ಇನ್ನೊಮ್ಮೆ ಲಾಕ್‌ಡೌನ್ ಯಾರಿಗೂ ಬೇಡ
Team Udayavani, Mar 29, 2021, 7:00 AM IST
ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕವಾಗಿ ರಾಜ್ಯದ ಖಜಾನೆ ಮೇಲೆ ಸಾಕಷ್ಟು ವ್ಯತಿರಿಕ್ತ ಹಾಗೂ ದೀರ್ಘ ಪರಿಣಾಮವೇ ಬೀರಿದ್ದು, 20 ಸಾವಿರ ಕೋಟಿ ರೂ.ನಷ್ಟು ಆದಾಯಕ್ಕೆ ಕೊಕ್ಕೆ ಬಿದ್ದಿದೆ.
2020-21 ನೇ ಸಾಲಿನ ಬಜೆಟ್‌ನಲ್ಲಿ 1,79,920 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಅಂದಾಜು ಮಾಡಲಾಗಿತ್ತಾದರೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡು ಆದಾಯ ಕಡಿಮೆಯಾಗಿ 1,59,709 ಕೋಟಿ ರೂ. ಇಳಿಕೆಯಾಗಬಹುದು ಎಂಬ ಅಂದಾಜು ಮಾಡಲಾಗಿದ್ದು 20,000 ಕೋಟಿ ರೂ. ಗಳಷ್ಟು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಉದಾಹರಣೆಗೆ ಹೇಳುವುದಾದರೆ 2019-20 ನೇ ಸಾಲಿನ ಎಪ್ರಿಲ್‌ನಿಂದ ಆಗಸ್ಟ್‌ವರೆಗೆ ಎಲ್ಲ ಮೂಲಗಳಿಂದ ತೆರಿಗೆ ಆದಾಯ 69,202 ಕೋಟಿ ರೂ. ಸಂಗ್ರಹವಾಗಿ ಬಜೆಟ್ ಗುರಿಯ ಪೈಕಿ ಶೇ.38 ರಷ್ಟು ಸಾಧನೆಯಾಗಿತ್ತು. ಕೊರೊನಾ ಹಿನ್ನೆಲೆಯಲ್ಲಿ 2020 ಮಾರ್ಚ್ 25 ರಿಂದ ಲಾಕ್‌ಡೌನ್ ಪ್ರಾರಂಭವಾಗಿ 54 ದಿನಗಳ ಕಾಲ ಮುಂದು ವರಿದು 2020-21 ನೇ ಸಾಲಿನಲ್ಲಿ ಎಪ್ರಿಲ್‌ನಿಂದ ಆಗಸ್ಟ್ ವರೆಗೆ 54,179 ಕೋಟಿ ರೂ. ಮಾತ್ರ ಸಂಗ್ರಹವಾಗಿ ಬಜೆಟ್ ಗುರಿಯ ಶೇ.30.11 ರಷ್ಟು ಸಾಧನೆಯಾಗಿ ಹಿಂದಿನ ವರ್ಷಕ್ಕೆ ಹೋಲಿಸಿದರೆ 15,033 ಕೋಟಿ ರೂ. ಸಂಗ್ರಹ ಕಡಿಮೆಯಾಗಿ ಶೇ.21.71 ರಷ್ಟು ಕುಸಿತ ಕಂಡಿತ್ತು.
ವಾಣಿಜ್ಯ ತೆರಿಗೆಯಲ್ಲಿ ಶೇ.27, ಅಬಕಾರಿಯಲ್ಲಿ ಶೇ.15.07, ಮೋಟಾರು ವಾಹನದಲ್ಲಿ ಶೇ.44.78 ಹಾಗೂ ಮುದ್ರಾಂಕ ಮತ್ತು ನೋಂದಣಿಯಲ್ಲಿ ಶೇ.38.01 ರಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಿತ್ತು.ಸ್ವಂತ ತೆರಿಗೆಯಲ್ಲಿ ಶೇ.28.04, ತೆರಿಗೆಯೇತರ ಆದಾಯದಲ್ಲಿ ಶೇ.22.04, ಕೇಂದ್ರದ ತೆರಿಗೆ ಪಾಲಿನಲ್ಲಿ ಶೇ.34.02 ಹಾಗೂ ಕೇಂದ್ರದ ಸಹಾಯಾನುದಾನದಲ್ಲಿ ಶೇ.12.03 ರಷ್ಟು ಕಡಿಮೆಯಾಗಿತ್ತು. ಇದರ ಪರಿಣಾಮ ಅಭಿವೃದ್ಧಿ ಯೋಜನೆಗಳ ಮೇಲೂ ಹೊರೆಯಾಯಿತು.
2020 ಸೆಪ್ಟಂಬರ್‌ನ ಅನಂತರ ಆರ್ಥಿಕ ವಲಯದಲ್ಲಿ ಚೇತರಿಕೆ ಯಾದ ಕಾರಣ ಬಜೆಟ್‌ನ ಗುರಿ ಶೇ.100 ರಷ್ಟು ತಲುಪಿಲ್ಲ. 2020-21 ನೇ ಸಾಲಿನ ವಾಣಿಜ್ಯ, ಅಬಕಾರಿ, ಮೋಟಾರು ವಾಹನ, ಮುದ್ರಾಂಕ ಮತ್ತು ನೋಂದಣಿ ಸೇರಿ ಸ್ವಂತ ಹಾಗೂ ತೆರಿಗೆಯೇತರ ಆದಾಯ ಗುರಿ ಬಜೆಟ್‌ನಲ್ಲಿ 1,35,874 ಕೋಟಿ ರೂ. ನಿರೀಕ್ಷಿಸಿ ಅನಂತರ 1,25,511 ಪರಿಷ್ಕರಿಸಲಾಯಿತಾದರೂ ಫೆಬ್ರವರಿ ಅಂತ್ಯ ದವರೆಗೆ 1,14,056 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ.
1. ಹೊಟೇಲ್ ಉದ್ಯಮ
ಲಾಕ್‌ಡೌನ್‌ನಿಂದಾಗಿ ಹೆಚ್ಚು ನಷ್ಟಕ್ಕೀಡಾಗಿದ್ದು ಹೊಟೇಲ್ ಉದ್ಯಮ. ಇಲ್ಲಿ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಊರು ಸೇರಿದ್ದಾರೆ. ಲಾಕ್‌ಡೌನ್ ವೇಳೆ ಬಾಗಿಲು ಮುಚ್ಚಿದ್ದ ಶೇ.30ರಷ್ಟು ಹೊಟೇಲ್‌ಗಳು ವಿದ್ಯುತ್ಛಕ್ತಿ, ನೀರು, ನೌಕರರ ಸಂಬಳ, ಬಾಡಿಗೆ ನೀಡಲಾಗದೆಯೇ ಇನ್ನೂ ಬಾಗಿಲು ತೆರೆದಿಲ್ಲ. ಬೆಂಗಳೂರಿನಲ್ಲಿಯೇ ಪಂಚತಾರಾ ಹೊಟೇಲ್ ಸೇರಿದಂತೆ 20 ಸಾವಿರ ಹೊಟೇಲ್‌ಗಳು ಇವೆ. ಈಗಾಗಲೇ ಸುಮಾರು 1.8ಲಕ್ಷ ಮಂದಿಗೆ ಉದ್ಯೋಗ ಕಳೆದು ಕೊಂಡಿದ್ದಾರೆ. ರಾಜ್ಯವ್ಯಾಪಿ ಸುಮಾರು 2 ಲಕ್ಷ ಮಂದಿ ಹೊಟೇಲ್ ಕಾರ್ಮಿಕರು ಕೆಲಸ ಕಳೆದು ಕೊಂಡಿದ್ದಾರೆ ಎಂದು ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ಉಪ ಹಾರ ಮಂದಿರ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಬ್ಟಾರ್ ಹೇಳಿದ್ದಾರೆ. ಸದ್ಯ ಶೇ.80ರಷ್ಟು ಚೇತರಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಸರಕಾರ ಮತ್ತೆ ಲಾಕ್‌ಡೌನ್ ಮಾಡಿದರೆ ಇಡೀ ಉದ್ಯಮ ಪಾತಾಳ ಸೇರಲಿದೆ ಎಂದು ತಿಳಿಸಿದ್ದಾರೆ.
2. ಬೀದಿ ಬದಿ ವ್ಯಾಪಾರಿಗಳು
ರಾಜ್ಯದಲ್ಲಿ ಅಂದಾಜು 3.70 ಲಕ್ಷ ಬೀದಿ ವ್ಯಾಪಾರಿಗಳಿದ್ದು, 70 ಸಾವಿರ ಬೀದಿ ವ್ಯಾಪಾರಿಗಳಿಗೆ ಮಾತ್ರ ಗುರುತಿನ ಚೀಟಿ ನೀಡಲಾಗಿದೆ. ಹೀಗಾಗಿ ಸಾವಿರಾರೂ ಬೀದಿ ವ್ಯಾಪಾರಿಗಳಿಗೆ ಸರಕಾರದ ನೆರವು ಸಿಗಲಿಲ್ಲ. ರಾಜ್ಯದಲ್ಲಿ ಈ ಹಿಂದೆ ಲಾಕ್‌ಡೌನ್ ಆಗಿದ್ದ ಸಂದರ್ಭದಲ್ಲಿ ಹಣ್ಣು ಮತ್ತು ತರಕಾರಿ ಬೀದಿ ವ್ಯಾಪಾರಿಗಳನ್ನು ಹೊರತುಪಡಿಸಿ, ಶೇ.90ರಷ್ಟು ಬೀದಿ ವ್ಯಾಪಾರಿಗಳು ಕಣ್ಣೀರಿನಲ್ಲಿ ಕೈತೊಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. “ಈಗ ರಾಜ್ಯದಲ್ಲಿ ಮತ್ತೂಮ್ಮೆ ಲಾಕ್‌ಡೌನ್, ಸೆಮಿಲಾಕ್‌ಡೌನ್ ಪ್ರಸ್ತಾವನೆಗಳು ಮುನ್ನೆಲೆಗೆ ಬರುತ್ತಿವೆ. ಆದರೆ ಈ ಬಾರಿ ಲಾಕ್‌ಡೌನ್ ಮಾಡಿದರೆ ಈಗಾಗಲೇ ಸಾಲದ ಸುಳಿಯಲ್ಲಿ ಸಿಲುಕಿರುವ ಬೀದಿ ವ್ಯಾಪಾರಿಗಳು ಅಕ್ಷರಶಃ ಬೀದಿಗೆ ಬೀಳಲಿದ್ದಾರೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ರಸ್ತೆಬದಿ ವ್ಯಾಪಾರಿಗಳ ಮಹಾಮಂಡಳಿ ರಾಜ್ಯ ಸಂಚಾಲಕ ಉದಯಕುಮಾರ್.
3. ಟ್ಯಾಕ್ಸಿ ಮತ್ತು ಸಾರಿಗೆ ವಲಯ
ಸಾರಿಗೆ ವಲಯದಲ್ಲಿ ಸರಕಾರಿ ಮತ್ತು ಖಾಸಗಿ ವಾಹನಗಳು ಬರುತ್ತವೆ. ಲಾಕ್‌ಡೌನ್‌ನಿಂದ ನಾಲ್ಕೂ ಸಾರಿಗೆ ಸಂಸ್ಥೆಗಳಿಗೆ ಸುಮಾರು 3,200 ಕೋಟಿ ರೂ. ನಷ್ಟವಾಗಿದ್ದು, ಇದುವರೆಗೆ ಶೇ. 85ರಷ್ಟು ವಾಹನಗಳು ಮತ್ತೆ ರಸ್ತೆಗಿಳಿದಿವೆ. ಆದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುತ್ತಿಲ್ಲ. ಇದರಲ್ಲಿ ಕೆಎಸ್‌ಆರ್‌ಟಿಸಿಗೆ 985 ಕೋಟಿ, ವಾಯವ್ಯಕ್ಕೆ 682 ಕೋಟಿ., ಈಶಾನ್ಯಕ್ಕೆ 517 ಕೋಟಿ, ಬಿಎಂಟಿಸಿಗೆ 1031 ಕೋಟಿ ರೂ. ನಷ್ಟವಾಗಿದೆ. ಕಾರ್ಪೋರೆಟ್ ಕಂಪೆನಿಗಳು ಇದುವರೆಗೆ ಮನೆಯಿಂದಲೇ ಕೆಲಸ ನಿರ್ವಹಿಸುವ ವ್ಯವಸ್ಥೆ ಅನುಸರಿಸುತ್ತಿರುವುದರಿಂದ ಖಾಸಗಿ ವಾಹನಗಳಿಗೂ ಕೆಲಸ ಸಿಗುತ್ತಿಲ್ಲ. ಅದೇ ರೀತಿ, ಪ್ರವಾಸೋದ್ಯಮ ಮತ್ತಿತರ ಕ್ಷೇತ್ರಗಳೂ ಚೇತರಿಕೆ ಕಾಣದ್ದರಿಂದ ಈಗಲೂ ಸಾವಿರಾರು ವಾಹನಗಳನ್ನು ತೆರಿಗೆ ಪಾವತಿಸಲಾಗದೆ ಸಾರಿಗೆ ಇಲಾಖೆಗೆ ಒಪ್ಪಿಸಲಾಗಿದೆ. ನಷ್ಟವನ್ನು ನಿಖರವಾಗಿ ಹೇಳಲು ಅಸಾಧ್ಯ. ಆದರೆ ಸಾವಿರಾರು ಕೋಟಿ ರೂ. ನಷ್ಟವಾಗಿದ್ದು, ಶೇ. 80ರಷ್ಟು ಚಾಲಕರು ಇನ್ನೂ ಕೆಲಸಕ್ಕೆ ಮರಳಿಲ್ಲ. ಈ ಮಧ್ಯೆ ಮತ್ತೆ ಲಾಕ್‌ಡೌನ್ ಜಾರಿಯಾದರೆ ಈ ಕ್ಷೇತ್ರ ಮೇಲೇಳುವುದೇ ಕಷ್ಟ ಎಂದು ಕರ್ನಾಟಕ ರಾಜ್ಯ ಪ್ರವಾಸಿ ವಾಹನಗಳ ಮಾಲಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ತಿಳಿಸುತ್ತಾರೆ.
4. ಆಟೋ ಮೊಬೈಲ್ ವಲಯ
ಲಾಕ್‌ಡೌನ್ನಿಂದಾಗಿ ಆಟೋಮೊಬೈಲ್ ಕ್ಷೇತ್ರದಲ್ಲಿ ಶೇ.40ರಿಂದ ಶೇ.50ರಷ್ಟು ಉತ್ಪಾದನೆ ಕಡಿಮೆಯಾಗಿತ್ತು ಮತ್ತು ಮಾರಾಟ ಇದಕ್ಕಿಂತಲೂ ಕುಸಿತ ಕಂಡಿತ್ತು. ಕರ್ನಾಟಕದಲ್ಲೇ ಸಾವಿರಾರು ಸಂಖ್ಯೆಯಲ್ಲಿ ಈ ಕ್ಷೇತ್ರದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದರು. ಈ ಅವಧಿಯಲ್ಲಿ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ದಿನಕ್ಕೆ ಸರಿಸುಮಾರು 2,500 ಕೋಟಿ ರೂ. ನಷ್ಟ ಅನುಭವಿಸಿರುವ ಜತೆಗೆ 3.45 ಲಕ್ಷ ಉದ್ಯೋಗ ನಷ್ಟ ಉಂಟಾಗಿತ್ತು ಎಂದು ಅಂದಾಜಿಸಲಾಗಿದೆ.
5. ಪ್ರವಾಸೋದ್ಯಮ ಮತ್ತು ಆತಿಥ್ಯ
ಪ್ರವಾಸೋದ್ಯಮ ಮತ್ತು ಆತಿಥ್ಯ ವಲಯವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಎಸ್‌ಡಿಪಿ) ಸುಮಾರು ಶೇ.14ರಷ್ಟು ಕೊಡುಗೆ ನೀಡುವ ಪ್ರಮುಖ ವಲಯವಾಗಿದೆ. ಆದರೆ ಲಾಕ್‌ಡೌನ್ ಮತ್ತು ಅನಂತರದ ಅವಧಿಯಲ್ಲಿ ಶೇ. 50ರಷ್ಟು ಮಂದಿ ನೇರ ಉದ್ಯೋಗ ಕಳೆದುಕೊಂಡಿದ್ದಾರೆಂಬ ಅಂದಾಜು ಇದೆ. ಕೋವಿಡ್‌ನಿಂದಾಗಿ 10,000 ಕೋಟಿ ರೂ.ಗಿಂತ ಹೆಚ್ಚು ವ್ಯವಹಾರ ಕೈತಪ್ಪಿದ್ದು, ಭಾರೀ ನಷ್ಟವಾಗಿದೆ. ದೀಪಾವಳಿ ಅನಂತರ ಪ್ರವಾಸೋದ್ಯಮ, ಆತಿಥ್ಯ ಚಟುವಟಿಕೆ ಚೇತರಿಸಿಕೊಳ್ಳುತ್ತಿದ್ದು, ಶೇ.60ರಷ್ಟು ಸಹಜ ಸ್ಥಿತಿಗೆ ಮರಳುತ್ತಿದೆ. ಈ ವಲಯಕ್ಕೆ ಈಗ ಎರಡನೇ ಅಲೆ ಶಾಪವಾಗಿ ಕಾಡುತ್ತಿದೆ.
6. ಸಣ್ಣ ಕೈಗಾರಿಕೆಗಳ ದೊಡ್ಡ ಆತಂಕ!
ರಾಜ್ಯದಲ್ಲಿ ಸುಮಾರು 6.5 ಲಕ್ಷದಷ್ಟಿರುವ ಸಣ್ಣ ಕೈಗಾರಿಕೆ ಗಳು 65 ಲಕ್ಷ ಮಂದಿ ಉದ್ಯೋಗ ಕಲ್ಪಿಸಿರುವ ಅತೀ ದೊಡ್ಡ ವಲಯವಾಗಿದೆ. ಲಾಕ್‌ಡೌನ್ ಹಾಗೂ ಅನಂತರದ ತಿಂಗಳಲ್ಲಿ ಸಣ್ಣ ಕೈಗಾರಿಕೆಗಳ ಕಾರ್ಮಿಕರ ಪೈಕಿ ಶೇ. 20ಕ್ಕಿಂತ ಹೆಚ್ಚು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂಬ ಅಂದಾಜು ಇದೆ. ಸಾವಿರಾರು ಸಣ್ಣ ಉದ್ಯಮಗಳು ಸ್ಥಗಿತಗೊಂಡಿವೆ. ಲಾಕ್‌ಡೌನ್ ಮತ್ತು ಅನಂತರದ ಅವಧಿಯಲ್ಲಿನ ಆರ್ಥಿಕ ಹಿಂಜರಿಕೆಯಿಂದ ಸಣ್ಣ ಕೈಗಾರಿಕಾ ವಲಯದ ವಹಿವಾಟಿನಲ್ಲಿ 10,000 ಕೋಟಿ ರೂ.ನಷ್ಟು ಕುಸಿತವಾಗಿದೆ ಎಂಬ ಲೆಕ್ಕಾಚಾರವಿದೆ. ಕೆಲವು ತಿಂಗಳುಗಳಿಂದ ಈ ವಲಯ ಚೇತರಿಸಿ ಕೊಳ್ಳುತ್ತಿದ್ದು, ಸದ್ಯ ಒಟ್ಟು ಕಾರ್ಮಿಕರ ಪೈಕಿ ಶೇ. 90ರಷ್ಟು ಮಂದಿ ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಬೇಡಿಕೆ- ಪೂರೈಕೆಯಲ್ಲಿ ಏರಿಳಿತ, ಕಚ್ಚಾ ಪದಾರ್ಥ ಪೂರೈಕೆಯಲ್ಲಿ ವ್ಯತ್ಯಯದ ನಡುವೆ ಶೇ. 80ರಷ್ಟು ವಹಿವಾಟು ವೃದ್ಧಿಸಲು ಪರದಾಡುವ ಸ್ಥಿತಿಯಲ್ಲಿ ಸಣ್ಣ ಕೈಗಾರಿಕೆಗಳಿವೆ.
7. ಮೀನುಗಾರಿಕೆ
ಕಳೆದ ಲಾಕ್‌ಡೌನ್ ವೇಳೆ ಕರಾವಳಿ ಬಂದರುಗಳಲ್ಲಿ ವಹಿವಾಟು ಸಂಪೂರ್ಣ ನಿಂತು ಹೋಗಿತ್ತು. ನಿತ್ಯ ಕೋಟ್ಯಂತರ ರೂಪಾಯಿ ವಹಿವಾಟು ಆಗುತ್ತಿದ್ದ ಮಲ್ಪೆ, ಮಂಗಳೂರು, ಗಂಗೊಳ್ಳಿ, ಭಟ್ಕಳ ಸೇರಿದಂತೆ ಲಕ್ಷಾಂತರ ರೂಪಾಯಿ ವಹಿವಾಟು ಆಗುತ್ತಿದ್ದ ಕಿರು ಬಂದರುಗಳಲ್ಲಿಯೂ ದೋಣಿಗಳು ಲಂಗರು ಹಾಕಿದ್ದರಿಂದ ಮೀನುಗಾರರು ಸಹಿತವಾಗಿ ಮೀನುಗಾರಿಕೆಯನ್ನು ನಂಬಿಕೊಂಡಿದ್ದ ಲಕ್ಷಾಂತರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. 2018-19ರಲ್ಲಿ 1,450 ಕೋಟಿ ರೂ. ಮೀನು ಉತ್ಪಾದನೆಯಾಗಿತ್ತು, 2019-20ರಲ್ಲಿ 1,197 ಕೋಟಿ ಮೀನು ಉತ್ಪಾದನೆಯಾಗಿತ್ತು. 2020ರ ಮಾರ್ಚ್‌ನಿಂದ ಲಾಕ್‌ಡೌನ್ ಘೋಷಣೆಯಾಗಿದ್ದರಿಂದ ಆಗಸ್ಟ್ ತನಕವೂ ಸರಿಯಾಗಿ ಮೀನುಗಾರಿಕೆ ನಡೆಯದೇ ಇರುವುದರಿಂದ ಈ ಅವಧಿಯಲ್ಲಿ ಒಟ್ಟಾರೆಯಾಗಿ 500 ಕೋಟಿಗೂ ಅಧಿಕ ನಷ್ಟವಾಗಿದೆ. ಮೀನಿನ ರಫ್ತು ಕೂಡ ಗಣನೀಯವಾಗಿ ಇಳಿಕೆಯಾಗಿದೆ.
8.ಕುಕ್ಕುಟೋದ್ಯಮ
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಹಕ್ಕಿಜ್ವದ ತೀವ್ರತೆ ಯೂ ಹೆಚ್ಚಿತ್ತು. ಕೊರೊನಾ ಹಾಗೂ ಹಕ್ಕಿಜ್ವರದ ಪರಿಣಾಮವಾಗಿ ಒಂದು ಕೆ.ಜಿ. ಕೋಳಿ ದರ ಏಕಾಏಕಿ 15ರಿಂದ 25 ರೂ. ಇಳಿದಿತ್ತು. ಅಲ್ಲದೆ, ರಾಮನಗರ, ಚನ್ನಪಟ್ಟಣ, ಆನೇಕಲ್, ಮೈಸೂರು, ಚಾಮರಾಜನಗರ ಮೊದಲಾದ ಸ್ಥಳಗಳಲ್ಲಿ ಲಕ್ಷಾಂತರ ಕೋಳಿ ಹಾಗೂ ಕೋಳಿ ಮರಿಗಳನ್ನು ಜೀವಂತ ಸಮಾಧಿ ಮಾಡಲಾಗಿತ್ತು. ಒಟ್ಟಾರೆ ಯಾಗಿ ಈ ಅವಧಿಯಲ್ಲಿ 3,500 ಕೋ. ರೂ. ನಷ್ಟವಾಗಿತ್ತು. ಲಾಕ್‌ಡೌನ್ ಅವಧಿಯಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೂ ವಹಿವಾಟು ಕುಂಠಿತ ವಾಗಿತ್ತು. ರೈತರು ಬೆಳೆದ ಬೆಳೆಗಳು ಕ್ಲಪ್ತ ಸಮಯದಲ್ಲಿ ಎಪಿಎಂಸಿ ತಲುಪುತ್ತಿರಲಿಲ್ಲ. ಅಲ್ಲದೆ ಮಂಡಿಯಲ್ಲಿಯೇ ಟನ್‌ಗಟ್ಟಲೇ ತರಕಾರಿ ಸಾಮಗ್ರಿಗಳು ಉಳಿಯುತ್ತಿದ್ದರಿಂದ ಸಾವಿರ ಕೋಟಿಗೂ ಅಧಿಕ ನಷ್ಟವಾಗಿದೆ.
9.ಸಂಘಟಿತ/ಅಸಂಘಟಿತ ವಲಯ
ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ವಲಯದ 16,900 ನೋಂದಾಯಿತ ಘಟಕಗಳಿವೆ (ಕೈಗಾರಿಕೆಗಳು). ಇದರಲ್ಲಿ 16.90 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷದ ಲಾಕ್‌ಡೌನ್ ಪರಿಣಾಮ ಅಸಂಘಟಿತ ವಲಯದಲ್ಲಿ 35ರಿಂದ 40 ಸಾವಿರ ನೌಕರರು ಸೇರಿದಂತೆ ಒಟ್ಟಾರೆ 3 ರಿಂದ 4 ಲಕ್ಷ ಮಂದಿ ನೇರವಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕ ಕಾರ್ಖಾನೆಗಳು ಮುಚ್ಚಿಹೋಗಿವೆ. ರಾಜ್ಯದ ಆರ್ಥಿಕತೆಗೆ ಜೀವ ತುಂಬ ಬೇಕಾದರೆ, ಅಸಂಘಟಿತ ವಲಯವನ್ನು ಸಕ್ರಿಯವಾಗಿಡಬೇಕು.
10.ನಿರ್ಮಾಣ ವಲಯ
ದೇಶದ ಒಟ್ಟಾರೆ ಆಂತರಿಕ ವೃದ್ಧಿ ದರ (ಜಿಡಿಪಿ)ದಲ್ಲಿ ನಿರ್ಮಾಣ ವಲಯದ ಪಾಲು ಸುಮಾರು ಶೇ. 28ರಷ್ಟಿದ್ದು, 2025ರ ವೇಳೆಗೆ ಇದು ಶೇ. 30ಕ್ಕೆ ಏರಿಕೆ ಆಗುವ ನಿರೀಕ್ಷೆ ಇದೆ. ಆದರೆ ಕೊರೊನಾ ಹಾವಳಿ ಈ ಗುರಿಗೆ ಹಿನ್ನಡೆ ಉಂಟುಮಾಡುವ ಆತಂಕ ಕಾಡುತ್ತಿದೆ. 2020ರ ಕೊರೊನಾ ಅಬ್ಬರ ಮತ್ತು ಲಾಕ್‌ಡೌನ್‌ನಿಂದ ರಾಜ್ಯದ ನಿರ್ಮಾಣ ವಲಯಕ್ಕೆ ಸರಿಸುಮಾರು 20 ಸಾವಿರ ಕೋಟಿ ರೂ. ನಷ್ಟ ಉಂಟಾಗಿದ್ದು, ಶೇ. 80ರಷ್ಟು ಜನ ಉದ್ಯೋಗ ಕಳೆದುಕೊಂಡಿದ್ದರು. ಈ ಕ್ಷೇತ್ರದಲ್ಲಿ 3-4 ಲಕ್ಷ ಕಾರ್ಮಿಕರು ಸೇರಿದಂತೆ ಒಟ್ಟಾರೆ 10-12 ಲಕ್ಷ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಅನ್‌ಲಾಕ್ ಆಗಿದ್ದರೂ ಇದುವರೆಗೆ ಶೇ. 50ರಷ್ಟು ಮಾತ್ರ ಸಹಜಸ್ಥಿತಿಗೆ ಬರಲು ಸಾಧ್ಯವಾಗಿದೆ ಎಂದು ಭಾರತೀಯ ರಿಯಲ್ ಎಸ್ಟೇಟ್ ಅಭಿವೃದ್ಧಿ ಸಂಘಟನೆಗಳ ಒಕ್ಕೂಟದ ರಾಜ್ಯ ಘಟಕದ ಉಪಾಧ್ಯಕ್ಷ ಪ್ರದೀಪ್ ರಾಯ್ಕರ್ ತಿಳಿಸುತ್ತಾರೆ.
11. ಗಾರ್ಮೆಂಟ್ಸ್
ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಕಳೆದೊಂದು ವರ್ಷದಿಂದ ಕಂಗೆಟ್ಟಿರುವ ಗಾರ್ಮೆಂಟ್ಸ್ ವಲಯ, ಈಗಷ್ಟೇ ಚೇತರಿಕೆಯ ಹಾದಿಯಲ್ಲಿದೆ. ರಾಜ್ಯದಲ್ಲಿ ಒಟ್ಟಾರೆ 956 ಗಾರ್ಮೆಂಟ್ಸ್ ಘಟಕಗಳಿವೆ. ಇದರಲ್ಲಿ 4 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಲ್ಲೇ 766 ಗಾರ್ಮೆಂಟ್ ಘಟಕಗಳಿದ್ದು, 3 ಲಕ್ಷ ಮಂದಿ ಕೆಲಸ ಮಾಡುತ್ತಿದ್ದಾರೆ. 2020ರ ಮಾರ್ಚ್‌ನಲ್ಲಿ ಘೋಷಿಸಲಾದ ಲಾಕ್‌ಡೌನ್ ಬಳಿಕ ಇಡೀ ಗಾರ್ಮೆಂಟ್ಸ್ ವಲಯದಲ್ಲಿ ಶೇ.30ರಿಂದ 40ರಷ್ಟು ಉದ್ಯೋಗ ಕಡಿತವಾಗಿದೆ. ರಾಜ್ಯದ ಒಟ್ಟಾರೆ ಗಾರ್ಮೆಂಟ್ಸ್ ವಲಯದ ವಾರ್ಷಿಕ ವಹಿವಾಟು ಅಂದಾಜು 24 ಲಕ್ಷ ಕೋಟಿ ರೂ. ಎನ್ನಲಾಗಿದ್ದು, ಲಾಕ್‌ಡೌನ್ ಅವಧಿಯ ಆರಂಭದ ತಿಂಗಳುಗಳಲ್ಲಿ ಶೇ.50ರಷ್ಟು ಆದಾಯ ಕಡಿತವಾಗಿತ್ತು. ನೂರಕ್ಕೂ ಹೆಚ್ಚು ಗಾರ್ಮೆಂಟ್ಸ್ ಫ್ಯಾಕ್ಟರಿಗಳು ಶಾಶ್ವತವಾಗಿ ಮುಚ್ಚಿ ಹೋಗಿವೆ. ಈಗಲೂ ಅನೇಕ ಫ್ಯಾಕ್ಟರಿಗಳು ತೆವಳುತ್ತಾ ಸಾಗಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.