ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ
Team Udayavani, May 31, 2023, 5:21 AM IST
ರಾಜ್ಯದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರಕಾರ ಇದೀಗ ಪಠ್ಯಪುಸ್ತಕ ಪರಿಷ್ಕರಣೆಯ ಸೊಲ್ಲೆತ್ತಿದೆ. ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲಿ ಆಗಿನ ಬಿಜೆಪಿ ಸರಕಾರ ಶಾಲಾ ಪಠ್ಯಪುಸ್ತಕಗಳನ್ನು ಸೈದ್ಧಾಂತಿಕ ನೆಲೆಯಲ್ಲಿ ಪರಿಷ್ಕರಿಸಿದುದು ಭಾರೀ ಚರ್ಚೆಗೆ ಗ್ರಾಸವಾಗಿತ್ತಲ್ಲದೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈ ಎಲ್ಲ ತಕರಾರುಗಳ ನಡುವೆಯೇ ಪರಿಷ್ಕರಿಸಲಾಗಿದ್ದ ಪಠ್ಯಗಳಲ್ಲಿ ಕೆಲವೊಂದು ಲೋಪದೋಷ ಗಳು ಕಂಡುಬರುವ ಮೂಲಕ ಸರಕಾರವನ್ನು ಮುಜುಗರಕ್ಕೀಡಾಗುವಂತೆ ಮಾಡಿತ್ತು. ಕೊನೆಗೂ ಸರಕಾರ ಪರಿಷ್ಕೃತ ಪಠ್ಯಗಳಲ್ಲಿನ ತಪ್ಪುಗಳನ್ನು ಸರಿಪಡಿಸಿ ಬೀಸೋ ದೊಣ್ಣೆಯಿಂದ ಪಾರಾಗಿತ್ತು.
ಈ ಬಾರಿಯ ವಿಧಾನಸಭೆ ಚುನಾವಣೆಗೂ ಮುನ್ನ ಹಾಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಶಾಲಾ ಪಠ್ಯಪುಸ್ತಕಗಳನ್ನು ಮರು ಪರಿಷ್ಕರಿಸುವುದಾಗಿ ಭರವಸೆ ನೀಡಿತ್ತು. ಅದರಂತೆ ಈಗ ಹಿಂದಿನ ಸರಕಾರದ ಅವಧಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಯ ವೇಳೆ ಮಾಡ ಲಾಗಿರುವ ಕೆಲವೊಂದು ಸೈದ್ಧಾಂತಿಕ ಮಾರ್ಪಾಡುಗಳನ್ನು ಕಿತ್ತುಹಾಕಿ ಮಕ್ಕಳ ಭವಿಷ್ಯಕ್ಕೆ ಪೂರಕವಾದ ವಿಷಯಗಳನ್ನಷ್ಟೇ ಪಠ್ಯಪುಸ್ತಕದಲ್ಲಿ ಅಳವಡಿ ಸಲಾಗುವುದು ಎಂದು ಕಾಂಗ್ರೆಸ್ ಮತ್ತು ಹಾಲಿ ಸರಕಾರದ ಮೂವರು ಸಚಿವರು ನೀಡಿರುವ ಹೇಳಿಕೆ ಮತ್ತೆ ವಿವಾದವನ್ನು ಕೆದಕುವ ಕಾರ್ಯಕ್ಕೆ ಮುಂದಾದಂತೆ ಕಂಡುಬರುತ್ತಿದೆ.
ಪಠ್ಯಪುಸ್ತಕ ಪರಿಷ್ಕರಣೆ ಸಂಬಂಧ ಸಿಎಂ ನಿರ್ದೇಶನದಂತೆ ಅತೀ ಶೀಘ್ರ ದಲ್ಲಿ ಸಮಿತಿಯನ್ನು ರಚಿಸಲಾಗುವುದು. ಹಾಲಿ ಪಠ್ಯಪುಸ್ತಕವನ್ನು ಸಮಗ್ರವಾಗಿ ಪರಿಶೀಲಿಸಿ ವಿದ್ಯಾರ್ಥಿಗಳ ಚಿಂತನೆ, ಭವಿಷ್ಯಕ್ಕೆ ಸಂಬಂಧ ಪಡದ ವಿಷಯಗಳಿದ್ದಲ್ಲಿ ಅವುಗಳನ್ನು ತೆಗೆದು ಹಾಕಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಇದೇ ವೇಳೆ ಸಮಾಜಕಲ್ಯಾಣ ಸಚಿವ ಡಾ| ಎಚ್. ಸಿ.ಮಹದೇವಪ್ಪ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ಸರಕಾರದ ಅವಧಿಯಲ್ಲಿ ಪಠ್ಯಪುಸ್ತಕಗಳಲ್ಲಿ ಮಾಡಲಾಗಿರುವ ಎಲ್ಲ ಎಡವಟ್ಟುಗಳನ್ನು ನಮ್ಮ ಸರಕಾರ ತಿದ್ದಲಿದೆ ಎಂದಿದ್ದಾ ರೆ ಇದೇ ವೇಳೆ ಕರ್ನಾಟಕ ಕಾಂಗ್ರೆಸ್ ಕೂಡ ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರವಾಗಿ ಟ್ವೀಟ್ ಮಾಡಿ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಪೂರಕವಾದ ವಿಷಯಗಳಷ್ಟೇ ಪಠ್ಯಪುಸ್ತಕದಲ್ಲಿರಲಿವೆ. ಕಳೆದ ಸರಕಾರದ ಅವಧಿಯಲ್ಲಿನ ದೋಷಪೂರಿತ ಪಠ್ಯ ಮುಂದುವರಿಸಲ್ಲ ಎಂದು ತಿಳಿಸಿದೆ.
ಒಟ್ಟಾರೆಯಾಗಿ ಸರಕಾರ ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆ ಕಾರ್ಯ ವನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಂಡಿದ್ದು ಗುರುವಾರ ನಡೆಯಲಿರುವ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಸಂಬಂಧ ಅಂತಿಮ ನಿರ್ಧಾರಕ್ಕೆ ಬರುವ ಸಾಧ್ಯತೆ ಇದೆ. ಪಠ್ಯಪುಸ್ತಕಗಳನ್ನು ಪದೇ ಪದೆ ಪರಿಷ್ಕರಿಸುವುದರಿಂದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಹಳಷ್ಟು ಸಮಸ್ಯೆಯಾಗುತ್ತಿದ್ದು ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಹಾಗೊಂದು ವೇಳೆ ಸರಕಾರ ಇದನ್ನು ಪ್ರತಿಷ್ಠೆಯ ಪ್ರಶ್ನೆಯಾಗಿಸಿ, ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಿಸುವುದೇ ಆದರೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಈ ಕಾರ್ಯಕ್ಕೆ ಮುಂದಾಗುವುದು ಒಳಿತು. ಪಠ್ಯದ ಲ್ಲಿರಬೇಕಾದ ಅಂಶಗಳು ಮತ್ತು ವಿಷಯಗಳ ಆಯ್ಕೆಗಾಗಿ ಸಮಿತಿ ರಚನೆ ಯ ವೇಳೆ ಆದಷ್ಟು ಆಯಾಯ ವಿಷಯತಜ್ಞರನ್ನು ನೇಮಕ ಮಾಡಿದಲ್ಲಿ ಪಠ್ಯ ಪರಿಷ್ಕರಣೆ ಹೆಚ್ಚು ಪರಿಣಾಮಕಾರಿಯಾಗಬಲ್ಲುದು. ಪಠ್ಯಪುಸ್ತಕ ಪರಿಷ್ಕರಣೆಯ ವಿಚಾರದಲ್ಲಿ ಯಾವುದೇ ಸೈದ್ಧಾಂತಿಕ ಸಂಘರ್ಷಕ್ಕೆ ಆಸ್ಪದ ಇಲ್ಲದಂತೆ ಸರಕಾರ ಅತ್ಯಂತ ಜಾಗರೂಕತೆಯ ಹೆಜ್ಜೆ ಇರಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.