ಹಳೆ ಮೈಸೂರು ಗೆಲ್ಲುವುದಕ್ಕೆ ಹೊಸ ತಂತ್ರ ಮಾಡಿ: ಅಮಿತ್ ಶಾ ಖಡಕ್ ಸೂಚನೆ
Team Udayavani, Jan 2, 2023, 2:08 PM IST
ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಬಿಜೆಪಿಯ ಬೇರುಗಳನ್ನು ಬಲಗೊಳಿಸುವ ವಿಚಾರದಲ್ಲಿ ಬಿಜೆಪಿಯ ಲೆಕ್ಕಾಚಾರಗಳು ನಿರೀಕ್ಷಿತ ಫಲಕೊಡದೇ ಇರುವ ಹಿನ್ನೆಲೆಯಲ್ಲಿ ಕಾರ್ಯಯೋಜನೆಯಲ್ಲಿ ಬದಲಾವಣೆ ತರುವುದಕ್ಕೆ ನಿರ್ಧರಿಸಲಾಗಿದೆ.
ತಮ್ಮ ಪ್ರವಾಸ ಸಂದರ್ಭದಲ್ಲಿ ಈ ವಿಚಾರ ಮನಗಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಮುಖಂಡರ ಜತೆಗೆ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪರಿಷ್ಕೃತ ರಣತಂತ್ರವನ್ನು ತಾವೇ ಖುದ್ದಾಗಿ ಮಾನಿಟರ್ ಮಾಡಲು ಚುನಾವಣಾ ಚಾಣಕ್ಯ ನಿರ್ಧರಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ತಿಂಗಳಾಂತ್ಯಕ್ಕೆ ಮತ್ತೆ ರಾಜ್ಯಕ್ಕೆ ಅಮಿತ್ ಶಾ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಒಕ್ಕಲಿಗ ಪ್ರಾಬಲ್ಯ ಹೊಂದಿರುವ ದಕ್ಷಿಣ ಕರ್ನಾಟಕದಲ್ಲಿ ಕಮಲ ಅರಳಿಸುವುದು ಅಷ್ಟು ಸುಲಭವಲ್ಲ ಎಂಬುದು ಅರ್ಥವಾಗಿದೆ. ಹೊಂದಾಣಿಕೆ ರಾಜಕಾರಣದಿಂದ ಪಕ್ಷ ಈ ಭಾಗದಲ್ಲಿ ಸದೃಢವಾಗಿಲ್ಲ ಎಂದು ಕೆಲ ಶಾಸಕರು ಅಮಿತ್ ಶಾಗೆ ದೂರು ನೀಡಿದ್ದಾರೆ. ಹೀಗಾಗಿ ಕೆಲ ಒಕ್ಕಲಿಗ ನಾಯಕರ ಬಗ್ಗೆಯೂ ಶಾ ಕೆಂಗಣ್ಣು ಬೀರಿದ್ದಾರೆ ಎಂದು ತಿಳಿದು ಬಂದಿದ್ದು, ಹೊಸಬರಿಗೆ ಟಾಸ್ಕ್ ಕೊಟ್ಟು ತಾವೇ ಈ ಭಾಗದ ಚಟುವಟಿಕೆ ಮೇಲೆ ಕಣ್ಣಿಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯ ಮುರಿಯುವುದಕ್ಕೆ ಒಕ್ಕಲಿಗ ಟ್ರಂಪ್ ಕಾರ್ಡ್ ಮುಖ್ಯ. ಆದಿಚುಂಚನಗಿರಿ ಮಠದ ಆಶೀರ್ವಾದವಿಲ್ಲದೇ ಈ ಟಾಸ್ಕ್ ಪೂರ್ಣವಾಗದು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ಮಂಡ್ಯದಲ್ಲಿ ನಿರ್ಮಲಾನಂದ ಶ್ರೀಗಳ ಜತೆಗೆ ವೇದಿಕೆ ಹಂಚಿಕೊಂಡರೂ ಬೆಂಗಳೂರಿಗೆ ಬಂದ ನಂತರವೂ ಮತ್ತೆ ಆದಿಚುಂಚನಗಿರಿ ಶಾಖಾಮಠಕ್ಕೆ ಭೇಟಿ ನೀಡಿ ಶ್ರೀಗಳ ಜತೆ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ:ಯಾರನ್ನು ರಕ್ಷಿಸುವ ಉದ್ದೇಶವಿಲ್ಲ: ಡೆತ್ ನೋಟ್ ಪ್ರಕರಣಕ್ಕೆ ಸಿಎಂ ಸ್ಪಷ್ಟನೆ
ಹಳೆ ಮೈಸೂರು ಭಾಗದ ಸಂಘಟನೆ ಕುರಿತು ಇದೇ ಮೊದಲ ಬಾರಿಗೆ ಅಮಿತ್ ಶಾ ಪ್ರತ್ಯೇಕ ಸಭೆ ನಡೆಸಿದ್ದು, ಹಳೆ ಮೈಸೂರು ಭಾಗದ ಜಿಲ್ಲೆಗಳಾದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜಿಲ್ಲಾಧ್ಯಕ್ಷರಿಂದ ಪಕ್ಷ ಸಂಘಟನೆ ಕುರಿತ ವರದಿಯನ್ನೂ ಪಡೆದು ಕೊಂಡಿದ್ದಾರೆ.
ಈ ಸಭೆಯಲ್ಲಿ ಜಿಲ್ಲಾಧ್ಯಕ್ಷರು ನೀಡಿದ ವರದಿ ನೋಡಿ, ನಮ್ಮ ನಿರೀಕ್ಷೆಗೆ ತಕ್ಕಂತೆ ಈ ಭಾಗದಲ್ಲಿ ಸಂಘಟನೆ ಶಕ್ತಿಯುತವಾಗಿಲ್ಲ. ಕೇಡರ್ ಬೇಸ್ಡ್ ಪಾರ್ಟಿ ನಮ್ಮದು, ಆದರೆ ಇಲ್ಲಿ ಕೇಡರ್ ಎಲ್ಲಿದೆ ಎಂದು ಪ್ರಶ್ನಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಂಘಟನಾತ್ಮಕ ಚಟುವಟಿಕೆ ಕುರಿತು ಗಮನ ಹರಿಸುವಂತೆ ನಿರ್ದೇಶನ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.