಿನಂಪ್ರತಿ ಸಾವಿರಾರು ಮಂದಿ ಸಂಚರಿಸುವ ವಿವೇಕಾನಂದ ಕಾಲೇಜು ಸೇರಿದಂತೆ ಹಲವು ಪ್ರದೇಶಗಳಿಗೆ ದಾರಿ ಕಲ್ಪಿಸುವ ನೆಹರೂನಗರ ಸಂಪರ್ಕ ರಸ್ತೆಯಲ್ಲಿನ ರೈಲ್ವೇ ಮೇಲು ಸೇತುವೆ ವಿಸ್ತರಣೆ ಅಥವಾ ಹೊಸ ಸೇತುವೆ ನಿರ್ಮಾಣದ ಬೇಡಿಕೆ ಈಡೇರುವ ಲಕ್ಷಣ ಸದ್ಯಕ್ಕೆ ಕಾಣಿಸುತ್ತಿಲ್ಲ.
ಇಲ್ಲಿ ರಸ್ತೆಗಿಂತ ಸೇತುವೆ ಕಿರಿದಾಗಿದ್ದು, ವಾಹನ ಸಂಚಾರ ದುಸ್ತರ. ಆದ್ದರಿಂದ ಹೊಸ ಸೇತುವೆ ಅಥವಾ ವಿಸ್ತರಣೆಗೆ ಬೇಡಿಕೆ ಹಿಂದೆಯೇ ಇಡಲಾಗಿತ್ತು. ಆದರೆ ರಾಜ್ಯ ಸರಕಾರದ ಅನುದಾನ ಸಿಗದೆ, ರೈಲ್ವೇ ಇಲಾಖೆ ಮುಂದಡಿ ಇಡುತ್ತಿಲ್ಲ. ಹೀಗಾಗಿ ದಶಕಗಳ ಬೇಡಿಕೆಗೆ ಆಡಳಿತ ವ್ಯವಸ್ಥೆ ಸ್ಪಂದಿಸದೆ ನಿರ್ಲಕ್ಷ್ಯ ತೋರಿದೆ.
ಸಂಪರ್ಕ ಸೇತುವೆ
ನೆಹರೂ ನಗರದಿಂದ ವಿವೇಕಾನಂದ ಕ್ಯಾಂಪಸ್ ಸಂಪರ್ಕದ ಈ ರಸ್ತೆ ಕೇವಲ ವಿದ್ಯಾಸಂಸ್ಥೆಗಷ್ಟೇ ಸೀಮಿತವಾಗದೆ ನೆಹರೂನಗರದಿಂದ ಬನ್ನೂರು, ಪಡ್ಡಾಯೂರು, ಪಡೀಲು ಮೊದಲಾದ ಪ್ರದೇಶಗಳನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆಯಾಗಿದೆ. ಮಂಗಳೂರು ಭಾಗದಿಂದ ಉಪ್ಪಿನಂಗಡಿಗೆ ಹೋಗುವವರೂ ಇದೇ ರಸ್ತೆಯನ್ನು ಬಳಸುತ್ತಾರೆ.
ವಿದ್ಯಾರ್ಥಿಗಳು, ವಿದ್ಯಾಸಂಸ್ಥೆಯ ಉದ್ಯೋಗಿ ಗಳು, ಮಾತ್ರವಲ್ಲದೆ ಸಾರ್ವಜನಿಕರ ಅಸಂಖ್ಯ ವಾಹನಗಳೂ ಸಂಚರಿಸುತ್ತಲೇ ಇರುತ್ತವೆ. ಈ ಹಿನ್ನೆಲೆಯಲ್ಲಿ ಹೊಸ ಸೇತುವೆ ಬೇಡಿಕೆ ಮಹತ್ವದಾಗಿದೆ.
ಅಗಲ ಕಿರಿದು
ರಸ್ತೆಯಲ್ಲಿನ ರೈಲ್ವೇ ಮೇಲ್ಸೇತುವೆಯ ಅಗಲ ಮಾತ್ರ ಕೇವಲ 12 ಅಡಿ. 70 ಅಡಿ ಉದ್ದದ ಈ ಮೇಲ್ಸೇತುವೆಯ ಅಗಲ ರಸ್ತೆಯ ಅರ್ಧಕ್ಕಿಂತಲೂ ಕಡಿಮೆಯಿದೆ. ಮೇಲ್ಸೇತುವೆ ಕಿರಿದಾಗಿರುವುದರಿಂದ ಅನೇಕ ಸಂದರ್ಭಗಳಲ್ಲಿ ರಸ್ತೆ ಬ್ಲಾಕ್ ಆಗುತ್ತದೆ. ಮಳೆಗಾಲದಲ್ಲಂತೂ ಮಳೆ ನೀರು ತುಂಬಿ ಮೇಲ್ಸೇತುವೆಯ ರಸ್ತೆಯೇ ಮುಚ್ಚಿರುತ್ತದೆ. ಹಾಗಾಗಿ ಮೇಲ್ಸೇತುವೆ ಅಗಲಗೊಳಿಸುವಂತೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಅನುದಾನ ಅಡ್ಡಿ
ಕಾಲೇಜಿಗೆ ಸಂಪರ್ಕ ಒದಗಿಸುವ ಕಾರಣ ವಿದ್ಯಾಸಂಸ್ಥೆಯೇ ಅನುದಾನ ಭರಿಸಬೇಕು ಅಥವಾ ಸರಕಾರ ನೀಡಬೇಕು ಎನ್ನುತ್ತದೆ ರೈಲ್ವೇ ಇಲಾಖೆ. ಈ ರಸ್ತೆ ವಿದ್ಯಾಸಂಸ್ಥೆಗೆ ಮಾತ್ರ ಸಂಪರ್ಕ ಹೊಂದಿಲ್ಲ, ಬೇರೆ ಪ್ರದೇಶಗಳಿಗೆ ಇದೇ ದಾರಿ ಬಳಕೆ ಆಗುತ್ತಿರುವ ಕಾರಣ ವಿದ್ಯಾಸಂಸ್ಥೆ ವತಿಯಿಂದಲೇ ಅನುದಾನ ಒದಗಿಸಬೇಕು ಎಂಬ ವಾದ ಸರಿಯಲ್ಲ ಎಂಬ ಅಭಿಪ್ರಾಯವು ಇದೆ. ಸಾರ್ವಜನಿಕ ಸಂಪರ್ಕ ದಾರಿ ಆಗಿರುವ ಕಾರಣ ಕೇಂದ್ರ ಮತ್ತು ರಾಜ್ಯ ಸರಕಾರ ಅನುದಾನ ನೀಡಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಅಗತ್ಯ ಅನುದಾನ ದೊರೆತಲ್ಲಿ ಮಾತ್ರ ರೈಲ್ವೇ ಇಲಾಖೆ ಹೊಸ ಸೇತುವೆ ನಿರ್ಮಾಣಕ್ಕೆ ಮುಂದಡಿಯಿಡಲಿದೆ.
ಘಟಾನುಘಟಿಗಳಿದ್ದರೂ ಸಾಧ್ಯವಾಗಿಲ್ಲ
ಪುತ್ತೂರಿನ ಕ್ಷೇತ್ರಕ್ಕೆ ಸಂಬಂಧಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಸೇರಿದಂತೆ ಘಟಾನುಘಟಿ ರಾಜಕಾರಣಿಗಳು, ಉನ್ನತ ಹಂತದ ಅಧಿಕಾರಿಗಳು ಇದ್ದರೂ ಈ ಬೇಡಿಕೆ ಈಡೇರದಿರುವುದು ಅಚ್ಚರಿಯ ಸಂಗತಿ. ಜನಪ್ರತಿನಿಧಿಗಳು ಒತ್ತಡ ಹೇರುವ ಕಾರ್ಯದಲ್ಲಿ ಇಚ್ಛಾಶಕ್ತಿ ತೋರದಿರುವುದು ವಿಳಂಬಕ್ಕೆ ಇನ್ನೊಂದು ಕಾರಣವೆನಿಸಿದೆ ಎಂಬ ಮಾತುಗಳೂ ಕೇಳಿ ಬಂದಿವೆ.
ಟ್ವಿಟರ್ ಅಭಿಯಾನ ನಡೆದಿತ್ತು
ಕೇಂದ್ರ ಸರಕಾರ ಹಾಗೂ ರೈಲ್ವೇ ಇಲಾಖೆಯ ಗಮನ ಸೆಳೆಯುವ ದೃಷ್ಟಿಯಿಂದ ಎರಡು ವರ್ಷಗಳ ಹಿಂದೆ ವಿದ್ಯಾರ್ಥಿ ಸಂಘಟನೆಗಳು ಟ್ವಿಟ್ಟರ್ ಅಭಿಯಾನ ಕೂಡ ಹಮ್ಮಿಕೊಂಡಿತ್ತು. ಆದರೂ ಆಡಳಿತ ವ್ಯವಸ್ಥೆ ಗಮನ ಹರಿಸಿಲ್ಲ. ಮೇಲ್ಸೇತುವೆಗೆ ದೊಡ್ಡ ಪ್ರಮಾಣದ ಅನುದಾನ ಅಗತ್ಯ ಇರುವುದರಿಂದ ಇದರ ಬದಲಿಗೆ ನಡೆದು ಹೋಗಲು ಓವರ್ ಬ್ರಿಡ್ಜ್ ನಿರ್ಮಿಸಿದರೆ ಹೇಗೆ ಎಂಬ ಚಿಂತೆನೆ ನಡೆದಿತ್ತಾದರೂ ಆ ಪ್ರಸ್ತಾವನೆ ಕೂಡ ಈಗ ನನೆಗುದಿಗೆ ಬಿದ್ದಿದೆ.
ಅನುದಾನ ಬಂದಿಲ್ಲ
ನೆಹರೂನಗರ ರೈಲ್ವೇ ಮೇಲು ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿ ಈಗಾಗಲೇ ರೈಲ್ವೇ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ಬಂದಿಲ್ಲ.
-ಕೆ.ಪಿ.ನಾಯ್ಡು, ಸೆಕ್ಷನ್ ಎಂಜಿನಿಯರ್‌ರೈಲ್ವೇ, ಪುತ್ತೂರು
ಒತ್ತಡ ಹೇರಬೇಕು
ಬೇಡಿಕೆ ಈಡೇರಿಕೆ ಬಗ್ಗೆ ಈ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಮೂಲ ಸೌಕರ್ಯ ಇಲಾಖೆ ಮೂಲಕ ಅನುದಾನ ಒದಗಿಸಲು ಜನಪ್ರತಿನಿಧಿಗಳು ಒತ್ತಡ ಹೇರಬೇಕಿದೆ. ವಿದ್ಯಾಸಂಸ್ಥೆ ವತಿಯಿಂದಲೂ ಪತ್ರ ಮುಖೇನ ಮನವಿ ಸಲ್ಲಿಸಬೇಕು.
– ಸುದರ್ಶನ ಪುತ್ತೂರು, ರೈಲ್ವೇ ಬಳಕೆದಾರರ ಹೋರಾಟ ಸಮಿತಿ ಮುಖಂಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.